ಶಿರಸಿಯಲ್ಲಿ ಅಧಿಕೃತ ಗ್ರಾಮವೇ ಮಾಯ!ಸರ್ಕಾರಿ ದಾಖಲೆ ಸಿಗದೆ ಗ್ರಾಮದವರು ಕಂಗಾಲು!

319

ಶಿರಸಿ: ಸರ್ಕಾರಿ ವೆಬ್​ಸೈಟ್​ನಲ್ಲಿ ಮಜಿರೆಯೊಂದರ ಹೆಸರೇ ಮಾಯವಾಗಿದೆ.
ಈ ಕಾರಣದಿಂದ ಅಲ್ಲಿನ ನಿವಾಸಿಗಳು ಅಗತ್ಯ ದಾಖಲೆಗಳ ಜತೆ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಶಿರಸಿ ತಾಲೂಕಿನ ದೇವನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸೇರಿದಂತೆ ಶಾಲೆ, ಅಂಗನವಾಡಿ, ಹತ್ತಾರು ಅಂಗಡಿಗಳನ್ನು ಹೊಂದಿರುವ ಡಿಪೂಬೈಲ್ ಮಜಿರೆ ಈಗ ಸರ್ಕಾರಿ ಅಧಿಕೃತ ವೆಬ್​ಸೈಟ್​ನಲ್ಲಿ ಮಾಯವಾಗಿದೆ.

ಕಳೆದ ಒಂದು ವರ್ಷದಿಂದ ಈ ಸಮಸ್ಯೆಯಿದ್ದು, ನೂರಾರು ಜನರು ತಮ್ಮ ನೆಲೆಯನ್ನು ದಾಖಲಿಸಲಾಗದೆ ಹೈರಾಣಾಗಿದ್ದಾರೆ.

ಮಜಿರೆಯೇ ಮಾಯ!

ಈ ಗ್ರಾಮದಲ್ಲಿ 35 ಕುಟುಂಬ ಹಾಗೂ 175 ಮತಗಳನ್ನು ಹೊಂದಿರುವ ಈ ಮಜಿರೆ ವರ್ಷದ ಹಿಂದೆ ಸರ್ಕಾರಿ ದಾಖಲೆಯಲ್ಲಿತ್ತು. ಆದರೆ, ಏಕಾಏಕಿ ವೆಬ್​ಸೈಟ್​ನಲ್ಲಿ ಮಜಿರೆಯ ಹೆಸರು ನಮೂದಿಸಿದಲ್ಲಿ ಯಾವುದೇ ಫಲಿತಾಂಶ ತೋರಿಸುತ್ತಿಲ್ಲ. ಸಮೀಪದ ಅಮ್ಮಿನಳ್ಳಿ ನೆಮ್ಮದಿ ಕೇಂದ್ರಕ್ಕೆ ತೆರಳಿ ವಾಸ್ತವ್ಯ ಪ್ರಮಾಣಪತ್ರಕ್ಕೆ ಅರ್ಜಿ ನೀಡಿದಾಗ ಡಿಪೂಬೈಲ್ ಮಜರೆ ಇಲ್ಲದಿರುವುದು ಸ್ಥಳೀಯರಿಗೆ ಶಾಕ್ ಆಗಿದೆ.

ಇದರಿಂದ ಮಜಿರೆಯ ನಿವಾಸಿಗಳು ಕಂಗಾಲಾಗಿದ್ದಾರೆ. ಜಾತಿ ಆದಾಯ ಪ್ರಮಾಣಪತ್ರ, ಆದಾಯ, ವಂಶಾವಳಿ, ಆಧಾರ್ ಸೇರಿದಂತೆ ಆನ್​ಲೈನ್ ಮುಖಾಂತರ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಪಡೆಯುವ ಸುಮಾರು 7 ಪ್ರಮಾಣಪತ್ರಗಳಿಗೆ ಮಜಿರೆ ಹೆಸರೇ ನಮೂದಾಗದ ಕಾರಣ ಇಲ್ಲಿನ ಗ್ರಾಮದವರು ತೊಂದರೆ ಎದುರಿಸುತಿದ್ದಾರೆ. ಇನ್ನು ಪ್ರಮಾಣಪತ್ರ ದೊರೆತರೂ ವಿಳಾಸ ಸರಿಯಾಗಿ ನಮೂದಾಗದೇ ಕೇವಲ ಗ್ರಾಮ ಮಾತ್ರ ಸಿಗಲಿದ್ದು, ಸರ್ಕಾರದ ಯೋಜನೆಗಳನ್ನು ಪಡೆಯಲು ಸಮಸ್ಯೆಯಾಗುತ್ತಿದೆ.

ಈ ಗ್ರಾಮದವರಿಗೆ ಸರ್ಕಾರದ ಯೋಜನೆಗಳು ಮರೀಚಿಕೆ.

ದೇವನಹಳ್ಳಿ ಗ್ರಾಮದಲ್ಲಿ ಒಟ್ಟು 25 ಮಜರೆಗಳಿದ್ದು, ಅದರಲ್ಲಿ ಡಿಪೂಬೈಲ್ ಸಹ ಒಂದಾಗಿದೆ. ಆದರೆ, ಈಗ 24 ಮಜರೆಗಳು ಮಾತ್ರ ಉಲ್ಲೇಖವಾಗಿದ್ದು, ಸರ್ಕಾರಿ ವೆಬ್​ಸೈಟ್​ನಿಂದ ಡಿಪೂಬೈಲ್ ಮಾಯವಾಗಿದೆ. ಇದರಿಂದ ಈ ಮಜಿರೆಯ ನಿವಾಸಿಗಳು ಸರ್ಕಾರದ ಯಾವ ಯೋಜನೆಗಳಿಗೂ ಅರ್ಹರಲ್ಲ ಎನ್ನುವಂತಾಗಿದ್ದು, ಹೊಸದಾಗಿ ಯಾವ ದಾಖಲೆಗಳು ಬೇಕಿದ್ದರೂ ತೊಂದರೆಪಡುವಂತಾಗಿದೆ.

ಅಲ್ಲದೆ, ಚುನಾವಣೆಗೆ ಸ್ಪರ್ಧಿಸಲು ವಾಸ್ತವ್ಯ ಪ್ರಮಾಣಪತ್ರದ ಅಗತ್ಯವಿದ್ದು, ಪ್ರತಿ ಹಂತದಲ್ಲಿಯೂ ಗ್ರಾಮಸ್ಥರಿಗೆ ಸಮಸ್ಯೆ ಎನ್ನುವಂತಾಗಿದೆ. ಅಧಿಕಾರಿಗಳು ಪಕ್ಕದ ಗ್ರಾಮದಲ್ಲಿನ ವಾಸ್ತವ್ಯ ಪ್ರಮಾಣಪತ್ರ ನೀಡುವುದಾಗಿ ಹೇಳುತ್ತಾರೆ. ಆದರೆ, ಆಯಾ ಗ್ರಾಮಸ್ಥರು ತಕರಾರು ಮಾಡಿದಲ್ಲಿ ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಸಮಸ್ಯೆ ಕುರಿತು ಗ್ರಾಮಸ್ಥರು ತಹಶಿಲ್ದಾರರ ಗಮನಕ್ಕೆ ತಂದಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ಬಂದಿದೆ.ಆದ್ರೆ ಈವರೆಗೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
Leave a Reply

Your email address will not be published. Required fields are marked *