ಶಿರಸಿ ಮಾರಿಕಾಂಬ ಶಾಲೆಯನ್ನು ಹಾಡಿ ಹೊಗಳಿದ ಮುಖ್ಯಮಂತ್ರಿ!

725

೧೨ ವರ್ಷಗಳ ಹಿಂದೆ ಸುವರ್ಣ ಕರ್ನಾಟಕ ಸಂಭ್ರಮಾಚರಣೆಯ ದಿನದಂದು ನಾನು ನನ್ನ ಜನರಿಗೆ ನೀಡಿದ ವಚನ, ಬದ್ಧತೆಗಳು ಇನ್ನೂ ನನ್ನ ಮನಪಟಲದಲ್ಲಿ ಹಸಿರಾಗಿವೆ.ನಮ್ಮ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸುಧಾರಣೆ/ನವೀಕರಣ ಕಾರ್ಯಗಳನ್ನು ನಮ್ಮ ಸರ್ಕಾರ ಪ್ರಥಮಾಧ್ಯತೆಯ ಮೇರೆಗೆ ಕೈಗೆತ್ತಿಕೊಂಡಿದೆ.

ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಿ ತಮ್ಮ ಸಾಧನೆಯ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಖ್ಯಾತಿಗೇರಿದ ಅಗಣಿತ ಸಾಧಕರ ಮೇಲ್ಪಂಕ್ತಿಯೇ ನಮ್ಮ ಮುಂದಿದೆ. ಅಂತರರಾಷ್ಟ್ರೀಯ ಖ್ಯಾತಿಯ ಸಂಶೋಧಕ ಭಾರತರತ್ನ ಪ್ರೊ ಸಿ.ಎನ್.ಆರ್.ರಾವ್ ಅವರು ಓದಿದ್ದು, ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿಯೇ ಎನ್ನುವ ಒಂದು ಉದಾಹರಣೆಯೇ ಸಾಕು.

ಶಿರಸಿಯ ಮಾರಿಕಾಂಬಾ ಸರ್ಕಾರಿ ಶಾಲೆ ಸಾಧಿಸಿರುವ ಅತ್ಯುತ್ತಮ ಗುಣಮಟ್ಟದ ದಾಖಲೆ ಸದಾ ನನ್ನನ್ನು ಆವರಿಸಿ, ನಮ್ಮ ಪ್ರತಿಶಾಲೆಯೂ ಈ ಮಟ್ಟಕ್ಕೆ ಏರುವಂತೆ ಪ್ರಯತ್ನಿಸಬಾರದೇಕೆ? ಎನ್ನುವ ಪ್ರಶ್ನೆ ಮೂಡುತ್ತದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯನ್ನು ಹಿಂದಿಕ್ಕಿ ದಾಖಲೆ ಎನಿಸುವಂತೆ ತನ್ನ ವಿದ್ಯಾರ್ಥಿ ಸಂಖ್ಯೆಯನ್ನು ಏರಿಸಿಕೊಂಡಿರುವ ಈ ಶಾಲೆಯ ಪ್ರಗತಿಗೆ ಅಲ್ಲಿನ ಶಿಕ್ಷಕವರ್ಗದ ಕೊಡುಗೆ ಕೂಡ ಪ್ರಮುಖ ಕಾರಣ ಎಂದು ನಾನು ಬಲ್ಲೆ. ಇದೇ ಮಟ್ಟಕ್ಕೆ ನಮ್ಮ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಬರಬೇಕೆನ್ನುವುದು ನನ್ನ ಮಹದಾಸೆ. ಇದಕ್ಕೆ ಬೇಕಾದ ಎಲ್ಲ ನೆರವನ್ನೂ ನೀಡಲು ಸರ್ಕಾರ ಸಿದ್ಧವಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳ ಗುಣಮಟ್ಟ/ಮೂಲಭೂತ ಸೌಲಭ್ಯ ವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿಯನ್ನೂ ಮಾಡಿಕೊಳ್ಳದೆ ಮುಂದುವರೆಯಲು ಸರ್ಕಾರ ಬದ್ಧವಾಗಿದೆ.

ಇಂದಿನಿಂದ ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಒಟ್ಟು ೧೫೩ ವಿಶೇಷ ಚೇತನ ಮಕ್ಕಳ ಶಾಲೆಗಳಲ್ಲಿ ಕಲಿಯುತ್ತಿರುವ ಒಟ್ಟು 10,567 ವಿಶೇಷಚೇತನ ಮಕ್ಕಳಿಗೂ ಬಿಸಿಹಾಲು ವಿತರಿಸುವ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ. ಒಟ್ಟು 58 ಲಕ್ಷ 30 ಸಾವಿರಕ್ಕೂ ಹೆಚ್ಚು ಮಕ್ಕಳು ಬಿಸಿಹಾಲು ವಿತರಿಸುವ ವ್ಯವಸ್ಥೆಯಿಂದ ಲಾಭಪಡೆಯುತ್ತಿದ್ದಾರೆ.

ಶಿಕ್ಷಣ ಇಲಾಖೆಯ ಸಮಗ್ರ ಸುಧಾರಣೆಗಾಗಿ, ಸರ್ಕಾರಿ  ಶಾಲಾ ಕಾಲೇಜುಕಟ್ಟಡಗಳ ನವೀಕರಣ/ನಿರ್ಮಾಣಕ್ಕಾಗಿ ಈಗಾಗಲೇ ನೀಡಿರುವ ೧೨೦೦ ಕೋಟಿ ರೂ.ಗಳ ಅನುದಾನ ನನ್ನ ಮಾತಿಗೆ ಸಾಕ್ಷಿ. ಆದರೆ ನಮ್ಮ ಶಿಕ್ಷಕ ವೃಂದ ಕೂಡ ಈ ದಿಸೆಯಲ್ಲಿ ಇನ್ನಷ್ಟು ಶ್ರಮ ಹಾಕಬೇಕಿದೆ. ನಮ್ಮ ಶಾಲಾ ಕಾಲೇಜುಗಳು ಶಿಕ್ಷಣ ದೇಗುಲಗಳಾದಾಗ ನೋಬೆಲ್ ಸಾಹಿತ್ಯ ಪುರಸ್ಕಾರ ನಮಗೊಲಿವ ದಿನ ದೂರವಿರಲಾರದು.

ಜನತಾದರ್ಶನದಲ್ಲಿ ನಾನು ಕಂಡುಕೊಂಡ ಮತ್ತೊಂದು ಸತ್ಯವೆಂದರೆ, ನಮ್ಮ ಯುವ ಉದ್ಯೋಗಾವಕಾಂಕ್ಷಿಗಳಲ್ಲಿ ಕೌಶಲ್ಯದ ಕೊರತೆ ಮತ್ತು ಸಂವಹನ ಸಮಸ್ಯೆ. ಈ ಯುವಜನರಿಗಾಗಿ ಸರ್ಕಾರ ೫೩ ಕಂಪನಿಗಳ ಸಹಯೋಗದೊಂದಿಗೆ ಉದ್ಯೋಗ ಮೇಳವನ್ನು ನಡೆಸಿತು. ಯುವಜನರ ಪ್ರತಿಭೆಗೆ ಸಾಣೆ ನೀಡಲು ಮೂರು ಕೌಶಲ್ಯಾಧಾರಿತ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೂ ಕ್ರಮ ಕೈಗೊಂಡಿದ್ದೇವೆ.

ಕನ್ನಡವೇ ಪ್ರಾಣಪದಕ ಎಂದು ನಾವು ಭಾವಿಸಿರುವುದು ನಿಜ. ಆದರೆ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯೂ ನಮಗೆ ಮುಖ್ಯ. ನಮ್ಮ ಮಕ್ಕಳು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಕೀಳರಿಮೆಯ ಭಾವದಿಂದ ಹೊರಬಂದು ಎಲ್ಲರಂತೆ ಜೀವನವನ್ನು ಎದುರಿಸಬೇಕು ಎನ್ನುವುದು ನಮ್ಮ ಉದ್ದೇಶ. ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಕಲಿಸುವ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಆಶಯಕ್ಕೆ ಅಲ್ಲಲ್ಲಿ ಅಪಸ್ವರಗಳು ಬರುತ್ತಿರುವುದನ್ನು ಗಮನಿಸಿದ್ದೇನೆ.

ಇಂಗ್ಲಿಷ್ ಕಲಿಕೆ ಕನ್ನಡದ ಸಾರ್ವಭೌಮತ್ವದ ಮೇಲೆ ಸವಾರಿ ಮಾಡಲು ನಾವು ಸರ್ವಥಾ ಅವಕಾಶ ನೀಡುವುದಿಲ್ಲ. ಇಂಗ್ಲಿಷ್ ಕಲಿಸುವ ನಮ್ಮ ಉದ್ದೇಶ ಕೇವಲ ವ್ಯಾವಹಾರಿಕ ದೃಷ್ಟಿಗೆ ಮಾತ್ರ ಸೀಮಿತ.

ಇದರಂತೆಯೇ ಜಾನಪದ ಜಾತ್ರೆಯನ್ನು ಚಿರನೂತನವಾಗಿಸುವ ಕನಸು ಕೂಡ ನನ್ನದು. ಈ ಜನಪದ ಜಾತ್ರೆಗಳು, ನಗರ ಹಾಗೂ ಗ್ರಾಮೀಣ ಜಾನಪದ ಸಂಸ್ಕೃತಿಗಳ ನಡುವೆ ಸ್ನೇಹ ಸೇತುವೆ ಕಟ್ಟಲಿವೆ. ಜೊತೆಯಲ್ಲಿಯೇ ನಮ್ಮ ಜಾನಪದ ಕಲಾವಿದರ ಪ್ರತಿಭೆಯನ್ನು ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಲು ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸಲಿದೆ.

ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಸಮೃದ್ಧವಾದ ಒಂದು ಸುಂದರ ಕರ್ನಾಟಕ ಕಟ್ಟುವುದು ನನ್ನ ಕನಸು. ಈ ಕನಸಿನ ಸಾಕಾರಕ್ಕೆ ದುಡಿಯುವುದು ನನ್ನ ಸಂಕಲ್ಪ.

ಸರ್ವಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ಕರ್ನಾಟಕ ಮುಂದಿನ ದಿನಗಳಲ್ಲಿಯೂ ಎಲ್ಲ ಜಾತಿ, ಧರ್ಮ, ಶ್ರದ್ಧೆಗಳ ಜನರೂ ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿಯೇ ಉಳಿಯಬೇಕು. ಹಿಂದು, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರ ಉದ್ಯಾನವಾದ ಕರ್ನಾಟಕದ ಹಿರಿಮೆಗೆ ಎಂದಿಗೂ ಕುಂದು ಬರಬಾರದು. ಇದು ನಮ್ಮ ಕರ್ತವ್ಯ ಮತ್ತು ಈ ಸಂದರ್ಭದಲ್ಲಿ ನಾವು ಕೈಗೊಳ್ಳಬೇಕಾದ ಪ್ರಮಾಣ ಕೂಡ.  ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಸಿರಿಗನ್ನಡಂ ಗೆಲ್ಗೆ  ಎಂದು ಮಾತುಗಳನ್ನು ಮುಗಿಸಿದರು.
Leave a Reply

Your email address will not be published. Required fields are marked *

error: Content is protected !!