ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಭಾರತ-ಪ್ರಾನ್ಸ್ ನೌಕಾಪಡೆಯ ಸಮರಾಭ್ಯಾಸ ಸಂಪನ್ನ!

41

ಕಾರವಾರ:- ಭಾರತ- ಫ್ರಾನ್ಸ್‌ ನಡುವಣ ನೌಕಾಪಡೆಯ ಅತಿದೊಡ್ಡ ಜಂಟಿ ಸಮರಾಭ್ಯಾಸ ಅರಬ್ಬಿ ಸಮುದ್ರದಲ್ಲಿ ಮೇ 8 ರಿಂದ ಮೇ 10 ರವರೆಗೆ ನಡೆಯಿತು. ಯುದ್ಧ ನೌಕೆಗಳ ಸಂಚಾರ, ನೌಕೆಗಳಿಂದ ಯುದ್ಧ ವಿಮಾನಗಳ ಹಾರಾಟ ಅರಬ್ಬಿ ಸಮುದ್ರದಲ್ಲಿ ಕಂಡುಬಂತು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದಿಂದ 10 ನಾಟಿಕಲ್‌ ಮೈಲು ದೂರದ ನೇತ್ರಾಣಿ ದ್ವೀಪದ ಬಳಿ ಮೂರು ದಿನಗಳ ಜಂಟಿ ಸಮರಾಭ್ಯಾಸ ನಡೆಯಿತು. ಉಭಯ ದೇಶಗಳ ಅತ್ಯಾಧುನಿಕ ವಿಮಾನ ವಾಹಕ ಯುದ್ಧ ನೌಕೆಗಳು, ಯುದ್ಧ ವಿಮಾನಗಳು, ಕ್ಷಿಪಣಿ ಉಡಾವಣಾ ನೌಕೆಗಳು, ಅಣು ಶಕ್ತಿ ಆಧಾರಿತ ಜಲಾಂತರ್ಗಾಮಿ ನೌಕೆ, ಹೆಲಿಕಾಪ್ಟರ್‌ಗಳು ಈ ಸಮರಾಭ್ಯಾಸದಲ್ಲಿ ತೊಡಗಿಕೊಂಡಿದ್ದವು.

ಎರಡೂ ದೇಶಗಳ ಕಮಾಂಡೋಗಳು ಅಭ್ಯಾಸ ನಡೆಸಿದರು. ಅಣ್ವಸ್ತ್ರ ಆಧಾರಿತ ಜಲಾಂತರ್ಗಾಮಿ ನೌಕೆಯನ್ನು ಪತ್ತೆ ಹಚ್ಚುವ ತಾಲೀಮು ಕೂಡ ನಡೆಯಿತು.

ಹೆಲಿಕಾಪ್ಟರ್‌ ಮೂಲಕ ಹಡಗಿನ ಮೇಲೆ ದಾಳಿ ನಡೆಸುವ ಕಲೆಯನ್ನೂ ಪ್ರದರ್ಶಿಸಲಾಯಿತು. ಯುದ್ಧ ವಿಮಾನ ವಾಹಕ ನೌಕೆಗಳಿಂದ ವಿಮಾನ ಹಾರಾಟ, ಲ್ಯಾಂಡ್‌ ಮಾಡುವುದು, ವೈರಿಗಳ ಮೇಲೆ ದಾಳಿ ನಡೆಸುವುದನ್ನು ಅಚ್ಚುಕಟ್ಟಾಗಿ ನಡೆಸಲಾಯಿತು.
ಫ್ರಾನ್ಸ್‌ ನೌಕಾಪಡೆಯ ರಫೇಲ್‌ ಯುದ್ಧ ವಿಮಾನ ಹೊತ್ತ ವಿಮಾನವಾಹಕ ನೌಕೆ ಎಫ್‌ಎನ್‌ಎಸ್‌ ಚಾರ್ಲ್ಸ್ ಗಾಲೆ ಹಾಗೂ ಭಾರತೀಯ ನೌಕಾಪಡೆಯ ಮಿಗ್‌ 29 ವಿಮಾನ ಹೊತ್ತ ಐಎನ್‌ಎಸ್‌ ವಿಕ್ರಮಾದಿತ್ಯ ಜಂಟಿಯಾಗಿ ಸಮರಾಭ್ಯಾಸ ನಡೆಸಿದವು. ಐಎನ್‌ಎಸ್‌ ಮುಂಬಯಿ, ಐಎನ್‌ಎಸ್‌ ತರ್ಕಾಶ್‌, ಐಎನ್‌ಎಸ್‌ ಶಂಕುಲ್‌ ಹಾಗೂ ಐಎನ್‌ಎಸ್‌ ದೀಪಕ್‌ ಯುದ್ಧ ನೌಕೆಗಳು ಪಾಲ್ಗೊಂಡಿದ್ದವು.
ಪ್ರತಿ ವರ್ಷ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೋಕಿನ ಮುರುಡೇಶ್ವರ ದ ಬಳಿ ಇರುವ ನೇತ್ರಾಣಿ ಗುಡ್ಡದಲ್ಲಿ ಈ ಸಮರಾಭ್ಯಾಸ ನಡೆಯುತ್ತದೆ.
ಈ ಬಾರಿ ಪ್ರಾನ್ಸ್ ಜೊತೆ ಸಮರಾಭ್ಯಾಸ ಮಾಡಲಾಗಿದೆ.
Leave a Reply

Your email address will not be published. Required fields are marked *

error: Content is protected !!