BREAKING NEWS
Search

ಕೊಡಸಳ್ಳಿ ಜಲಾಶದ ಸುತ್ತಲಿನ ಅರಣ್ಯದಲ್ಲಿ ಕುಸಿಯುತ್ತಿರುವ ಭೂವಿ ಕೈಗಾ ಅಣುಸ್ಥಾವರ, ಕೊಡಸಳ್ಳಿ ಜಲಾಶಯಕ್ಕೆ ಆತಂಕ!

1291

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಜುಲೈ 26 ರಲ್ಲಿ ಸುರಿದ ಮಳೆ ಭಾರಿ ಅನಾಹುತವನ್ನು ತಂದೊಡ್ಡಿತು. ಯಲ್ಲಾಪುರ,ಕಾರವಾರ,ಅಂಕೋಲ ಭಾಗದಲ್ಲಿ ಜಲಪ್ರಳಯವೇ ಸಂಭವಿಸಿ ಹಲವು ಭಾಗದಲ್ಲಿ ಭೂ ಕುಸಿತ ಉಂಟಾಯಿತು. ಇನ್ನು ಯಲ್ಲಾಪುರ ಭಾಗದ ಕಳಚೆ, ಅರೆಬೈಲ್ ಗಟ್ಟ ಪ್ರದೇಶ,ಕಾರವಾರ ಭಾಗದ ಅಣಶಿ ಘಟ್ಟ ದಲ್ಲಿ ಭೂ ಕುಸಿತವಾಗಿ ಹೆದ್ದಾರಿ ಬಂದ್ ಆಗಿದ್ದವು.

ಇನ್ನು ಕಳಚೆಯಲ್ಲಿ 25 ಕ್ಕೂ ಹೆಚ್ಚು ಮನೆಗಳು 70 ಎಕರೆ ಅಡಕೆ ತೋಟ,ತೆಂಗಿನ ತೋಟ ಎಲ್ಲವೂ ಭೂ ಕುಸಿತದಿಂದ ನಾಶವಾಗಿದ್ದವು. ಆದರೇ ಇದೀಗ ಯಲ್ಲಾಪುರ ,ಕಾರವಾರ ಘಟ್ಟ ಪ್ರದೇಶದ ಅರಣ್ಯದಲ್ಲಿ ಮತ್ತೆ ಭೂಮಿ ಕುಸಿಯಲು ಪ್ರಾರಂಭಿಸಿದೆ.

ಕಳೆದ ತಿಂಗಳು ಸುರಿದ ಮಳೆ ಕೊಡಸಳ್ಳಿ ಆಣೇಕಟ್ಟಿನ ಭಾಗದಿಂದ ಕದ್ರಾ ಆಣೆಕಟ್ಟು ಭಾಗದ ಪ್ರದೇಶದ ವರೆಗೆ ಹಲವು ಭಾಗದಲ್ಲಿ ಗುಡ್ಡ ಕುಸಿದಿದ್ದವು. ಇನ್ನು 2019 ರಲ್ಲಿ ಕೊಡಸಳ್ಳಿ ಆಣೆಕಟ್ಟಿನ ಮೇಲ್ಭಾಗದಲ್ಲಿ ಗುಡ್ಡ ಕುಸಿತವಾಗಿತ್ತು.ಆದ್ರೆ ಈ ಬಾರಿ ಕೆಳಭಾಗದಲ್ಲಿ ಗುಡ್ಡ ಕುಸಿತ ಕಂಡಿದೆ. ಇದಲ್ಲದೇ ಕೈಗಾ ಅಣು ಸ್ಥಾವರದ ಸುತ್ತಮುತ್ತಲ ಪ್ರದೇಶದ ಗುಡ್ಡವು ಸಹ ಕುಸಿತ ಕಂಡಿದೆ.

ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಮತ್ತೆ ಮಳೆ ಬೀಳುತಿದ್ದು ಅಲ್ಲಲ್ಲಿ ಗುಡ್ಡಗಳಲ್ಲಿ ಕುಸಿತ ಪ್ರಾರಂಭವಾಗಿದೆ.
ಇದರಿಂದಾಗಿ ಕೊಡಸಳ್ಳಿ ಜಲಾಶಯ ಹಾಗೂ ಕೈಗಾ ಅಣುಸ್ಥಾವರಕ್ಕೆ ಆತಂಕ ಎದುರಾಗಿದೆ.

ಹೇಗಿದೆ ಈಗಿನ ಪರಿಸ್ಥಿತಿ?

ಕೊಡಸಳ್ಳಿ ಜಲಾಶಯದ ಬಳಿ ಕುಸಿದ ಗುಡ್ಡ


ಕಾರವಾರದ ಘಟ್ಟ ಪ್ರದೇಶ,ಯಲ್ಲಾಪುರ ಘಟ್ಟ ಪ್ರದೇಶದ ಹಲವು ಕಡೆಯಲ್ಲಿ ಹಿಂದೆ ಬಿರುಕು ಬಿಟ್ಟಿದ್ದ ಗುಡ್ಡಗಳು ಇದೀಗ ಕುಸಿಯುತ್ತಿದೆ. ಯಲ್ಲಾಪುರದ ಹೆದ್ದಾರಿ ಭಾಗದಲ್ಲಿ ಪ್ರಯಾಣಿಸಿದರೆ ಹಲವು ಭಾಗದಲ್ಲಿ ಗುಡ್ಡ ಕುಸಿದಿರುವುದನ್ನು ಗಮನಿಸಬಹುದಾಗಿದೆ.ಇನ್ನು ಕೈಗಾ ಯಲ್ಲಾಪುರಕ್ಕೆ ತೆರಳುವ ಗುಡ್ಡದ ರಸ್ತೆಯಲ್ಲಿ ನಿಂತು ನೋಡಿದರೆ ಸುತ್ತಮುತ್ತಲಿನ ಗುಡ್ಡದಲ್ಲಿ ಭೂಮಿ ಕುಸಿಯುತ್ತಿರುವುದನ್ನು ಗಮನಿಸಬಹುದಾಗಿದೆ.

ಈ ಭಾಗಗಳಲ್ಲಿ ಜನವಸತಿ ಇಲ್ಲದ ಕಾರಣ ದೊಡ್ಡ ಹಾನಿಯಾಗುತಿದ್ದರೂ ಜನರಿಗೆ ತೊಂದರೆ ಆಗಿಲ್ಲ. ಆದರೇ ಇಲ್ಲಿರುವ ಜಲಾಶಯ ಹಾಗೂ ಕೈಗಾ ಅಣು ಸ್ಥಾವರಕ್ಕೆ ಇದೀಗ ಆತಂಕ ಎದುರಾಗಿದೆ.
ಗುಡ್ಡಭಾಗದಲ್ಲಿ ನೀರಿನ ಫಸೆ ಹೆಚ್ಚಾಗಿದೆ,ಮಣ್ಣುಗಳು ಸಡಿಲವಾಗಿದ್ದು ,ಅಲ್ಲಲ್ಲಿ ಭೂಮಿ ಬಾಯಿ ಬಿಟ್ಟಿದೆ. ಇನ್ನು ಕೆಲವು ಕಡೆ ಮಳೆಯಿಂದ ಗುಡ್ಡದ ಮರಗಳ ಸಮೇತ ಮಣ್ಣು ಕುಸಿದು ಮರಗಳು ಬುಡಸಮೇತ ನೆಲಕ್ಕುರುಳಿವೆ.

ಕಳಚೆ ಭಾಗದಲ್ಲಿ ಸಹ ಮತ್ತೆ ಗುಡ್ಡ ಕುಸಿತ ಕಾಣುವ ಆತಂಕ ಎದುರಾಗಿದೆ. ಕಳಚೆಯ ಸಮೀಪವೇ ಕೊಡಸಳ್ಳಿ ಜಲಾಶಯ ಸಹ ಇದ್ದು ,ಈ ಜಲಾಶಯದ ಸುತ್ತಲಿನ ಗುಡ್ಡದ ಹಲವು ಭಾಗದಲ್ಲಿ ಮಣ್ಣು ಸಡಿಲವಾಗಿ ಕುಸಿಯುತ್ತಿದೆ‌ . ಈ ಭಾಗದಲ್ಲಿ ಬಹುತೇಕ ಅರಣ್ಯ ವಾಗಿರುವುದರಿಂದ ಇದರ ತೀವ್ರತೆಯನ್ನು ಅರಿಯದಂತಾಗಿದೆ. ಇನ್ನು ಕಳಚೆ ಗ್ರಾಮದ ಬಹುತೇಕ ಭಾಗದಲ್ಲಿ ಭೂಮಿ ಬಿರುಕುಬಿಟ್ಟಿದ್ದರಿಂದ ಹಾಗೂ ಮಣ್ಣು ಸಡಿಲವಾಗಿರುವುದರಿಂದ ಮತ್ತೆ ಹೆಚ್ಚಿನ ಮಳೆಯಾದರೆ ದೊಡ್ಡ ಅನಾಹುತ ಕಟ್ಟಿಟ್ಟ ಬುತ್ತಿಯಂತಿದೆ.

ತಜ್ಞರ ಪರೀಕ್ಷೆ ವಿಳಂಬ!

ಜಿಲ್ಲಾಡಳಿಕ್ಕೆ ಭೂ ಕುಸಿತದ ಪರಿಣಾಮದ ಅರಿವಿದೆ.ಆದರೇ ಕೇಂದ್ರದಿಂದ ಭೂ ವಿಜ್ಞಾನಿಗಳ ತಂಡದಿಂದ ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಮನವಿ ಸಹ ಮಾಡಲಾಗಿದೆ.ಇನ್ನು ಈಗಾಗಲೇ ಅಣಶಿ, ಕಳಚೆ ಭಾಗದಲ್ಲಿ ರಾಜ್ಯಸರ್ಕಾರದ ತಜ್ಞರು ಭೂಮಿಯ ಪರೀಕ್ಷೆಯನ್ನು ನೆಡೆಸುತಿದ್ದಾರೆ. ಹೆಚ್ಚು ಅರಣ್ಯ ಇರುವುದರಿಂದ ಪರೀಕ್ಷೆ ನಡೆಸಲು ವಿಳಂಬ ಆಗುತ್ತಿದೆ. ಇನ್ನು ಈಗಿರುವ ತಜ್ಞರು ಎಲ್ಲೆಲ್ಲಿ ರಸ್ತೆ ಭಾಗದಲ್ಲಿ ಭೂ ಕುಸಿತವಾಗಿದೆಯೋ ಆ ಭಾಗದಲ್ಲಿ ಮಾತ್ರ ಪರೀಕ್ಷೆ ನಡೆಸಿದ್ದಾರೆ. ಆದರೇ ಇನ್ನೂ ಕೂಡ ವರದಿ ನೀಡಿಲ್ಲ‌ .ಹೀಗಾಗಿ ಅಣಶಿ ಭಾಗದ ಹೆದ್ದಾರಿಯಲ್ಲಿ ಕುಸಿತ ಕಂಡ ಗಡ್ಡದ ಮಣ್ಣನ್ನು ತೆರವು ಗೊಳಿಸಲು ವಿಳಂಬ ಮಾಡಲಾಗಿತ್ತು. ಇದೀಗ ಜಲಾಶಯ ಹಾಗೂ ಕೈಗಾ ಅಣುಸ್ಥಾವರದ ಸುತ್ತಲಿನ ಪ್ರದೇಶದಲ್ಲಿ ಗುಡ್ಡ ಕುಸಿಯುತ್ತಿರುವುದು ಮತ್ತೆ ಆತಂಕ ತಂದೊಡ್ಡಿದೆ. ಮತ್ತೆ ಹೆಚ್ಚಿನ ಮಳೆಯಾದರೆ ಈ ಭಾಗದಲ್ಲಿ ಮಡಿಕೇರಿಯಲ್ಲಿ ಆದಂತೆಯೇ ಭೂಮಿ ಕುಸಿಯುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಅಷ್ಟರೊಳಗೇ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ದೊಡ್ಡ ಅನಾಹುತವನ್ನು ಎದುರಿಸಬೇಕಾದ ಸಂದರ್ಭ ಎದುರಾಗಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!