ಬೀದಿಗೆ ಬಂದ ಸಿಂಗದೂರೇಶ್ವರಿ! ಸಿಗಂದೂರು ಖಮಾಯಿಗೆ ಜಾತಿ ಅಸ್ತ್ರ.

1951

ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿ‌ ನ ಪ್ರಸಿದ್ಧ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಹುಂಡಿ ಖಮಾಯಿ ವಿವಾದ ತಾರಕಕ್ಕೆ ಏರಿದೆ.

ಒಂದು ಕಾಲದಲ್ಲಿ ಗುರತೇ ಇಲ್ಲದ ಶರಾವತಿ ಹಿನ್ನೀರಿನಲ್ಲಿ ಮುಳಗಿ ಹೋಗಿದ್ದ ಕಲ್ಲನ್ನು ತಂದು ಇದೇ ದೇವಿ ವಿಗ್ರಹ ವೆಂದು ಮುಳುಗಡೆಯಾಗಿದ್ದ ಕುಲದೇವರ ಪ್ರತಿಷ್ಠಾಪನೆಯನ್ನು ಅಂದು ಈಗ ಕ್ಷೇತ್ರದ ಮುಖ್ಯ ಪುರೋಹಿತರಾಗಿರುವ ಶೇಷಗಿರಿ ಭಟ್ಟರು ಹಾಗೂ ಈಗ ಧರ್ಮದರ್ಶಿಯಾಗಿರುವ ರಾಮಪ್ಪನವರು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾ ಬಂದಿದ್ದರು. ಶರಾವತಿ ಹಿನ್ನೀರಿನ ತಪ್ಪಲಿನ ಸುಂದರ ಗುಡ್ಡ ಬೆಟ್ಟದ ನಡುವೆ ಚಿಕ್ಕ ಹಂಚಿನ ಮಂದಿರದಲ್ಲಿ ದೇವಿ ಪೂಜೆ ಮಾಡಲಾಗುತಿತ್ತು. ಅಂದು ಪುರೋಹಿತರಾಗಿದ್ದ ಶೇಷಗಿರಿ ಭಟ್ಟರೂ ಬಡವರಾಗಿದ್ದರು ಜೊತೆಗೆ ದೀವರ ಜನಾಂಗದ ಧರ್ಮದರ್ಶಿ ರಾಮಪ್ಪನವರು ಸಹ ಬಡವರಾಗಿದ್ದರು.
ಎಲ್ಲಿ ರಾಜ್ಯದ ಪ್ರಸಿದ್ಧ ಟಿ.ವಿ ವಾಹಿನಿ ಟಿ.ವಿ9 ತನ್ನ ವಿಶಿಷ್ಟ ಕಾರ್ಯಕ್ರಮವಾದ ಹೀಗೂ ಉಂಟೆಯಲ್ಲಿ ಬಣ್ಣ ಬಣ್ಣದ ಸಿಗಂದೂರಿನ ಮಹಾತ್ಮೆಯ! ರೋಚಕ ಸುದ್ದಿ ಬಿತ್ತರಿಸಿತೋ ಇಡೀ ಕರ್ನಾಟಕದ ಆಸ್ತಿಕ ಜನರು ತಂಡೋಪ ತಂಡವಾಗಿ ಸಿಗಂದೂರಿಗೆ ಬರತೊಡಗಿತು. ದೇವಸ್ಥಾನದಲ್ಲಿ ಇದ್ದ “ಗಿಂಡಿ ಡಬ್ಬಿ” (ಕಾಣಿಕೆ ಹುಂಡಿ) ದೊಡ್ಡದಾಯಿತು.ಅರ್ಚಕರ ಆರತಿ ತಟ್ಟೆಯಲ್ಲಿ ನಾಣ್ಯದ ಬದಲು ಗರಿ ಗರಿ ನೋಟು ಬೀಳತೊಡಗಿತು.ಶೇಷಗಿರಿ ಭಟ್ಟರು ಶ್ರೀಮಂತರಾಗುತ್ತಾ ಬಂದರು. ಹಾಗೆಯೇ ರಾಮಪ್ಪನವರೂ ದೇವಿಯ ಹಣದಲ್ಲಿ ಬೆಳೆಯುತ್ತಾ ಬಂದರು.ಸಿಗಂದೂರು ಶರಾವತಿ ನದಿ ದಡದಲ್ಲಿ ಇರುವುದರಿಂದ ಸದಾ ಕತ್ತಲಲ್ಲಿ ತಮ್ಮ ನೋವನ್ನೇ ಹೊರ ಜಗತ್ತಿಗೆ ಈಗಿನ ವರೆಗೂ ಹೊರಹಾಕಲಾಗದೇ ಎಲ್ಲವನ್ನೂ ಸಹಿಸಿಕೊಂಡಿರುವ ಕರೂರು ಸೀಮೆಯ ಜನ ಸಾಗರದಿಂದ ತಮ್ಮ ಊರಿಗೆ ಹೋಗಬೇಕೆಂದರೆ ಒಂದು ಕಾಲದಲ್ಲಿ ನದಿ ದಾಟಲು ತೆಪ್ಪದಲ್ಲಿ ಹೋಗಬೇಕಿತ್ತು. ನಂತರ ಒಂದು ಲಾಂಚ್ ಅನ್ನು ಸರ್ಕಾರದಿಂದ ಬಿಡಿಸಿಕೊಳ್ಳಲು ಅಂದಿನ ಕಾಲದಲ್ಲಿ ಅವರು ಪಟ್ಟ ಶ್ರಮದ ರಕ್ತ ಕಣ್ಣೀರು. ಈಗ ಸೇತುವೆ ಭಾಗ್ಯ ದೊರತಿದೆ ಅದು ಕೂಡ ಈ ಊರಿನ ಜನರಿಗೆ ದಕ್ಕಲು ದಶಕದ ಹೋರಾಟದ ಕಾಲು ಹಾದಿಯಲ್ಲಿ ಸವೆದ ನೋವಿದೆ‌. ಅದನ್ನು ಹೇಳತೀರದು.ಇತ್ತ ಸಿಗಂದೂರು ಸಹ ಬೆಳೆಯುತ್ತಾ ಇಲ್ಲಿನ ಪರಿಸರ ಜನರಿಗೆ ಭಕ್ತಿ ಸ್ಥಳದ ಜೊತೆಗೆ ಪ್ರವಾಸಿ ಸ್ಥಳವಾಗಿ ಸಹ ಮಾರ್ಪಟ್ಟಿತು.

ಗುಡ್ಡ ಕರಗಿ ವ್ಯಾಪರ ಸ್ಥಳವಾಯ್ತು ಸಿಗಂದೂರು!

ಸಿಗಂದೂರು.

ಎಲ್ಲಿ ಸಿಗಂದೂರು ಬರು ಬರುತ್ತಾ ಶ್ರದ್ಧಾ ಕೇಂದ್ರದ ಜೊತೆ ಮೋಜು ಮಸ್ತಿಯ ತಾಣವಾಯ್ತೋ ಕರೂರು ಸೀಮೆಯ ತುಂಬ್ರಿ ಬೆಳೆಯುತ್ತಾ ಹೋಯಿತು. ಹಲವರಿಗೆ ಉದ್ಯೋಗ ದೊರೆಯಿತು, ವಾಣಿಜ್ಯ ಮಳಿಗೆಗಳು ತಲೆ ಎತ್ತಿದವು. ಇದರ ಜೊತೆ ಗಾಂಜಾ ,ಹೆಂಡ,ಹೆಣ್ಣುಗಳ ವ್ಯಾಪಾರ ಸಹ ಭರ್ಜರಿಯಾಗಿ ನಡೆಯತೊಡಗಿತು.
ಇನ್ನು ದೇವಸ್ಥಾನದ ಸುತ್ತಮುತ್ತ ಇದ್ದ ಚಿಕ್ಕಪುಟ್ಟ ಗುಡ್ಡಗಳು ಕರಗಿ ಅನಧಿಕೃತ ವಸತಿ ನಿಲಯ ,ವಾಣಿಜ್ಯ ಕಟ್ಟಡ ನಿರ್ಮಾಣವಾಗಿದೆ. ಈ ಹಿಂದೆ ದೇವಸ್ಥಾನ ಆಡಳಿತ ಮಂಡಳಿ ಒತ್ತುವರಿ ಮಾಡಿಕೊಂಡ ಜಾಗದ ಕುರಿತು ಕಂದಾಯ ಇಲಾಖೆ ನೋಟೀಸ್ ನೀಡಿ ರಾಜಕೀಯ ಪ್ರಭಾವದಿಂದ ಕ್ರಮ ಕೈಗೊಳ್ಳದಂತೆ ಮಾಡಲಾಯ್ತು.ಈಗ ಸಿಗಂದೂರಿನಲ್ಲಿ ಚಪ್ಪಲಿ ಇಡುವ ಜಾಗಕ್ಕೆ ಸಹ ಹಣನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಭಟ್ಟರು ಮತ್ತು ಧರ್ಮದರ್ಶಿ ಗಳ ಮಧ್ಯೆ ಜಗಳ!

ಸಿಗಂದೂರು ವರ್ಷಗಳು ಕಳೆಯುತಿದ್ದಂತೆ ಕೋಟಿ ಕೋಟಿ ಹಣ,ಬಂಗಾರ ಸೇರಿದಂತೆ ಹಲವು ವಸ್ತುಗಳನ್ನು ಭಕ್ತರು ದೇಣಿಗೆ ರೂಪದಲ್ಲಿ ನೀಡುತ್ತಾ ಬಂದರು.ಈ ಹಣದಲ್ಲಿ ಭಟ್ಟರಿಗೆ ಮತ್ತು ಧರ್ಮದರ್ಶಿ ರಾಮಪ್ಪರಿಗೆ ಸಮಪಾಲ ಹೋಗುತಿತ್ತು. ಆದರೇ ಎಲ್ಲಿ ಇಬ್ಬರ ಮಕ್ಕಳು ದೊಡ್ಡವರಾಗಿ ದೇವಸ್ಥಾನದ ಕಾರ್ಯದಲ್ಲಿ ಮೂಗು ತೂರಿಸುತ್ತಾ ಬಂದರೋ ಇಲ್ಲಿ ಧರ್ಮದರ್ಶಿ ಹಾಗೂ ಭಟ್ಟರ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಯಿತು.
ಭಟ್ಟರ ಪಡಿಚಾರಕರ ಸಂಖ್ಯೆ ಸಹ ಏರತೊಡಗಿತು.ಇದರ ಜೊತೆಗೆ ಧರ್ಮದರ್ಶಿಯ ಪಟಾಲಮ್ ಸಹ ಬೆಳೆಯಿತು. ದೇವಸ್ಥಾನದ ಗರ್ಭಗುಡಿಯಲ್ಲಿ ಭಟ್ಟರ ಶಿಷ್ಯವೃದ ವಿದ್ದರೆ ದೇವಸ್ಥಾನದ ಹೊರಗೆ ಹಾಗೂ ಗರ್ಭಗುಡಿ ಹೊರಭಾಗದಲ್ಲಿ ಧರ್ಮದರ್ಶಿ ರಾಮಪ್ಪನವರ ಶಿಷ್ಯರು ಇರತೊಡಗಿದರು. ದೇವಸ್ಥಾನದ ಆವರಣದಲ್ಲಿ ಕಾಣಿಕೆ ಹುಂಡಿ ಇಡಲಾಯಿತು.ಈ ಹುಂಡಿಯಲ್ಲಿ ಬಂಗಾರ,ಹಣ ಹೇರಳ ಸಂಗ್ರಹವಾಯಿತು.ಆದರೇ ಅರ್ಚಕರ ಆರತಿ ತಟ್ಟೆಗೆ ಬೀಳುವ ಹಣಕ್ಕಿಂತ ಹೆಚ್ಚು ಕಾಣಿಕೆ ಡಬ್ಬಿಯಲ್ಲಿ ಬೀಳತೊಡಗಿತು. ವರ್ಷಕ್ಕೆ ಸಿಗಂದೂರಿನಲ್ಲಿ 500 ರಿಂದವ600 ಕೋಟಿ ರುಪಾಯಿ ವ್ಯವಹಾರವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಕೇವಲ ಮೂರು ತಿಂಗಳಲ್ಲಿ 5 ಕೋಟಿ 37 ಲಕ್ಷ ಹಾಗೂ ಒಂದು ಕೆಜಿ ಚಿನ್ನ ಕಾಣಿಕೆ ಹುಂಡಿಗೆ ಭಕ್ತರು ಹಾಕಿದ್ದಾರೆ. ಇನ್ನು ಕಾಣಿಕೆ ಹುಂಡಿ ಹಣವು ತಮಗೆ ಸಂಪೂರ್ಣ ಸೇರಬೇಕು ಎಂಬುದು ಧರ್ಮದರ್ಶಿ ರಾಮಪ್ಪನವರ ಹಟವಾದರೇ, ಈ ಹಣ ತಮಗೇ ಸೇರಬೇಕು ಎಂಬ ಹಟ ಮುಖ್ಯ ಅರ್ಚಕ ಶೇಷಗಿರಿ ಭಟ್ಟರದ್ದು. ಹೀಗೆ ಗುದ್ದಾಟ ಮುಂದುವರೆದು ಇಬ್ಬರೂ ತಮ್ಮ ತಮ್ಮ ಶಕ್ತಿ ಪ್ರದರ್ಶನ ಮಾಡಿ ತಮ್ಮ ಹಕ್ಕು ಚಲಾಯಿಸಲು ಮುಂದಾದರು. ಆಗಲೇ ರಾಜಕೀಯ ಪ್ರವೇಶವಾಗಿದ್ದು ಸಾಗರದ ಶಾಸಕ ಹರತಾಳು ಹಾಲಪ್ಪ ,ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಪ್ರವೇಶವಾಗಿದೆ.ಮೊದಲು ರಾಜಿ ಸಂದಾನದ ಪ್ರಯತ್ನ ಸಹ ಮಾಡಲಾಯಿತು‌.ಆದರೇ ಶೇಷಗಿರಿ ಭಟ್ಟರ ಅಸಮದಾನ ಶಮನವಾಗದೇ ಮತ್ತೆ ಗುದ್ದಾಟ ಮುಂದುವರೆಯಿತು.

ಧರ್ಮದರ್ಶಿ ರಾಮಪ್ಪ ಹಾಗೂ ಶೇಷಗಿರಿ ಭಟ್ಟರು ಹೇಗೆ?

ಸಿಗಂದೂರು ಕ್ಷೇತ್ರ ಇಂದು ಬೆಳೆಯಲು ರಾಮಪ್ಪ ಮತ್ತು ಶೇಷಗರಿ ಭಟ್ಟರ ಕೊಡಿಗೆ ಪ್ರಾಮಾಣಿಕವಾಗಿತ್ತು.ಶೇಷಗಿರಿ ಭಟ್ಟರು ಹಾಗೂ ರಾಮಪ್ಪನವರು ಜನರ ಒಳತಿಗಾಗಿ ಕೆಲಸ ಮಾಡಿದ್ದಾರೆ.ದಾನ ಧರ್ಮ ಸಹ ನಡೆಸಿದ್ದು ಇಬ್ಬರೂ ಶ್ರೀ ದೇವಿಯ ಆರಾಧಕರು ಹಾಗೂ ಅಪಾರ ನಂಬಿಕೆ ಇಟ್ಟವರು. ಒಂದು ಕಾಲದಲ್ಲಿ ಸಾಗರ ಪ್ರದೇಶದಲ್ಲಿ ಸಿಗಂದೂರು ಚೌಡಿ ಇದ್ದಾಳೆ ಕಳ್ಳತನ ಮಾಡಿದರೆ ಎಚ್ಚರಿಕೆ ಎಂಬ ಫಲಕಗಳು ಹಲವು ತೋಟ ,ಜಮೀನುಗಳಲ್ಲಿ ನೇತಾಡುತಿದ್ದವು ಎಂದರೆ ಕ್ಷೇತ್ರದ ಮಹಿಮೆ ಹೇಗಿತ್ತು ಎಂಬುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ. ದೇವರಿದ್ದಾನೋ ಇಲ್ಲವೋ ಅದು ಬೇರೆಯ ಮಾತು ಆದರೇ ದೇವಿಯ ಸನ್ನಿದಿಗೆ ಬಂದವರಿಗೆ ನೆಮ್ಮದಿ ದೊರೆತಿದೆ‌‌. ಅದಕ್ಕೆ ಪೂರಕವಾಗಿ ದೇವಸ್ಥಾನದ ಧರ್ಮದರ್ಶಿ ಹಾಗೂ ಮುಖ್ಯ ಅರ್ಚಕರ ನಡೆ ಕೂಡ ಉತ್ತಮವಾಗಿತ್ತು.ಅಲ್ಲಿನ ಜನರು ಸೇರಿದಂತೆ ರಾಜ್ಯದ ಭಕ್ತರ ನಂಬಿಕೆ ಈವರೆಗೂ ಕಮ್ಮಿಯಾಗಿಲ್ಲ. ಅದು ಆ ಕ್ಷೇತ್ರಕ್ಕೆ ಇಟ್ಟ ಗೌರವ. ಆದರೇ ಎಲ್ಲಿ ಭಟ್ಟರ ಮತ್ತು ರಾಮಪ್ಪನವರ ಮಕ್ಕಳ ಪ್ರವೇಶವಾಯಿತೋ ಎಲ್ಲವೂ ಬದಲಾಗಹೊರಟಿತು.ಜಾತಿ ಒಳಹೊಕ್ಕಿತು.ಹಣದ ಆಸೆ ಅತಿಯಾಯಿತು.ಈಗ ದೇವಿ ಮುನಿದಿದ್ದು ಇವರ ಕಿತ್ತಾಟ ದೇವಿಯ ಹೆಸರು ಬೀದಿಗೆ ಬರುವಂತಾಗಿದೆ.

ಧರ್ಮದರ್ಶಿ ರಾಮಪ್ಪನವರ ಪುತ್ರ.

ರಾಜಕೀಯ ಪ್ರವೇಶ- ಮುಜರಾಯಿಗೆ ಸೇರಿಸುವ ಪರ-ವಿರೋಧದ ಅಲೆ!

ಇನ್ನು ಕಾಗೋಡು ತಿಮ್ಮಪ್ಪನವರು ಶಾಸಕರಾಗಿದ್ದಾಗ ಹಾಗೂ ಸಚಿವರಾಗಿದ್ದಾಗ ತಮ್ಮದೇ ಜನಾಂಗದ ಧರ್ಮದರ್ಶಿ ರಾಮಪ್ಪನವರ ಬೆನ್ನಿಗೆ ಇದ್ದರು. ಸಿಗಂದೂರು ದೇವಸ್ಥಾನದ ಸುತ್ತಮುತ್ತ ಇದ್ದ ಕಂದಾಯ ಜಮೀನನ್ನು ದೇವಸ್ಥಾನಕ್ಕೆ ಸೇರಿಸುವ ಪ್ರಯತ್ನ ಸಹ ಮಾಡಿದ್ದರು. ಆದರೇ ಎಲ್ಲಿ ಕಳೆದ ಚುನಾವಣೆಯಲ್ಲಿ ದೀವರ ಜನಾಂಗದ ಹಾಗೂ ಧರ್ಮದರ್ಶಿ ರಾಮಪ್ಪನವರ ಸಂಬಂಧಿ ಹರತಾಳು ಹಾಲಪ್ಪ ಬಿಜೆಪಿ ಯಿಂದ ಸಾಗರ ಕ್ಷೇತ್ರಕ್ಕೆ ಚುನಾವಣೆಗೆ ನಿಂತರೋ ಆ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪನವರ ಕಾಲು ಹಿಡಿದು ಕೆಲಸ ಮಾಡಿಸಿಕೊಳ್ಳುತಿದ್ದ ರಾಮಪ್ಪ ಹಾಲಪ್ಪನವರ ಪರ ಕೆಲಸ ಮಾಡುವ ಜೊತೆಗೆ ಚುನಾವಣೆ ಸಂದರ್ಭದಲ್ಲಿ ಕೋಟಿ ಗಟ್ಟಲೇ ಹಣ ಸುರಿದರು. ಈ ವಿಷಯ ಕಾಗೋಡು ತಿಮ್ಮಪ್ಪನವರಿಗೆ ನೋವು ತಂದಿತ್ತು.
ಇನ್ನು ಸಿಗಂದೂರು ದೇವಸ್ಥಾನದ ಮುಖ್ಯ ಅರ್ಚಕ ಶೇಷಗಿರಿ ಭಟ್ಟರನ್ನು ದೇವಸ್ಥಾನದಿಂದ ಓಡಿಸಬೇಕು ಎಂಬ ನಿರ್ಧಾರಕ್ಕೆ ಬಂದ ರಾಮಪ್ಪ,ದೇವಸ್ಥಾನದ ದೇವಿ ಪೂಜೆಗೆ ಹೊಸ ಮುಖ್ಯ ಅರ್ಚಕರನ್ನು ನೇಮಿಸಲು ಮುಂದಾದರು.ಆಗ ಬ್ರಾಹ್ಮಣ ಜನಾಂಗದ ವಿರೋಧ ಎದುರಿಸುವ ಜೊತೆ ಅವರ ಹಿಂದೆ ನಿಂತಿದ್ದ ಮಠವೊಂದರ ವಿರೋಧ ಕಟ್ಟಿಕೊಳ್ಳವ ತೊಂದರೆ ರಾಮಪ್ಪನಿಗೆ ಎದುರಾಯಿತು.ಆಗ ಬುದ್ದಿ ಓಡಿಸಿದ ರಾಮಪ್ಪನವರು ಸಾಗರ ತಾಲೂಕಿನಲ್ಲಿ ರಾಜಕೀಯ,ಸಾಮಾಜಿಕವಾಗಿ ಪ್ರಭಲವಾಗಿರುವ ತಮ್ಮ ಜನಾಂಗದ ಬೆಂಬಲ ಪಡೆಯಲು ಮುಂದಾದರು.ಇದರ ಮೊದಲ ಹಂತವಾಗಿ ತಮ್ಮ ಜನಾಂಗದ ಬೆಂಬಲ ಕ್ರೋಡೀಕರಿಸಿದರು. ಇದರ ಜೊತೆಗೆ ಸಾಗರ ತಾಲೂಕಿನ ಈಡಿಗ ಜನಾಂಗಕ್ಕೆ ಎತೇಚ್ಚ ದೇಣಿಗೆ ಸಹ ನೀಡುವ ಮೂಲಕ ತಾಲೂಕು ಈಡಿಗ ಜನಾಂಗದ ಸಂಘದ ಬೆಂಬಲ ಪಡೆದರು.ಈಡಿಗ ಸಮಾಜದ ಸಂಘಟನೆಯಾದ ಶ್ರೀ ನಾರಾಯಣಗುರು ಸಂಘದ ವತಿಯಿಂದ ಸಭೆ ನಡೆಸಿ ಶೇಷಗಿರಿ ಭಟ್ಟರ ಹಾಗೂ ತಮ್ಮ ನಡುವಿನ ಕಿರಿಕ್ ಪ್ರಸ್ತಾಪಿಸಿ ಬೆಂಬಲ ಪಡೆದರು.ಈ ಸಂದರ್ಭದಲ್ಲಿ ಈಡಿಗ ಸಂಘದ ಬುಲಾವಿನೊಂದಿಗೆ ಬಂದಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ರಾಮಪ್ಪನವರ ವಿರುದ್ಧ ಕಿಡಿಕಾರಿದರು.ಜೊತೆಗೆ ಚುನಾವಣೆಯಲ್ಲಿ ರಾಮಪ್ಪನವರು ನಡೆದುಕೊಂಡ ವರ್ತನೆ ಬಗ್ಗೆ ಪ್ರಸ್ತಾಪಿಸಿದ ಅವರು ಸಂಘದ ಮನವಿಯನ್ನು ಪುರಸ್ಕರಿಸಿ ಇಲ್ಲವೇ ಏನಾದರೂ ಮಾಡಿಕೊಳ್ಳಿ ಎಂದು ಜಾರಿಕೊಂಡರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೋಡಿಗಟ್ಟಲೇ ಆದಾಯವಿರುವ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಮುಜರಾಯಿಗೆ ಸೇರಿಸುವ ಕುರಿತು ಬೆಂಬಲಿಸಿದರು. ಆಗಲೇ ಶುರುವಾಗಿದ್ದು ಮುಜರಾಯಿ ಸೇರಿಸುವ ಪರ ವಿರೋಧದ ಮಾತುಗಳು.

ಸಿಗಂದೂರು ಮುಜರಾಯಿಗೆ ಸೇರಿಸಿ- ಡಿ.ಎಸ್.ಎಸ್ ಒತ್ತಾಯ.

ಈ ದೇವಸ್ಥಾನವನ್ನು ಸರ್ಕಾರ ವಶಕ್ಕೆ ಪಡೆಯಬೇಕು,ಅಲ್ಲಿನ ಭೂಮಿ ಒತ್ತುವರಿ,ಅಕ್ರಮ ಕುರಿತು ತನಿಖೆ ನಡೆಸಿ ಸಿಗಂದೂರಿನ ಶೇಷಗಿರಿ ಭಟ್ಟರ ಹಾಗೂ ರಾಮಪ್ಪನವರ ಆಸ್ತಿಯ ಬಗ್ಗೆ ತನಿಖೆ ನಡೆಸಿ ಅವರ ಸ್ವತ್ತನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಆಗಷ್ಟ್ 13 ರಂದು ದಲಿತ ಸಂಘರ್ಷ ಸಮಿತಿ ಸಾಗರ ಎಸಿ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯದ ಮನವಿ ಸಲ್ಲಿಸಿದೆ.

ಸಿಗಂದೂರು ದೇವಸ್ಥಾನ ಮುಜರಾಯಿಗೆ ಸೇರಿಸಿದ್ರೆ ಉಗ್ರ ಹೋರಾಟ!

ಇನ್ನು ಸಾಗರದ ನಾಗರೀಕ ವೇದಿಕೆ ಸದಸ್ಯರು ಸಿಗಂದೂರು ದೇವಸ್ಥಾನವನ್ನು ಮುಜರಾಯಿಗೆ ಸೇರಿಸಬಾರದೆಂದು ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಕ್ಷೇತ್ರ ಅಭಿವೃದ್ಧಿಗೆ ಧರ್ಮದರ್ಶಿ ರಾಮಪ್ಪ ಹಾಗೂ ಶೇಷಗಿರಿ ಭಟ್ಟರ ಶ್ರಮ ಹೆಚ್ಚಿದೆ.ಇವರ ಶ್ರಮದಿಂದ ದೊಡ್ಡ ಕ್ಷೇತ್ರವಾಗಿ ಸಿಗಂದೂರು ಬೆಳದಿದೆ. ಒಂದುವೇಳೆ ಮುಜರಾಯಿಗೆ ಸೇರಿಸಿದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ಯನ್ನು ನೀಡಿದ್ದಾರೆ.

ಇಬ್ಬರು ವ್ಯಕ್ತಿಗಳ ಸ್ವಾರ್ಥಕ್ಕಾಗಿ ಒಂದೆಡೆ ಸಿಗಂದೂರು ಚೌಡೇಶ್ವರಿ ಖಮಾಯಿ ಹಂಚಿಕೆಯ ಅಸಮದಾನ ಈಗ ಬೀದಿಗೆ ಬಂದಿದೆ. ಇದರ ಜೊತೆಗೆ ಸಾಗರ ತಾಲೂಕಿನಲ್ಲಿ ಪ್ರಭಲವಾಗಿರುವ ದೀವರು ಹಾಗೂ ಬ್ರಾಹ್ಮಣ ಜನಾಂಗ ಪರ ವಿರುದ್ಧ ನಿಂತಿದ್ದು ಮುಂದೊಂದು ದಿನ ಇದೇ ವಿಷಯದಲ್ಲಿ ಎರಡು ಜನಾಂಗದವರು ಹೊಡೆದಾಡಿಕೊಳ್ಳುವ ಸಂದರ್ಭ ಸಹ ಎದರಾದರೆ ಆಶ್ಚರ್ಯವಿಲ್ಲ.

ಮೂಕ ಪ್ರೇಕ್ಷಕರಾದ ಕರೂರು ಬಾರಂಗಿ ಜನತೆ!

ಸಿಗಂದೂರು ಲಾಂಚ್ .

ಸಾಗರ ತಾಲೂಕಿನ ಕರೂರು,ಬಾರಂಗಿ ಹೋಬಳಿಯ ವ್ಯಾಪ್ತಿಗೆ ಬರುತ್ತದೆ ಸಿಗಂದೂರು. ಈ ಹೋಬಳಿಯಲ್ಲಿ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ತುಂಬ್ರಿ ಗ್ರಾಮಪಂಚಾಯ್ತಿಗೆ ಸಿಗಂದೂರು ಸೇರುತ್ತದೆ. ಈ ಹೋಬಳಿ ಶರಾವತಿ ನದಿಯಿಂದಾಗಿ ದೇಶದ ಜನರಿಗೆ ಬೆಳಕು ನೀಡಲು ಎರಡು ಬಾರಿ ತಮ್ಮ ಸರ್ವಸ್ವವನ್ನು ನೀಡಿ ಈಗಲೂ ಕತ್ತಲ ಬದುಕು ಸಾಗಿಸುತಿದ್ದಾರೆ.ಶಿಕ್ಷಣ ಪಡೆಯಬೇಕೆಂದರೆ ಈ ದ್ವೀಪದ ಜನರು ಬೇರೆ ಊರುಗಳಲ್ಲಿ ಇದ್ದು ಹೋಗಬೇಕು, ವೈದ್ಯಕೀಯ ವ್ಯವಸ್ಥೆ ಮರೀಚಿಕೆ. ಬಾಳಂತಿಯರು,ಗರ್ಭವತಿಯರ ಸಮಸ್ಯೆ ಇಲ್ಲಿ ಕೇಳುವವರಿಲ್ಲ. ಸಿಗಂದೂರಿಗೆ ಬರುವ ಜನರಿಂದಾಗಿ ಪ್ರತಿ ದಿನ ಇಲ್ಲಿನ ಜನರು ಲಾಂಚ್ ನಲ್ಲಿ ಪ್ರಯಾಣಿಸುವುದೇ ದೊಡ್ಡ ಸಾಹಸವಾಗಿದ್ದು ಬರುವ ಪ್ರವಾಸಿಗರು ಹಾಗೂ ಸ್ಥಳೀಯ ಜನರ ನಡುವೆ ಪ್ರತಿ ಬಾರಿ ತಿಕ್ಕಾಟ ನಡೆಯುತಿದ್ದು ಠಾಣೆಯ ಮೆಟ್ಟಿಲೇರಿದ ಘಟನೆಗಳು ಸಾಕಷ್ಟಿವೆ.ಇನ್ನು ಸಿಗಂದೂರಿನಿಂದಾಗಿ ಈ ಹೋಬಳಿ ಒಂದಿಷ್ಟು ಅಭಿವೃದ್ಧಿ ಸಹ ಆಗಿದೆ.ಆದರೇ ಇದೆಲ್ಲದರ ನಡುವೆ ಜನರಿಗೆ ತೊಂದರೆ ಮಾತ್ರ ತಪ್ಪಿಲ್ಲ. ಇನ್ನು ಇಲ್ಲಿನ ಜನರು ಶಾಂತತೆಯಿಂದ ಇರುವ ಮುಗ್ದ ಜನ ಎಷ್ಟೇ ತೊಂದರೆಗಳಾದರೂ ತಮ್ಮ ನೋವನ್ನು ಹೊರಹಾಕದೇ ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡೇ ಬಂದಿದ್ದಾರೆ.ಮುಂದಿನ ದಿನಗಳಲ್ಲಿ ಸಿಗಂದೂರಿನ ಹುಂಡಿ ಜಗಳ ಯಾವ ಮಟ್ಟಕ್ಕೆ ಹೊಗುತ್ತದೆ ಎಂಬುದನ್ನು ಕಾದು ನೋಡಬೇಕಿದ್ದು ಸಿಗಂದೂರಿನ ದೇವಿ ಇವರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದಷ್ಟೇ ಹೇಳಬಹುದಾಗಿದ್ದು ಜನರ ಧಾರ್ಮಿಕ ಭಾವನೆ ಜೊತೆ ಚಲ್ಲಾಟವಾಡದೇ ಈ ಬಿಕ್ಕಟ್ಟು ಶಮನವಾಗಲಿ ಎಂಬುದೇ ನಮ್ಮ ಹಾರೈಕೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ