
ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ವಿವಾದ ಕಳೆದ ವರ್ಷ ಶಾಂತಿಯುತ ಅಂತ್ಯ ಕಂಡಿರುವ ಬೆನ್ನಲ್ಲೇ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ಬುಧವಾರ (ಸೆ.30) ಹೊರಬಿದ್ದಿದ್ದು, ನ್ಯಾಯಾಲಯವು ಎಲ್ಲ ಆರೋಪಿಗಳನ್ನು ಪ್ರಕರಣದಿಂದ ಖುಲಾಷೆಗೊಳಿಸಿದೆ.

28 ವರ್ಷಗಳ ಬಳಿಕ ಲಖನೌದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ತೀರ್ಪು ಓದಿದ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್, ಬಾಬ್ರಿ ಕಟ್ಟಡ ಧ್ವಂಸ ಪ್ರಕರಣ ಪೂರ್ವ ನಿಯೋಜಿತವಲ್ಲ. 1992 ಡಿಸೆಂಬರ್ 6ರಂದು ನಡೆದ ಘಟನೆ ಆಕಸ್ಮಿಕ. ಈ ಘಟನೆ ಹಿಂದೆ ಯಾವುದೇ ಕ್ರಿಮಿನಲ್ ಸಂಚು ಇಲ್ಲ ಎಂದು ಮಹತ್ವದ ತೀರ್ಪು ನೀಡಿದರು. ಬಿಜೆಪಿ ಪಾಲಿಗೆ ಇದು ಅತ್ಯಂತ ಮಹತ್ವದ ದಿನವಾಗಿದ್ದು, ಬಿಜೆಪಿ ಭೀಷ್ಮ ಎಂದೇ ಪ್ರಸಿದ್ಧರಾಗಿರುವ ಹಿರಿಯ ರಾಜಕಾರಣಿ ಎಲ್.ಕೆ. ಅಡ್ವಾಣಿ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಯಿತು. ಮನೆಯಲ್ಲೇ ಕುಳಿತು ಟಿವಿ ವೀಕ್ಷಿಸುವ ಮೂಲಕ ತೀರ್ಪು ತಿಳಿದುಕೊಂಡರು. ಇನ್ನು ನ್ಯಾಯಾಲಯದಲ್ಲಿ ತೀರ್ಪು ಓದುವ ವೇಳೆ ಕೋರ್ಟ್ ಹಾಲ್ನಲ್ಲಿ ವಕೀಲರು ಮತ್ತು 26 ಮಂದಿ ಆರೋಪಿಗಳನ್ನು ಬಿಟ್ಟು ಬೇರೆ ಯಾರಿಗೂ ಅವಕಾಶ ನೀಡಿರಲಿಲ್ಲ.

ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್ ಸೇರಿದಂತೆ 32 ಮಂದಿ ಹಾಜರು ಇರುವಂತೆ ಕೋರ್ಟ್ ಸೆ.16ರಂದು ಸೂಚನೆ ನೀಡಿತ್ತು. ಆದರೆ, ಉಮಾಭಾರತಿ ಅವರು ಕರೊನಾ ಪಾಸಿಟಿವ್ ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋರ್ಟ್ನಿಂದ ವಿನಾಯಿತಿ ಕೋರಿದ್ದರು. ಅದೇ ವೇಳೆ ಎಲ್.ಕೆ.ಅಡ್ವಾಣಿ ಹಾಗೂ ಮುರುಳಿ ಮನೋಹರ್ ಜೋಶಿ ಅವರು ತಮ್ಮ ವಯಸ್ಸಿನ ಆಧಾರದ ಮೇಲೆ ಕೋರ್ಟ್ ಹಾಜರಿಯಿಂದ ವಿನಾಯಿತಿ ಕೇಳಿದ್ದರು.
ವರದಿ- ಪ್ರದೀಪ್ ಜಿ.ಎಸ್