ಮಾಜಿ ಸಚಿವ ಹೆಚ್.ಆಂಜನೇಯ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಪ್ರಭು ಚವ್ಹಾಣ್- ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ!

818

ಬೆಂಗಳೂರು: ನನ್ನ ಜಾತಿ ಮತ್ತು ಜನ್ಮ ಸ್ಥಳದ ಕುರಿತು ಸಮಾಜಕಲ್ಯಾಣ ಇಲಾಖೆಯ ಮಾಜಿ ಸಚಿವ ಎಚ್. ಆಂಜನೇಯ ಅವರು ಚಿತ್ರದುರ್ಗದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ನಿರಾಧಾರ ಹಾಗೂ ಸತ್ಯಕ್ಕೆ ದೂರವಾಗಿವೆ ಎಂದು ಪಶು ಸಂಗೋಪನೆ, ವಕ್ಫ್ ಮತ್ತು ಹಜ್ ಖಾತೆ ಸಚಿವರಾದ ಪ್ರಭು ಚವ್ಹಾಣ್ ಅವರು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟಪಡಿಸಿದ್ದಾರೆ.

ಆಂಜನೇಯ ಅವರಿಗೆ ನನ್ನ ಜಾತಿ, ಜನ್ಮದ ಮೂಲದ ಬಗ್ಗೆ ತಿಳಿಯಬೇಕಿದ್ದರೆ ಒಮ್ಮೆ ನನ್ನ ಕ್ಷೇತ್ರಕ್ಕೆ ಬಂದು ಸ್ವತಃ ವಾಸ್ತವ ಏನೆಂಬುದು ತಿಳಿದುಕೊಳ್ಳಲಿ. ನಾನು ಸುಳ್ಳು, ಮೋಸದಿಂದ ಜಾತಿ, ಜನ್ಮ ಪ್ರಮಾಣಪತ್ರ ಪಡೆದಿರುವುದು ಸಾಬೀತಾದರೆ ಅದೇ ಕ್ಷಣ ರಾಜಕೀಯದಿಂದ ನಿವೃತ್ತಿ ಪಡೆಯುವೆ. ಒಂದು ವೇಳೆ ಇದು ಸುಳ್ಳು ಎಂದಾದರೆ ಅವರು ಬಹಿರಂಗವಾಗಿ ಕ್ಷಮೆ ಕೋರಲಿ ಎಂದು ಸವಾಲು ಹಾಕಿದ್ದಾರೆ.

ನಾನು ಮೂಲತಃ ಕರ್ನಾಟಕದವನು. ನಾನು ಅಪ್ಪಟ ಕನ್ನಡಿಗ. ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಬೋಂತಿ ತಾಂಡಾ ನನ್ನ ಹುಟ್ಟೂರು. ನಾನು ಪರಿಶಿಷ್ಟ ಜಾತಿಯ(ಎಸ್.ಸಿ) ಲಂಬಾಣಿ ಜನಾಂಗಕ್ಕೆ ಸೇರಿದ್ದೇನೆ. ಆದರೆ ಆಂಜನೇಯ ಅವರು ವಾಸ್ತವ ಅರಿಯದೆ ಹಾಗೂ ಯಾರೋ ಕುತಂತ್ರಿಗಳು ನೀಡಿದ ಸುಳ್ಳು ಮಾಹಿತಿಯನ್ನು ನಂಬಿ ನಾನು ಮಹಾರಾಷ್ಟ್ರದವನಸ್ಸಿ ಜಾತಿಗೆ ಸೇರಿದವನಲ್ಲ ಎಂದು ಆರೋಪಿಸಿದ್ದಾರೆ. ಪರಿಶಿಷ್ಟ ಸಮಾಜದ ಹಿರಿಯ ನಾಯಕರೆನಿಸಿಕೊಂಡ ಆಂಜನೇಯ ಅವರಿಂದ ಇಂತಹ ತಪ್ಪು ಹೇಳಿಕೆ ಬಂದಿರುವುದು ಅಚ್ಚರಿ ತಂದಿದೆ ಎಂದು ಸಚಿವರು ಇಲ್ಲಿ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನನ್ನ ಜಾತಿ ಹಾಗೂ ಜನ್ಮ ಸ್ಥಳದ ಕುರಿತು ಯಾವುದೇ ವಿವಾದವಿಲ್ಲ. ಆದರೆ ಕೆಲವರು ಮೇಲಿಂದ ಮೇಲೆ ಈ ವಿಷಯವನ್ನು ಕೆದಕಿ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಮೂರನೇ ಸಲ ಔರಾದ್ ಕ್ಷೇತ್ರದ ಶಾಸಕನಾಗಿ, ಕಳೆದ ಒಂದು ವರ್ಷದಿಂದ ಸಚಿವನಾಗಿ ಮಾಡುತ್ತಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಈ ರೀತಿ ಸುಳ್ಳು ವಿಷಯ ಪ್ರಸ್ತಾಪಿಸಿ ನನಗೆ ಮಾನಸಿಕ ಹಿಂಸೆ ನೀಡಲು ಪ್ರಯತ್ನಿಸುತ್ತಿದ್ದಾರೆ. ನಾನು ಇದ್ಯಾವುದಕ್ಕೂ ಬಗ್ಗುವವ, ಜಗ್ಗುವವನಲ್ಲ. ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ಅವಿರತ ಕೆಲಸ ಮುಂದುವರಿಸಿದ್ದೇನೆ.

೨೦೦೮ರಲ್ಲಿ ನಾನು ಮೊದಲ ಸಲ ಔರಾದ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಂದರ್ಭದಲ್ಲಿ ಕೆಲವರು ನನ್ನ ಜಾತಿ, ಜನ್ಮ ಸ್ಥಳದ ಬಗ್ಗೆ ಆಕ್ಷೇಪ ಎತ್ತಿದ್ದರು. ಆಗಿನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆಗಿದ್ದ ಹರ್ಷ ಗುಪ್ತಾ ಅವರು ಅಧಿಕಾರಿಗಳಿಂದ ಈ ಬಗ್ಗೆ ತನಿಖೆ ನಡೆಸಿದ್ದರು. ಸ್ಥಳ ಪರಿಶೀಲನೆ, ಅಗತ್ಯ ದಾಖಲಾತಿ ಪರಿಶೀಲನೆ ಬಳಿಕ ಎಸ್ ಸಿ ಪ್ರಮಾಣಪತ್ರ ವಿತರಿಸಿ, ಎಲ್ಲ ಆಕ್ಷೇಪಗಳನ್ನು ತಳ್ಳಿ ಹಾಕಿದ್ದರು. ಇದಾದ ಬಳಿಕ ೨೦೦೯ರಲ್ಲಿ ಬಾಬು ತಾರೆ ಎಂಬುವರು ಜಾತಿ, ಜನ್ಮದ ವಿಷಯ ಕುರಿತು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಸಮಗ್ರ ವಿಚಾರಣೆಯ ನಂತರ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿದೆ.

ಇದಾದ ಬಳಿಕ ೨೦೧೫ರಲ್ಲಿ ಶಂಕರರಾವ ದೊಡ್ಡಿ ಅವರು ಇದೇ ವಿಷಯದ ಕುರಿತು ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಈ ದೂರಿನ ಮೇಲೆ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಅವರಿಗೆ ತಮ್ಮ ವರದಿ ಸಲ್ಲಿಸಿ ಜಾತಿ ಪ್ರಮಾಣಪತ್ರ ಕುರಿತು ವಿಚಾರಣೆ ಮಾಡುವಂತೆ ಕೋರಿದ್ದರು.

ಜಾರಿ ನಿರ್ದೇಶನಾಲಯದ ವರದಿ ಮೇಲೆ ಜಿಲ್ಲಾಧಿಕಾರಿ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ಸುಮಾರು ೧೫ ತಿಂಗಳು ಕಾಲ ಸುದೀರ್ಘ ವಿಚಾರಣೆ ನಡೆಸಿದೆ. ವಿಚಾರಣೆ ಸಂದರ್ಭದಲ್ಲಿ ದೂರುದಾರರು ಮಾಡಿದ ಆರೋಪಗಳಂತೆ ಮಹಾರಾಷ್ಟ್ರದ ಉದಗೀರ್ ತಾಲ್ಲೂಕಿನ ತೊಗರಿ ಮತ್ತು ತೊಂಡಚೀರ್ ಗ್ರಾಮಕ್ಕೆ ಸಂಬಂಧಿಸಿದ ಅಧಿಕಾರಿಗಳು ( ತಹಸೀಲ್ದಾರರು, ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು) ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಆವಾಗ ನಾನು, ನನ್ನ ತಂದೆ ಭಾಮಲಾ ಭೀಮ್ಲಾ ಚವ್ಹಾಣ್ ಅವರು ಈ ಗ್ರಾಮಕ್ಕೆ ಸಂಬಂಧಿಸಿಲ್ಲ. ಅಲ್ಲಿ ಇದ್ದ ಹಾಗೂ ಯಾವುದೇ ಸೌಲಭ್ಯಗಳನ್ನು ಸಹ ಪಡೆದ ದಾಖಲೆಗಳು ಸಿಕ್ಕಿಲ್ಲ. ನಾನು ಔರಾದ್ ತಾಲ್ಲೂಕಿನ ಬೋಂತಿ ತಾಂಡಾ ನಿವಾಸಿ. ಅಲ್ಲೇ ಹುಟ್ಟಿ ಬೆಳೆದಿರುವೆ ಎಂದು ಅಧಿಕಾರಿಗಳ ತಂಡ ಬೋಂತಿ ತಾಂಡಾಕ್ಕೆ ಭೇಟಿ ನೀಡಿದಾಗ ಸ್ಪಷ್ಟವಾಗಿದೆ. ಈ ಎಲ್ಲಾ ವಿಚಾರಣೆ, ಸ್ಥಳ ಪರಿಶೀಲನೆ, ಪಂಚನಾಮೆ, ದಾಖಲಾತಿ ಪರಿಶೀಲನೆಯ ನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದ ಡಾ. ಎಚ್.ಆರ್.ಮಹಾದೇವ ಮತ್ತು ಇತರೆ ಇಬ್ಬರು ಅಧಿಕಾರಿಗಳುಳ್ಳ ಸಮಿತಿಯು ೨೦೧೭ರ ನವೆಂಬರ್ ನಲ್ಲಿ ಶಂಕರರಾವ ದೊಡ್ಡಿ ಅವರ ದೂರು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶ ಬಗ್ಗೆ ಶಂಕರರಾವ ದೊಡ್ಡಿ ಅವರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲಿಯೂ ಸಹ ಮೇಲ್ಮನವಿ ಅರ್ಜಿ ತಿರಸ್ಕಾರ ಆಗಿದೆ. ನನ್ನ ಜಾತಿ, ಜನ್ಮ ಸ್ಥಳದ ಬಗ್ಗೆ ಪದೇ ಪದೆ ಮಾಡಿದ ಆರೋಪ, ನೀಡಿರುವ ದೂರುಗಳೆಲ್ಲವೂ ಶುದ್ಧ ಸುಳ್ಳು ಎಂಬುದು ಸಾಬೀತಾಗಿದೆ. ಹೀಗಿದ್ದಾಗಲೂ ಇದರ ಹಿನ್ನೆಲೆ, ಸತ್ಯಾಸತ್ಯತೆ ಅರಿಯದೇ ಆಂಜನೇಯ ಅವರು ಇಲ್ಲಸಲ್ಲದ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಸಂಗತಿ ಎಂದು ತಿರುಗೇಟು ನೀಡಿದ್ದಾರೆ.

ವರದಿ:- ಪ್ರದೀಪ್.ಜಿ.ಎಸ್.

ಕುಮಟಾ ಪುರಸಭೆ ಪ್ರಕಟಣೆ.Leave a Reply

Your email address will not be published. Required fields are marked *