BREAKING NEWS
Search

ಶಿರಸಿ ಯುವಕನ ಕಣ್ಣಲ್ಲಿ ಕಂಡ ಹಾರುವ ಓತಿ! ವಿಶೇಷ ಇಲ್ಲಿದೆ

1136

ಕಾರವಾರ:- ಪಶ್ಚಿಮ ಘಟ್ಟ ಹಲವು ವೈವಿದ್ಯತೆಯಿಂದ ಕೂಡಿದ ಹಸಿರು ಮನೆ. ಇಲ್ಲಿನ ಜೀವಿಗಳು ಜಗತ್ತಿನಲ್ಲಿಯೇ ಅಪರೂಪದ ಜೀವಿಗಳನ್ನು ಹೊಂದಿವೆ.

ಜಗತ್ತಿನ ಇತರೆಡೆ ಕಾಣಸಿಗದ ಅಪರೂಪದ ಜೀವ ವೈವಿಧ್ಯಗಳು ಪಶ್ಚಿಮಘಟ್ಟದ ಒಡಲಿನಲ್ಲಿವೆ. ಸಾಮಾನ್ಯ ಜೀವಿಯಾಗಿದ್ದರೂ, ಕಣ್ಣಿಗೆ ಕಾಣದ ಪಶ್ಚಿಮಘಟ್ಟದ ನಿಗೂಢ ಹಾರುವ ಓತಿ (ಫ್ಲಯಿಂಗ್ ಲಿಝಾರ್ಡ್, ಫ್ಲಯಿಂಗ್ ಡ್ರಾೃಗನ್) ಬಗ್ಗೆ ಅದೆಷ್ಟೋ ಜನರಿಗೆ ತಿಳಿದಿಲ್ಲ.

ಈ ನಿಟ್ಟಿನಲ್ಲಿ ಜನರಿಗೆ ಮಾಹಿತಿ ನೀಡಲು ಉತ್ತರ ಕನ್ನಡ ಜಿಲ್ಲೆ ಶಿರಸಿಯ ವನ್ಯಜೀವಿ ಛಾಯಾಗ್ರಾಹಕ, ಅಧ್ಯಯನಕಾರ ಪ್ರದೀಪ್ ಹೆಗ್ಡೆ 3 ನಿಮಿಷಗಳ ಅವಧಿಯ ಹಾರುವ ಓತಿಯ ಸಾಕ್ಷೃಚಿತ್ರ ನಿರ್ಮಿಸಿದ್ದಾರೆ.

ಹಾರುವ ಓತಿ

ವನ್ಯಜೀವಿ ಸಂರಕ್ಷಣೆ ಮತ್ತು ಮಹತ್ವವನ್ನು ತಿಳಿಸಲು ಕಾರ್ಯನಿರ್ವಹಿಸುತ್ತಿರುವ ರೌಂಡ್‌ಗ್ಲಾಸ್ ಸಸ್ಟೇನ್ ಎಂಬ ಆನ್‌ಲೈನ್ ಫ್ಲಾಟ್‌ಫಾರ್ಮ್‌ಗೆ ಪ್ರದೀಪ್ ಹೆಗ್ಡೆ ಈ ಸಾಕ್ಷೃಚಿತ್ರ ನಿರ್ಮಿಸಿದ್ದಾರೆ.

ಆಗುಂಬೆ ಮಳೆಕಾಡು ಸಂಶೋಧನ ಕೇಂದ್ರದಲ್ಲಿ ಒಬ್ಬರೇ ಉಳಿದುಕೊಂಡು ಈ ಸಾಕ್ಷೃಚಿತ್ರವನ್ನು ನಿರ್ಮಿಸಿದ್ದಾರೆ.

ಒಳ ಚಿತ್ರದಲ್ಲಿ ಶಿರಸಿಯ ಪ್ರದೀಪ್ ಹೆಗ್ಡೆ

ಹಾರುವ ಓತಿಯ ಚಲನವಲನ, ಜೀವನ ಕ್ರಮವನ್ನು 10 ದಿನಗಳ ಕಾಲ ಆತ್ಯಾಧುನಿಕ ಕ್ಯಾಮರಾ ಟೆಲಿಲೆನ್ಸ್‌ಗಳನ್ನು ಬಳಸಿ ಸೆರೆಹಿಡಿದ್ದಾರೆ. ‘ದಿ ಫ್ಲಯಿಂಗ್ ಡ್ರಾೃಗನ್ಸ್ ಆಫ್ ಸೌತ್ ಇಂಡಿಯ’ ಎಂಬ ಹೆಸರಿನಲ್ಲಿ ಯೂ ಟ್ಯೂಬ್‌ನಲ್ಲಿ ಸಾಕ್ಷೃಚಿತ್ರವನ್ನು ಅಪ್ಲೋಡ್ ಮಾಡಲಾಗಿದೆ.

ಹಾರುವ ಓತಿಯ ವೀಡಿಯೋ ನೋಡಿ:-

ಹಾರುವ ಓತಿ ಏನಿದರ ವೈಶಿಷ್ಟ್ಯ!

ಸಾಮಾನ್ಯವಾಗಿ ಪಶ್ಚಿಮಘಟ್ಟ ಕಾಡು, ಮಲೆನಾಡು, ಕರಾವಳಿ ಭಾಗದ ಕೃಷಿ ತೋಟಗಳಲ್ಲಿ ಹಾಗೂ ಹಸಿರು ಹೆಚ್ಚಿರುವ ಭಾಗದಲ್ಲಿ ಇರುತ್ತದೆ.

ಹೆಚ್ಚಾಗಿ ಕಣ್ಣಿಗೆ ಕಾಣಿಸದ ಕಾರಣ, ಜನರಿಗೆ ಇದರ ಪರಿಚಯ ಕಡಿಮೆ ಎಂದೇ ಹೇಳಬೇಕು.

ಬೂದು, ಮಣ್ಣು, ಮರದ ಬಣ್ಣದಲ್ಲಿ ಈ ಜೀವಿ ಇರುತ್ತದೆ.

ಈ ಓತಿ ನೆಲಕ್ಕೆ ಇಳಿಯದೆ, ಮರದಿಂದ ಮರಕ್ಕೆ ಹಾರುತ್ತಿರುತ್ತದೆ. ಎರಡು ಬದಿಗಳಲ್ಲಿ ಬಾವಲಿಯಂತೆ ರೆಕ್ಕೆಯನ್ನು ಹೊಂದಿದೆ. ರೆಕ್ಕೆ ಬಿಚ್ಚಿ ಹಾರುವಾಗ ಸೂರ್ಯನ ಬೆಳಕಿಗೆ ಹಳದಿ ಬಣ್ಣದಲ್ಲಿ ರೆಕ್ಕೆ ಗೋಚರವಾಗುತ್ತದೆ.

ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಹೆಚ್ಚು ಸಕ್ರಿಯವಾಗಿರುತ್ತದೆ. ಇದು ಮರದಿಂದ ಮರಕ್ಕೆ ಅತ್ಯಂತ ವೇಗದಲ್ಲಿ ಹಾರುತ್ತದೆ.

100 ಮೀಟರ್‌ವರೆಗೂ ಹಾರುವ ಸಾಮರ್ಥ್ಯ ಹೊಂದಿದೆ.

ಗಂಡು ಓತಿಗಳಿಗೆ ಗಂಟಲು ಭಾಗದಲ್ಲಿ ಹಳದಿ ಬಣ್ಣದ ರೆಕ್ಕೆ ಮಾದರಿಯ ಅಂಗವಿದೆ, ಇದನ್ನು ಡ್ಯೂಲಾಕ್ ಎನ್ನಲಾಗುತ್ತದೆ.

ಅದನ್ನು ಬಿಚ್ಚುವ, ಮುಚ್ಚುವ ಮೂಲಕ ಹೆಣ್ಣುಗಳನ್ನು ಆಕರ್ಷಿಸಿ ಮಿಲನ ನಡೆಸುತ್ತವೆ. ಇವುಗಳು ಗೆದ್ದಲು ಹುಳ, ಇರುವೆ, ಸಣ್ಣ ಕೀಟಗಳನ್ನು ತಿಂದು ಬದುಕುತ್ತವೆ.

ಅಡಕೆ, ತೆಂಗಿನ ಮರದಲ್ಲಿ ಕೀಟಗಳನ್ನು ತಿನ್ನುವ ಮೂಲಕ ರೈತರಿಗೆ ನೆರವಾಗುತ್ತವೆ. ಈ ಓತಿಗಳನ್ನು ಪಕ್ಷಿ ಮತ್ತು ಹಾವುಗಳು ಆಹಾರಕ್ಕಾಗಿ ಬೇಟೆಯಾಡುತ್ತವೆ. ಪರಿಸರ ಸಮತೋಲನದಲ್ಲಿ ಇದರ ಪಾತ್ರ ವಿಶಿಷ್ಟ ವಾಗಿದೆ.

ವನ್ಯಜೀವಿಪ್ರಿಯ ಪ್ರದೀಪ್ ಶಿರಸಿಯ ಜಡ್ಡಿನಗದ್ದೆ ನಿವಾಸಿ ,ಪ್ರದೀಪ್ ಹೆಗ್ಡೆ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಬಯೋಟೆಕ್ನಾಲಜಿ ಪದವಿ ಪಡೆದಿದ್ದಾರೆ.

ವೈಲ್ಡ್‌ಲೈಫ್ ಚಟುವಟಿಕೆ, ಪರಿಸರ ಅಧ್ಯಯನವೇ ಇವರ ವೃತ್ತಿ. ಹುಟ್ಟಿ, ಬೆಳೆದ ಪರಿಸರವೇ ಪ್ರಾಣಿ, ಪಕ್ಷಿ, ಕಾಡು, ವನ್ಯಜೀವಿಗಳ ಬಗ್ಗೆ ಹೆಚ್ಚಿನ ಆಸಕ್ತಿ.

ಇವರ ಈ ಕಾರ್ಯಕ್ಕೆ ಮನೆಮಂದಿ, ಸ್ನೇಹಿತರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ವನ್ಯಜೀವಿ ಸಂಪತ್ತನ್ನು ವಿಶ್ವಾದ್ಯಂತ ಮುನ್ನೆಲೆಗೆ ತರುವ ಉದ್ದೇಶದಿಂದ ರಾಜ್ಯ ಅರಣ್ಯ ಇಲಾಖೆ ಸಹಯೋಗದಲ್ಲಿ ಉತ್ಸಾಹಿ ವನ್ಯಜೀವಿ ಆಸಕ್ತ ಯುವಕರು ರೂಪಿಸಿದ ವೈಲ್ಡ್ ಕರ್ನಾಟಕ ಕಿರುಚಿತ್ರದಲ್ಲಿ ಪ್ರದೀಪ್ ಅವರ 15 ನಿಮಿಷದ ಅವಧಿಯ ಕಾಳಿಂಗ ಸರ್ಪ ಕುರಿತ ಸಾಕ್ಷೃಚಿತ್ರವಿದೆ.

ಈ ಸಾಕ್ಷೃಚಿತ್ರ ಅನಿಮಲ್ ಪ್ಲಾನೆಟ್ ಚಾನೆಲ್‌ನಲ್ಲಿ ಪ್ರಸಾರವಾಗಿದೆ. ಹಿಮಾಚಲ ಪ್ರದೇಶದ ಹಿಮ ಚಿರತೆ ಬಗ್ಗೆಯೂ ಸಾಕ್ಷೃಚಿತ್ರ ಮಾಡಿದ್ದಾರೆ. ರಾತ್ರಿ, ಹಗಲು ಕಾಡಿನಲ್ಲಿ ಅಲೆಯುತ್ತ ಹಲವು ಪ್ರಾಣಿ, ಪಕ್ಷಿಗಳ ಸಾಕ್ಷೃಚಿತ್ರ, ಮತ್ತು ಸುಂದರ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

ಪಶ್ಚಿಮಘಟ್ಟದಲ್ಲಿ ‘ಹಾರುವ ಓತಿ’ ವಿಶೇಷ ಜೀವಿ.ಇವುಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವುದು ಅಷ್ಟು ಸುಲಭದ ಮಾತಲ್ಲ.

ಇದಕ್ಕೆ ಶ್ರದ್ಧೆ ,ತಾಳ್ಮೆ ಬೇಕೇ ಬೇಕು. ಅತಿ ವಿರಳವಾಗಿರುವ ಈ ಜೀವಿಯನ್ನು ತನ್ನ ಕ್ಯಾಮರಾ ಮೂಲಕ ಸೆರೆ ಹಿಡಿಯುವ ಮೂಲಕ ಇಡೀ ಜಗತ್ತಿಗೆ ಕತ್ತಲಲ್ಲಿದ್ದ ಈ ಜೀವಿಯನ್ನು ಪರಿಚಯಿಸಿದ್ದಾರೆ.

ಇವರ ಈ ಕಾರ್ಯ ಮುಂದುವರೆಯಲಿ ಹಾಗೂ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸುತ್ತಾ ಇವರಿಗೆ ಪ್ರೋತ್ಸಾಹಿಸೋಣ.
Leave a Reply

Your email address will not be published. Required fields are marked *