ಮುಂಡಗೋಡು ಭಾಗದಲ್ಲಿ ಹೆಚ್ಚಾಯ್ತು ಕರಡಿದಾಳಿ-ಎಮ್ಮೆ ಮೇಯಿಸಲು ಹೋದವನಿಗೆ ಪ್ರಾಣಕ್ಕೆ ಬಂತು ಸಂಚುಕಾರ!

439

ಮುಂಡಗೋಡು:- ಎಮ್ಮೆಗಳನ್ನು ಮೇಯಿಸಲು ಹೋಗಿದ್ದ ಗೌಳಿ ಜನಾಂಗಕ್ಕೆ ಸೇರಿದ ವ್ಯಕ್ತಿಯ ಮೇಲೆ ಎರಡು ಕರಡಿಗಳು ಒಮ್ಮೆಲೇ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದ ಡ್ಯಾಮ್ ಭಾಗದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ನ್ಯಾಸರ್ಗಿ ಗ್ರಾಮದ ಡ್ಯಾಮ್ ಬಳಿ ಇರುವ ಗೌಳಿ ದಡ್ಡಿಯ ರಾಮು ಬಾಗು ಎಡಿಗೆ (೪೬) ಕರಡಿ ದಾಳಿಗೆ ಒಳಗಾದ ವ್ಯಕ್ತಿಯಾಗಿದ್ದು, ಆತನನ್ನು ಹುಬ್ಬಳ್ಳಿಯ ಕಿಮ್ಸಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ತನ್ನ ಎಮ್ಮೆಗಳನ್ನು ಮೇಯಿಸಲು ಕಾಡಿಗೆ ಹೋದ ಸಂದರ್ಭದಲ್ಲಿ 2 ಮರಿಗಳನ್ನು ಹೊಂದಿರುವ ಎರಡು ಕರಡಿಗಳು ಈತನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈತ ಚೀರಾಡಿ ಕೂಗುತ್ತಾ ಮರವೇರಲು ಯತ್ನಿಸಿದ್ದಾನೆ. ಆದರೆ ಕರಡಿ ಆತನ ಕಾಲನ್ನು ಕಚ್ಚಿ ಎಳೆದು ಕೆಳಗೆ ಹಾಕಿ ದಾಳಿ ನಡೆಸಿದೆ. ಆತನ ಬಲಗೈಯ ಮಾಂಸಖಂಡವೇ ಕಿತ್ತು ಹೋಗಿದೆ ಎನ್ನಲಾಗಿದ್ದು ಎಡಗೈ, ತಲೆ, ಮೈತುಂಬ ಗಾಯಗಳಾಗಿವೆ.

ಈತನ ಚೀರಾಟ ಕೇಳಿದ ಮೀನು ಹಿಡಿಯಲು ಬಂದಿದ್ದರೆನ್ನಲಾದ ದುಂಡಸಿ ಭಾಗದ ಕೆಲವರು ಓಡಿ ಹೋಗಿ ಬಾಯಿ ಮಾಡಿದಾಗ ಕರಡಿಗಳು ಬಿಟ್ಟು ಓಡಿ ಹೋಯಿತೆಂದು ಹೇಳಲಾಗಿದೆ.

ಈ ಕರಡಿ ದಾಳಿಯು ಹಾವೇರಿಯ ಶಿಗ್ಗಾಂವ ತಾಲೂಕಾ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದ್ದು. ಹೀಗಾಗಿ ಪ್ರಕರಣ ಸಿಗ್ಗಾಂವ ತಾಲೂಕಿನ ಪೊಲೀಸ್ ಠಾಣೆ ಮತ್ತು ಅರಣ್ಯ ಇಲಾಖೆ ಕಚೇರಿ ಒಳಪಡುತ್ತದೆ. ಇತ್ತೀಚಿಗಷ್ಟೇ ನ್ಯಾಸರ್ಗಿ ಅರಣ್ಯದಲ್ಲಿ ರೈತನೋರ್ವನ ಮೇಲೆ ಕರಡಿ ದಾಳಿ ಮಾಡಿದ್ದು, ಇದು ಕರಡಿಯ ಎರಡನೇ ದಾಳಿ ಘಟನೆಯಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ