ರಾಮಚಂದ್ರಾಪುರ ಮಠಕ್ಕೆ ಬ್ಲ್ಯಾಕ್‍ಮೇಲ್: ಆರೋಪ ಕೈಬಿಡುವಂತೆ ಕೋರಿದ್ದ ಅರ್ಜಿ ವಜಾ!

1484

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠಕ್ಕೆ 10 ಕೋಟಿ ರೂಪಾಯಿ ಬ್ಲ್ಯಾಕ್‍ಮೇಲ್ ಮಾಡಿದ ಆರೋಪದಲ್ಲಿ ತಮ್ಮ ವಿರುದ್ಧದ ಪ್ರಕರಣಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ರಾಜು ಅಡಿ ಸೇರಿದಂತೆ ಐವರು ಆರೋಪಿಗಳು ಮಡಿದ್ದ ಮನವಿಯನ್ನು ಬೆಂಗಳೂರು ನಗರ ನ್ಯಾಯಾಲಯ ತಿರಸ್ಕರಿಸಿದೆ.

“ಶ್ರೀಮಠದ ಧರ್ಮಚಕ್ರ ಟ್ರಸ್ಟ್ ನಲ್ಲಿ ಅವ್ಯವಹಾರ ಆಗಿದೆ ಎಂದು ರಾಜ್ಯ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇವೆ, ಅದು ವಿಚಾರಣೆಗೆ ಬರಲಿದ್ದು, ಮಠದ ಮರ್ಯಾದೆ ಹರಾಜು ಹಾಕುತ್ತೇವೆ” ಎಂದು ಪ್ರಕರಣದ ಆರೋಪಿಗಳು ಮಠದ ಭಕ್ತರಿಗೆ ದೂರವಾಣಿ ಕರೆ ಮಾಡಿ, ಪಿಐಎಲ್ ವಾಪಾಸು ಪಡೆಯಬೇಕಿದ್ದರೆ 10 ಕೋಟಿ ರೂಪಾಯಿ ನೀಡುವಂತೆ ಒತ್ತಾಯಿಸಿದ್ದ ಕುರಿತು ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರಿನಗರ ಠಾಣೆಯಲ್ಲಿ ದೂರು ನೀಡಿದ್ದರು.

ಈ ಸಂಬಂಧ ಗಿರಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹಿಡಿದಿದ್ದರು.

ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಿ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ ಚಾರ್ಜ್‍ಶೀಟ್ ಸಲ್ಲಿಸಿತ್ತು.

ನ್ಯಾಯಾಲಯದಲ್ಲಿ ಚಾರ್ಜ್ ಫ್ರೇಮಿಂಗ್ ಹಂತಕ್ಕೆ ಬಂದಿತ್ತು.ಈ ಮಧ್ಯೆ ಆರೋಪಿಗಳಾದ ರಾಜಗೋಪಾಲ ಅಡಿ, ಶೇಷಾನಂದ ವಿಶ್ವೇಶ್ವರ ಅಡಿ, ಗೋಪಾಲ ಸದಾಶಿವ ಗಾಯತ್ರಿ, ಅಮಿತ್ ನಾಡಕರ್ಣಿ ಮತ್ತು ಗಣಪತಿ ಗಜಾನನ ಹಿರೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಹೆಸರನ್ನು ಪ್ರಕರಣದಿಂದ ಕೈಬಿಡಬೇಕು ಎಂದು ಕೋರಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಈ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮತ್ತು ಜಾರ್ಜ್ ಫ್ರೇಮಿಂಗ್‍ಗೆ ತಡೆ ನೀಡುವಂತೆ ಪ್ರಧಾನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪರಾಮರ್ಶನಾ ಅರ್ಜಿ ಸಲ್ಲಿಸಲಾಗಿತ್ತು. (ಸಿಆರ್‍ಐ.ಆರ್.ಪಿ.607/2019).

ಈ ಬಗ್ಗೆ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ, ಆರೋಪಿಗಳ ಅರ್ಜಿಯನ್ನು ವಜಾ ಮಾಡಿದೆ.

ಭಾರತದ ಅಪರಾಧ ದಂಡಸಂಹಿತೆಯ ಸೆಕ್ಷನ್ 239ರ ಅನ್ವಯ, ಆರೋಪಿಗಳ ವಿರುದ್ಧ ಮಾಡಿರುವ ಆರೋಪ ಆಧಾರರಹಿತ ಎಂದು ಮ್ಯಾಜಿಸ್ಟ್ರೇಟರಿಗೆ ಮನವರಿಕೆಯಾದಲ್ಲಿ ಮಾತ್ರ ಅವರನ್ನು ಪ್ರಕರಣದಿಂದ ಕೈಬಿಡಬಹುದಾಗಿದೆ.

ಆರೋಪಿಗಳ ವಿರುದ್ಧ ಚಾರ್ಜ್ ಫ್ರೇಮ್ ಮಾಡಲು ಅಗತ್ಯವಾದ ಸಾಕಷ್ಟು ಪುರಾವೆಗಳು ಇರುವುದನ್ನು ವಿಚಾರಣಾ ನ್ಯಾಯಾಲಯ ದೃಢಪಡಿಸಿದೆ ಎಂದು ಬೆಂಗಳೂರಿನ 64ನೇ ಹೆಚ್ಚುವರಿ ನಗರ ಸಿವಿಲ್ & ಸೆಷನ್ಸ್ ನ್ಯಾಯಾಧೀಶ ರಾಜೇಶ್ವರ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಮಠದ ಮಾಧ್ಯಮ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ