BREAKING NEWS
Search

ಇಟಲಿಯಿಂದ ದೇಶಕ್ಕೆ ಬಂದು ಕೊರೋನಾ ಹಬ್ಬಿಸಲಾರೆ-ಇಟಲಿಯಲ್ಲಿ ಓದುತ್ತಿರುವ ಶಿರಸಿ ಯುವತಿಯ ದಿಟ್ಟ ನಿರ್ಧಾರ!

1820

ಕಾರವಾರ : ವಿದೇಶದಿಂದ ಭಾರತಕ್ಕೆ ಬರುತ್ತಿರುವವರ ಹಲವರಿಂದ ಕರೋನಾ ವೈರಸ್ ಹರಡುತ್ತಿದ್ದರೂ ವಿಧಿಯಿಲ್ಲದೇ ಹಲವು ಭಾರತೀಯರು ವಿದೇಶದಿಂದ ಸ್ವದೇಶಕ್ಕೆ ಆಗಮಿಸುತ್ತಿದ್ದಾರೆ. ಆದರೆ ಇದಕ್ಕೆ ತದ್ವಿರುದ್ದ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯುವತಿಯೊರ್ವಳು ತನ್ನಿಂದ ವೈರಸ್ ಹರಡಬಾರದು ಎಂದು ಇಟಲಿಯಲ್ಲಿಯೇ ಉಳಿದುಕೊಂಡಿದ್ದಾರೆ.

ಉತ್ತರ ಕನ್ನಡದ ಶಿರಸಿಯ ಪ್ರತಿಭಾ ಹೆಗಡೆ ಇಟಲಿಯ ನೇಪೆಲ್ಸ್ ನಗರದ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದು, ಕೊರೊನಾ ವೈರಸ್ ಭೀತಿಯಿದ್ದರೂ ಸಹ ಅಲ್ಲಿಯೇ ಉಳಿಯುವ ನಿರ್ಧಾರ ಮಾಡಿದ್ದಾರೆ.

ತಮ್ಮ‌ ನಿರ್ಧಾರದ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಪ್ರತಿಭಾ ಬರೆದುಕೊಂಡಿದ್ದಾರೆ. “ನಾನು ಇಟಲಿಯ ನೇಪಲ್ಸ್ ನಗರದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡ್ತಾ ಇದ್ದೇನೆ. ಒಂದೆರಡು ವಾರಗಳಿಂದ ಭಾರತದಲ್ಲಿರುವ ನನ್ನ ಸ್ನೇಹಿತರು ಮತ್ತು ಕುಟುಂಬದವರು ಮನೆಗೆ ವಾಪಸ್ ಬಂದು ಬಿಡಬಹುದಲ್ಲ ಅಂತ ಸಲಹೆ ನೀಡುತ್ತಾ ಇದ್ದಾರೆ. ನಾನು ಇಲ್ಲೇ ಇರಲು ಡಿಸೈಡ್ ಮಾಡಿದೆ. ಕಾರಣ ಸಿಂಪಲ್. ನನ್ನ ನಗರದಲ್ಲಿ ಎಷ್ಟೇ ಜನರಿಗೆ COVID-19 ಬಂದಿರಲಿ, ನಾನು ಮನೆಯಲ್ಲೇ ಇದ್ದರೆ ಏನೂ ಸಹ ಆಗುವುದಿಲ್ಲ. ನಾನು ಬದಲಾಗಿ ಭಾರತಕ್ಕೆ ಬರುವ ಹಾದಿಯಲ್ಲಿ ಎಷ್ಟೋ ಜನರ ನಡುವೆ ಇದ್ದು ಸುಮಾರು 15 ಗಂಟೆಗಳ ಪ್ರಯಾಣ ಮಾಡಬೇಕು. ಭಾರತಕ್ಕೆ corona ಹೊತ್ತೊಯ್ಯುವದು ಬಿಟ್ಟರೆ ಬೇರೆ ಯಾವ ಉಪಯೋಗವು ಅದರಲ್ಲಿ ಇಲ್ಲ” ಎಂದಿದ್ದಾರೆ.

“ಈಗ ಪ್ರಸ್ತುತ ಭಾರತದ ನಗರಗಳಲ್ಲಿ ಕೆಲಸ ಮಾಡುತ್ತಿರುವ ಜನರೂ ನನ್ನ ಪರಿಸ್ಥಿತಿಯಲ್ಲಿಯೇ ಇದ್ದೀರಿ. ಇದ್ದಲ್ಲೇ ಇರುವುದು ಬಿಟ್ಟು ಬಸ್, ರೈಲು ಹತ್ತಿ ಮನೆಗೆ ಹೋಗೋದ್ರಿಂದ ನಿಮಗೆ corona ತಾಕುವ, ಅಥವಾ ಮೊದಲೇ ಇದ್ದರೆ ಸಹಪ್ರಯಾಣಿಕರಿಗೂ ಕುಟುಂಬದವರಿಗೂ ತಗುಲಿಸುವ ಸಾಧ್ಯತೆಗಳೇ ಹೆಚ್ಚು. ಸರ್ಕಾರ ಬಸ್ ಗಳನ್ನ ಬಂದ್ ಮಾಡಿದರೂ ಕಷ್ಟ ಪಟ್ಟು ಇನ್ಯಾವ್ದೋ ರೀತಿಯಲ್ಲಿ ಮನೆ ಸೇರುವ ಅವಿವೇಕ ತೋರಬೇಡಿ. ದಯವಿಟ್ಟು ಇದ್ದಲ್ಲಿಯೇ ಇರಿ. ಮನೆ ಒಳಗೇ ಇರಿ.” ಎಂದು ಮನವಿ ಮಾಡಿದ್ದಾರೆ.

ಇಟಲಿಯಲ್ಲಿ ಕರೋನಾ ವೈರಸ್ ತೀವ್ರ ಪ್ರಮಾಣದಲ್ಲಿ ಆತಂಕ ಸೃಷ್ಟಿಸಿದ್ದರೂ, ಪ್ರತಿಭಾ ಮನೆಗೆ ಬರದೇ ವೈರಸ್ ನಿಂದ ದೇಶ ಕಾಪಾಡಲು ತಗೆದುಕೊಂಡ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *