ತುಂಬಿ ಹರಿದ ಕಾಳಿ-ಕದ್ರಾ ಜಲಾಶಯದಿಂದ ನೀರು ಬಿಡುಗಡೆ

995

ಕಾರವಾರ: ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯವು ಭರ್ತಿಯಾಗಿದ್ದು, ಶನಿವಾರ ಮಧ್ಯಾನ ಮೂರು ಕ್ರಸ್ಟ್‌ಗೇಟ್‌ಗಳ ಮೂಲಕ ಕಾಳಿ ನದಿಗೆ 5,500 ಕ್ಯುಸೆಕ್‌ಗಳಷ್ಟು ನೀರನ್ನು ಹರಿಸಲಾಯಿತು.
ನೀರು ಬಿಟ್ಟ ಹಿನ್ನಲೆಯಲ್ಲಿ ನದಿಪಾತ್ರದ ಜನರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ರಾಜ್ಯ ವಿದ್ಯುತ್ ನಿಗಮವು ಸೂಚನೆ ನೀಡಿದೆ.

ಕಾರವಾರದ ಕದ್ರಾ ಜಲಾಶಯವು ಹತ್ತು ಗೇಟ್ ಗಳನ್ನು ಹೊಂದಿದ್ದು ,34.50 ಮೀಟರ್ ಗರಿಷ್ಠ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಇಂದಿಗೆ 31.50 ಮೀಟರ್ ನೀರು ಸಂಗ್ರಹವಿತ್ತು.

ಜಲಾಶಯದಲ್ಲಿ ಗರಿಷ್ಠ 32.50 ಮೀಟರ್ ನೀರು ಸಂಗ್ರಹಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಅನುಮತಿ ನೀಡಿದೆ. 2019ರಲ್ಲಿ ಉಂಟಾದ ಪ್ರವಾಹದ ಬಳಿಕ ಕ್ರಮವನ್ನು ಅನುಸರಿಸಲಾಗುತ್ತಿದೆ.

ಜಲಾಶಯದ ವಿಡಿಯೊ ನೋಡಲು ಕೆಳಗಿನ ಲಿಂಕ್ ಬಳಸಿ:-

ಇದು ಕಾಳಿ ನದಿಯ ಕೊನೆಯ ಜಲಾಶಯವಾಗಿದ್ದು, ನದಿಯ ಆರಂಭದಲ್ಲೇ ಇರುವ ‘ಸೂಪಾ’ ರಾಜ್ಯದ ಅತಿದೊಡ್ಡ ಜಲಾಶಯಗಳಲ್ಲಿ ಒಂದಾಗಿದೆ. ಜಲಾಶಯದ ಸುತ್ತಮುತ್ತ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಸೂಪಾಕ್ಕೂ ಒಳಹರಿವು ಹೆಚ್ಚಾಗಿದೆ.

ಈ ವರ್ಷ ಕೋವಿಡ್ ಲಾಕ್‌ಡೌನ್ ಕಾರಣದಿಂದ ಕಡು ಬೇಸಿಗೆಯಲ್ಲೂ ಜಲವಿದ್ಯುತ್‌ಗೆ ಬೇಡಿಕೆ ಕುಸಿದಿತ್ತು. ಸಾಮಾನ್ಯವಾಗಿ ಏಪ್ರಿಲ್ – ಮೇ ತಿಂಗಳಲ್ಲಿ 250ರಿಂದ 260 ಮಿಲಿಯನ್ ಯೂನಿಟ್‌ಗಳಷ್ಟು (ಎಂ.ಯು) ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಈ ವರ್ಷ ಬೇಡಿಕೆಯು 200 ಮಿಲಿಯನ್ ಯೂನಿಟ್‌ಗಿಂತಲೂ ಕಡಿಮೆಯಾಗಿತ್ತು. ಹಾಗಾಗಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ನೀರಿನ ಸಂಗ್ರಹ ಹೆಚ್ಚಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕದ್ರಾ ಜಲಾಶಯದ ಗೇಟ್‌ಗಳನ್ನು ತೆರೆಯಲಾಗಿದೆ.

ಈ ಬಗ್ಗೆ ಕನ್ನಡವಾಣಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನಮ್ಮ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಭಾರಿ ಮಳೆಯಾಗುವುದಿಲ್ಲ. ಆದರೆ, ಈ ಬಾರಿ ಚಂಡಮಾರುತದಿಂದಾಗಿ ಉತ್ತಮ ಮಳೆಯಾಗಿದೆ. ಹಾಗಾಗಿ ಮಳೆಗಾಲದ ಆರಂಭದಲ್ಲೇ ಅಲ್ಲಲ್ಲಿ ನೆರೆಯ ಸಾಧ್ಯತೆಗಳನ್ನು ಗುರುತಿಸಲಾಗಿದೆ. ಅದನ್ನು ಎದುರಿಸಲು ಸಿದ್ಧತೆ ಮಾಡಲಾಗಿದೆ’ ಹೊನ್ನಾವರ,ಸಿದ್ದಾಪುರ,ಶಿರಸಿ ಭಾಗದಲ್ಲಿ ಗುಡ್ಡ ಕುಸಿಯುವ ಸಾಧ್ಯತೆಗಳಿದ್ದು ಆಯಾ ಭಾಗದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಇದಕ್ಕಾಗಿ ಸಿಬ್ಬಂದಿ ಸಹ ನೇಮಿಸಲಾಗಿದೆ ಎಂದರು.

ಗುಂಡಳಬಾಳದಲ್ಲಿ ಕಾಳಜಿ ಕೇಂದ್ರ ತೆರೆದ ಜಿಲ್ಲಾಡಳಿತ.

ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತಿದ್ದು ಗುಂಡಳಬಾಳದಲ್ಲಿ ಐದು ಮನೆಗಳು ಜಲಾವೃತವಾಗಿದೆ. ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಾಳಜಿ ಕೇಂದ್ರವನ್ನು ಗುಂಡಳಬಾಳ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ತೆರೆಯಲಾಗಿದೆ.
ಇನ್ನು ಸಿದ್ದಾಪುರ ಗಡಿ ಭಾಗದಲ್ಲಿ ವರದಾ ನದಿ ಸಹ ದುಮ್ಮಿಕ್ಕಿ ಹರಿಯುತಿದ್ದು ಅರೆಂದೂರು ಗ್ರಾಮದ ಭಾಗದಲ್ಲಿ 200 ಕ್ಕೂ ಹೆಚ್ಚು ಕೃಷಿ ಭೂಮಿ ಜಲಾವೃತವಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ