ಕಾರವಾರ-ಬೋಟಿನತುಂಬ ಮೀನು ಕಂಡು ಭಯಪಟ್ಟ ಮೀನುಗಾರರು! ಅಷ್ಟಕ್ಕೂ ಈ ಮೀನು ತಂದ ಆಪತ್ತೇನು ಗೊತ್ತಾ?

1676

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ್ ಬಂದರಿನಲ್ಲಿ ಬಲು ಅಪರೂಪದ ಕಾರ್ಗಿಲ್ ಮೀನು (ಕಡಬು) ಟನ್ ಗಟ್ಟಲೇ ಸಿಕ್ಕಿದ್ದು ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ.

ಅರೇ ಬೋಟಿನ ತುಂಬ ಮೀನು ಸಿಕ್ರೆ ಖುಷಿ ಪಡಬೇಕಾದವರು ಬೇಸರ ಯಾಕೆ ಪಡ್ತಾರೆ ಅಂತೀರ ಹೇಳ್ತೀನಿ ಓದಿ.

ಈ ಮೀನು ಸಿಕ್ರಿ ಮೀನುಗಳಿಗೆ ಬರ!

ಲಕ್ಷ ದ್ವೀಪ ,ಹವಳದ ದಿಬ್ಬಗಳು ಇರುವಂತ ಪ್ರದೇಶದಲ್ಲಿ ಈ ಮೀನುಗಳು ಹೇರಳವಾಗಿ ವಾಸಿಸುತ್ತಿವೆ.ಇವುಗಳು ಮನುಷ್ಯನಂತೆ ಹಲ್ಲುಗಳನ್ನು ಹೊಂದಿವೆ,ಇದಲ್ಲದೇ ಇವು ಮೀನುಗಳನ್ನೇ ತಿಂದು ಬದುಕುವ ಮೀನುಗಳು.

ಹೀಗಾಗಿ ಇವು ಎಲ್ಲಿ ಇರುತ್ತವೆಯೋ ಆ ಭಾಗದಲ್ಲಿ ಉತ್ತಮ ಆಹಾರದ ಮೀನುಗಳು ಇರುವುದಿಲ್ಲ ,ಇದ್ದರೂ ಈ ಮೀನುಗಳು ಭಕ್ಷಿಸುತ್ತವೆ ಹೀಗಾಗಿ ಈ ಮೀನುಗಳು ಇರುವಲ್ಲಿ ಬೇರೆ ಮೀನುಗಳು ಇರುವುದಿಲ್ಲ ಎಂಬುದು ಮಿನುಗಾರರ ನಂಬಿಕೆಯಾಗಿದ್ದು ವೈಜ್ಞಾನಿಕವಾಗಿ ಕೂಡ ದೃಡ ಪಟ್ಟಿವೆ.

ಆದರೇ ಈ ಬಾರಿ ಅರಬ್ಬಿ ಸಮುದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಳಿಯ ಚಲನೆ ಬದಲಾಗಿದೆ,ಇದರಿಂದಾಗಿ ಲಕ್ಷದ್ವೀಪಗಳಂತ ಪ್ರದೇಶದಲ್ಲಿ ಇರಬೇಕಾದ ಕಾರ್ಗಿಲ್ ಮೀನುಗಳು ತಮ್ಮ ಸ್ಥಾನ ಬದಲಿಸಿ ಉತ್ತರ ದಿಕ್ಕಿನತ್ತ ಚಲಿಸುತ್ತಿವೆ .

ಹೀಗಾಗಿಗಿ ಈ ಮೀನುಗಳು ಈ ಭಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳತೊಡಗಿದೆ.

ಹೀಗಾಗಿ ಮೊದಲೇ ಮೀನಿನ ಕ್ಷಾಮ ದಿಂದ ಬಳಲುತ್ತಿರುವ ಕಾರವಾರದ ಮೀನುಗಾರರು ಈ ಮೀನುಗಳ ಆಗಮನದಿಂದ ಮತ್ತಷ್ಟು ಭಯ ಪಡುವಂತಾಗಿದೆ ಎನ್ನುತ್ತಾರೆ ಇಲ್ಲಿನ ಮೀನುಗಾರರು.

ಇಂದು 15 ಬೋಟುಗಳಿಗೆ 80 ಟನ್ ಗೂ ಅಧಿಕ ಕಾರ್ಗಿಲ್ ಮೀನುಗಳು ಬಲೆಗೆ ಬಿದ್ದಿವೆ. ಈಗಾಗಲೇ ಸಮುದ್ರದಲ್ಲಿ ಮತ್ಸ್ಯ ಕ್ಷಾಮ ಹೆಚ್ಚಾಗಿದ್ದು ಮೀನು ಹಿಡಿಯಲು ತೆರಳಿದವರು ಸಾವಿರಾರು ರುಪಾಯಿಯ ಇಂಧನ ವ್ಯಯಿಸಿ ಬರಿ ಕೈಯಲ್ಲಿ ಹಿಂತಿರುಗಲಾಗದೇ ಇವುಗಳನ್ನು ಹೊತ್ತು ತರುತಿದ್ದಾರೆ.


ಇನ್ನು ಈ ಮೀನುಗಳನ್ನು ಈ ಭಾಗದಲ್ಲಿ ಯಾರೂ ತಿನ್ನುವುದಿಲ್ಲ ಹೀಗಾಗಿ ಫಿಷ್ ಮಿಲ್ ಗಳಿಗೆ ಇವುಗಳನ್ನು ಕಳುಹಿಸಬೇಕಿದ್ದು ಸ್ಥಳೀಯವಾಗಿ ಫಿಷ್ ಮಿಲ್ ಬಂದ್ ಆಗಿದ್ದರಿಂದ ನೆರೆಯ ಗೋವಾ ,ಮಹಾರಾಷ್ಟ್ರ ಹಾಗೂ ಪಕ್ಕದ ಜಿಲ್ಲೆಯ ಉಡುಪಿಗೆ ಕಳುಹಿಸಬೇಕಿದೆ.
ಇನ್ನು ಈ ಮೀನುಗಳನ್ನು ಬೇರೆ ಮೀನುಗಳ ಜೊತೆ ಸೇರಿಸಿದರೂ ವಿಪರೀತ ಕೆಟ್ಟ ವಾಸನೆ,ಕಪ್ಪು ಬಣ್ಣಕ್ಕೆ ತಿರುಗುವುದು ಉಳಿದ ಮೀನುಗಳ ರುಚಿ ,ಬಣ್ಣ ಕೆಡಿಸುತ್ತದೆ. ಹೀಗಾಗಿ ಪ್ರತ್ಯೇಕ ವಾಗಿ ಸಾಗಾಟ ಮಾಡಬೇಕಿದ್ದು ಸದ್ಯ ಇದರ ಬೆಲೆ ಕೆಜಿ ಒಂದಕ್ಕೆ 10₹ ರಿಂದ 15₹ ರುಪಾಯಿಗಳಷ್ಟಿದೆ.

ಚೀನಾದಲ್ಲಿ ಭರ್ಜರಿ ಬೇಡಿಕೆ!


ಭಾರತದಲ್ಲಿ ಈ ಮೀನುಗಳ ಸೇವನೆ ಮಾಡುವುದು ಅತ್ಯಲ್ಪ ಹೀಗಾಗಿ ಈ ಭಾಗದಲ್ಲಿ ಇದರ ಬೇಡಿಕೆ ಇರದ ಕಾರಣ ಇವುಗಳನ್ನು ಮೀನುಗಾರರು ಹಿಡಿಯುವುದಿಲ್ಲ,ಸಿಕ್ಕರೂ ಬಿಟ್ಟು ಬರುವುದುಂಟು ಆದರೇ ಮೀನೇ ಇಲ್ಲದಿದ್ದಾಗ ಬೇಡಿಕೆ ಇಲ್ಲದ ಈ ಮೀನುಗಳನ್ನು ಹೊತ್ತು ತರುತ್ತಾರೆ .
ಇನ್ನು ಈ ಮೀನುಗಳಿಗೆ ಚೀನಾದಲ್ಲಿ ಬೇಡಿಕೆ ಇದೆ ಹೀಗಾಗಿ ಫಿಷ್ ಮಿಲ್ ನಲ್ಲಿ ರಫ್ತು ಮಾಡುವ ಕಂಪನಿಗಳು ಈ ಮೀನಿನ ತಲೆಯನ್ನು ಕತ್ತರಿಸಿ ದೇಹದ ಭಾಗವನ್ನು ಮಾತ್ರ ಕೆ.ಜಿಗೆ 30₹ ನಿಂದ 50₹ ವರೆಗೆ ಬೇಡಿಕೆಗೆ ತಕ್ಕಂತೆ ರಫ್ತು ಮಾಡುತ್ತಾರೆ.

ಕಡಲ ವಾತಾವರಣ ಬದಲಾಗಿದೆ!

ಅರಬ್ಬಿ ಸಮುದ್ರದ ಒಳಗಿನ ವಾತಾವರಣ ಬದಲಾಗಿದೆ ಗಾಳಿ ಬೀಸುವ ದಿಕ್ಕು ಬದಲಾಗಿದೆ. ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಹಾಗೂ ಆಹಾರದ ಕೊರತೆ ನೀಗಿಸಿಕೊಳ್ಳಲು ಇವು ತಮ್ಮ ಸ್ಥಾನ ವನ್ನು ಬದಲಿಸುತ್ತದೆ.

ಆಫ್ರಿಕಾ, ಇಂಡೋನೇಷ್ಯ, ಶ್ರೀಲಂಕಾ ಹಾಗೂ ಭಾರತದ ಲಕ್ಷದ್ವೀಪ ,ತಮಿಳುನಾಡು,ಆಂದ್ರ ಗಳಲ್ಲಿ ಕಾಣಸಿಗುತ್ತವೆ‌.

ದಕ್ಷಿಣ ಸಮುದ್ರ ದಲ್ಲಿ ಹೆಚ್ಚಾಗಿ ವಾಸಿಸುವ ಇವು ಈಗ ವಾತಾವರಣ ಬದಲಾವಣೆಯಿಂದ ಉತ್ತರ ದಿಕ್ಕಿಗೆ ಬಂದಿವೆ.

ಇವು ಈ ಭಾಗದಲ್ಲಿ ಸಿಗುವ ತಾರ್ಲೆ,ಬಾಂಗಡೆ ಯಂತಹ ಮೀನುಗಳೇ ಆಹಾರವಾಗಿ ತಿನ್ನುತ್ತವೆ ಇದರಿಂದ ಈ ಭಾಗದಲ್ಲಿ ಮೀನುಗಳ ಸಂತತಿ ಕ್ಷೀಣಿಸುವ ಜೊತೆ ಮೀನುಗಾರರಿಗೂ ಸಮಸ್ಯೆ ಆಗಲಿದೆ ಆದರೇ ಇದು ನೈಸರ್ಗಿಕ ಕ್ರಿಯೆ ಅಷ್ಟೇ ಎಂದು ಕಾರವಾರದ ಕಡಲ ಜೀವಶಾಸ್ತ್ರ ವಿಭಾಗದ ಪ್ರೂ.ಜೆ.ಎಲ್.ರಾಥೋಡ್ ಅಭಿಪ್ರಾಯ ಪಟ್ಟಿದ್ದಾರೆ.

ಒಟ್ಟಿನಲ್ಲಿ ಅಪರೂಪದ ಕಾರ್ಗಿಲ್ ಮೀನು ಕಾರವಾರದ ಕಡಲಲ್ಲಿ ಕಾಣಿಸಿಕೊಳ್ಳುವ ಮೂಲಕ ಮೀನುಗಾರರಲ್ಲಿ ನಷ್ಟದ ಭಯ ಹುಟ್ಟಿಸಿದೆ.




Leave a Reply

Your email address will not be published. Required fields are marked *