BREAKING NEWS
Search

ಚಂದ್ರಯಾನ ವಿಫಲವಾಗಿದ್ದು ಏಕೆ? ನಡೆದಿದ್ದೇನು!

904

ಬೆಂಗಳೂರು: ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ಕೈಗೊಂಡಿರುವ ಚಂದ್ರಯಾನ-2 ಯೋಜನೆ ಬಹುತೇಕ ಯಶಸ್ವಿಯಾಗಿ ನಡೆದಿದ್ದು, ಆದರೆ ಅಂತಿಮ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ನಿಂದ ಸಿಗ್ನಲ್ ಸಂಪರ್ಕ ಕಡಿತಗೊಂಡಿದೆ.

ಎಲ್ಲಾ ಅಂದುಕೊಂಡಂತೆ ವಿಕ್ರಮ್ ಲ್ಯಾಂಡ್ ಆಗುವ ಪ್ರಕ್ರಿಯೆ ಸರಿಯಾಗಿ ಆರಂಭಗೊಂಡಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಸೂಚನೆಯೂ ಲಭಿಸಿತು. ಆದರೆ ಲ್ಯಾಂಡರಿನಿಂದ ಪಥ ಬದಲಾದ ಕಾರಣ ಇಸ್ರೋ ಕೇಂದ್ರಕ್ಕೆ ಬರಬೇಕಾದ ಸಂದೇಶ ತಡವಾಗಿತ್ತು. ಚಂದ್ರನನ್ನು ತಲುಪಲು 2.1ಕಿಮೀ ದೂರ ಇದ್ದ ಸಂದರ್ಭದಲ್ಲಿ ಲ್ಯಾಂಡರಿನಿಂದ ಸಿಗ್ನಲ್ ಕಡಿತಗೊಂಡಿದೆ, ಪರಿಣಾಮ ಇಸ್ರೋ ಅಧಿಕಾರಿಗಳ ಸಿಗ್ನಲ್ ಪುನಹಾ ಪಡೆಯುವ ಯತ್ನಮಾಡುತಿದ್ದಾರೆ.

ಇಸ್ರೋನ ವಿಕ್ರಮ್​ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದ್ದರೆ ಅದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಾಧನೆಯಾಗುತ್ತಿತ್ತು. ಇಸ್ರೋ ಮೇಲಿದ್ದ ವಿಶ್ವಾಸದಿಂದಲೇ ವಿಶ್ವವಿಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಇಸ್ರೋ ವಿಜ್ಞಾನಿಗಳಿಗೆ ಶುಭ ಹಾರೈಸಲು ಕಾಯುತ್ತಾ ಕೂತಿತ್ತು.

ಬಾಹ್ಯಕಾಶದ ಕಠೋರ ಕಠಿಣತೆಯನ್ನು ಅರಿತಿರುವ ಎಲ್ಲರಿಗೂ 15 ನಿಮಿಷದ ನೆಲಕ್ಕಿಳಿಯುವ​ ಪ್ರಕ್ರಿಯೆ ಎಷ್ಟೊಂದು ಕಷ್ಟಕರ ಎನ್ನುವುದು ತಿಳಿದಿದೆ.

ಯಾವುದೇ ಗ್ರಹದಲ್ಲಿ ಇಳಿಯುವ ವಾಹಕವೂ ಅದರ ಗುರುತ್ವಾಕರ್ಷಣೆಗೆ ಒಳಪಡುತ್ತದೆ. ಆಗ ಅದರ ವೇಗ ಎಷ್ಟರ ಮಟ್ಟಿಗೆ ಏರುತ್ತದೆ ಎನ್ನುವುದು ಊಹಿಸಲೂ ಸಾಧ್ಯವಿಲ್ಲ.

ಇಂತಹ ಸಂದರ್ಭದಲ್ಲಿ ವೇಗಕ್ಕೆ ವಿರುದ್ಧವಾಗಿ ಪ್ರತಿವೇಗ, ಒತ್ತಡವನ್ನು ಸೃಷ್ಠಿಸಿ ಅತಿವೇಗವನ್ನು ನಿಯಂತ್ರಿಸಲಾಗುತ್ತದೆ. ವಿಕ್ರಮ್​ನ ಲ್ಯಾಂಡಿಂಗ್​ ವೇಳೆಯೂ ಹೀಗೆ ಇಸ್ರೋ ಅದರ ವೇಗ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ವಿಕ್ರಮ್​ ಸಂಪರ್ಕ ಕಳೆದುಕೊಂಡಿದ್ದರಿಂದ ಮುಂದಿನ ಹಾದಿಯಲ್ಲಿ ಇಸ್ರೋ ಸಾಗಲು ಸಾಧ್ಯವಾಗಲಿಲ್ಲ.

ಇನ್ನು, ಚಂದ್ರನ ಅಂಗಳವನ್ನು ಮುಟ್ಟುವುದು ಕೂಡ ಅಂದುಕೊಂಡಷ್ಟು ಸುಲಭವಲ್ಲ. ಮಾಹಿತಿ ಪ್ರಕಾರ, ಚಂದ್ರನ ಅಂಗಳದ ಮೇಲೆ ನಾಜೂಕಾಗಿ ಇಳಿಯಲು ಇದುವರೆಗೂ 38 ಪ್ರಯತ್ನಗಳು ನಡೆದಿವೆ. ವಿವಿಧ ದೇಶಗಳು ನಡೆಸಿದ ಈ ಪ್ರಯತ್ನಗಳಲ್ಲಿ ಯಶಸ್ಸು ಸಿಕ್ಕಿರುವುದು 20 ಸಲ ಮಾತ್ರ. ಉಳಿದ 18 ಸಲ ಸಾಫ್ಟ್​ ಲ್ಯಾಂಡಿಂಗ್​ ಸಮಯದಲ್ಲಿಯೇ ವಿಫಲವಾಗಿದೆ.

ಏನೇ ಆಗಲಿ ನಮ್ಮ ದೇಶ ಹೆಮ್ಮೆ ಪಡುವ ಕೆಲಸವನ್ನು ಇಸ್ರೋ ಮಾಡಿದೆ. ಮತ್ತೊಮ್ಮೆ ಯಶಸ್ಸು ಸಿಗುವ ಭರವಸೆ ಕೂಡ ನಮ್ಮ ಜನರಲ್ಲಿದೆ.

ಪ್ರಧಾನಿಯಿಂದ ಸಾಂತ್ವನ

ಇಸ್ರೂ ಸೋಲಿಗೆ ಪ್ರಧಾನಿ ನರೇಂದ್ರಮೋದಿಯವರು ಪ್ರತಿಕ್ರಿಯಿಸಿದ್ದು ನಿಮ್ಮ ಮುಖದಲ್ಲಿನ ದುಃಖವನ್ನು ನಾನು ಓದಬಲ್ಲೆ. ನೀವು ರಾತ್ರಿ ಮಲಗಲಿಲ್ಲ. ಇಂದಿನ ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ, ಹತಾಶರಾಗಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ಇಡೀ ಭಾರತವಿದೆ ಎಂದು ಹೇಳಿ ಇಸ್ರೋ ವಿಜ್ಞಾನಿಗಳ ಕಾರ್ಯಕ್ಷಮತೆಯನ್ನು ಹಾಗೂ ಪರಿಶ್ರಮವನ್ನು ಕೊಂಡಾಡಿದರು,

ಭವಿಷ್ಯದಲ್ಲಿ ಇಸ್ರೋ ಯಶಸ್ಸನ್ನು ಕಾಣಲಿದೆ. ಚಂದ್ರಯಾನ ಪ್ರಯಾಣ ಒಂದು ಸುಂದರ ಕ್ಷಣ. ದೇಶಕ್ಕಾಗಿ ನಿಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಿರಿ. ಸಾಧನೆಯ ಕೊನೆಯ ಕ್ಷಣದಲ್ಲಿ ನಿಮಗೆಲ್ಲ ನೋವಾಗಿದೆ. ಭಾರತಮಾತೆಯ ಸೇವೆಗೆ ಶ್ರಮವಹಿಸಿದ್ದೀರಿ. ನಿಮ್ಮ ಶ್ರಮವನ್ನು ಇಡೀ ದೇಶವೇ ಕೊಂಡಾಡುತ್ತಿದೆ ಎಂದು ಹೇಳಿದರು.

30 ನಿಮಿಷಗಳ ತಮ್ಮ ಭಾಷಣದ ಬಳಿಕ ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳಿಗೆ ಕೈ ಕುಲುಕಿ ಶುಭ ಕೋರಿದರು. ಇಸ್ರೋ ಕಚೇರಿಯಿಂದ ಪ್ರಧಾನಿ ಮೋದಿ ನಿರ್ಗಮನದ ವೇಳೆ ಭಾವುಕರಾದ ಅಧ್ಯಕ್ಷ ಕೆ.ಸಿವನ್ ಅವರನ್ನು ತಬ್ಬಿಕೊಂಡು ಸಂತೈಸಿದರು.
Leave a Reply

Your email address will not be published. Required fields are marked *