ಹಳಿಯಾಳ-ಹಣಕ್ಕಾಗಿ ಹೆಣ್ಣುಮಗು ಮಾರಾಟ ಮಾಡಿದ ತಾಯಿ

695

ಕಾರವಾರ :- ನವಜಾತ ಹೆಣ್ಣು ಶಿಶುವನ್ನು ಅಕ್ರಮವಾಗಿ ಅನ್ಯ ಕೋಮಿನ ದಂಪತಿಗಳಿಗೆ ಮಾರಾಟ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ದಲ್ಲಿ ನಡೆದಿದೆ.

ಈ ಪ್ರಕರಣದಲ್ಲಿ ಭಾಗಿಯಾದ ಐದು ಜನ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಡಿಪಿಓ ಡಾ.ಲಕ್ಷ್ಮೀದೇವಿ ಎಸ್ ಅವರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ.

ಆರು ದಿನಗಳ ಹಿಂದೆ ಜನಿಸಿದ ನವಜಾತ ಶಿಶುವಿನ ಲಾಲನೆ ಪಾಲನೆ ಮಾಡಲು ನನ್ನ ಕೈಯಿಂದ ಸಾಧ್ಯವಿಲ್ಲ ಎಂದು ತಾಯಿಯೇ 25 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

ಹಳಿಯಾಳ ತಾಲೂಕಿನ ತಟ್ಟಿಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗೌಳಿವಾಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಘಟನೆ ಏನು?

ಗೌಳಿವಾಡಾ ಗ್ರಾಮದ ಶಿಶುವಿನ ತಾಯಿ ಸಾವಿತ್ರಿ ದೊಂಡು ಡೊಯಿಪಡೆ (26) ಎಂಬ ಮಹಿಳೆಯು ಹತ್ತು ವರ್ಷಗಳ ಹಿಂದೆ ಗಂಡನನ್ನು ತೊರೆದು ತಾಯಿಯ ಮನೆಯಲ್ಲಿ ವಾಸವಾಗಿದ್ದರು.ನಂತರ ಅನೈತಿಕ ಸಂಬಂಧದಿಂದ ಮಹಿಳೆಯು ಗರ್ಭಿಣಿಯಾಗಿದ್ದು ದಿ.20 ರಂದು ತಾಲೂಕಾ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದ್ದಾಳೆ. ಇದಾದ ನಂತರ ದಿ. 22 ರಂದು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ಗ್ರಾಮಕ್ಕೆ ಮರಳುತ್ತಿರುವ ಸಂದರ್ಭದಲ್ಲಿ ತಾಲೂಕಿನ ಕೆಸರೊಳ್ಳಿ ಕ್ರಾಸ್ ಬಳಿ 25 ಸಾವಿರ ರೂಪಾಯಿಗಳಿಗೆ ಪಕ್ಕದ ಯಲ್ಲಾಪುರ ತಾಲೂಕಿನ ಕಿರುವತ್ತಿ ಗ್ರಾಮದ ರಾಹತ ಪಟೇಲ್ ಹಾಗೂ ಅಬ್ದುಲ್ ರಹಿಮಾನ್ ಪಟೇಲ್ ಎಂಬ ದಂಪತಿಗೆ ಮಾರಾಟ ಮಾಡಿ ಸ್ವಗ್ರಾಮಕ್ಕೆ ತೆರಳಿದ್ದಾರೆ.

ಮಗುವಿನ ಕುರಿತು ಮೇಲ್ವಿಚಾರಣೆ ಮಾಡಲೆಂದು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ನವಜಾತ ಶಿಶುವಿನ ಮನೆಗೆ ತೆರಳಿದ ನಂತರ ಈ ಘಟನೆ ಹೊರಬಿದ್ದಿದೆ. ತಕ್ಷಣವೇ ಕಾರ್ಯಕರ್ತೆಯರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಘಟನೆ ಕುರಿತು ಮಾಹಿತಿ ನೀಡಿದ ನಂತರ ಘಟನಾ ಸ್ಥಳಕ್ಕೆ ಸಿಡಿಪಿಓ ಡಾ.ಲಕ್ಷ್ಮೀದೇವಿ, ಪಿಎಸೈ ಶಿವಾನಂದ ನಾವದಗಿ, ಪಿಡಿಓ ಮಹಾಂತೇಶ ಹುರಕಡ್ಡಿ, ವಲಯ ಮೇಲ್ವಿಚಾರಕಿ ರಾಜೇಶ್ವರಿ ಕಟ್ಟಿಮನಿ, ಮಹಿಳಾ ಪೇದೆ ರಮ್ಯಾ ಅವರು ತೆರಳಿ ವಿಚಾರಣೆ ನಡೆಸಿದ ನಂತರ ಮಗು ಮಾರಾಟವಾದ ವಿಷಯ ಹೊರಬಿದ್ದಿದೆ.

ಘಟನೆ ಕುರಿತು ಮಾಹಿತಿ ಪಡೆದ ಸ್ಥಳೀಯ ಅಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರಿಗೆ ಮಾಹಿತಿ ನೀಡಿ ನಂತರ ಯಲ್ಲಾಪುರಕ್ಕೆ ತೆರಳಿ ನವಜಾತ ಶಿಶುವನ್ನು ರಕ್ಷಿಸಿದ್ದಾರೆ.ಮಗುವನ್ನು ಅಕ್ರಮ ಹಾಗೂ ಅನೈತಿಕವಾಗಿ ಸಾಗಾಣಿಕೆ ಮಾಡಲು ಸಂತ್ರಸ್ತೆಯ ಅಣ್ಣನಾದ ಭಯ್ಯಾಜಾನು ಪಟಕಾರೆ ಹಾಗೂ ಅಗಸಲಕಟ್ಟಾ ಗ್ರಾಮದ ಆಶಾ ಕಾರ್ಯಕರ್ತೆ ರೋಜಿ ಲೂಯಿಸ್ ದಬಾಲಿ ಸಹಕರಿಸಿದ ಮಮತಾಜ ಸರ್ದಾರ ಹಳಬ ಹಾಗೂ ಮಾರಾಟದ ಮೂಲಕ ಶಿಶುವನ್ನು ಪಡೆದ ರಾಹತ ಪಟೇಲ್ ಹಾಗೂ ಅಬ್ದುಲ್ ರಹಿಮಾನ್ ಪಟೇಲ್ ದಂಪತಿಗಳ ವಿರುದ್ಧಸೂಕ್ತ ಕ್ರಮ ಕೈಗೊಳ್ಳುವಂತೆ ಡಾ.ಲಕ್ಷ್ಮೀದೇವಿ ಯವರು ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ