ಕರ್ನಾಟಕದ ಎಲ್ಲೋರಾ ‘ ಬಾದಾಮಿಯ’ ಈ ಅದ್ಭುತ.ಒಂದಿಷ್ಟು ಪರಿಚಯ.

131

ಭಾರತದ ಇತಿಹಾಸದ ಪುಟಗಳಲ್ಲಿ ಅದೆಷ್ಟೋ ಅಚ್ಚರಿಗಳು ಹುದುಗಿವೆ,ಅದೆಷ್ಟೋ ನಿಗೂಢತೆಗಳು ಅಡಗಿವೆ,ಇಂತಹ ಅಚ್ಚರಿಗಳು ಮತ್ತು ನಿಗೂಢತರಯನ್ನ ನಿಮಗೆ ತಿಳಿಸುವ ಪ್ರಯತ್ನವೇ ನಮ್ಮ ನೆಲದ ಕಥೆ,ಇದು ವಿಶೇಷವಾಗಿ ಕರ್ನಾಟಕದ ಇತಿಹಾಸದ ಕೌತುಕಮಯ ಸಂಗತಿಗಳ ಮೇಲೆ ಕೇಂದ್ರೀಕೃತವಾಗಿರತ್ತದೆ.

ಈ ಬಾರಿ ನಾನು ನಿಮಗೆ ಹೇಳ ಹೊರಟಿರುವುದು ಕರ್ನಾಟಕದ ಒಂದು ಅತ್ಯದ್ಭುತವಾದ ಐತಿಹಾಸಿಕ ಸ್ಮಾರಕದ ಕುರಿತು,ಅದುವೇ ಬಾದಾಮಿಯ ಶಿಲಾ ಗುಹೆಗಳು!.

ಬಾದಾಮಿಯು ಈಗ ಬಾಗಲಕೋಟ ಜಿಲ್ಲೆಯ ಒಂದು ಪುಟ್ಟ ಪಟ್ಟಣ.ಆದರೆ ಸಾವಿರ ವರ್ಷಗಳ ಹಿಂದೆ ಇದೊಂದು ರಾಜಧಾನಿಯಾಗಿ ಮೆರೆದ ಪ್ರದೇಶವಾಗಿತ್ತು.

ನಿಜ ಆಗ ಇದು ಮಹಾನ್ ನಿರ್ಮಾತೃರೆನಿಸಿದ ಚಾಲುಕ್ಯರ ರಾಜಧಾನಿಯಾಗಿತ್ತು.

ಇಲ್ಲಿ ಅವರಿಂದ ನಿರ್ಮಿಸಲ್ಪಟ್ಟ ಶಿಲಾಗುಹೆಗಳೇ ಇಂದು ಅದ್ಭುತ ಮತ್ತು ಅಚ್ಚರಿಯ ನಿರ್ಮಾಣ.

ಭಾರತದ ಅತ್ಯಂತ ಶ್ರೇಷ್ಠ ದೇವಾಲಯ ಎನಿಸಿದ ಮಹಾರಾಷ್ಟ್ರದ ಎಲ್ಲೋರಾದ ಕೈಲಾಸನಾಥ ದೇವಾಲಯ ಹೇಗೆ ಏಕಶಿಲಾ ದೇವಾಲಯವಾಗಿ ಉನ್ನತ ಮಟ್ಟದಲ್ಲಿದೆಯೋ ಅಂತೆಯೇ ಕರ್ನಾಟಕದ ಬಾದಾಮಿಯಲ್ಲಿಯೂ ಬ್ರಹದಾಕಾರದ ಬಂಡೆಯನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಈಗ ವಿಜ್ಞಾನ ತಂತ್ರಜ್ಞಾನಗಳು ಉಚ್ಛ್ರಾಯ ಸ್ಥಿತಿಯನ್ನು ತಲುಪಿದ್ದರೂ ಈ ರೀತಿಯ ದೇವಾಲಯಗಳ ನಿರ್ಮಾಣ ಕನಸಿನಲ್ಲೂ ಅಸಾಧ್ಯ.ಹಾಗಾದರೆ ಏನೂ ತಾಂತ್ರಿಕ ಸೌಲಭ್ಯಗಳು ಇಲ್ಲದ ಆ ಕಾಲದಲ್ಲಿ ಈ ರೀತಿಯ ಏಕಶಿಲಾ ಗುಹಾಂತರ ದೇವಾಲಯಗಳನ್ನು ಹೇಗೆ ನಿರ್ಮಿಸಿದ್ದರು!!!? .

ಇದಕ್ಕೆ ಉತ್ತರ ಆ ಕಾಲದ ಶಿಲ್ಪಗಳ ಅದ್ಭುತ ಪ್ರತಿಭೆ,ನೈಪುಣ್ಯತೆ,ಶ್ರದ್ಧೆ, ಮತ್ತು ತಾಳ್ಮೆಯೇ ಹೊರತು ಮತ್ತೇನೂ ಅಲ್ಲ,ಅದರ ನಿರ್ಮಾಣದ ಸಂದರ್ಭದಲ್ಲಿ ಮಡಿದ ಶಿಲ್ಪಗಳು ಕಾರ್ಮಿಕರ ಸಂಖ್ಯೆ ಅಸಂಖ್ಯಾತ.


ಅದು ತೆಗೆದುಕೊಂಡು ಸಮಯ ಕೂಡಾ ಸುದೀರ್ಘ, ಆದರೂ ಛಲಬಿಡದ ತ್ರಿವಿಕ್ರಮರಂತೆ ಆ ಕಾಲದ ಶಿಲ್ಪಗಳು ಇಂತಹ ಅದ್ಭುತ ಗುಹಾಂತರ ದೇವಾಲಯಗಳನ್ನು ಮಾಡಿ ಅಜರಾಮರರಾಗಿದ್ದಾರೆ.

ದುರದೃಷ್ಟವೆಂದರೆ ಅವರ ಹೆಸರುಗಳೂ ನಮಗೆ ತಿಳಿದಿಲ್ಲ.ಪ್ರಚಾರಕ್ಕಾಗಿ ಒಂದಿಷ್ಟು ಕುರ್ಚಿ, ಫ್ಯಾನ್ಗಳನ್ನು ದಾನವಾಗಿ ನೀಡಿ ಅದರ ಮೇಲೆ ದಪ್ಪಕ್ಷರದಲ್ಲಿ ನಮ್ಮ ಕೊಡುಗೆ ಎಂದು ಹೆಸರು ಬರೆಸಿಕೊಳ್ಳುವ ಈ ಕಾಲದಲ್ಲಿ,ಶಾಶ್ವತವಾಗಿ ನಮ್ಮ ನಾಡಿಗೆ ಇಂತಹ ಅಪೂರ್ವ ಸ್ಮಾರಕಗಳ ಕೊಡುಗೆ ನೀಡಿಯೂ ಎಲ್ಲೂ ತಮ್ಮ ಹೆಸರುಗಳನ್ನ ಕೆತ್ತಿಸಿಕೊಳ್ಳದ ಆ ಶಿಲ್ಪಗಳಿಗೊಂದು ಸೆಲ್ಯೂಟ್.

ಇವೆಲ್ಲ ನಿರ್ಮಾಣವಾಗಿದ್ದು ೬,೭,ಮತ್ತು ೮ ನೇ ಶತಮಾನದಲ್ಲಿ,ಇಲ್ಲಿನ ಗುಹೆಗಳು ವೇಸರ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ,ಇದು ಚಾಲುಕ್ಯ ಶೈಲಿಯೂ ಹೌದು,ಇಲ್ಲಿ ಪ್ರಧಾನವಾಗಿ ನಾಲ್ಕು ಗುಹಾಂತರ ದೇವಾಲಯಗಳಿವೆ,ಮೊದಲನೇ ಗುಹೆ ಶಿವನಿಗೆ,ಎರಡು ಮತ್ತು ಮೂರನೇ ಗುಹೆ ವಿಷ್ಣುವಿಗೆ,ನಾಲ್ಕನೇ ಗುಹೆ ಜೈನರಿಗೆ ಸಂಬಂಧಿಸುದಾಗಿದೆ,ಅಂದರೆ ಆ ಸಂಬಂಧಿ ಶಿಲ್ಪಗಳು ಅಲ್ಲಿವೆ,ಇದು ಚಾಲುಕ್ಯರ ಧಾರ್ಮಿಕ ಸಹಿಷ್ಣುತೆಯನ್ನೂ ತಿಳಿಸುತ್ತದೆ.ಗರ್ಭಗುಡಿ, ಮುಖಮಂಟಪಗಳನ್ನು ಇವು ಒಳಗೊಂಡಿವೆ,ಬಾದಾಮಿಯ ಈ ಅಚ್ಚರಿ ಇದನ್ನು ಕರ್ನಾಟಕದ ಎಲ್ಲೋರಾ ಎಂದೆನಿಸಿದೆ ಅಂದರೆ ಅತಿಶಯೋಕ್ತಿಯಲ್ಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ