BREAKING NEWS
Search

ಕುಂಟುತ್ತಾ ಸಾಗಿದ ಶಿರಸಿ-ಕುಮಟಾ ಹೆದ್ದಾರಿ ಅಗಲೀಕರಣ ಕಾಮಗಾರಿ-ಪರಿಸರವಾದಿಗಳ ವಿರುದ್ಧ ಆಕ್ರೋಶ ಹೆದ್ದಾರಿ ಬಂದ್ ಮಾಡಿದ 25 ಕ್ಕೂ ಹೆಚ್ಚು ಸಂಘಟನೆಗಳು!

449

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ರಾಜ್ಯ ಹೆದ್ದಾರಿ 69 ರ ವಿಸ್ತರಣಾ ಕಾಮಗಾರಿ ವಿಳಂಬ ಹಿನ್ನಲೆಯಲ್ಲಿ ಇಂದು ಶಿರಸಿ-ಕುಮಟಾ ಹೆದ್ದಾರಿಯನ್ನು ಸಮಗ್ರ ಅಭಿವೃದ್ಧಿ ವೇದಿಕೆ ನೇತ್ರತ್ವದಲ್ಲಿ 25 ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಮಾಡಿ ಪ್ರತಿಭಟನೆ ನೆಡೆಸಿದರು.

ಕಳೆದ ಒಂದು ವರ್ಷದಿಂದ ಹೆದ್ದಾರಿ ಅಗಲೀಕರಣ ಕಾಮಗಾರಿ ಕುಂಟುತ್ತಾ ಸಾಗಿದ್ದು ಪರಿಸರ ವಾದಿಗಳು ಮರಗಳ ಕಡಿತಲೆಗೆ ವಿರೋಧ ವ್ಯಕ್ತಪಡಿಸಿ ಕೋರ್ಟ ಮೆಟ್ಟಿಲೇರಿದ್ದರು. ಈ ಹಿನ್ನಲೆಯಲ್ಲಿ ಕಾಮಗಾರಿ ಕೆಲಸ ಸಹ ವಿಳಂಬವಾಗಿದ್ದು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.ಈ ಹಿನ್ನಲೆಯಲ್ಲಿ ಇಂದು ಶಿರಸಿಯ ವಿವಿಧ ಸಂಘಟನೆಗಳು ರಸ್ತೆ ತಡೆ ನೆಡೆಸಿ ಗುತ್ತಿಗೆ ಪಡೆದ ಕಂಪನಿ ಹಾಗೂ ಪರಿಸರವಾದಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.ರಸ್ತೆ ಬಂದ್ ಹಿನ್ನಲೆಯಲ್ಲಿ ಕೆಲವು ಘಂಟೆಗಳ ಕಾಲ ಶಿರಸಿ-ಕುಮಟಾ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು.

ವಿಳಂಬಕ್ಕೆ ಕಾರಣ ಏನು? ಪರಿಸರವಾದಿಗಳ ವಿರುದ್ಧ ಪ್ರತಿಭಟನೆ ಏಕೆ?

ಶಿರಸಿ- ಕುಮಟಾ ರಾಜ್ಯ ಹೆದ್ದಾರಿ 69, ಈಗ ಭಾರತಮಾಲಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗುತ್ತಿದೆ. ಈ ಹಿಂದಿದ್ದ 10 ಮೀ. ಅಗಲದ ರಸ್ತೆ ಇನ್ನು 18 ಮೀಟರ್‌ಗೆ ವಿಸ್ತಾರಗೊಳ್ಳುತಿದ್ದು ಕಾಮಗಾರಿ ಪ್ರಾರಂಭವಾಗಿದೆ.

ಈ ಕಾರಣದಿಂದ ಶಿರಸಿ-ಕುಮಟಾದ ರಾಜ್ಯ ಹೆದ್ದಾರಿ 69 ರಲ್ಲಿ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಗಟ್ಟ ಪ್ರದೇಶವಾದ್ದರಿಂದ ಅಗಲೀಕರಣ ಸಂದರ್ಭದಲ್ಲಿ
ಶಿರಸಿ- ಕುಮಟಾ ರಸ್ತೆಯ ಇಕ್ಕೆಲಗಳಲ್ಲಿರುವ 9 ಸಾವಿರಕ್ಕೂ ಅಧಿಕ ಮರಗಳನ್ನು ಕಡಿತ ಮಾಡಲು ಸರ್ಕಾರದಿಂದ ಅನುಮತಿಯೂ ಲಭಿಸಿದ್ದು, ಕಟಾವಿಗಾಗಿ ಮರಗಳಿಗೆ ಸಂಖ್ಯೆ ನಮೂದಿಸಿ ಕಡಿತಲೆ ಮಾಡಲಾಗುತ್ತಿದೆ.

ಪರ -ವಿರೋಧ

ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಡುವ ಸಲುವಾಗಿ ಪರ ವಿರೋಧಗಳ ಚರ್ಚೆ ಕೂಡ ಹಿಂದೆ ನಡೆದಿದೆ. ಮುಖ್ಯವಾಗಿ ಇಲ್ಲಿಯ ಅರಣ್ಯ ಸಂಪತ್ತು ನಾಶವಾಗುವ ಬಗ್ಗೆ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಹೆದ್ದಾರಿ ಪ್ರಾಧಿಕಾರಕ್ಕೆ ರಸ್ತೆ ವಿಸ್ತರಣೆ, ನಿರ್ಮಾಣಕ್ಕೆ ಒಪ್ಪಿಗೆ ಲಭಿಸಿತ್ತು.

ಶಿರಸಿ ತಾಲೂಕಿನ ಪ್ರದೇಶದ ರಾಜ್ಯ ಹೆದ್ದಾರಿ ರಸ್ತೆ ಯಲ್ಲಿ ಮೊದಲು ವಿಸ್ತರಣೆ ಕಾಮಗಾರಿ ಪ್ರಾರಂಭಿಸಲಾಗಿದೆ. ಈ ರಸ್ತೆ ಎರಡು ಅರಣ್ಯ ಉಪ ವಿಭಾಗದ ಮೂಲಕ ಹಾದು ಹೋಗಿದೆ. ಶಿರಸಿಯಿಂದ ಕೆರೆ ಹನುಮಂತಿವರೆಗಿನ 8 ಕಿ.ಮೀ. ಪ್ರದೇಶ ಶಿರಸಿ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿದ್ದರೆ, ಕೆರೆ ಹನುಮಂತಿಯಿಂದ ದೇವಿಮನೆ ಘಾಟ್‌ ಪ್ರದೇಶದವರೆಗಿನ 24 ಕಿ.ಮೀ. ಜಾನ್ಮನೆ ಅರಣ್ಯ ವಿಭಾಗಕ್ಕೆ ಒಳಪಡುತ್ತದೆ.

ಹೀಗಾಗಿ ಈ ಪ್ರದೇಶದಲ್ಲಿ ಹೆಚ್ಚು ಅರಣ್ಯ ಇರುವುದರಿಂದ ಅಮೂಲ್ಯ ಮರಗಳ ನಾಶ ಹಾಗೂ ವನ್ಯಜೀವಿಗಳಿಗೆ ತೊಂದರೆ ಆಗುತ್ತದೆ ಎಂಬುದು ಪರಿಸರವಾದಿಗಳ ವಿರೋಧ . ಆದರೇ ಚಿಕ್ಕ ರಸ್ತೆಯಾದ್ದರಿಂದ ಜನರಿಗೆ ಸಂಚರಿಸಲು ದೊಡ್ಡ ಸಮಸ್ಯೆ ಆಗುತ್ತದೆ.ಅಭಿವೃದ್ಧಿ ದೃಷ್ಟಿಯಿಂದ ಈ ರಸ್ತೆ ಅಗಲೀಕರಣ ಆಗಬೇಕು ಎಂಬುದು ಸ್ತಳೀಯವಾಗಿ ಅಭಿವೃದ್ಧಿ ಪರ ನಿಂತವರ ಹೋರಾಟವಾಗಿದೆ.
ಈ ನಡುವೆ ಪರಿಸರವಾದಿಗಳು ಹಾಗೂ ಬೆಂಗಳೂರು ಮೂಲದ ಎನ್.ಜಿ.ಓ ಸಂಸ್ಥೆಯೊಂದು ಹೈಕೋರ್ಟ ಮೆಟ್ಟಿಲೇರಿದ್ದರು.ಆದರೇ ಸೂಕ್ತ ದಾಖಲೆ ನೀಡದ ಕಾರಣ ಕೋರ್ಟ ಈ ಪ್ರಕರಣವನ್ನು ವಜಾ ಮಾಡಿತ್ತು.ಆದರೇ ಇದೀಗ ಅಗಲೀಕರಣ ಪ್ರಶ್ನಿಸಿ ಸುಪ್ರೀಂ ಕೋರ್ಟ ಗೆ ತೆರಳಲು ಪರಿಸರವಾದಿಗಳು ಸಿದ್ದತೆ ನಡೆಸಿದ್ದಾರೆ.

ಅರಣ್ಯ ಇಲಾಖೆ ಮರಗಳ ಗಾತ್ರದ ಆಧಾರದಲ್ಲಿ 7 ಹಂತದಲ್ಲಿ ಪಟ್ಟಿಮಾಡಿದೆ. ಶಿರಸಿ ತಾಲೂಕಿನಲ್ಲಿ ಒಟ್ಟು 5702 ಮರಗಳನ್ನು ಗುರುತಿಸಲಾಗಿದೆ. 30 ಸೆಂ.ಮೀ.ಗಿಂತ ಕಡಿಮೆ ಸುತ್ತಳತೆಯ 2139 ಮರಗಳು, 31ರಿಂದ 60 ಸೆಂ.ಮೀ. ಅಳತೆಯ 2427 ಮರಗಳು, 61ರಿಂದ 90 ಸೆಂ.ಮೀ. ವ್ಯಾಪ್ತಿಯ 718 ಮರಗಳು, 91ರಿಂದ 120 ಸೆಂ.ಮೀ. ವ್ಯಾಪ್ತಿಯ 253 ಮರಗಳು, 121ರಿಂದ 153 ಸೆಂ.ಮೀ. ಸುತ್ತಳತೆಯ 93 ಮರಗಳು ಮತ್ತು 150 ಸೆಂ.ಮೀ.ಗಿಂತ ಅಧಿಕ ಸುತ್ತಳತೆ ಹೊಂದಿದ 72 ಮರಗಳನ್ನು ಕಟಾವಿಗೆ ಗುರುತಿಸಲಾಗಿದೆ. ಇನ್ನು ಇದೇ ರೀತಿ ಜಾನ್ಮನೆ ಅರಣ್ಯ ವಿಭಾಗದಲ್ಲಿದ್ದು, ಇಲ್ಲಿ ಒಟ್ಟು 4 ಸಾವಿರ ಮರಗಳನ್ನು ಗುರುತು ಹಾಕಿ ಕಟಾವು ಮಾಡಲಾಗುತ್ತಿದೆ.

ಗುತ್ತಿಗೆ ಪಡೆದ ಕಂಪನಗೆ ಕಿರಿಕಿರಿ -ಕುಂಟುತ್ತಾ ಸಾಗಿದ ಕಾಮಗಾರಿ.

ಶಿರಸಿ-ಕುಮಟಾ ಹೆದ್ದಾರಿ ಅಗಲಿಕರಣ ಕಾಮಗಾರಿಯನ್ನು ಆರ್.ಎನ್.ಎಸ್. ಹಾಗೂ ಗಾಯಿತ್ರಿ ಕನ್ ಸ್ಟ್ರಕ್ಷನ್ ಗುತ್ತಿಗೆ ಕಂಪನಿ ಮಾಡುತ್ತಿದೆ. ಮಳೆಯ ಅಬ್ಬರ ಹಾಗೂ ಹಲವು ತಾಂತ್ರಿಕ ಕಾರಣದಿಂದ ಕಾಮಗಾರಿ ಕುಂಟುತ್ತಾ ಸಾಗಿತ್ತು. ಇದಲ್ಲದೆ ಮಳೆಯ ಕಾರಣದಿಂದ ಕೆಲವು ದಿನಗಳ ವರೆಗೆ ಕಾಮಗಾರಿಯನ್ನು ಸ್ಥಗಿತ ಮಾಡಲಾಗಿತ್ತು. ಇದರಿಂದ ಪ್ರತಿ ದಿನ ಓಡಾಡುವ ಪ್ರಯಾಣಿಕರಿಗೆ ತೊಂದರೆ ಆಗುತಿತ್ತು. ಸರಕು ಸಾಗಾಣಿಕೆಗೂ ಕಂಟಕವಾಗಿದ್ದು ರಸ್ತೆಯಲ್ಲಿ ಸಂಚರಿಸುವುದೇ ತ್ರಾಸದಾಯಕ ಸಾಹಸವಾಗಿತ್ತು. ಹೀಗಾಗಿ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣ ಮಾಡಿ ಜನರಿಗೆ ಓಡಾಡಲು ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಇನ್ನು ಶೀಘ್ರ ಕಾಮಗಾರಿಯನ್ನು ಪೂರ್ಣ ಗೊಳಿಸುವ ಭರವಸೆ ನೀಡಿರುವ ಗುತ್ತಿಗೆ ಕಂಪನಿ ಮಾರ್ಚ ಒಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ