ಶರಾವತಿ ಸಂತ್ರಸ್ಥರಿಗೆ ಪರಿಹಾರ ಕಲ್ಪಿಸಲು ಕಾರ್ಯ ಪಡೆ ರಚನೆಗೆ ಒತ್ತಾಯ- ಶಾಸಕ ಹಾಲಪ್ಪ

783

ಶಿವಮೊಗ್ಗ:- ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ವಿದ್ಯುತ್ ಯೋಜನೆಗಾಗಿ ತಮ್ಮ ಸರ್ವಸ್ವವನ್ನೂ ಆರು ದಶಕದ ಹಿಂದೆ ನೀಡಿ ಇಂದಿಗೂ ಪರಿಹಾರ ಸಿಗದೇ ಉಳಲು ಭೂಮಿಸಹ ದೊರೆಯದೇ ಸಂಕಷ್ಟದಲ್ಲಿರುವ 12000 ಕುಟುಂಬಗಳು ಇಂದಿಗೂ ಸಹ ಸೂಕ್ತ ಪರಿಹಾರಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ.

ಇವರಿಗೆ ಸರ್ಕಾರದಿಂದ ಅಲ್ಪ ಜಮೀನನ್ನು ಬಿಡಲಾಗಿದ್ದರೂ ಹಲವು ಕುಟುಂಬಗಳು ತಾವು ಪಡೆದ ಜಮೀನಿಗೆ ಹಕ್ಕುಪತ್ರ ಸಿಗದೆ ಇಂದಿಗೂ ತೊಂದರೆ ಅನುಭವಿಸುತಿದ್ದರೆ ,ಹಲವರು ಸೂಕ್ತ ಪರಿಹಾರಕ್ಕಾಗಿ ಇಂದಿಗೂ ಅಲೆದಾಡುತಿದ್ದಾರೆ.ಹೀಗಾಗಿ ಶರಾವತಿ ಸಂತ್ರಸ್ಥರಿಗೆ ಸೂಕ್ತ ಪರಿಹಾರಕ್ಕಾಗಿ ಕಾರ್ಯಪಡೆ ರಚನೆಯಾಗಬೇಕು ಎಂಬುದು ಸಾಗರ ತಾಲೂಕಿನ ಸಂತ್ರಸ್ಥರ ಕೂಗಾಗಿತ್ತು. ಇದರ ಬೆನ್ನಲ್ಲೇ ಸಾಗರದ ಶಾಸಕ ಹರತಾಳ ಹಾಲಪ್ಪ ಇಂದು ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ಧವೆ ಮತ್ತು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಹಾಗೂ ಅಡ್ವಕೆಟ್ ಜನರಲ್ ಪ್ರಭುಲಿಂಗ ನಾವಡಗಿ ಯವರನ್ನು ಭೇಟಿಯಾಗಿ ಶರಾವತಿ ಸಂತ್ರಸ್ಥರಿಗಾಗಿ ಕಾರ್ಯಪಡೆ ಅಥವಾ ವಿಶೇಷ ಸಮಿತಿ ರಚಿಸುವಂತೆ ಮನವಿ ನೀಡಿದರು.

ಶರಾವತಿ ವಿದ್ಯುತ್ ಯೋಜನೆಯಿಂದ ಸಂತ್ರಸ್ತರಾದ 12 ಸಾವಿರಕ್ಕೂ ಅಧಿಕ ಕುಟುಂಬಗಳನ್ನು ಜಿಲ್ಲೆಯ ವಿವಿಧೆಡೆ ಕಂದಾಯ ಮತ್ತು ಅರಣ್ಯ ಭೂಮಿಯಲ್ಲಿ ಬಿಡಲಾಯಿತು. ಸರ್ಕಾರದಿಂದ ಘೋಷಿತವಾದ ಪುನರ್ವಸತಿ ಸೌಲಭ್ಯಗಳಿಂದ ವಂಚಿತರಾಗಿ ಕೆಲವರು ಹಕ್ಕುಪತ್ರ ಸಿಗದೆ ಸಾಗುವಳಿ ಮಾಡಿಕೊಂಡು ಬದುಕುತ್ತಿದ್ದಾರೆ,ಇತ್ತೀಚೆಗೆ ನೇಮಕವಾದ ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಾರ್ಯವ್ಯಾಪ್ತಿ ನಿಯಮದ ಪ್ರಕಾರ ಅರಣ್ಯವೆಂದು ಘೋಷಣೆಯಾದ ಪ್ರದೇಶಕ್ಕೆ ಸೀಮಿತವಾಗಿದೆ.


ಜನಪರ ಕಾಳಜಿಯುಳ್ಳ ಕಾನೂನುಗಳ ಸೂಕ್ಷ್ಮತೆ ತಿಳಿದ ಅಧಿಕಾರಿಗಳ,ಜನಪ್ರತಿನಿಧಿಗಳ ಕಾರ್ಯಪಡೆ ರಚಿಸಬೇಕು, ಈ ಕಾರ್ಯಪಡೆ ಪುನರ್ವಸತಿ ಕಲ್ಪಿಸುವ ಬಗ್ಗೆ ಸಂತ್ರಸ್ಥರ ಹಾಲಿ ಸ್ವಾಧೀನದಲ್ಲಿರುವ 5 ಎಕರೆ ಜಮೀನಿನ ಹಕ್ಕುಪತ್ರ ಸಿಗುವಂತೆ ನಿಗಧಿ ಗೊಳಿಸಬಹುದಾಗಿದೆ.


ಕಾರ್ಯಪಡೆಯು ಕಾಲಕಾಲಕ್ಕೆ ಸಂತ್ರಸ್ಥರ ಊರುಗಳಲ್ಲಿ ಸಭೆ ನೆಡೆಸಿ, ಸರ್ವೇ ನಕ್ಷೆಯ ಮೇಲುಸ್ತುವಾರಿ ಮಾಡಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೆಳ ಹಂತದ ಅಧಿಕಾರಿಗಳು ಈ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಿಕೆಯಿಂದ ಕಟ್ಟ ಕಡೆಯ ಸಂತ್ರಸ್ಥನೂ ಬೆಳಕು ಕಾಣುವಂತೆ ಕ್ರಮ ಕೈಗೊಳ್ಳುವ ಬಗ್ಗೆ ಶಾಸಕ ಹಾಲಪ್ಪ ನವರು ಅಧಿಕಾರಿಗಳೊಂದಿಗೆ ಚರ್ಚಿಸಿ ಮನವಿ ನೀಡಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ