ನೆಲದ ಕಥೆ| “ಬೀದರ್” ರಾಜಧಾನಿಯಾಗಿದ್ದು ಹೇಗೆ!

849

ಕನ್ನಡ ನಾಡಿನ ಪ್ರಸಿದ್ಧ ಐತಿಹಾಸಿಕ ಪಟ್ಟಣಗಳಲ್ಲಿ ಬೀದರ್ ಕೂಡಾ ಒಂದು.ಕರ್ನಾಟಕದ ಶಿಖರದಲ್ಲಿರುವ ಈ ಪಟ್ಟಣಕ್ಕೆ ಹಲವಾರು ಶತಮಾನಗಳ ಇತಿಹಾಸವಿದೆ,ಬೀದರ್ ಈಗೊಂದು ಜಿಲ್ಲೆಯಾಗಿದ್ದರೂ ಸುಮಾರು ೬೫೦ ವರ್ಷಗಳ ಹಿಂದೆ ಇದೊಂದು ರಾಜಧಾನಿಯಾಗಿತ್ತೆಂದರೆ ನಂಬುವಿರಾ?!! ನಿಜ ಹಿಂದೊಂದು ಕಾಲದಲ್ಲಿ ಬೀದರ್ ಸಕಲ ವೈಭೋಗಗಳನ್ನು ಹೊಂದಿ ಮೆರೆದ ರಾಜಧಾನಿಯಾಗಿತ್ತು.

ಹಾಗಾದರೆ ಇನ್ನೇಕೆ ತಡ ಬೀದರ್ ರಾಜಧಾನಿಯಾದ ಕಥೆ ಕೇಳಿ.

ಅದು ಹದಿನಾಲ್ಕನೇ ಶತಮಾನದ ಮೂರನೇ ದಶಕ,ಆಗ ದೆಹಲಿ ಸುಲ್ತಾನನಾಗಿದ್ದ ಮಹ್ಮದ್ ಬಿನ್ ತುಘಲಕ್ ಆಳ್ವಿಕೆ ಮಾಡುತ್ತಿದ್ದ,ಈತ ಕೇವಲ ಉತ್ತರ ಭಾರತದ ಮೇಲೆ ಮಾತ್ರ ತನ್ನ ಅಧಿಪತ್ಯ ಸಾಧಿಸದೆ,ದಕ್ಷಿಣ ಭಾರತಕ್ಕೂ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡುವ ಹಂಬಲದಲ್ಲಿ ದಕ್ಷಿಣದ ದೇವಗಿರಿಯನ್ನು ದೌಲತಾಬಾದ್ ಎಂಬ ಹೊಸ ಹೆಸರಿಟ್ಟು ಆಳ್ವಿಕೆ ಮಾಡಿದ್ದ,

ಅದು ಆತನ ಮಹಾದಡ್ಡತನವೆಂದು ಇತಿಹಾಸದಲ್ಲಿ ಸಾಬೀತಾಗಿದೆ,ತನ್ಮೂಲಕ ಆತ ” ಹುಚ್ಚುದೊರೆ” ಎಂಬ ಬಿರುದನ್ನೂ ಪಡೆದ!!! ಆದರೆ ಅವನ ಸೈನ್ಯ ಬಲಿಷ್ಠವಾಗಿತ್ತು,

ತತ್ಪರಿಣಾಮವಾಗಿ ಆತ ಉತ್ತರ ಕರ್ನಾಟಕವನ್ನೂ ಆಕ್ರಮಿಸಿದ್ದ,೧೩೪೫ರಲ್ಲಿ ದಕ್ಷಿಣದ ಕೆಲವು ಮುಸ್ಲಿಂ ಸರದಾರರು ಆತನ ವಿರುದ್ಧ ದಂಗೆಗೆದ್ದರು,ಕಾರಣ ಅವರ ಆಟ ನಡೆಯುತ್ತಿರಲಿಲ್ಲ!.

ದಂಗೆಗೆದ್ದು ಮಲಿಕ್ ಇಸ್ಮಾಯಿಲ್ ಎಂಬುವವನನ್ನು ತುಘಲಕ್ ನ ವಿರುದ್ಧವಾಗಿ ತಮ್ಮ ನಾಯಕ ಎಂದು ಘೋಷಿಸಿಕೊಂಡರು,

ಇದರಿಂದ ಕೋಪಗೊಂಡ ತುಘಲಕ್ ತಕ್ಷಣ ತನ್ನ ಸೈನ್ಯದೊಂದಿಗೆ ಮಲಿಕ್ ಇಸ್ಮಾಯಿಲ್ ನ ವಿರುದ್ಧ ದಂಡೆತ್ತಿ ಬಂದ,ಮಲಿಕ್ ಇಸ್ಮಾಯಿಲ್ ಸೋತು ಶರಣಾದ,ಆಗ ದಕ್ಷಿಣದ ಮುಸ್ಲಿಂ ಸರದಾರರು ಇಸ್ಮಾಯಿಲ್ ನ ಬದಲಿಗೆ ಮತ್ತೋರ್ವ ವ್ಯಕ್ತಿಯನ್ನು ತಮ್ಮ ನಾಯಕ ಎಂದು ಆಯ್ಕೆಮಾಡಿಕೊಂಡರು ಅವನೇ ಅಲ್ಲಾಉದ್ದೀನ್ ಹಸನ್ ಗಂಗೂ ಬಹುಮನ್ ಷಾ! ಹೀಗೆ ಹಸನ್ ಗಂಗೂ ದಕ್ಷಿಣದ ನಾಯಕನಾಗಿ ಹೊರಹೊಮ್ಮಿದ,ಮತ್ತು ಬಲಿಷ್ಠ ಸೈನ್ಯವನ್ನು ಸಂಘಟಿಸಿದ ಮತ್ತು ತುಘಲಕ್ ನ ಸೈನ್ಯವನ್ನು ಸೋಲಿಸಿದ.

ಆನಂತರ ದಕ್ಷಿಣದ ಸುಲ್ತಾನನಾಗಿ ” ಬಹುಮನಿ” ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ,ಮೊದಲು ಈತ ತನ್ನ ರಾಜಧಾನಿಗೆಂದು ಗುಲ್ಬರ್ಗಾವನ್ನೂ ಆಯ್ಕೆ ಮಾಡಿಕೊಂಡರೂ ನಂತರ ಆತನ ಗಮನ ಸೆಳೆದ ಪ್ರದೇಶವೇ ” ಬೀದರ್”.

ನಂತರ ಬೀದರ್ ದಿನದಿಂದ ದಿನಕ್ಕೆ ಬೆಳೆಯತೊಡಗಿತು,ಗೋರಿಗಳು,ಮಸೀದಿಗಳು,ಅರಮನೆಗಳು ಹೀಗೆ ಒಂದಕ್ಕಿಂತ ಒಂದು ವೈಭವಯುತವಾದ ಸ್ಮಾರಕಗಳು ತಲೆಎತ್ತಿ ಬೀದರ್ ನ್ನು ನಯನಮನೋಹರಗೊಳಿಸಿದವು,ಬೀದರ್ ನ ಬಹುತೇಕ ಸ್ಮಾರಕಗಳ ವಾಸ್ತುಶಿಲ್ಪದ ಮೇಲೆಲ್ಲಾ ವಿದೇಶಿ ವಾಸ್ತುಶಿಲ್ಪ ಶೈಲಿಯ ಪ್ರಭಾವವನ್ನು ಕಾಣುತ್ತೇವೆ,ಕಾರಣ ಅದರ ನಿರ್ಮಾತ್ರರು ಟರ್ಕಿ,ಪರ್ಶಿಯಾ,ಅರೇಬಿಯಾದಿಂದ ಬರುತ್ತಿದ್ದರು.

ವಿಶೇಷವಾಗಿ ಸೋಲಾಕುಂಬಾ ಮಸೀದಿಯಂತೂ ರೋಮನ್ ಶೈಲಿಯನ್ನು ನೆನಪಿಸುತ್ತದೆ! ಬೀದರ್ ನ ರಂಗೀನ್ ಮಹಲ್,ಗಗನ್ ಮಹಲ್,ಚೀನಿ ಮಹಲ್,ತರ್ಕಶ್ ಮಹಲ್,ನಾಗಿನ್ ಮಹಲ್,ಗವಾನ್ ಮದರಸಾ,ಕೋಟೆಗಳೆಲ್ಲವೂ ಬಹುಮನಿಗರ ವಾಸ್ತುಶಿಲ್ಪದ ವೈಭವಕ್ಕೆ ಸಾಕ್ಷಿಯಾಗಿ ನಿಂತಿವೆ.

ಲೇಖನ:- ಲಕ್ಷೀಶ್ ಸೋಂದಾ. ಇತಿಹಾಸಕಾರರು.
ಸಂಪರ್ಕ:- +91 80738 10005




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!