ಸಾಗರದಲ್ಲಿ ಹಾಲಿ ಪ್ರಿಯಕರನಿಂದ ಮಾಜಿ ಪ್ರಿಯಕರನ ಕೊಲೆ ಮಾಡಿಸಿದ ಪ್ರಿಯತಮೆ!

1140

ಶಿವಮೊಗ್ಗ : ಸಾಗರದ ಹಳೆ ಇಕ್ಕೇರಿಯಲ್ಲಿ ನಡೆದಿದ್ದ ಜೋಡಿ ಕೊಲೆ ಯನ್ನು ಪೊಲೀಸರು ಬೇದಿಸುವಲ್ಲಿ ಸಫಲರಾಗಿದ್ದಾರೆ.

ಇದೇ ತಿಂಗಳ ಅ.11 ರಂದು ಸಾಗರ ತಾಲೂಕಿನ ಹಳೆ ಇಕ್ಕೇರಿಯಲ್ಲಿ ಬಂಗಾರಮ್ಮ (60), ಪ್ರವೀಣ್ (35) ಎಂಬ ತಾಯಿ ಮಗನನ್ನು ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿಯೇ ಮೃತ ಪ್ರವೀಣನ ಪತ್ನಿ ಹಾಗೂ 10 ತಿಂಗಳ ಮಗುವಿನ ಎದುರಿನಲ್ಲಿಯೇ ಕೊಲೆ ಮಾಡಲಾಗಿತ್ತು.

ಘಟನೆ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಹಾಗೂ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು.

ಆರಂಭದಲ್ಲಿ ಪೊಲೀಸರಿಗೆ ಕೊಲೆ ಏಕೆ ನಡೆದಿದೆ ಎಂಬ ಅನುಮಾನ ಕಾಡಲಾರಂಭಿಸಿತ್ತು. ಕೊಲೆಯಾದವರು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು.ದರೋಡೆ ಮಾಡಲು ಆ ಮನೆಯಲ್ಲಿ ಏನೂ ಇರಲಿಲ್ಲ. ಜೊತೆಗೆ ಕೊಲೆ ಮಾಡಿದ ನಂತರ ಮನೆಯಿಂದ ಯಾವ ವಸ್ತುವನ್ನು ತೆಗೆದುಕೊಂಡು ಹೋಗಿರಲಿಲ್ಲ. ಅಲ್ಲದೇ ಮನೆಯಲ್ಲಿಯೇ ಇದ್ದ ಹತ್ಯೆಯಾದ ಪ್ರವೀಣನ ಪತ್ನಿ ಹಾಗೂ ಆತನ ಮಗುವನ್ನು ಏನು ಮಾಡಿರಲಿಲ್ಲ. ಹೀಗಾಗಿ ಕೊಲೆ ಏಕೆ ನಡೆದಿದೆ ಎಂಬುದು ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿತ್ತು.

ಹೀಗಾಗಿ ಈ ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಅವರು ಪ್ರಕರಣದ ತನಿಖೆ ನಡೆಸಲು ವಿಶೇಷ ಪೊಲೀಸ್ ತಂಡ ರಚಿಸಿದ್ದರು. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಮೊದಲಿಗೆ ಹತ್ಯೆಯಾದ ಪ್ರವೀಣನ ಪತ್ನಿ‌ ರೋಹಿಣಿ ಮೇಲೆಯೇ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಈಕೆಗೆ ಏನಾದರೂ ಬೇರೆ ಸಂಬಂಧ ಇದೆಯಾ,ಇದಕ್ಕಾಗಿ ಏನಾದರೂ ಕೊಲೆ ನಡೆದಿದೆಯಾ ಎಂದು ವಿಚಾರಣೆ ನಡೆಸಿದ್ದರು. ಆದರೆ ಪ್ರವೀಣನ ಪತ್ನಿಗೆ ಆ ರೀತಿ ಯಾವುದೇ ಸಂಬಂಧ ಇರಲಿಲ್ಲ.

ಆದರೆ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಈ ಕೊಲೆಗೆ ಬೇರೆಯದ್ದೆ ವಿಷಯ ಇದೆ ಎಂಬ ಮಾಹಿತಿ ದೊರೆಯಿತು. ಕೊಲೆಯಾದ ಪ್ರವೀಣನಿಗೆ ನೆರೆ ಮನೆ ನಿವಾಸಿಯಾದ ಶೃತಿ ಎಂಬ ಯುವತಿ ಜೊತೆ ಪ್ರೀತಿ ಇತ್ತು.

ಆದರೆ ಪ್ರವೀಣ ಶೃತಿಗೆ ಕೈಕೊಟ್ಟು ರೋಹಿಣಿಯನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದ. ಇದಕ್ಕೆ ಶೃತಿ ಪ್ರವೀಣನ ವಿರುದ್ಧ ಕೋಪಗೊಂಡಿದ್ದಳು. ನಂತರ ಶೃತಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು.

ಈ ವೇಳೆ ಶೃತಿಗೆ ಭರತ್ ಎಂಬ ಯುವಕನ ಪರಿಚವಾಗಿದೆ. ಇಬ್ಬರ ಪರಿಚಯ, ಗೆಳೆತನ ನಂತರ ಪ್ರೀತಿಯಾಗಿ ಮಾರ್ಪಟ್ಟಿದೆ. ಮಾಜಿ ಪ್ರಿಯಕರ ಪ್ರವೀಣನಿಂದ ತನಗಾದ ಅನ್ಯಾಯವನ್ನು ಹೊಸ ಪ್ರಿಯಕರ ಭರತ್ ನ ಬಳಿ ಶೃತಿ ಹೇಳಿಕೊಂಡಿದ್ದಾಳೆ.ಅಲ್ಲದೇ ಆತನಿಂದ ನನಗೆ ಅನ್ಯಾಯವಾಗಿದೆ. ಅವನನ್ನು ಸುಮ್ಮನೇ ಬಿಡಬಾರದು ಎಂದು ಅಲವತ್ತುಕೊಂಡಿದ್ದಾಳೆ. ಹೀಗಾಗಿಯೇ ಶೃತಿ ಭರತ್ ನ ಸಹಾಯ ಪಡೆದು ಆತನಿಂದಲೇ ಪ್ರವೀಣ ಹಾಗೂ ಆತನ ತಾಯಿ ಬಂಗಾರಮ್ಮ ಇಬ್ಬರನ್ನು ಕೊಲೆ ಮಾಡಿಸಿದ್ದಾಳೆ.

ಪೊಲೀಸರ ಗುಂಡು ತಿಂದ ಆರೋಪಿ.

ಆರೋಪಿ ಭರತ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆದಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಇಂದು ಆರೋಪಿ ಭರತ್ ನನ್ನು ಮಹಜರ್ ನಡೆಸಲು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಮಹಜರ್ ನಡೆಸಿ ವಾಪಸ್ ಬರುವ ವೇಳೆ ಆರೋಪಿ‌ ಭರತ್ ಮೂತ್ರ ವಿಸರ್ಜನೆ ಮಾಡುವುದಾಗಿ‌ ಪೊಲೀಸರ ಬಳಿ ಹೇಳಿ ಜೀಪಿನಿಂದ ಕೆಳಗಡೆ ಇಳಿದು ಹೋಗಿದ್ದಾನೆ.

ಈ ಸಂದರ್ಭದಲ್ಲಿ ಆರೋಪಿ ಭರತ್ ಪೊಲೀಸರನ್ನು ತಳ್ಳಿ ಹಲ್ಲೆ ಮಾಡಲು ಯತ್ನಿಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿಯೇ ಇದ್ದ ಡಿಸಿಆರ್ ಬಿ ಇನ್ಸ್ ಪೆಕ್ಟರ್ ಕುಮಾರ್ ಸ್ವಾಮಿ ಅವರು ಆರೋಪಿ ಭರತ್ ನ ಬಲಗಾಲಿಗೆ ಗುಂಡು‌ ಹಾರಿಸಿದ್ದಾರೆ. ಘಟನೆಯಿಂದ ಗಾಯಗೊಂಡಿರುವ ಆರೋಪಿ ಭರತ್ ಗೆ ಸಾಗರ ತಾಲೊಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು ಇಡೀ ಸಾಗರವನ್ನೇ ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆ ಆರೋಪಿ ಅಂದರ್ ಆಗಿದ್ದಾನೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ