add

ಅಮೇರಿಕದಲ್ಲಿ ನೌಕರಿ-ಹೊನ್ನಾವರದ ಯುವತಿಗೆ 57ಲಕ್ಷಕ್ಕೆ ಕತ್ತರಿ!

1720

ಕಾರವಾರ: ವಿದೇಶದಲ್ಲಿ ಉದ್ಯೋಗ ಮಾಡುವ ಕನಸು ಕಂಡಿದ್ದ ಯುವತಿಯೊಬ್ಬಳು ವಂಚಕರ ಮಾತನ್ನು ನಂಬಿ ಲಕ್ಷಾಂತರ ರುಪಾಯಿಯನ್ನು ಕಳೆದುಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ನೇತ್ರಾವತಿ(25) ಹಣ ಕಳೆದುಕೊಂಡವರು. ನರ್ಸಿಂಗ್ ಕೋರ್ಸ್ ಅಧ್ಯಯನ ಮಾಡಿದ್ದ ಈಕೆ, ಕೆಲವು ವರ್ಷ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದರು. ಬಳಿಕ ತಮ್ಮೂರಿಗೆ ವಾಪಸ್ ಬಂದು, ಬೇರೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತಿದ್ದರು.

ಮತ್ತೆ ವಿದೇಶದಲ್ಲೇ ಉದ್ಯೋಗ ಮಾಡುವ ಆಕಾಂಕ್ಷೆ ಹೊಂದಿದ್ದ ಈಕೆಯ ಇ-ಮೇಲ್ ಗೆ ಅಪರಿಚಿತ ಮೇಲ್ ಸಂದೇಶ ಬಂದಿದೆ. ಇದನ್ನು ಗಮನಿಸಿದೆ ಈಕೆ ಅಪರಿಚಿತರ ಇ–ಮೇಲ್‌ ಸಂದೇಶವನ್ನು ನಂಬಿ ಬರೋಬ್ಬರಿ ₹ 57.14 ಲಕ್ಷ ಕಳೆದುಕೊಂಡಿದ್ದಾರೆ.

ವಂಚನೆ ಆಗಿದ್ದು ಹೇಗೆ?

ನೇತ್ರಾವತಿಯವರ ಇ– ಮೇಲ್ ಖಾತೆಗೆ ಅಪರಿಚಿತರು ಕಳುಹಿಸಿದ್ದ ಸಂದೇಶದಲ್ಲಿ ಉದ್ಯೋಗಾವಕಾಶ ಹಾಗೂ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯ ಉಲ್ಲೇಖವಿತ್ತು. ಅದಕ್ಕೆ ಕರೆ ಮಾಡಿದ ಯುವತಿ, ತಮ್ಮ ಪರಿಚಯ ಹೇಳಿಕೊಂಡಿದ್ದರು. ಕರೆ ಸ್ವೀಕರಿಸಿದ್ದ ವಂಚಕರು, ಯುವತಿಯ ವಾಟ್ಸ್‌ಆ್ಯಪ್ ಗೆ ಪ್ರಶ್ನೆ ಪತ್ರಿಕೆಯೊಂದನ್ನು ಕಳುಹಿಸಿಕೊಟ್ಟು ಉತ್ತರಿಸುವಂತೆ ತಿಳಿಸಿದ್ದರು.

ಈಕೆಗೆ ಉತ್ತರ ಪತ್ರಿಕೆ ತಲುಪಿದ ಬಳಿಕ ಆರೋಪಿಗಳು ಪಾಸ್‌ಪೋರ್ಟ್, ವೀಸಾ, ವೈದ್ಯಕೀಯ ಪ್ರಮಾಣಪತ್ರ, ನಿರಾಕ್ಷೇಪಣಾ ಪತ್ರ, ಆರೋಗ್ಯ ವಿಮೆ ಮುಂತಾದವುಗಳಿಗೆ ಶುಲ್ಕ, ತೆರಿಗೆ ಪಾವತಿಸಲು ಹೇಳಿದ್ದರು. ಆರೋಪಿಗಳು ನೀಡಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ 2020ರ ಆ.13ರಿಂದ 2021ರ ಜ.17ರ ತನಕ ₹57.14 ಲಕ್ಷ ಹಣ ಜಮೆ ಮಾಡಿದ್ದಾರೆ.

ವಿದೇಶದಲ್ಲಿ ಉದ್ಯೋಗದ ಆಸೆಯಿಂದ ಈಕೆ ತಮ್ಮ ಸಂಪಾದನೆ, ಸಂಬಂಧಿಕರಲ್ಲಿ, ಪರಿಚಯಸ್ಥರಲ್ಲಿ, ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಹಣ ಹೊಂದಿಸಿದ್ದರು.

ಮೋಸ ಹೋಗಿದ್ದು ತಿಳಿದದ್ದು ಹೇಗೆ?

ಆರು ತಿಂಗಳ ಅವಧಿಯಲ್ಲಿ ಹಲವು ಬಾರಿ ಹಣ ಪಾವತಿಸಿದ್ದರೂ ನೇಮಕಾತಿ ಆದೇಶ ಬಂದಿರಲಿಲ್ಲ‌

ಈ ಬಗ್ಗೆ ಅವರು ನೀಡಿದ್ದ ದೂರವಾಣಿಗೆ ಸಂಪರ್ಕಿಸಿ ಕೇಳಿದರೆ ,ಸ್ಪಷ್ಟನೆಯಾಗಲೀ ಹಣ ಮರಳಿಸುವ ಬಗ್ಗೆಯಾಗಲೀ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ತಾವು ಮೋಸ ಹೋಗಿದ್ದು ಅರಿವಿಗೆ ಬಂದಿದ್ದು ,ಕಾರವಾರದ ಸಿಇಎನ್ ಠಾಣೆಗೆ ಇಂದು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ