BREAKING NEWS
Search

ನಿಮ್ಮಬಾಲ್ಯ ನೆನಪಿಸುತ್ತೆ ಗಂಟುಮೂಟೆ ಚಿತ್ರ! ಈ ವಾರ ತೆರೆಗೆ

294

ಬೆಂಗಳೂರು:- ಈ ವಾರವೇ ಬಿಡುಗಡೆಗೊಳ್ಳುತ್ತಿರುವ ರೂಪಾ ರಾವ್ ನಿರ್ದೇಶನದ ಚಿತ್ರ ಗಂಟುಮೂಟೆ. ಈಗಾಗಲೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಮತ್ತು ಮೆಚ್ಚುಗೆ ಪಡೆದುಕೊಂಡಿರುವ ಚಿತ್ರ.

ಚಿತ್ರರಂಗದ ಅನೇಕ ಗಣ್ಯರಿಗೆ ಈ ಸುನಿಮಾ ತೋರಿಸಲಾಗಿದೆ, ನೋಡಿದವರ ಕಣ್ಣುಗಳಲ್ಲಿ ಇದುವರೆಗೂ ನೋಡಿರದಿದ್ದ ಶೈಲಿಯ ಚಿತ್ರವೊಂದನ್ನು ಕಣ್ತುಂಬಿಕೊಂಡ ಖುಷಿಯನ್ನು ನಿರ್ದೇಶಕರು ಕಂಡಿದ್ದಾರೆ. ಇದನ್ನು ನೋಡಿದ ಕನ್ನಡದ ಕೆಲ ಯಶಸ್ವೀ ನಿರ್ದೇಶಕರಂತೂ ಇಂಥಾ ಕಥೆ ಮತ್ತು ನಿರೂಪಣೆಯ ಚಿತ್ರವನ್ನು ತಾವೆಂದೂ ನೋಡಿಲ್ಲ ಎಂದು ಮನಸಾರೆ ಈ ಚಿತ್ರವನ್ನು ಹೊಗಳಿದ್ದಾರೆ.

ನುರಿತ ನಿರ್ದೇಶಕರೇ ಮೆಚ್ಚಿಕೊಳ್ಳುತ್ತಾರೆಂದರೆ ಗಂಟುಮೂಟೆಯೊಳಗೆ ಎಂತೆಂಥಾ ತಾಜಾ ಸರಕುಗಳಿರಬಹುದೆಂದು ಯಾರಿಗಾದರೂ ಅಂದಾಜು ಸಿಗುತ್ತದೆ.

ಇದೆಲ್ಲವೂ ರೂಪಾ ರಾವ್ ಮತ್ತು ಚಿತ್ರತಂಡಕ್ಕೆ ಗೆಲುವಿನ ಭರವಸೆಯನ್ನೂ ಮೂಡಿಸಿವೆ. ರೂಪಾ ರಾವ್ ಪಾಲಿಗಿದು ಮೊದಲ ಚಿತ್ರ. ಈವರೆಗೆ ನಿರ್ದೇಶನ ವಿಭಾಗದಲ್ಲಿ ಸಾಕಷ್ಟು ಪಳಗಿಕೊಂಡಿರುವ ಇವರು ವೆಬ್ ಸೀರೀಸ್, ಕಿರುಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಗಂಟುಮೂಟೆಯೊಂದಿಗೆ ನಿರ್ದೇಶಕಿಯಾಗಿ ಆಗಮಿಸಿರುವ ಅವರ ಮುಂದೀಗ ಎಲ್ಲ ದಿಕ್ಕಿನಲ್ಲಿಯೂ ಸದಾಭಿಪ್ರಾಯಗಳೇ ಬಂದು ಮುತ್ತಿಕೊಳ್ಳುತ್ತಿವೆ.

ರೂಪಾ ರಾವ್ ಗಂಟುಮೂಟೆಯಲ್ಲಿ ಅಚ್ಚರಿಗೊಳ್ಳುವಂಥಾ ಅಂಶಗಳನ್ನು ಕಟ್ಟಿಟ್ಟಿದ್ದಾರೆಂಬುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಅದರ ಕೆಲ ಚಹರೆಗಳು ಮಾತ್ರವೇ ಟ್ರೇಲರ್ ಮೂಲಕ ಕಾಣಿಸಿದೆ. ಹೈಸ್ಕೂಲು ದಿನಗಳನ್ನು ಹಾದು ಬಂದ ಬಹುತೇಕರ ಎದೆಯಲ್ಲಿ ಒಂದು ನವಿರು ಪ್ರೇಮದ ಭಾವವಿರುತ್ತೆ. ಆ ನೆನಪುಗಳೂ ಇರುತ್ತವೆ. ಇದರಲ್ಲಿ ಘಟಿಸೋ ತೊಂಭತ್ತರ ದಶಕದ ಪ್ರೇಮಕಥೆ ಅದೆಲ್ಲವನ್ನೂ ಬಡಿದೆಬ್ಬಿಸೋದು ಗ್ಯಾರೆಂಟಿ. ಹದಿಹರೆಯದ ಹೊಸ್ತಿಲ ಪ್ರೀತಿ, ಪ್ರೇಮ, ಭ್ರಮೆ, ವಾಸ್ತವಗಳ ಚಿತ್ರಣ ಹೊಂದಿರೋ ಈ ಚಿತ್ರ ಕಮರ್ಶಿಯಲ್ ಫಾರ್ಮುಲಾಗಳನ್ನೂ ಲೇಪಿಸಿಕೊಂಡೇ ತಯಾರಾಗಿದೆ. ಇದು ಈ ವಾರವೇ ತೆರೆಗಾಣುತಿದ್ದು ಪ್ರೇಕ್ಷಕರ ಮುಂದೆ ಅಗ್ನಿ ಪರೀಕ್ಷೆಗೆ ಸಿದ್ದವಾಗಿದೆ.




Leave a Reply

Your email address will not be published. Required fields are marked *