ಉತ್ತರ ಕನ್ನಡ ಜಿಲ್ಲೆಯ ವಿಶಿಷ್ಟ ಸಂಪ್ರದಾಯದ ಚಕ್ಕುಲಿ ಕಂಬಳ ಹೇಗಿರುತ್ತೆ ಗೊತ್ತಾ?

691

ಕಾರವಾರ :- ಗಣೇಶ ಚತುರ್ಥಿ ಎಂದರೆ ಗಣಪನಿಗೆ ನೇವೇದ್ಯಕ್ಕೆ ಚಕ್ಕುಲಿ ಇರಲೇ ಬೇಕು.ಚಕ್ಕುಲಿ ಇಲ್ಲದೇ ಹಬ್ಬ ಅಪೂರ್ಣ.ಹೌದು ಗಣೇಶ ಚತುರ್ಥಿಗಾಗಿ ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಶಿರಸಿಯಲ್ಲಿ ವಿಶೇಷವಾಗಿ ಚಕ್ಕುಲಿ ಕಂಬಳ ನಡೆಸಲಾಗುತ್ತೆ. ಅಷ್ಟಕ್ಕೂ ಈ ಚಕ್ಕುಲಿ ಕಂಬಳ ಎಂದರೇನು ಅಂತೀರಾ ಹಾಗಿದ್ರೆ ಈ ಸ್ಟೋರಿ ಓದಿ.

ಒಂದೆಡೆ ಮನೆ ಮಂದಿ ಜೊತೆ ಊರಿನ ಹಿರಿಯರೆಲ್ಲಾ ಒಟ್ಟಾಗಿ ಸೇರಿ ಅಕ್ಕಿ ಹಿಟ್ಟನ್ನು ರುಬ್ಬಿ ಚಕ್ಕಲಿಗೆ ಹದ ಮಾಡುತ್ತಾ .ಮತ್ತೊಂದೆಡೆ ಮಣೆಯ ಮೇಲೆ ಕೈಯಿಂದ ಹೊಸೆದು ಚಕ್ಕುಲಿಯನ್ನು ಮಾಡುತ್ತಾ ಬಾಯಲ್ಲಿ ವೀಳ್ಯ ಎಲೆ ಜಗಿಯುತ್ತಾ ನೆಂಟರಿಷ್ಟರ ಖುಷಲೋಪರಿ ವಿಚಾರಿಸಿಕೊಳ್ಳುತ್ತಾ ಮಾತಿನ ಮಧ್ಯೆ ಹಾಸ್ಯ ಮಾತುಗಳು ತೂರಿ ಜಗಲಿ ಬಳಿಯ ಮೂಲೆಯಲ್ಲಿ ಎಲೆ ಅಡಿಕೆ ಉಗಿದು ಒಂದಿಷ್ಟು ಯಕ್ಷಗಾನದ ಪದಗಳ ವರಸೆ,ಮನೆಯ ಒಲೆಯಲ್ಲಿ ಚಿರ್ ..ಚಿರ್ ಎನ್ನುವ ಬಾಣಲೆಯಲ್ಲಿ ಕರಿದ ಚಕ್ಕುಲಿಯ ಗಮಗಮ. ಹೌದು ಈ ದೃಶ್ಯ ಮತ್ತೆಲ್ಲೂ ಕಂಡುಬರುವುದಿಲ್ಲ‌, ನಮ್ಮ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬಹುತೇಕ ಹಳ್ಳಿಗಳದ್ದು.

ಈ ಬಾರಿ ನಾವು ಹೇಳಹೊರಡಿರುವುದು ಇಂತಹ ಹಳ್ಳಿಗಳಲ್ಲೇ ಒಂದಾದ ಶಿರಸಿಯ ಹೆಗಡೆಕಟ್ಟ ಸಮೀಪದ ಕಲ್ಮನೆ ಊರಿನದ್ದು.

ಪ್ರತಿ ವರ್ಷ ಈ ಊರಿನಲ್ಲಿ ಗಣೇಶ ಚತುರ್ಥಿಯಂದು ವಿಶೇಷವಾಗಿ ಕೈಯಿಂದ ಹಣೆದ ಚಕ್ಕುಲಿ ತಯಾರಿಸುತ್ತಾರೆ. ಇದಕ್ಕಾಗಿ ಮನೆಯಲ್ಲೇ ಬೆಳೆದ ಭತ್ತವನ್ನು ಹುರಿದು ಅಕ್ಕಿ ಹಿಟ್ಟನ್ನು ತಯಾರಿಸುತ್ತಾರೆ.ನಂತರ ಇದನ್ನು ಹದ ಮಾಡಿ ಚಕ್ಕುಲಿ ಹಿಟ್ಟು ತಯಾರಿಸಿ ಕೈಯಲ್ಲಿಯೇ ಬತ್ತಿ ಹೊಸೆದಂತೆ ಹೊಸೆದು ತೆಯಾರಿಸುವ ವಿಶೇಷ ಚಕ್ಕುಲಿ.ಈ ರೀತಿ ಚಕ್ಕುಲಿ ತಯಾರಿಸಲು ಊರಿನವರೆಲ್ಲಾ ಒಂದಾಗಿ ಒಟ್ಟುಸೇರಿ ಒಂದು ಮನೆಯಲ್ಲಿ ಗುಂಪು ಸೇರುತ್ತಾರೆ.ಹೊಸೆದ ಚಕ್ಕುಲಿ ತಯಾರಿಸಿ ಊರಿನವರೆಲ್ಲಾ ಒಟ್ಟಾಗಿ ಒಂದೇ ಮನೆಯಲ್ಲಿ ಊಟದ ಜೊತೆ ಚಕ್ಕುಲಿ ಸವಿಯುತ್ತಾರೆ. ಹೀಗೆ ಪ್ರತಿ ಮನೆಯಲ್ಲೂ ಒಂದೊಂದು ದಿನದಂತೆ ಗಣೇಶ ಚತುರ್ಥಿಯ ದಿನದಿಂದ ಎಂಟು ದಿನಗಳ ಕಾಲ ಈ ಚಕ್ಕುಲಿ ಕಂಬಳ ನಡೆಯುತ್ತದೆ.ಈ ಮೂಲಕ ತಾವೆಲ್ಲಾ ಒಂದು ಎನ್ನುವ ಭಾವನೆ ಮೂಡಿಸುವ ವಿಶೇಷ ಆಚರಣೆ ಈ ಊರಿನವರದ್ದಾಗಿದ್ದು ಕಳೆದ 50 ವರ್ಷಗಳಿಂದ ಈ ಭಾಗದಲ್ಲಿ ಆಚರಣೆಯಲ್ಲಿದೆ ಎನ್ನುತ್ತಾರೆ ಇದೇ ಗ್ರಾಮದ ವಿಘ್ನೇಶ್ವರ ಹೆಗಡೆ.

ಕೈಯಲ್ಲಿ ಚಕ್ಕುಲಿ ಹೊಸೆಯುತ್ತಿರುವುದು.

ಕಾಲ ಬದಲಾದಂತೆ ಮನುಷ್ಯನು ವೈಜ್ಞಾನಿಕ ಉಪಕರಣಗಳಿಗೆ ಅಂಟಿಕೊಂಡಿದ್ದರು ಈ ಊರಲ್ಲಿ ಮಾತ್ರ ಎಲ್ಲರೂ ಪ್ರತಿವರ್ಷ ಕೈ ಕಂಬಳನ್ನೇ ಮಾಡುತ್ತಾರೆ. ಹಿಂದಿನಿಂದ ಬಂದ ಸಂಪ್ರದಾಯ ಒಂದುಕಡೆ ಆಗಿದ್ರೆ ಇಂತಹ ವಿಶೇಷ ಕಲೆ ಎಲ್ಲರಿಗೂ ಬರೋಲ್ಲ. ಅದರಲ್ಲೂ ಈ ಚಕ್ಕುಲಿ ರುಚಿ ಹಾಗೂ ಬಾಳಿಕೆ ಜಾಸ್ತಿ. ಉಪಕರಣಗಳಿಂದ ಮಾಡಿದ ಚಕ್ಕುಲಿ ಕೆಲವೇ ದಿನ ಉಳಿದರೆ ಇದನ್ನು ನಾಲ್ಕಾರು ತಿಂಗಳುಗಳ ಕಾಲ ಇಡಬಹುದು. ಹಬ್ಬದಲ್ಲಿ ಬಂದ ಸಂಬಂಧಿಕರಿಗೆ ಹಾಗೂ ದೂರದ ಉರಲ್ಲಿರುವವರಿಗೆ ಪಾರ್ಸಲ್ ಕಳಿಸಿಕೊಡುವ ಮೂಲಕ ಬಾಂದವ್ಯ ಬೆಸೆಯುತ್ತಾರೆ. ಆದ್ದರಿಂದ ಈ ಊರಲ್ಲಿ ಪ್ರತಿ ಮನೆಯಲ್ಲಿಯೂ ಒಂದೇಬಾರಿ ಎರಡುಮೂರು ಕ್ಯಾನ್ ಗಟ್ಟಲೇ ಚಕ್ಕುಲಿ ಮಾಡಿ ತುಂಬಿಡುತ್ತಾರೆ. ಅನಾದಿ ಕಾಲದಿಂದಲೂ ಚಕ್ಕುಲಿ ಕಂಬಳವನ್ನ ಮಾಡುತ್ತ ಬಂದಿರೋ ಇಲ್ಲಿನ ಜನರು ಈಗಲೂ ಇದನ್ನ ರೂಡಿಯಲ್ಲಿಟ್ಟುಕೊಂಡಿದ್ದಾರೆ.

ಸಾಮಾನ್ಯವಾಗಿ ಚಕ್ಕುಲಿಯನ್ನ ಮಿಷನ್ ನಲ್ಲಿ ಮಾಡ್ತಾರೆ. ಆದ್ರೆ ಇಲ್ಲಿ ಹದ ಮಾಡಿದ ಹಿಟ್ಟನ್ನ ತಯಾರು ಮಾಡಿ ಕೈಯಲ್ಲೇ ಬಿಡೋದು ವಿಶೇಷತೆ. ಅದರಲ್ಲೂ ವಿವಿಧ ವಿನ್ಯಾಸದ ಚಕ್ಕಲಿ ಮಾಡೋದು ಇನ್ನೋಂದ ವಿಶೇಷ ಎನ್ನುವುದು ಗ್ರಾಮದ ವೆಂಕಟರಮಣ ಹೆಗಡೆ ಮಾತು.

ಕರೋನಾ ದಂತ ಮಹಾಮಾರಿ ಗಣೇಶ ಹಬ್ಬಕ್ಕೆ ವಿಘ್ನ ತಂದಿಟ್ಟರೂ ಇಲ್ಲಿನ ಜನರ ಚಕ್ಕುಲಿ ಕಂಬಳದ ಬಾಂದವ್ಯಕ್ಕೆ ಮಾತ್ರ ಅಡ್ಡಿ ಆಗಿಲ್ಲ.ಈ ವರ್ಷ ದೂರದ ಊರಿನ ಜನ ಈ ಭಾಗಕ್ಕೆ ಕಂಬಳದ ಚಕ್ಕುಲಿ ಸವಿಯಲು ಬರದಿದ್ದರೂ ಚಕ್ಕುಲಿ ಕಂಬಳಕ್ಕೆ ಮಾತ್ರ ವಿಘ್ನ ಉಂಟಾಗದೇ ಸಾಂಗವಾಗಿ ನಡೆಯುತಿದ್ದು ವಿಘ್ನ ನಿವಾರಕ ವಿಘ್ನೇಷನ ಚಕ್ಕುಳಿ ಕಂಬಳ ಸಾಂಗವಾಗಿ ಸಾಗುವ ಮೂಲಕ ಊರಿನ ಜನರಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ