ಕಾರವಾರದಲ್ಲಿ ಉದ್ದ ಕಣ್ಣಿನ ಅಪರೂಪದ ಏಡಿ ಪತ್ತೆ.

586

ಕಾರವಾರ :- ಕಾರವಾರ ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಉದ್ದ ಕಣ್ಣಿನ ಈಜುವ ಏಡಿಯೊಂದು ಪತ್ತೆಯಾಗಿದೆ. ಮಾಜಾಳಿಯ ಮೀನುಗಾರ ಧನೇಶ್ ಸೈಲ್ ಎನ್ನುವವರ ಪಟ್ಟೆ ಬಲೆಗೆ ಈ ಏಡಿ ದೊರಕಿದೆ.

ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಈ ಏಡಿಯ ಕುರಿತಾದ ಮಾಹಿತಿ ಸಂಗ್ರಹಿಸಿದ್ದು ,ತನ್ನ ಶರೀರದ ಗಾತ್ರದಷ್ಟೇ ಉದ್ದವಾದ ಕಣ್ಣನ್ನು ಹೊಂದಿರುವ ಈ ಏಡಿಗೆ ಜಪಾನ್ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಈ ಏಡಿಗಳನ್ನ ಅಲ್ಲಿ ಆಹಾರಕ್ಕಾಗಿ ಬಳಸುವ ಕಾರಣ ಬಹು ಮೌಲ್ಯವುಳ್ಳದ್ದೂ ಆಗಿದೆ.

ಉಷ್ಣವಲಯ,ಸಮಶೀತೋಷ್ಣವಲಯದ ಸಾಗರದಲ್ಲಿ ಇವುಗಳು ಕಂಡುಬರುತ್ತವೆ. ಕೆಂಪುಸಮುದ್ರ, ಹವಾಯಿ ದ್ವೀಪ, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಏಷ್ಯಾ ದ್ವೀಪ ರಾಷ್ಟ್ರಗಳಲ್ಲಿ ಅತೀ ಹೆಚ್ಚಾಗಿ ಇವು ದೊರೆಯುತ್ತವೆ.ಭಾರತದ ಪೂರ್ವ ಕರಾವಳಿಯಲ್ಲೂ ಇವುಗಳು ಸಿಕ್ಕದಾಖಲೆಗಳಿವೆ. ಆದರೆ ಪಶ್ಚಿಮ ಕರಾವಳಿಯಲ್ಲಿ ಬಹಳ ಅಪರೂಪ.

ಈಜಲು ಕಾಲಿನ ವ್ಯವಸ್ಥೆಗಳನ್ನು ಹೊಂದಿರುವ ಈ ಏಡಿ ಆರಾಮವಾಗಿ ಸಾಗರದಲ್ಲಿ ಈಜಬಲ್ಲದು. ಸಮುದ್ರದ ಮರಳಿನಲ್ಲಿ ಹೊಂಚು ಹಾಕಿ ಕುಳಿತು ಉದ್ದನೆಯ ದುರ್ಬಿನ್ ಮಾದರಿಯ ಕಣ್ಣಿನ ಮೂಲಕ ತನ್ನ ಬೇಟೆಯನ್ನು ಗುರುತಿಸಿ ಬೇಟೆಯಾಡುತ್ತವೆ. ಇದರ ವೈಜ್ಞಾನಿಕ ಹೆಸರು ಸೂಡೊಪೊತಲಾಮಸ್ ವಿಜಿಲ್ ಎಂದು ಎಂದು ಡಾ. ಶಿವಕುಮಾರ್ ಹರಗಿ ಮಾಹಿತಿ ನೀಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ