BREAKING NEWS
Search

ಸೋಂಕು ತಗಲಿದವರು ಮುಚ್ವಿಟ್ಟರು!ಜೋಯಿಡಾ ದಲ್ಲಿ ಎರಡನೇ ಅಲೆ ಜೋರು!

1466

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಜಿಲ್ಲೆಯಲ್ಲಿ ಅತೀ ಚಿಕ್ಕ ತಾಲೂಕು . ಆದ್ರೆ ಇಡೀ ತಾಲೂಕಿನಲ್ಲಿ ಹೊರ ರಾಜ್ಯ ದಿಂದ ಬಂದ ಜನರಿಂದಾಗಿ ಇದೀಗ ಕರೋನಾ ಸೋಂಕಿತರ ಸಂಖ್ಯೆ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಅತೀ ಹೆಚ್ವು ವರದಿಯಾಗಿದೆ.ಇದರ ಒಂದು ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಜೋಯಿಡಾ ತಾಲೂಕು ದಟ್ಟ ಕಾಡಿನ ಮಧ್ಯೆ ಇರುವ ಈ ಪ್ರದೇಶದಲ್ಲಿ ಮೇ 19ರ ವರದಿಯಂತೆ ಒಟ್ಟು 1,085 ಮಂದಿಗೆ ಸೋಂಕು ದೃಢಪಟ್ಟಿದೆ. 15 ಜನರು ಮೃತಪಟ್ಟಿದ್ದಾರೆ.

ತಾಲ್ಲೂಕು ಬಹುತೇಕ ಕುಗ್ರಾಮಗಳಿಂದ ಕೂಡಿದೆ. ಹಲವು ಭಾಗಕ್ಕೆ ಈಗಲೂ ಸಮರ್ಪಕ ರಸ್ತೆಯೂ ಇಲ್ಲ. ಮೊಬೈಲ್ ನೆಟ್‌ವರ್ಕ್, ದೂರವಾಣಿ ಸಂಪರ್ಕಗಳೂ ಲಭ್ಯವಿಲ್ಲ. ಆದರೇ ಮೇ ತಿಂಗಳ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಊರಿಗೆ ಬಂದ
ಮಹಾರಾಷ್ಟ್ರ, ಗೋವಾ, ಬೆಂಗಳೂರಿನ ಸ್ಥಳೀಯ ಜನರು ತಮ್ಮ ಕುಗ್ರಾಮಗಳಿಗೆ ತೆರಳಿ ವಾಸಿಸುತಿದ್ದಾರೆ. ಇವರಲ್ಲಿ ಬಹುತೇಕರಲ್ಲಿ ಕರೋನಾ ಸೋಂಕಿನ ಲಕ್ಷಣವಿದ್ದರೂ ,ಅದನ್ನು ಮರೆಮಾಚಿ ಊರಿನಲ್ಲಿ ಓಡಾಡುವ ಜೊತೆ ಮದುವೆ ಮುಂತಾದ ಸಮಾರಂಭಗಳಲ್ಲಿ ಭಾಗಿಯಾಗಿ ಇವರ ಮೂಲಕ ಮೂಲ ನಿವಾಸಿಗಳಿಗೆ ಕರೋನಾ ಸೋಂಕು ತಗುಲಿ ಇದೀಗ ಸಂಪರ್ಕವೇ ಇಲ್ಲದ ಹಳ್ಳಿಗಳಲ್ಲಿ ಕರೋನಾ ಆತಂಕ ಮೂಡಿಸಿದೆ.ಹೀಗಾಗಿ ಇವರನ್ನು ಗುರುತಿಸುವುದೇ ದೊಡ್ಡ ಸವಾಲಾಗಿದ್ದು ಇದೀಗ ತಾಲ್ಲೂಕು ಆಡಳಿತವು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಸಮೀಕ್ಷೆ ಮಾಡಿಸಿದೆ.

‘ಊರಿಗೆ ಬಂದವರು ಸಂಬಂಧಿಕರ ಮದುವೆಗಳಲ್ಲಿ, ವಿವಿಧ ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಜ್ವರ, ನೆಗಡಿ, ತಲೆನೋವಿನಂಥ ಸಮಸ್ಯೆಗಳಿಗೆ ಸ್ಥಳೀಯ ವೈದ್ಯರು ಅಥವಾ ಮೆಡಿಕಲ್‌ಗಳಿಂದ ಔಷಧ ಪಡೆದು ಸೇವಿಸಿದರು. ತಮಗೆ ಕೋವಿಡ್ ಬರಲಾರದು ಎಂಬ ಅತಿಯಾದ ವಿಶ್ವಾಸದಿಂದ ಇದ್ದು, ತಾವೂ ಸೋಂಕಿತರಾಗಿ ಬೇರೆಯವರಿಗೂ ಹಬ್ಬಿಸಿದರು’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತಿದ್ದಾರೆ.

ತಾಲ್ಲೂಕು ವೈದ್ಯಾಧಿಕಾರಿ ಡಾ.ವಿ.ಸುಜಾತಾ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಹೇಳುವಂತೆ , ‘ಕೋವಿಡ್ ಲಕ್ಷಣಗಳಿದ್ದ ಬಹುತೇಕರು ಆರಂಭದಲ್ಲೇ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ. ತಮ್ಮನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಾರೆ ಎಂದು ಹೆದರಿದರು,ತಮ್ಮೂರಿನ ಹತ್ತಿರದಲ್ಲಿರುವ, ಅರ್ಹತೆ ಇಲ್ಲದ ವೈದ್ಯರಿಗೆ ಕೋವಿಡ್‌ಗೆ ಏನು ಚಿಕಿತ್ಸೆ ಕೊಡಬೇಕು ಎಂಬ ಮಾಹಿತಿಯಿಲ್ಲ. ಹಣಕ್ಕಾಗಿ ಏನೋ ಒಂದು ಇಂಜೆಕ್ಷನ್, ಗುಳಿಗೆ ಕೊಟ್ಟರು. ಸೋಂಕಿತರೂ ಆಯುರ್ವೇದ ಔಷಧಿ, ಕಷಾಯ ಎಂದು ಮಾಡಿಕೊಂಡರು. ಅವುಗಳನ್ನು ಸೇವಿಸಿದರೂ ಆರೋಗ್ಯ ಸುಧಾರಿಸದಿದ್ದಾಗ ಮತ್ತೊಬ್ಬ ವೈದ್ಯರ ಬಳಿಗೆ ಹೋದರು. ಕೊನೆಗೆ, ಏಳೆಂಟು ದಿನಗಳಲ್ಲಿ ಪ‍ರಿಸ್ಥಿತಿ ಗಂಭೀರ ಆಗುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಗೆ ಬಂದರು’ ಎಂದು ವಿವರಿಸುತ್ತಾರೆ.

‘ನಿಯಮ ಬಾಹಿರವಾಗಿ ಚಿಕಿತ್ಸೆ ನೀಡುತ್ತಿದ್ದವರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. ಈಗ ಜನ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ. ಸೋಂಕು 10 ದಿನಗಳಲ್ಲಿ ನಿಯಂತ್ರಣಕ್ಕೆ ಬರುವ ನಿರೀಕ್ಷೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಕೋವಿಡ್ ಬಂದರೆ ಬದುಕುವುದಿಲ್ಲ ಎಂಬ ತಪ್ಪು ಅಭಿಪ್ರಾಯ ಹಲವರಲ್ಲಿ ಇನ್ನೂ ಇದೆ. ಜ್ವರ ಬಂದವರೂ ಕೋವಿಡ್‌ ಪರೀಕ್ಷೆಗೆ ಬರುತ್ತಿಲ್ಲ. ಜೊಯಿಡಾ ಸರ್ಕಾರಿ ಆಸ್ಪತ್ರೆಯಲ್ಲಿ 24×7 ಸೇವೆಯಿದೆ. ಸೋಂಕಿತರನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಬರಲು ವ್ಯವಸ್ಥೆಯಿದೆ. ಆಂಬುಲೆನ್ಸ್‌ ಇದ್ದು, ಗ್ರಾಮಗಳಲ್ಲಿ ಸ್ವಯಂಸೇವಕರ ವಾಹನಗಳನ್ನು ಗುರುತಿಸಲಾಗಿದೆ. ಯಾರೂ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕಬಾರದು’ ಎಂದು ಮನವಿ ಮಾಡಿದ್ದಾರೆ.

ಸದ್ಯ ಜೋಯಿಡಾದ ಸಂಪರ್ಕವೇ ಇಲ್ಲದ ಹಳ್ಳಿಗಳಲ್ಲೂ ಸಹ ಕರೋನಾ ಹೆಚ್ಚಾಗಿದೆ. ಹೋಗಾಗಿ ಆರೋಗ್ಯ ಇಲಾಖೆ ಸಹ ಕ್ರಮ ಕೈಗೊಂಡಿದ್ದು ಇದೀಗ ಪ್ರತಿ ಹಳ್ಳಿಗೂ ಜಾಗೃತಿ ಜೊತೆ ಸೋಂಕು ಹರಡುವ ಮೂಲವನ್ನು ಹುಡುಕಿ ತಡೆಗಟ್ಟುವ ಕೆಲಸ ಮಾಡಲಾಗುತ್ತಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!