ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ!

829

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ತೀವ್ರ ತನಿಖೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿಯನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಧಾರವಾಡದ ಬರಾಕೊಟ್ರಿಯಲ್ಲಿರುವ ಕುಲಕರ್ಣಿ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಸಿಬಿಐ ಅಧಿಕಾರಿ ರಾಕೇಶ್ ರಂಜನ್ ನೇತೃತ್ವದ 6 ಮಂದಿಯ ತಂಡ ಕುಲಕರ್ಣಿಯನ್ನು ವಶಕ್ಕೆ ಪಡೆದು, ಧಾರವಾಡ ಉಪನಗರ ಠಾಣೆಗೆ ಕರೆದೊಯ್ದಿದ್ದಾರೆ. ವಿನಯ್ ಕುಲಕರ್ಣಿ ತನ್ನದೇ ವಾಹನದಲ್ಲಿ ಪೊಲೀಸ್ ಠಾಣೆಗೆ ತೆರಳಿದ್ದಾರೆ.

2017 ಜೂನ್ 15ರಂದು ಯೋಗೇಶ್ ಗೌಡನ ಕೊಲೆಯಾಗಿತ್ತು. ಅಂದು ಬೆಳಗ್ಗೆ ಧಾರವಾಡ ನಗರದ ಸಪ್ತಾಪುರ ಜಿಮ್‍ಗೆ ಎಂಟ್ರಿ ಕೊಟ್ಟಿದ್ದ ದುಷ್ಕರ್ಮಿಗಳು ಯೋಗೇಶ್ ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದರು. ಈ ದೃಶ್ಯವು ಜಿಮ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನಾಧರಿಸಿ ಪೊಲೀಸರು ಮಾಜಿ ಸಚಿವ, ಸ್ಥಳೀಯ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಐವರನ್ನು ಬಂಧಿಸಿದ್ದರು. ಹೀಗಾಗಿ ಕೊಲೆಯ ಹಿಂದೆ ವಿನಯ್ ಕುಲಕರ್ಣಿ ಅವರ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು.

ಪ್ರಕರಣದಲ್ಲಿ ವಿನಯ್ ಕುಲಕರ್ಣಿಯವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಆರೋಪಿಗಳು ಯೋಗಿಶ್ ಗೌಡನ ಸಹೋದರನ ಜೊತೆ ರಾಜಿ ಮಾಡಿಕೊಳ್ಳಲು ಮುಂದಾಗಿದ್ದರು. ಇತ್ತ ವಿನಯ್ ಕುಲಕರ್ಣಿಯವರ ಹೆಸರನ್ನು ಕೈ ಬಿಡಲು ಅಧಿಕಾರಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ ಎಂದು ಯೋಗೇಶ್ ಗೌಡ ತಾಯಿ ಆರೋಪಿಸಿದ್ದರು.
ರಾಜ್ಯ ಸರ್ಕಾರ 2019 ಸೆಪ್ಟೆಂಬರ್ 9ರಂದು ಯೋಗೇಶ್ ಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಸಿಬಿಐಗೆ ಹಸ್ತಾಂತರಿಸಿತ್ತು. ತನಿಖೆ ಆರಂಭಿಸಿರುವ ಸಿಬಿಐ ಪ್ರಕರಣದ ಆರೋಪಿಗಳಾದ ಬಸವರಾಜ ಶಿವಪ್ಪ, ವಿಕ್ರಮ್ ಬಳ್ಳಾರಿ, ಕೀರ್ತಿ ಕುಮಾರ್ ಕುರಹಟ್ಟಿ, ಸಂದೀಪ್ ಸೌದತ್ತಿ, ವಿನಾಯಕ ಕಾಟಗಿ ಹಾಗೂ ಮಹಾಬಲೇಶ್ವರ ಹೊನಗಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ