ಭಾಲ್ಕಿ ತಾಲ್ಲೂಕಿನ ಕೃಷಿ ಭೂಮಿಯಲ್ಲಿ ಶೇ. 60ರಷ್ಟನ್ನು ನೀರಾವರಿ ಸೌಲಭ್ಯದ ವ್ಯಾಪ್ತಿಗೆ- ಈಶ್ವರ್ ಖಂಡ್ರೆ

70

ಬೀದರ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರ ಮನೆ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿರುವ ದಾಳಿ ಬಿಜೆಪಿ ಕುಮ್ಮಕ್ಕು ಹಾಗೂ ರಾಜಕೀಯ ಪಿತೂರಿಯಿಂದ ಕೂಡಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ದೂರಿದ್ದಾರೆ. ಇಂದು ಬೀದರ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಿಬಿಐ ಇತರೆ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜಕೀಯ ಸ್ವಾರ್ಥ ಸಾಧನೆಗೆ ಹಾಗೂ ವಿರೋಧಿಗಳಿಗೆ ಹತ್ತಿಕ್ಕಲು ನಿರಂತರವಾಗಿ ದಾಳಿ ನಡೆದಿವೆ. ಕಾಂಗ್ರೆಸ್ ಇದೆಲ್ಲವನ್ನು ಸಮರ್ಥವಾಗಿ ಎದುರಿಸಲಿದೆ. ಇಂಥ ರಾಜಕೀಯ ಷಡ್ಯಂತ್ರದ ದಾಳಿ ಹಿಂದಿನ ಅಸಲಿಯತ್ ಕಾನೂನು ಸಮರದಲ್ಲಿ ಬಹಿರಂಗವಾಗಲಿದೆ. ನ್ಯಾಯಾಂಗ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ, ಜನರ ಹಾಗೂ ಕಾರ್ಮಿಕರ ವಿರೋಧಿಯಾಗಿವೆ. ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ವಿವಿಧ ಕಾಯ್ದೆಗಳೇ ಇದಕ್ಕೆ ನಿದರ್ಶನ. ಕರೊನಾ ನಿಯಂತ್ರಿಸಲು ವಿಫಲವಾಗಿರುವ ಈ ಸರ್ಕಾರ ರೈತರು, ಬಡ ಜನರ ಮೇಲೆ ಬರೆ ಎಳೆಯುತ್ತಿದೆ. ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶದಲ್ಲಿ ಹಿಂದೆಂದೂ ಕಂಡರಿಯದಂಥ ನಿರುದ್ಯೋಗ ಸಮಸ್ಯೆ ತಲೆದೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದ ಹಾಥರಸ್ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಆದರೂ ಅಲ್ಲಿಯ ಬಿಜೆಪಿ ಸರ್ಕಾರ ರೇಪ್ ನಡೆದಿಲ್ಲ ಎಂದು ಪ್ರತಿಪಾದಿಸುತ್ತ ಕಿರಾತಕರ ರಕ್ಷಣೆಗೆ ಮುಂದಾಗಿದೆ. ಸಣ್ಣಪುಟ್ಟ ವಿಷಯಗಳಿಗೂ ಟ್ವೀಟ್ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆ ಈವರೆಗೂ ಏಕೆ ಚಕಾರವೆತ್ತಿಲ್ಲ ಎಂದು ಖಂಡ್ರೆ ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಎಂ.ಎ.ಸಮೀ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪುಂಡಲೀಕರಾವ್ ಇದ್ದರು.

ವಸತಿ ಯೋಜನೆ ಆರೋಪ
ಪ್ರಕರಣ ಏಕೆ ದಾಖಲಿಸಿಲ್ಲ?

ಭಾಲ್ಕಿ ತಾಲ್ಲೂಕಿನಲ್ಲಿ ವಿವಿಧ ವಸತಿ ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮ ನಡೆದಿದೆ ಎಂಬ ಕುರಿತು ತಮ್ಮ ವಿರುದ್ಧ ಆರೋಪ ಮಾಡಿದವರು ಪ್ರಕರಣ ಏಕೆ ದಾಖಲಿಸಿಲ್ಲ? ಎಂದು ಕ್ಷೇತ್ರದ ಶಾಸಕರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಸತಿ ಯೋಜನೆ ವಿಷಯ ಪ್ರಸ್ತಾಪಿಸಿದ ಖಂಡ್ರೆ, ಯಾರ ಹೆಸರು ಪ್ರಸ್ತಾಪಿಸದೆ ಸಂಸದ ಭಗವಂತ ಖೂಬಾ ಮತ್ತು ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಭಾಲ್ಕಿ ವಸತಿ ಯೋಜನೆ ಅನುಷ್ಠಾನದಲ್ಲಿ ನಿಯಮಾವಳಿಗಳು ಉಲ್ಲಂಘನೆಯಾಗಿದ್ದಲ್ಲಿ, ನಾನು ತಪ್ಪು ಮಾಡಿದ್ದಾದಲ್ಲಿ ನನ್ನ ವಿರುದ್ಧ ಕೇಸ್ ದಾಖಲಿಸುವಂತೆ ಸವಾಲು ಹಾಕಿದ್ದೆ. ನನ್ನ ವಿರುದ್ಧ ಇಲ್ಲಸಲ್ಲದ ಮತ್ತು ಅರ್ಥಹೀನ ಆರೋಪ ಮಾಡಿದ್ದವರು ಪ್ರಕರಣ ದಾಖಲಿಸಿಲ್ಲ. ವಸತಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಆಗದಂತೆ ಅಡ್ಡಗಾಲು ಹಾಕಿದವರಿಗೆ ಬಡವರ ಶಾಪ ತಟ್ಟಲಿದೆ ಎಂದರು.

ಭಾಲ್ಕಿಯಲ್ಲಿ ನೀರಾವರಿ
ಕಾರಂಜಾ ಜಲಾಶಯಕ್ಕೆ ಪ್ರಸಕ್ತ 5 ಟಿಎಂಸಿಯಷ್ಟು ನೀರು ಬಂದಿದೆ. ಕಾರಂಜಾ ನೀರಿನಿಂದ ಭಾಲ್ಕಿ ತಾಲ್ಲೂಕಿನಲ್ಲಿ ಇರುವ ಒಟ್ಟು ಕೃಷಿ ಭೂಮಿಯಲ್ಲಿ ಶೇ. 60ರಷ್ಟನ್ನು ನೀರಾವರಿ ಸೌಲಭ್ಯದ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಹೇಳಿದರು.

28 ಸಾವಿರ ಹೆಕ್ಟೇರ್ ಜಮೀನಿಗೆ ನೀರುಣಿಸಿ ರೈತರಿಗೆ ಅನುಕೂಲವಾಗುವಂತೆ ಜಲಾಶಯದ 131 ಕಿಮೀ ಉದ್ದದ ಬಲದಂಡ ಕಾಲುವೆಯ ಕೊನೆಯ ಹಂತದವರೆಗೆ ಹಾಗೂ 31 ಕಿಮೀ ಉದ್ದದ ಎಡ ದಂಡೆ ಕಾಲುವೆಯ ಕೊನೆಯಂಚಿನವರೆಗೂ ನೀರು ಹರಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಎರಡೂ ಕಾಲುವೆಗಳ ಆಧುನೀಕರಣಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ತಾವು 800 ಕೋಟಿ ರೂ. ಬಿಡುಗಡೆ ಮಾಡಿಸಿದ್ದಾಗಿ ಹೇಳಿದರು.

ಭಾಲ್ಕಿ ತಾಲ್ಲೂಕಿನಲ್ಲಿ ಹೆಚ್ಚುವರಿಯಾಗಿ ಇನ್ನೂ 28 ಸಾವಿರ ಎಕರೆ ಭೂಮಿಗೆ ನೀರಾವರಿ ಕಲ್ಪಿಸಲು ಮೆಹಕರ್ ಹತ್ತಿರದ ಮಾಂಜ್ರಾ ನದಿಯಿಂದ ಮೆಹಕರ್ ಮತ್ತು ಸಾಯಗಾಂವ್ ಏತ ನೀರಾವರಿ ಯೋಜನೆಗೆ ಸರ್ಕಾರ 2019ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದೆ. 480 ಕೋಟಿ ರೂ. ವೆಚ್ಚದ ಈ ಯೋಜನೆ ಬೇಗ ಸಾಕಾರಗೊಳಿಸಲಾಗುವುದು ಎಂದರು.
Leave a Reply

Your email address will not be published. Required fields are marked *