ಅತೃಪ್ತ ಶಾಸಕರ ಮಾನ ಹರಾಜು ಹಾಕಲು ಕಾಂಗ್ರೆಸ್ ಸಿದ್ದ!

355

ಬೆಂಗಳೂರು: ಅತೃಪ್ತ ಶಾಸಕರು ವಾಪಸ್ ಬರದಿದ್ದರೆ ವಿಶ್ವಾಸಮತ ಯಾಚನೆ ಸಂದರ್ಭ ಅವರ ಮಾನ ಹರಾಜು ಹಾಕಲು ಕಾಂಗ್ರೆಸ್ ಮುಖಂಡರು ತೀರ್ಮಾನ ಮಾಡಿದ್ದಾರೆ.

ಶುಕ್ರವಾರ ಸದನದ ಕಲಾಪ ಮುಗಿದ ನಂತರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಚೇರಿಯಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು, ಪಕ್ಷಕ್ಕೆ ಕೈಕೊಟ್ಟ ಅತೃಪ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವಾಸಮತ ಯಾಚನೆ ವೇಳೆ ನಮ್ಮ ಮುಖಂಡರು ಹಾಗೂ ಶಾಸಕರು ಮಾತನಾಡುವಾಗ ಅತೃಪ್ತರ ವರ್ತನೆಗಳೆಲ್ಲ ಸದನದಲ್ಲಿ ದಾಖಲೆಯಾಗುವ ಮೂಲಕ ರಾಜ್ಯದ ಜನರಿಗೆ, ಅದರಲ್ಲೂ ಅವರ ಕ್ಷೇತ್ರದ ಮತದಾರರಿಗೆ ತಲುಪಬೃಕು ಈ ಮೂಲಕ ಅವರ ಮಾನ ಹರಾಜುಹಾಕಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ.

ಬಿಜೆಪಿ ಆಮಿಷಕ್ಕೆ ಬಲಿಯಾಗಿ ಹೋದವರೆಲ್ಲ ಸರ್ಕಾರದ ವಿರುದ್ಧ ದೂರುತ್ತಿದ್ದಾರೆ, ಕ್ಷೇತ್ರಕ್ಕೆ ಕೆಲಸಗಳಾಗುತ್ತಿಲ್ಲವೆಂಬ ಮಾತು ಹೇಳುತ್ತಿದ್ದಾರೆ.

ಆ ಶಾಸಕರ ಕ್ಷೇತ್ರಕ್ಕೆ ಈಗಿನ ಹಾಗೂ ಹಿಂದಿನ ಸರ್ಕಾರದ ಅವಧಿಯಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ, ಯಾವ ಯೋಜನೆಗಳು ಮಂಜೂರಾಗಿವೆ ಎಂಬುದನ್ನು ಅಂಕಿ-ಅಂಶಗಳ ಮೂಲಕ ವಿವರಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಸರ್ಕಾರ ಅವರ ಕೆಲಸ ಮಾಡಿಕೊಟ್ಟಿದ್ದರೂ ಅನಗತ್ಯವಾಗಿ ದೂರುತ್ತಿರುವುದರ ಹಿಂದೆ ಆಪರೇಷನ್ ಕಮಲದ ತಂತ್ರವಿದೆ ಎಂಬುದನ್ನು ಬಹಿರಂಗ ಪಡಿಸಬೇಕೆಂದು ಚರ್ಚೆಯಾಗಿದೆ ಎಂದು ಮೂಲಗಳು ಹೇಳಿವೆ. ಹೇಳಿವೆ

ಬಿಜೆಪಿ ಹಾಗೂ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸಿರುವ ಪ್ರಯತ್ನವೇನು, ಯಾವ ಯಾವ ಶಾಸಕರಿಗೆ ಏನೇನು ಆಮಿಷ, ಎಲ್ಲೆಲ್ಲಿಂದ ಬೆದರಿಕೆ ಹಾಕಿಸಲಾಗಿದೆ ಎಂಬ ಅಂಶಗಳನ್ನು ಸದನದಲ್ಲಿ ದಾಖಲಾಗುವಂತೆ ಮಾಡಲೇಬೇಕೆಂಬ ನಿರ್ಧಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಮಾಡಲಿದ್ದಾರೆ ಕೊನೇ ಪ್ರಯತ್ನ!

ಅತೃಪ್ತ ಬಳಗದಲ್ಲಿರುವ ಕೆಲ ಶಾಸಕರನ್ನು ವಾಪಸ್ ಕರೆತರಲು ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಯ ಪ್ರಯತ್ನ ನಡೆಸಲು ನಿರ್ಧರಿಸಿದ್ದಾರೆ.

ಮುಂಬೈನಲ್ಲಿರುವ ಶಾಸಕರಲ್ಲಿ 5-6 ಶಾಸಕರನ್ನು ದೂರವಾಣಿ ಮೂಲಕ ಸಂರ್ಪಸಿ ಮನವೊಲಿಕೆ ಮಾಡಿ ಸರ್ಕಾರ ಉಳಿಸಿಕೊಳ್ಳಲು ಆಪ್ತರ ಜತೆ ಚರ್ಚೆ ನಡೆಸಿದ್ದಾರೆ.

ಆದರೆ ಬಹಳ ಯಾರ ಮಾತನ್ನೂ ಕೇಳದ ಅತೃಪ್ತರು ಸಿದ್ದರಾಮಯ್ಯ ಮಾತಿಗೆ ಎಷ್ಟರಮಟ್ಟಿಗೆ ಮನ್ನಣೆ ನೀಡಲಿದ್ದಾರೆ ಎಂಬುದು ಕುತೂಹಲವಾಗಿದೆ.

ಅನರ್ಹತೆಗೆ ಪಟ್ಟು ಹಿಡಿಯಲಿದೆ ಕಾಂಗ್ರೆಸ್ ಜೆಡಿಎಸ್!

ಅತೃಪ್ತ ಶಾಸಕರು ಅನರ್ಹತೆಗೆ ಒಳಗಾಗಬೇಕು, ಬಿಜೆಪಿ ಕಚೇರಿಯಲ್ಲಿ ಟಿಕೆಟ್​ಗಾಗಿ ಕ್ಯೂನಲ್ಲಿ ನಿಲ್ಲುವಂತಾಗಬೇಕು. ರಾಜೀನಾಮೆ ಅಂಗೀಕಾರವಾಗಿ ಬಿಟ್ಟರೆ ಮಂತ್ರಿಗಳಾಗಿ ಚುನಾವಣೆಗೆ ಹೋಗುತ್ತಾರೆ. ಅನರ್ಹತೆಗೆ ಒಳಗಾದರೆ ಅಧಿಕಾರ ಅನುಭವಿಸುವಂತಿಲ್ಲ. ಹೀಗಾಗುವಂತೆ ನೋಡಿಕೊಳ್ಳಬೇಕೆಂದು ಕೆಲ ಶಾಸಕರ ಮುಖಂಡರ ಮೇಲೆ ಒತ್ತಡ ತಂದಿದ್ದಾರೆ.

ಅನರ್ಹತೆಗೆ ಒಳಗಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಲಿ, ಪಕ್ಷಕ್ಕೆ ದ್ರೋಹ ಬಗೆದವರು ಅದರ ಶಿಕ್ಷೆ ಅನುಭವಿಸಬೇಕು. ವಿಶ್ವಾಸಮತ ಗೆಲ್ಲುವ ಮೂಲಕ ಸರ್ಕಾರ ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡೋಣ, ಆಗದಿದ್ದರೆ ಪ್ರತಿಪಕ್ಷದಲ್ಲಿ ಕೂತು ಪಕ್ಷ ಕಟ್ಟೋಣ. ಅತೃಪ್ತರ ಕ್ಷೇತ್ರಗಳಲ್ಲಿ ಅವರು ಯಾವುದೇ ಕಾರಣಕ್ಕೂ ಗೆಲ್ಲದಂತೆ ಈಗಿನಿಂದಲೇ ಪರ್ಯಾಯವಾಗಿ ಬೇರೊಬ್ಬರನ್ನು ಗುರುತಿಸುವ ಕೆಲಸವೂ ಆಗಲಿ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದ್ದು ಯುದ್ದಕ್ಕೆ ಸಿದ್ದವಾಗಿದೆ.
Leave a Reply

Your email address will not be published. Required fields are marked *