ಸಿಗಂದೂರಿಗೆ ಹರಿದುಬಂದ ಜನ ಸಾಗರ!ಗಾಳಿಗೆ ತೂರಿದ ಕರೋನಾ ನಿಯಮ!

539

ಶಿವಮೊಗ್ಗ :- ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು ನಿನ್ನೆ ಶನಿವಾರ ಹಾಗು ಇಂದು ಭಾನುವಾರ ಭರ್ಜರಿ ಜನ ಭೇಟಿ ನೀಡುತಿದ್ದಾರೆ. ಆದರೆ ಹೀಗೆ ಬರುವವರು ಕೋವಿಡ್ ಮಾರ್ಗಸೂಚಿ ಪಾಲಿಸದೆ ಇರುವುದು ಸ್ಥಳೀಯರಲ್ಲಿ ವೈರಸ್ ಹರಡುವ ಭೀತಿ ಕಾಡುತ್ತಿದೆ.

ಲಾಂಚ್‍ನಲ್ಲಿ ತೆರಳಲು ಮುಗಿ ಬಿದ್ದ ಜನ!

ಎರಡು ದಿನದಿಂದ ರಜೆ ಇರುವುದರಿಂದ ರಾಜ್ಯದ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ಭಕ್ತರು ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಬರುತ್ತಿದ್ದಾರೆ. ಶನಿವಾರ ಭಾರಿ ಸಂಖ್ಯೆಯ ಪ್ರವಾಸಿಗರು ಬಂದಿದ್ದರು. ಬಸ್ಸುಗಳ ಸಂಚಾರ ಸಂಪೂರ್ಣವಾಗಿ ಆರಂಭವಾಗಿಲ್ಲ. ಹಾಗಾಗಿ ಖಾಸಗಿ ವಾಹನಗಳಲ್ಲಿಯೆ ಜನರು ಬರುತ್ತಿದ್ದಾರೆ. ಜನರ ಸಂಖ್ಯೆ ಹೆಚ್ಚಿರುವುದರಿಂದ ಲಾಂಚ್‍ನಲ್ಲಿ ವಾಹನಗಳನ್ನು ಹತ್ತಿಸುತ್ತಿಲ್ಲ.ಜೊತೆಗೆ ಸ್ಥಳೀಯರ ಸಂಚಾರಕ್ಕೂ ದೊಡ್ಡ ತೊಂದರೆಯಾಗಿದೆ.

ಗಾಳಿಗೆ ತೂರಿದ ಕೋವಿಡ್ ನಿಯಮ!

ಸಿಗಂದೂರಿಗೆ ಬರುತ್ತಿರುವ ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮತ್ತು ಸ್ವಚ್ಛತೆ ಕಾಪಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಲಾಂಚ್‍ನಲ್ಲಿ ಜನದಟ್ಟಣೆ ಹೆಚ್ಚುವುದರಿಂದ ಅಂತರ ಕಾಪಾಡಿಕೊಳ್ಳುವುದು ಅಸಾಧ್ಯವಾಗುತ್ತಿದೆ.

ಲಾಂಚ್‍ನಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಸ್ಥಳೀಯರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಕೃಷಿ ಚುಟುವಟಿಕೆಗೆ ಯಾವುದೆ ವಾಹನಗಳು ಲಾಂಚ್‍ ಹತ್ತಿಸಲು ಆಗುತ್ತಿಲ್ಲ. ಇದರಿಂದ ರೈತರ ಕೆಲಸಗಳು ವಿಳಂಬವಾಗುತ್ತಿದೆ.

ಇನ್ನು, ಪ್ರವಾಸಿಗರು ಕೋವಿಡ್ ನಿಯಮ ಪಾಲಿಸದೆ ಇರುವುದು ಸ್ಥಳೀಯರಲ್ಲಿ ವೈರಸ್ ಭೀತಿ ಉಂಟು ಮಾಡುತ್ತಿದೆ. ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಬೇಕು. ಗ್ರಾಮ ಪಂಚಾಯಿತಿ ಅಥವಾ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ