BREAKING NEWS
Search

ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕ ಅಳವಡಿಕೆಗೆ ಕ್ರಮ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

90

ಬೆಂಗಳೂರು:- ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕಗಳನ್ನು ಅಳವಡಿಸಿ, ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಕಿಮ್ಸ್ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಸಚಿವ ಡಾ.ಕೆ.ಸುಧಾಕರ್, ಆಕ್ಸಿಜನ್ ಸೇರಿದಂತೆ ರೋಗಿಗಳ ಚಿಕಿತ್ಸೆಗೆ ಲಭ್ಯವಿರುವ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.

“ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆಕ್ಸಿಜನ್ ಗೆ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಪೂರೈಕೆ ಮಾಡಲು ಪೂರೈಕೆದಾರರಿಗೆ ಸಾಧ್ಯವಾಗಿಲ್ಲ. ಕಿಮ್ಸ್ ಆಸ್ಪತ್ರೆಯಲ್ಲೂ ಆಕ್ಸಿಜನ್ ಕೊರತೆ ಉಂಟಾಗಿದ್ದು, ಕೂಡಲೇ ರೋಗಿಗಳನ್ನು ಬೌರಿಂಗ್ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನು ಎಲ್ಲ ಸರ್ಕಾರಿ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಹೊಸ ಆಕ್ಸಿಜನ್ ಘಟಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದರು.

“ಆಕ್ಸಿಜನ್ ಪೂರೈಕೆ ಮಾಡುವ ಖಾಸಗಿ ಕಂಪನಿ ಜೊತೆ ಕಿಮ್ಸ್ ಆಸ್ಪತ್ರೆ ಒಪ್ಪಂದ ಮಾಡಿಕೊಂಡು ಅಗತ್ಯಕ್ಕೆ ತಕ್ಕಷ್ಟು ಆಕ್ಸಿಜನ್ ಸರಬರಾಜು ಮಾಡಲು ಸೂಚಿಸಲಾಗಿದೆ. ಈ ಕುರಿತು ಕೈಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೂ ಚರ್ಚೆ ಮಾಡಿದ್ದೇನೆ. ಬೇರೆ ಆಸ್ಪತ್ರೆಗಳಲ್ಲಿ ಹೊಸ ಆಕ್ಸಿಜನ್ ಘಟಕಗಳನ್ನು ಅಳವಡಿಸಲಾಗುವುದು” ಎಂದರು.

“ಲಿಕ್ವಿಡ್ ಆಕ್ಸಿಜನ್ ಘಟಕಗಳಿಂದ ಸುಲಭವಾಗಿ ಆಕ್ಸಿಜನ್ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗಾಗಲೇ ಮನವಿ ಮಾಡಿದ್ದೇನೆ. ಗುಜರಾತ್ ನಲ್ಲಿ ಹೆಚ್ಚು ಘಟಕಗಳಿದ್ದು, ಅಲ್ಲಿಂದ ಲಿಕ್ವಿಡ್ ಆಕ್ಸಿಜನ್ ದೊರೆಯುವಂತೆ ವ್ಯವಸ್ಥೆ ಮಾಡಲು ಕೋರಿದ್ದೇನೆ. ರಾಜ್ಯದಲ್ಲೀಗ ಆಕ್ಸಿಜನ್ ಬೇಡಿಕೆ ನಾಲ್ಕರಿಂದ ಐದು ಪಟ್ಟು ಹೆಚ್ಚಿದೆ” ಎಂದು ವಿವರಿಸಿದರು.

ಸಚಿವರು ಹೇಳಿದ್ದಿಷ್ಟು:-

ಆಕ್ಸಿಜನ್ ಕೊರತೆಯನ್ನು ಲೋಪ ಎನ್ನಲು ಸಾಧ್ಯವಿಲ್ಲ. ಬೇಡಿಕೆ ಹೆಚ್ಚಾಗಿರುವುದರಿಂದ ಪೂರೈಕೆದಾರರಿಗೆ ಸರಬರಾಜು ಮಾಡಲು ಕಷ್ಟವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಬೇಕಾಗಬಹುದು ಎಂದು ಯಾರೂ ಅಂದಾಜು ಮಾಡಿರಲಿಲ್ಲ.

ಸದ್ಯಕ್ಕೆ 2,400 ಕ್ಯೂಬಿಕ್ ಮೀಟರ್ ನಷ್ಟು ಆಕ್ಸಿಜನ್ ಘಟಕ ಇದೆ. ಆದರೆ ಅರ್ಧ ಟ್ಯಾಂಕ್ ಮಾತ್ರ ಆಕ್ಸಿಜನ್ ಸರಬರಾಜಾಗುತ್ತಿದೆ. ಲಿಕ್ವಿಡ್ ಘಟಕಗಳನ್ನು ಬೇರೆ ಕಡೆಯಿಂದ ತಂದು ಇಲ್ಲಿನ ಆಸ್ಪತ್ರೆಗಳಲ್ಲಿ ಅಳವಡಿಸಬೇಕಿದೆ.

ಬೇರೆ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿಲ್ಲ ಹಾಗೂ ಆಕ್ಸಿಜನ್ ಬೇಡಿಕೆ ಅಷ್ಟರಮಟ್ಟಿಗೆ ಇಲ್ಲ.

ಬೇಡಿಕೆ ಜಾಸ್ತಿಯಾದಂತೆ ದರ ಕೂಡ ಹೆಚ್ಚಾಗುತ್ತದೆ. ದರ ನಿಯಂತ್ರಣ ಮಾಡಲು ಅವಕಾಶವಿದ್ದರೆ ಅದನ್ನೂ ಮಾಡುತ್ತೇವೆ. ಬೇರೆ ರಾಜ್ಯದಿಂದ ತರಿಸುವ ಆಕ್ಸಿಜನ್ ನ ದರ ನಿಯಂತ್ರಣ ಸಾಧ್ಯವಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
Leave a Reply

Your email address will not be published. Required fields are marked *