ಸಿಗಂದೂರೇಶ್ವರಿ ಸರ್ಕಾರದ ಪಾಲು?ಮೇಲ್ವಿಚಾರಣೆ ಹಾಗೂ ಸಲಹಾ ಸಮಿತಿ ರಚಿಸಿ ಆದೇಶ.

1585

ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಹಾಗೂ ಧರ್ಮದರ್ಶಿ ಗುದ್ದಾಟ ದಿಂದ ಬೀದಿಗೆ ಬಂದ ಹುಂಡಿ ಲಾಭದ ಗಲಾಟೆ ಈಗ ಸರ್ಕಾರದ ನಿರ್ದಾರದ ಮೇಲೆ ನಿಂತಿದೆ. ದಿನಾಂಕ-23/10/2020 ರ ಜಿಲ್ಲಾಧಿಕಾರಿ ಆದೇಶ ಸಂಖ್ಯೆ ನಂ.ಡಿವಿಎಸ್.(3)ಸಿ.ಆರ್.205/2015-16 ಯಲ್ಲಿ ಉಲ್ಲೇಕಿಸಿರುವಂತೆ ಈ ವರದಿಯನ್ನು ನಿಮ್ಮ ಕನ್ನಡವಾಣಿ ಪತ್ರಿಕೆ ನೀಡುತ್ತಿದೆ.
ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆಯುವ ಪ್ರಸ್ತಾಪ ಕುರಿತಂತೆ ಧಾರ್ಮಿಕ ದತ್ತಿ ಆಯುಕ್ತರು,ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿಗಳ ಇಲಾಖೆ ಬೆಂಗಳೂರು ಇವರ ಪತ್ರ ಸಂಖ್ಯೆ ಎ.ಡಿ.ಎಂ.ಸಿ.ಆರ್.12/15-16(ದಿ.27-4-2015),ದಲಿತ ಸಂಘರ್ಷ ಸಮಿತಿ ಸಾಗರ ಮನವಿ ಪತ್ರ,ವೆಂಕಟೇಶ್ ಕೋಣನಕಟ್ಟೆ,ಪತ್ರಕರ್ತರು,ಸಾಗರ.ಇವರ ಮನವಿ,ಸಾಗರ ತಾಲೂಕಿನ ಸುತ್ತಮುತ್ತಲ ಗ್ರಾಮಸ್ಥರ ಮನವಿ,ಗ್ರಾಮಸ್ಥರು ಮತ್ತು ಭಕ್ತರು,ಹೊಸಳ್ಳಿ,ಕಳಸವಳ್ಳಿ ಕರೂರು ಹೋಬಳಿ ಇವರ ಮನವಿ,ನಾಗರೀಕ ವೇದಿಕೆ ಎಸ್.ಎನ್ ನಗರ ಸಾಗರ ಇವರ ಮನವಿ,ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನ(19/10/2020),ಡಬ್ಲು.ನಂ-10548/2020 ಆದೇಶ(30/09/2020) ಒಟ್ಟು 11 ಅಂಶಗಳನ್ನು ಉಲ್ಲೇಖಿಸಿ ಸರ್ಕಾರದ ವಶಕ್ಕೆ ಪ್ರಸ್ತಾಪ ಸಲ್ಲಿಸಲಾಗಿದ್ದು ಸದ್ಯ ಜಿಲ್ಲಾಧಿಕಾರಿಗಳು ಸರ್ಕಾರದ ಮುಂದಿನ ಆದೇಶದ ವರೆಗೆ ಮೇಲ್ವಿಚಾರಣೆ ಹಾಗೂ ಸಲಹಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.

ದೇವಾಲಯದ ವಾಸ್ತವಾಂಶ(ಪತ್ರದಲ್ಲಿ ಉಲ್ಲೇಖಿಸಿರುವಂತೆ)

ಆದೇಶ ಪ್ರತಿ.

ಸಾಗರ ತಾಲೂಕಿನ ಕರೂರು ಹೋಬಳಿಗ್ರಾಮದ ಸೀಗೆಕಣಿವೆ ಮಜರೆ ಗ್ರಾಮದ ಗುಂಡಪ್ಪ ಬಿನ್ ಬೀರಾನಾಯ್ಕ ರವರ ಖುಷ್ಕಿ ಜಮೀನಿನ ಮೇಲ್ಭಾಗದ ಸರ್ಕಾರಿ ಜಮೀನಿನಲ್ಲಿ ಮೂಲ ಚೌಡೇಶ್ವರಿ ದೇವಿಯ ವಿಗ್ರಹ ಇತ್ತು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.ಕ್ಷೇತ್ರದ ದೇವಸ್ಥಾನವು 1945 ರಲ್ಲಿ ಹೀರೆಭಾಸ್ಕರ ಡ್ಯಾಂ ನಿಂದ ಕಳಸವಳ್ಳಿ ಗ್ರಾಮದ ಮಜರೆ ಸೀಗೆಕಣಿವೆ ಗ್ರಾಮ ಮುಳುಗಡೆಯಾಗಿದ್ದು ಸಿಗಂದೂರು ಚೌಡಮ್ಮ ದೇವರನ್ನು ಕಳಸವಳ್ಳಿ ಗ್ರಾಮದ ದೇವರನ್ನು ಗ್ರಾಮಸ್ಥರೆಲ್ಲರೂ ಸೇರಿ ಸೀಗೆಕಣಿವೆಯಲ್ಲಿದ್ದ ಚೌಡೇಶ್ವರಿ ಮುಖವಾಡವನ್ನು ಸಿಗಂದೂರಿನಲ್ಲಿ ಪುನರ್ ಸ್ಥಾಪಿಸಿರುತ್ತಾರೆ.ಕಳಸವಳ್ಳಿ ಗ್ರಾಮದ ಸರ್ವೆ ನಂ 65ರಲ್ಲಿ ಸಣ್ಣ ಹಂಚಿನಮನೆಯ ಗುಡಿಯನ್ನು ಕಟ್ಟಿಕೊಂಡು ದುಗ್ಗಯ್ಯ ನಂತರ ಅವರ ಮಗ ಪರಮೇಶ್ವರಯ್ಯ ಪೂಜೆ ಮಾಡಿಕೊಂಡಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.

1990 ರಲ್ಲಿ ಕಳಸವಳ್ಳಿಯ ಸುತ್ತಮುತ್ತಲ ಗ್ರಾಮಸ್ಥರು ಸೇರಿಕೊಂಡು ಸ್ಥಾನೀಯ ವ್ಯವಸ್ಥಾಪನಾ ಸಮಿತಿ ರಚಿಸಿಕೊಂಡು ದೇವಸ್ಥಾನದ ಪೂಜಾದಿ ಕಾರ್ಯ ವ್ಯವಸ್ಥೆ ಮತ್ತು ಮುಖವಾಡ ಪೂಜೆ ಜೊತೆಗೆ ಸೀಗೆಕಣಿವೆಯಲ್ಲಿದ್ದ ಮೂಲ ವಿಗ್ರಹವನ್ನು ಸಿಗಂದೂರಿಗೆ ತಂದು ಪ್ರತಿಷ್ಟಾಪನೆ ಮಾಡಿ ಅಷ್ಟಬಂಧ ಉತ್ಸವ ಮಾಡಿರುತ್ತಾರೆ. ಸ್ಥಳೀಯರೇ ಮಾಡಿಕೊಂಡ ರಿಜಿಸ್ಟರ್ ಆಗದ ಕಮಿಟಿಯಲ್ಲಿ ಅಧ್ಯಕ್ಷರಾಗಿ ಪ್ರಭಾಕರ್ ರಾವ್,ಪ್ರಧಾನ ಕಾರ್ಯದರ್ಶಿಯಾಗಿ ಶೇಷನಾಯ್ಕ ಹೊಳೆಕೊಪ್ಪರವರು ಕರ್ತವ್ಯ ನಿರ್ವಹಿಸಿರುತ್ತಾರೆ.ಶ್ರೀ ಚಾಮುಂಡೇಶ್ವರಿ ದೇವಿ ಜೀರ್ಣೋದ್ಧಾರ ಸಮಿತಿಯ ವತಿಯಿಂದ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ನಡೆಸುವ ಉದ್ದೇಶದಿಂದ ಸಿಗಂದೂರು ಚೌಡೇಶ್ವರಿ ವಿಶ್ವಸ್ಥ ಸಮಿತಿ 1994 ನೇ ಸಾಲಿನಲ್ಲಿ ನೊಂದಾಯಿಸಲ್ಪಟ್ಟಿರುತ್ತದೆ.ಸದರಿ ಟ್ರಸ್ಟ್ ನಲ್ಲಿ ಶೇಷಾನಾಯ್ಕ ರವರು ಒಬ್ಬ ಟ್ರಸ್ಟಿಯಾಗಿರುತ್ತಾರೆ.ಲಿಂಗನಮಕ್ಕಿ ಜಲಾಶಯದಲ್ಲಿ ದೇವರ ಮೂಲ ಸ್ಥಾನ ಮುಳಗಡೆಯಾಗಿದ್ದರಿಂದ ಸುಮಾರು 30 ವರ್ಷಗಳ ಹಿಂದೆ ದೇವಿಯ ಮೂಲ ಮೂರ್ತಿಯನ್ನು ಈಗಿರುವ ಕಳಸವಳ್ಳಿ ಗ್ರಾಮದ ಸ.ನಂ.65 ಸೊಪ್ಪಿನ ಬೆಟ್ಟದಲ್ಲಿ ಸ್ಥಾಪಿಸಿ ಪೂಜೆ ನಡೆಸಿರುವ ಬಗ್ಗೆ ಗ್ರಾಮದ ಹಿರಿಯರು ಅಭಿಪ್ರಾಯ ದಾಖಲಿಸಿದ್ದಾರೆ.

ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದ ವಿವರ
ಕಳಸವಳ್ಳಿ ಗ್ರಾಮದ ಸ.ನಂ,65 ರ ಒಟ್ಟು ವಿಸ್ತೀರ್ಣ 112-07 ಎಕರೆ ಜಮೀನು ಮೂಲತಹ ಸೊಪ್ಪಿನಬೆಟ್ಟ(ಸೊಪ್ಪಿನಕಟ್ಟೆ) ಎಂಬುದಾಗಿ ಕಂದಾಯ ದಾಖಲೆಯಲ್ಲಿ ವರ್ಗೀಕೃತವಾಗಿರುತ್ತದೆ. ಒಟ್ಟು 112-07 ಎಕರೆ ಪ್ರದೇಶವಿದ್ದು ಆಕಾರಬಂದ್ ವಿಸ್ತೀರ್ಣಕ್ಕೆ ತಾಳೆಯಿರುತ್ತದೆ.112-07 ಜಮೀಮಿನ ಪೈಕಿ ಕೆ.ಪಿ.ಸಿ ಲಿಮಿಟೆಡ್ ಇವರಿಗೆ 7-00 ಎಕರೆ ಮಂಜೂರಾಗಿರುತ್ತದೆ. ಉಳಿದಂತೆ ಸದರಿ ಸರ್ವೆ ನಂಬರ್ ನಲ್ಲಿ ಸೊಪ್ಪಿನ ಬೆಟ್ಟ 105-07 ಎಕರೆಇರುತ್ತದೆ. ಉಪ ಅರಣ್ಯ ಸಂಪರಕ್ಷಣಾಧಿಕಾರಿಗಳು ಸಾಗರ ವಿಭಾಗ ಇವರಿಂದ ಅರಣ್ಯ ಇಲಾಖೆಯ ಅಭಿಪ್ರಾಯ ವನ್ನು ಸರ್ಕಾರ ಪಡೆದಿದ್ದು ಪ್ರಸ್ತಾಪಿತ ಪ್ರದೇಶವು ಸೊಪ್ಪಿನ ಬೆಟ್ಟ ಪ್ರದೇಶವಾಗಿದ್ದು ಸರ್ಕಾರಿ ಆದೇಶ ಸಂಖ್ಯೆ ಎಫ್.ಇ.ಇ/185/ಎಫ್ ಎಪಿ/2011 ದಿನಾಂಕ-15-05-2015 ರಂತೆ ಶಾಸನಬದ್ದ ಅರಣ್ಯ ಪ್ರದೇಶವಾಗಿರುತ್ತದೆ.ಪ್ರಸ್ತಾಪಿತ ಸಿಗಂದೂರು ಚೌಡೇಶ್ವರಿ ದೇವಸ್ಥಾನವಿರುವ ಜಮೀನು ವನ್ಯಜೀವಿ ಅರಣ್ಯ ವಲಯ ಕಾರ್ಗಲ್ ವ್ಯಾಪ್ತಿಗೆ ವಳಪಟ್ಟಿರುತ್ತದೆ.ಕರ್ನಾಟಕ ಸರ್ಕಾರ ಅಧಿಸೂಚನೆ ಸಂಖ್ಯೆ ನಂ.ಎಎಫ್ಸಿ.70.ಎಫ್ಡಬ್ಲುಎಲ್ 71 ದಿನಾಂಕ20-04-1972 ರ ಅನ್ವಯ ವನ್ಯಜೀವಿ ವಲಯದವರು ಗುರುತಿಸಿರುವ ಬೌಂಡರಿ ಒಳಗೆ ಪ್ರಸ್ತಾಪಿತ ಜಮೀನು ಬರುತ್ತದೆ.

ದೇವಸ್ಥಾನ ಇರುವ ಸ್ಥಳ.


ಸಿಗಂದೂರು ಚೌಡೇಶ್ವರಿ(ರಿ)ಟ್ರಸ್ಟ್ ಕಳಸವಳ್ಳಿ( ಈಗಿನ ಧರ್ಮದರ್ಶಿ ರಾಮಪ್ಪನವರ ಕುಟುಂಬದ ಟ್ರಸ್ಟ್) ಇವರು ನಿಯಮಬಾಹಿರವಾಗಿ ಆಕ್ರಮವಾಗಿ ದೇವಸ್ಥಾನ ಹಾಗೂ ವಸತಿಗೃಹ,ಊಟದ ಛತ್ರ,ಶೌಚಾಲಯ,ಕಲ್ಯಾಣಮಂಟಪ,ಹೋಟೆಲ್,ಪಾರ್ಕಿಂಗ್ ಜಾಗ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಅಂಗಡಿ ಮುಂಗಟ್ಟುಗಳನ್ನು ಮಾಡಲಾಗಿದ್ದು ಅಂದಾಜು 20 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದಾರೆ.ಸಿಗಂದೂರು ದೇವಿಯ ದೇವಸ್ಥಾನವಿರು ಜಾಗ ಸರ್ಕಾರಿ ಜಮೀನಾಗಿದ್ದು ಈಗ ಕಾರ್ಗಲ್ ಅರಣ್ಯ ವಿಭಾಗಕ್ಕೆ ಸೇರುತ್ತದೆ.ಈ ಪ್ರದೇಶದಲ್ಲಿ ಹಾಲಿ ಧರ್ಮದರ್ಶಿ ರಾಮಪ್ಪನವರು 100 ಕೊಠಡಿಗಳಿರುವ ಲಾಡ್ಜಿಂಗ್ ಕಟ್ಟಡ,ವಾಣಿಜ್ಯ ಮಳಿಗೆಗಳು,ಹೋಟಲ್ ಕಟ್ಟಡ,ಊಟದಹಾಲ್‍ಗಳನ್ನು ಅಕ್ರಮವಾಗಿ ಕಟ್ಟಿರುವ ಕುರಿತು ಸಾರ್ವಜನಿಕರ ದೂರಿನ ಆಧಾರದ ಮೇಲೆ ಸಾಗರ ಉಪವಿಭಾಗಾದಿಕಾರಿ ಆದೇಶ ಸಂಖ್ಯೆ ಭೂಮಿ(1)ವಿವ:78/2015-16 ದಿನಾಂಕ 16/10/2015 ರ ಪ್ರಕಾರ ಸಾಗರ ತಾಹಶಿಲ್ದಾರ್ ರವರಿಗೆ ನಿರ್ದೇಶನ ನೀಡಿದ್ದು ಸಾಗರ ತಾಹಶಿಲ್ದಾರ್ ರವರು ಆದೇಶ ಸಂಖ್ಯೆ-ನಂ.ಎನ್.ಸಿ.ಆರ್.133/2014-15 ದಿನಾಂಕ 30-10-2015ರ ಪ್ರಕಾರ ಕಳಸವಳ್ಳಿ ಗ್ರಾಮದ ಸರ್ವೆ ನಂ.65ರ ಸರ್ಕಾರಿ ಸೊಪ್ಪಿನಬೆಟ್ಟದಲ್ಲಿ ಇರುವ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಹಾಗೂ ಪ್ರಧಾನ ಅರ್ಚಕರು ಕಟ್ಟಿರುವ ಎಲ್ಲಾ ಕಟ್ಟಡವನ್ನು ಭೂ ಕಂದಾಯ ಕಾಯ್ದೆ 1964 ಕಲಂ 192(ಎ)ಕಟ್ಟಡವನ್ನು ತೆರವುಗೊಳಿಸಲು ಸೂಚಿಸಿರುತ್ತಾರೆ.ಈ ಸಂಬಂದ ಕೋರ್ಟ ನಲ್ಲಿ ದಾವೆ ಮುಂದುವರೆದಿದೆ.

ಸಿಗಂದೂರು ಚೌಡೇಶ್ವರಿ ಸಾರ್ವಜನಿಕ ದೇವತೆ
ಸಿಗಂದೂರು ದೇವಸ್ಥಾನವು ಸಾರ್ವಜನಿಕ ದೇವಸ್ಥಾನ ಎಂದು ಸಾಗರ ಸಿವಿಲ್ ನ್ಯಾಯಾಲಯ ಆದೇಶ ನೀಡಿದ್ದು ಇದು ಯಾವುದೇ ಕುಟುಂಬದ ಆಸ್ತಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ರಾಮಪ್ಪನವರು ಹಾಲಿ ಸೊರಬ ತಾಲೂಕಿನ ಹೊಳೆಕೊಪ್ಪ ವಾಸಿಯಾಗಿದ್ದು 1993ರ ನಂತರ ಕಳಸವಳ್ಳಿಗೆ ಬಂದು ದೇವಸ್ಥಾನದ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸಿರುತ್ತಿರು ಬಗ್ಗೆ ಗ್ರಾಮಸ್ಥರು ಹೇಳಿಕೆ ದಾಖಲಿಸಿದ್ದಾರೆ.


1994ರ ವರೆಗೆ ಇದ್ದ ನೊಂದಾಯಿತವಲ್ಲದ ವಿಶ್ವಸ್ಥ/ವ್ಯವಸ್ಥಾಪನಾ ಸಮಿತಿಯನ್ನು ಕೈಬಿಟ್ಟು ರಾಮಪ್ಪ ಮತ್ತು ಅವರ ಕುಟುಂಬದ ಇತರ ಆರುಜನ ಒಳಗೊಂಡು ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ಹೆಸರಿನ ಟ್ರಸ್ಟ್ ಅನ್ನು ದಿನಾಂಕ-20-04-1994ರಲ್ಲಿ ರಚಿಸಿರುವುದು ಕಂಡುಬಂದಿದೆ.ನಂತರ ದೇವಾಲಯದ ಈ ವಿವಾದ ಸಾಗರದ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರು ಸಂದರ್ಭದಲ್ಲಿ ರಾಮಪ್ಪ ಬಿನ್ ಶೇಷಾನಾಯ್ಕ ರವರು ಏಕವ್ಯಕ್ತಿ ಹೆಸರಿನ ಶ್ರೀ ಸಿಗಂದೂರು ಚೌಡಮ್ಮ ದೇವಸ್ಥಾನ ಟ್ರಸ್ಟ್ ಹೆಸರಿನ ಟ್ರಸ್ಟ್ ರಚಿನೆಮಾಡಿಕೊಂಡು 29-10-1999ರಲ್ಲಿ ನೊಂದಾಯಿತವಾಗಿರುತ್ತದೆ.

ಪುನಹಾ ಸಿಗಂದೂರು ಚಾಮುಂಡೇಶ್ವರಿ ದೇವಿ ಟ್ರಸ್ಟ್ ಎಂಬ ಟ್ರಸ್ಟ್ ಅನ್ನು 2012ರಲ್ಲಿ ರಚಿಸಿಕೊಂಡಿದ್ದು ಅದರಲ್ಲಿ ರಾಮಪ್ಪನವರು ತಮ್ಮ ಕುಟುಂಬ ಸದಸ್ಯರನ್ನು ಮಾತ್ರ ಸದಸ್ಯರನ್ನಾಗಿ ಮಾಡಿಕೊಂಡು ಹೊಸ ಟ್ರಸ್ಟ್ ರಚನೆ ಮಾಡಿದ್ದಾರೆ.ನಂತರ 25-04-2014 ರಲ್ಲಿ ಶ್ರೀ ಸಿಗಂದೂರು ಚೌಡೇಶ್ವರಿ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಎಂದು ನೊಂದಾಯಿಸಿಕೊಂಡಿದ್ದಾರೆ.ಸಿಗಂದೂರು ಮಂಜಪ್ಪ ಬಿನ್ ಚೌಡಾನಾಯ್ಕ ವಾರಸುದಾರರು ಸಿಗಂದೂರು ಸಿಗಂದೂರು ಚೌಡೇಶ್ವರಿ ದೇವಸ್ಥಾನ ಸಿಗಮದೂರು,ಕಳಸವಳ್ಳಿ ಹಾಲಿ ಹೊಳೆಕೊಪ್ಪ ಸೊರಬಾ ಇವರು 31-05-2015 ರಂದು ತಕರಾರು ಅರ್ಜಿ ಸಲ್ಲಿಸಿದ್ದು ದೇವಸ್ಥಾನದ ವಾರಸುದಾರರಿಗೆ ಸಂಬಂಧಿಸಿದಂತೆ ಶಿವಮೊಗ್ಗ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು ಪ್ರಕರಣವು 11-04-2015ರಲ್ಲಿ ಇತ್ಯರ್ಥ ಗೊಂಡಿದ್ದು ಈ ಆದೇಶವನ್ನು ಪ್ರಶ್ನಿಸಿ ಸಿ.ಮಂಜಪ್ಪನವರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಪ್ರಕರಣ ಇತ್ಯರ್ಥ ಬಾಕಿ ಇದೆ.ಅಲ್ಲದೇ ಏಕವ್ಯಕ್ತಿ ಟ್ರಸ್ಟ್ ಗೆ ಜಾಮೀನು ಮಂಜೂರು ಮಾಡಿಸಿಕೊಳ್ಳಲು ನ್ಯಾಯಾಲಯದ ತೀರ್ಪಿನ ಪ್ರಕಾರ ಸಾಧ್ಯವಿಲ್ಲ ಎಂದು ಅರಿತ ರಾಮಪ್ಪನವರು 22-08-2012 ರಲ್ಲಿ ಪುನಹಾ ಚೌಡಮ್ಮ ದೇವಿ ಟ್ರಸ್ಟ್(ರಿ)ಕಳಸವಳ್ಳಿ ಎಂಬ ಹೆಸರಿನ ನೊಂದಣಿ ಮಾಡಿಸಿದ್ದು ಇದು ಖಾಸಗಿ ಕುಟುಂಬದ ಟ್ರಸ್ಟ್ ಆಗಿರುತ್ತದೆ.ಈ ಎಲ್ಲಾ ನಾಲಕ್ಕು ಟ್ರಸ್ಟ್ ನಲ್ಲಿ ರಾಮಪ್ಪನವರೇ ಮ್ಯಾನೇಜಿಂಗ್ ಟ್ರಸ್ಟಿಗಳಾಗಿರುತ್ತಾರೆ.ಈ ರೀತಿ ತಮ್ಮ ಅನುಕೂಲಕ್ಕೆ ತಕ್ಕಂತೆ 1994 ರಿಂದ 2016ರ ವರೆಗೆ ನಾಲ್ಕು ಟ್ರಸ್ಟ್ ರಿಜಿಸ್ಟರ್ ಮಾಡಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

ಸಾರ್ವಜನಿಕರು ನೀಡಿದ ದೂರಿನ ಆಧಾರದಲ್ಲಿ ಸಿಗಮದೂರು ಚೌಡಮ್ಮ ದೇವಿ ಟ್ರಸ್ಟ್(ರಿ)2012 ಎಂಬ ಹೆಸರಿನಲ್ಲಿ ಈಗ ವಹಿವಾಟು ನಡೆಸಲಾಗುತ್ತಿದೆ.ಇನ್ನು ಇತ್ತೀಚೆಗೆ ದೇವಸ್ಥಾನಕ್ಕೆ ಭಕ್ತರು ನೀಡಿದ ಹಣ,ಆಭರಣ,ವಸ್ತುಗಳು ಸೇರಿದಂತೆ ಸಮರ್ಪಕ ಲೆಕ್ಕಪತ್ರ ಸಹ ಟ್ರಸ್ಟ್ ಅಧ್ಯಕ್ಷ ರಾಮಪ್ಪನವರು ನೀಡಿಲ್ಲ.ಹಾಗೂ ದೇವಸ್ಥಾನಕ್ಕೆ ಬಂದ ಹಣ,ವಸ್ತುಗಳು,ಆದಾಯವನ್ನು ಧರ್ಮದರ್ಶಿ ರಾಮಪ್ಪ ಹಾಗೂ ಪ್ರಧಾನ ಅರ್ಚಕರು ತಮ್ಮ ವಯುಕ್ತಿಕ ಹಿತಾಸಕ್ತಿಗೆ ಬಳಸಿರುವುದು ಕೆಲವು ದಾಖಲೆಗಳಿಂದ ದೃಡಪಡುತ್ತವೆ.ಟ್ರಸ್ಟ್ ನ ನಿಯಮದಂತೆ ಸಾರ್ವಜನಿಕ ಉದ್ದೇಶಕ್ಕೆ ಹಾಗೂ ಗ್ರಾಮದ ಅಭಿವೃದ್ಧಿಗೆ ಬಳಕೆಯಾಗದಿರುವುದು ಕಂಡುಬಂದಿದೆ.
ಇನ್ನು ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ದಿನಾಂಕ 23-10-2020ರಂದು ಜಿಲ್ಲಾಧಿಕಾರಿಗಳು ಸರ್ಕಾರದ ಮುಂದಿನ ಆದೇಶದ ವರೆಗೆ ಮೇಲ್ವಿಚಾರಣೆ ಹಾಗೂ ಸಲಹಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.

ಮುಜರಾಯಿಗೆ ಹೋಗಲಿದೆ ಸಿಗಂದೂರು ದೇವಸ್ಥಾನ!
ಸದ್ಯದ ವಿದ್ಯಮಾನ ಹಾಗೂ ಸರ್ಕಾರದ ಉನ್ನತ ಮೂಲಗಳ ಮಾಹಿತಿ ಪ್ರಕಾರ ಶೀಘ್ರದಲ್ಲಿ ದೇವಸ್ಥಾನವನ್ನು ಮುಜರಾಯಿಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ.ಈ ಬಗ್ಗೆ ಸಾಗರದ ಹಾಲಿ ಶಾಸಕ ಹರತಾಳು ಹಾಲಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಆಂತರಿಕ ಬೆಂಬಲವು ಸಹ ಇದೆ ಎನ್ನಲಾಗಿದ್ದು ಇದರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಈ ಬಗ್ಗೆ ಹೆಚ್ಚಿನ ವಲವು ತೋರ್ಪಡಿಸಿದ್ದಾರೆ ಎನ್ನಲಾಗಿದೆ.ಸದ್ಯ ಮುಜರಾಯಿ ಇಲಾಖೆಯ ಮುಖ್ಯ ಕಾರ್ಯದರ್ಶಿಬಳಿ ದೇವಸ್ಥಾನವನ್ನು ಮುಜರಾಯಿಗೆ ಒಪ್ಪಿಸುವ ಪ್ರಸ್ತಾಪದ ಕಡತವಿದ್ದು ಕೆಲವೇ ತಿಂಗಳಲ್ಲಿ ಮುಜರಾಯಿಗೆ ಒಪ್ಪಿಸಬೇಕಾ ಅಥವಾ ಈಗಿರುವ ಸ್ಥಿತಿಯನ್ನು ಮುಂದುವರೆಸಬೇಕಾ ಎಂಬ ನಿರ್ದಾರ ಕೈಗೊಳ್ಳಲಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ