ಮಾಸ್ಟರ್ ಹಿರಣ್ಣಯ್ಯ ವಿಧಿವಶ!

138

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ(84) ಅವರು ಗುರುವಾರ ನಗರದ ಉತ್ತರಹಳ್ಳಿಯ ಬಿಜಿಎಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಮಾಸ್ಟರ್ ಹಿರಣಯ್ಯ ಅವರು 1934 ಫೆ.15ರಂದು ಮೈಸೂರಿನಲ್ಲಿ ಜನಿಸಿದರು. ಇವರು ಕೆ.ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಯ ಒಬ್ಬನೇ ಮಗ. ಹಿರಣ್ಣಯ್ಯ ಅವರ ಮೂಲ ಹೆಸರು ನರಸಿಂಹಮೂರ್ತಿ. ಇಂಟರ್ಮೀಡಿಯಟ್ವರೆಗೆ ಓದಿದ್ದ ಹಿರಣ್ಣಯ್ಯ ಅವರು 1952ರಲ್ಲಿ ತಂದೆಯೊಂದಿಗೆ ಸೇರಿ ಅವರಿಂದಲೇ ರಂಗಶಿಕ್ಷಣ ಕಲಿಯಲು ಪ್ರಾರಂಭಿಸಿದರು. ಬಾಲ್ಯದಲ್ಲಿರುವಾಗ ತಂದೆ ಜತೆ ಬದುಕನ್ನರಸಿ ಮದ್ರಾಸಿಗೆ ಹೋಗಿದ್ದರು. ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ಪರಿಣಿತರಾಗಿದ್ದರು. ಕನ್ನಡದ ಬಾಯಿಪಾಠ ಮತ್ತು ಸಂಸ್ಕೃತದ ಸ್ತೋತ್ರವನ್ನು ಕಲಿತಿದ್ದರು.

ನಟನೆಯನ್ನೇ ಬದುಕಾಗಿಸಿಕೊಂಡಿದ್ದರು

‘ಸಾಧ್ವಿ’, ‘ಮೈಸೂರು ಪತ್ರಿಕೆ’ಯನ್ನು ಮನೆ ಮನೆಗೆ ಹಂಚಿ ಸಂಪಾದನೆ ಮಾಡುತ್ತಿದ್ದ ಹಿರಣ್ಣಯ್ಯ ಅವರು 1940ರಲ್ಲಿ ತಂದೆ ರಚಿಸಿ, ನಿರ್ದೇಶಿಸಿದ ‘ವಾಣಿ’ ಚಿತ್ರದಲ್ಲಿ ನಟನೆ ಮಾಡಲು ಆರಂಭಿಸಿದರು. 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರ ಮಾಡಲು ಹೋಗಿ ಸೋತಿದ್ದರು. ಛಲ ಬಿಡದೆ ಕಾಲೇಜಿನಲ್ಲಿ ಸಂಘ ಕಟ್ಟಿ ‘ಆಗ್ರಹ’ ಎಂಬ ನಾಟಕ ಪ್ರದರ್ಶನ ಮಾಡುತ್ತಿದ್ದರು. ಅದ್ಭುತ ಅಭಿನಯದಿಂದ ನಾಟಕದಲ್ಲಿ ಗೆದ್ದಿದ್ದ ಮಾಸ್ಟರ್ ಹಿರಣ್ಣಯ್ಯ, 1953ರಲ್ಲಿ ತಂದೆ ಸತ್ತಾಗ ‘ಕೆ. ಹಿರಣ್ಣಯ್ಯ ಮಿತ್ರ ಮಂಡಲಿ’ ಸ್ಥಾಪನೆ ಮಾಡಿ ತಾವೇ ವಹಿಸಿಕೊಂಡು ನಿರಂತರವಾಗಿ ಮುನ್ನಡೆಸಿದರು. ನಾಟಕ ಮಂಡಲಿಯಿಂದ ಲಾಭಕ್ಕಿಂತ ನಷ್ಟವೇ ಅನುಭವಿಸಿ ಮುಚ್ಚುವ ಸಂದರ್ಭ ಬಂದೊದಗಿದಾಗ ಮಿತ್ರನ ನೆರವಿನಿಂದ ಮಂಡಲಿಯನ್ನು ಪುನಾರಂಭಿಸಿ ‘ಲಂಚಾವತಾರ’ ನಾಟಕದ ಮೂಲಕ ರಂಗ ಪ್ರಯೋಗ ಮಾಡಿ ಜನಪ್ರಿಯರಾದರು.

ಜನಪ್ರಿಯ ನಾಟಕಗಳು

ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಎಂದೇ ಖ್ಯಾತರಾಗಿದ್ದ ಅವರು ‘ಲಂಚಾವತಾರ’ ನಾಟಕದ ಮೂಲಕ ಪ್ರಸಿದ್ಧರಾಗಿದ್ದ ಅವರು ನಾಟಕ ಸೇರಿದಂತೆ ಹಲವು ಚಿತ್ರಗಳಲ್ಲಿ ಅದ್ಭುತ ನಟನೆ ಮಾಡಿದ್ದಾರೆ. ಲಂಚಾವತಾರ, ಮಕ್ಮಲ್ ಟೋಪಿ, ಕಪಿಮುಷ್ಟಿ, ದೇವದಾಸಿ, ನಡುಬೀದಿ ನಾರಾಯಣ, ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ, ಲಾಟರಿ ಸರ್ಕಾರ ಹಾಗೂ ಸನ್ಯಾಸಿ ಸಂಸಾರ ಸೇರಿ ಹಲವು ನಾಟಕದಲ್ಲಿ ಅಭಿನಯಿಸಿದ್ದಾರೆ.

ಸಂದ ಪ್ರಶಸ್ತಿಗಳು

ಕಲೆಯಲ್ಲಿ ಸಲ್ಲಿಸಿದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಹಾಗೂ ನವರತ್ನ ರಾಂ ಪ್ರಶಸ್ತಿಗೆ ಹಿರಣ್ಣಯ್ಯ ಅವರು ಭಾಜನರಾಗಿದ್ದರು.

ಅವರ ನಾಟಕಗಳಲ್ಲಿ ಒಂದಾದ ದೇವದಾಸಿ ಚಲನಚಿತ್ರವಾಗಿದ್ದು, ಅದರಲ್ಲಿ ಹಿರಣ್ಣಯ್ಯನವರು ಪಾತ್ರ ವಹಿಸಿದ್ದರು. ಸಂಪ್ರದಾಯ, ಆನಂದ ಸಾಗರ ಚಿತ್ರಗಳಲ್ಲೂ ಅಭಿನಯಿಸಿರುವ ಅವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪುಣ್ಯಕೋಟಿ, ಅಮೃತವಾಹಿನಿ ಧಾರಾವಾಹಿಗಳಲ್ಲಿಯೂ ನಟನೆ ಮಾಡಿದ್ದಾರೆ.

ಕನ್ನಡ ರಂಗಭೂಮಿ ಕಂಡ ಮಹಾನ್ ಕಲಾವಿದರಾಗಿದ್ದ ಹಿರಣ್ಣಯ್ಯ ಅವರು ತಮ್ಮ ವಿಡಂಬನಾತ್ಮಕ ಮಾತಿನ ವೈಕರಿ, ಅಭಿನಯ ಹಾಗೂ ನಿರೂಪಣೆಗಳಿಂದ ಕನ್ನಡ ನಾಡಿನಲ್ಲಿ ಪ್ರಸಿದ್ಧಿ ಪಡೆದಿದ್ದರು.

ಗಣ್ಯರ ಕಂಬನಿ

ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಚಲನಚಿತ್ರ ನಟ ದರ್ಶನ್,ಸುದೀಪ್ ,ಮಾಸ್ಟರ್‌ ಆನಂದ್ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು ಕಂಬನಿ ಮಿಡಿದಿದ್ದಾರೆ.
Leave a Reply

Your email address will not be published. Required fields are marked *

error: Content is protected !!