ಬೆಂಗಳೂರು: ಸೆಪ್ಟೆಂಬರ್ 21 ರಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭವಾಗಲಿದ್ದು, 9-12 ನೇ ತರಗತಿ ಪ್ರಾರಂಭ ಮಾಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಕೇಂದ್ರ ಸರ್ಕಾರದ ಅನುಮತಿ ಮೇಲೆ ಶಾಲಾ-ಕಾಲೇಜು ಪ್ರಾರಂಭಕ್ಕೆ ಇಲಾಖೆ ನಿರ್ಧಾರ ಮಾಡಿದ್ದು, ಆರೋಗ್ಯ ಇಲಾಖೆ ಶಾಲಾ-ಕಾಲೇಜುಗಳ ಪ್ರಾರಂಭಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.
ಇನ್ನೆರೆಡು ದಿನಗಳಲ್ಲಿ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆ ಮಾರ್ಗಸೂಚಿ ಪಾಲಿಸಿ ಶಾಲೆಗಳ ಪ್ರಾರಂಭ ಮಾಡಲು ಇಲಾಖೆ ತೀರ್ಮಾನಿಸಿದೆ.
ಸೆಪ್ಟೆಂಬರ್ 21 ರಿಂದ ಕೇವಲ 9ರಿಂದ 12 ನೇ ತರಗತಿಗಳು ಮಾತ್ರ ಪ್ರಾರಂಭ ಆಗಲಿದೆ. ಬಳಿಕ ಹಂತ ಹಂತವಾಗಿ ಉಳಿದ ತರಗತಿಗಳು ಪ್ರಾರಂಭಕ್ಕೆ ಚಿಂತನೆ ನಡೆಸಿದೆ ಶಿಕ್ಷಣ ಇಲಾಖೆ.
ಶಾಲಾ ಮಾರ್ಗಸೂಚಿಗಳು ಹೀಗಿವೆ:-
- ಮಕ್ಕಳು ಶಾಲೆಗೆ ಕಡ್ಡಾಯವಾಗಿ ಬರುವಂತೆ ಒತ್ತಾಯ ಮಾಡುವಂತಿಲ್ಲ.
- ಶಾಲೆಗೆ ಬರುವ ಪ್ರತಿ ವಿದ್ಯಾರ್ಥಿಯೂ ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು.
- ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ ಮಾಡಬೇಕು.
- ಪ್ರತಿ ದಿನ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು.
- ಮಕ್ಕಳು ಹಾಗೂ ಸಿಬ್ಬಂದಿ ಮಾಸ್ಕ್, ಸ್ಯಾನಿಟೈಸ್ ಬಳಸುವುದು ಕಡ್ಡಾಯ.
- ಪ್ರತಿ ಕೊಠಡಿಗಳು ನಿತ್ಯ ಸ್ಯಾನಿಟೈಸ್ ಆಗಬೇಕು.
- ಮಕ್ಕಳು ಶಾಲಾ-ಆವರಣದಲ್ಲಿ ಗುಂಪು ಕಟ್ಟದಂತೆ ಎಚ್ಚರವಹಿಸಬೇಕು.
- ಶೌಚಾಲಯ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.
- ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಇರಬೇಕು.
- ಲೈಬ್ರರಿಯಲ್ಲಿ ಹೆಚ್ಚು ಮಕ್ಕಳು ಸೇರದಂತೆ ಕ್ರಮವಹಿಸಬೇಕು.
- ಆಟ, ಊಟ, ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆ ಮಾಡಬೇಕು.
- ಗುಂಪು ಕ್ರೀಡೆಗೆ ಅವಕಾಶವಿಲ್ಲ.
- ಮಕ್ಕಳು ಶಾಲೆಗೆ ಬರುವಾಗ, ಹೋಗುವಾಗ ಸಾಮಾಜಿಕ ಅಂತರದಲ್ಲಿ ಇರುವಂತೆ ಕ್ರಮವಹಿಸಬೇಕು.
- ಶಾಲಾ ಸಿಬ್ಬಂದಿ ಮಾಸ್ಕ್, ಗ್ಲೌಸ್ ಹಾಕಿಕೊಳ್ಳುವುದು ಕಡ್ಡಾಯ.
ಪೋಷಕರಿಂದ ಪರ-ವಿರೋಧ!
ಇನ್ನು ಬಹುತೇಕ ಪೊಷಕರು ಶಾಲಾ,ಕಾಲೇಜು ಪ್ರಾರಂಭಕ್ಕೆ ಪರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಲವು ಪೋಷಕರು ಕರೋನಾ ಸೋಂಕಿನ ಸಂಖ್ಯೆ ಕಡಿಮೆಯಾದ ನಂತರ ಮುಂದಿನ ವರ್ಷ ಪ್ರಾರಂಭಿಸಿ,ಇಲ್ಲವಾದರೇ ಮಕ್ಕಳಲ್ಲೂ ಕರೋನಾ ಸೋಂಕು ಹೆಚ್ಚಾಗುವ ಆತಂಕ ವ್ಯಕ್ತಪಡಿಸಿದರೆ ಇನ್ನು ಕೆಲವರು ತಮ್ಮ ಮಕ್ಕಳು ಹಳ್ಳಿಯಿಂದ ಬರಬೇಕು,ಆನ್ ಲೈನ್ ಶಿಕ್ಷಣ ಪಡೆಯಲು ನೆಟ್ಟರ್ಕ ಸಮಸ್ಯೆ ಎದುರಾಗುತ್ತದೆ ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತದೆ. ಶಾಲೆ ಹಾಗೂ ಕಾಲೇಜಿಗೆ ಹೋದರೆ ಮಾತ್ರ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.