BREAKING NEWS
Search

ಶಿವಮೊಗ್ಗ ಜಿಲ್ಲೆಯಲ್ಲಿ ಏನೇನು ನಿರ್ಭಂಧ ವಿದೆ ಗೊತ್ತಾ? ಜಿಲ್ಲಾಧಿಕಾರಿಗಳು ಹೇಳಿದ್ದೇನು ಇಲ್ಲಿದೆ ನೋಡಿ.

512

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಸೇವೆಯನ್ನು ಹೊರತುಪಡಿಸಿ ಇತರ ಎಲ್ಲಾ ಸೇವೆಗಳನ್ನು ಭಾಗಶಃ ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಹಾಲು, ತರಕಾರಿ, ಔಷಧಿ, ದಿನಸಿ ವಸ್ತುಗಳು ಸೇರಿದಂತೆ ಅಗತ್ಯ ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ಮಾತ್ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶ ಮಾಡಲಾಗುವುದು. ಇನ್ನಿತರ ಉತ್ಪಾದನಾ ವಸ್ತುಗಳ ಮಳಿಗೆಗಳನ್ನು ಮಾರ್ಚ್ 31ರವರೆಗೆ ಮುಚ್ಚಲು ಸೂಚಿಸಲಾಗುವುದು. ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಬಸ್ ಸೇವೆಯನ್ನು ನಿರ್ಬಂಧಿಸಲಾಗುವುದು. ಸಾರ್ವಜನಿಕರು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಕೀಟ ನಾಶಕ ಸಿಂಪಡಿಸುವಿಕೆಗೆ ಕ್ರಮ

ನಗರ ವ್ಯಾಪ್ತಿಯಲ್ಲಿ ಕೀಟನಾಶಕ ಸಿಂಪಡಿಸುವಿಕೆ ಕಾರ್ಯವನ್ನು ನಿರಂತರವಾಗಿ ಮಾಡಬೇಕು. ಬಸ್ ನಿಲ್ದಾಣ, ಬಸ್‍ಗಳಿಗೆ ಸಹ ಕೀಟನಾಶಕ ಸಿಂಪಡಿಸುವಿಕೆ ಪ್ರತಿದಿನ ಮಾಡಲು ಸೂಚನೆ ನೀಡಲಾಗಿದೆ. ಹೂ ಹಣ್ಣು ಸೇರಿದಂತೆ ಎಲ್ಲಾ ಮಾರುಕಟ್ಟೆಗಳಿಗೆ ನಿಗದಿಪಡಿಸಲಾದ ವ್ಯವಹಾರ ಅವಧಿ ಮುಗಿದ ಬಳಿಕ ಸಂಪೂರ್ಣವಾಗಿ ಕೀಟನಾಶಕ ಸಿಂಪಡಿಸುವ ಕಾರ್ಯ ಕೈಗೊಳ್ಳಬೇಕು. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ದೊಡ್ಡ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಲಾಡ್ಜ್ ಗಳಿಗೆ ಎಚ್ಚರಿಕೆ :-

ತಮ್ಮಲ್ಲಿಗೆ ಬರುವ ಪ್ರತಿಯೊಬ್ಬರ ಪ್ರಯಾಣ ಇತಿಹಾಸ ಸೇರಿದಂತೆ ಸಮಗ್ರ ವಿವರಗಳನ್ನು ಪಡೆದ ಬಳಿಕ ಮಾತ್ರ ಕೋಣೆ ಒದಗಿಸುವಂತೆ ಎಲ್ಲಾ ಲಾಡ್ಜ್ ಮಾಲೀಕರಿಗೆ ಸೂಚನೆ ನೀಡಲಾಗಿದೆ. ವಿದೇಶಗಳಿಂದ ಅಥವಾ ಕರೋನಾ ಪೀಡಿತ ಜಿಲ್ಲೆಗಳಿಂದ ಆಗಮಿಸುವವರ ವಿವರಗಳನ್ನು ಸ್ಥಳೀಯ ಆಡಳಿತಕ್ಕೆ ತಕ್ಷಣ ನೀಡಲು ತಿಳಿಸಲಾಗಿದೆ. ಪ್ರತಿಯೊಬ್ಬರು ನೀಡಿರುವ ಮಾಹಿತಿಯನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಗಡಿ ಭಾಗದಲ್ಲಿ ಚೆಕ್‍ಪೋಸ್ಟ್

ಮಂಗಳೂರಿನಲ್ಲಿ ಕರೋನಾ ಪಾಸಿಟಿವ್ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಆಗಮಿಸುವ ವಾಹನಗಳನ್ನು ಹಾಗೂ ದಾವಣಗೆರೆಯಲ್ಲಿ ಕೋಳಿ ಜ್ವರ ಪ್ರಕರಣ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲು ಗಡಿಭಾಗದಲ್ಲಿ ಚೆಕ್‍ಪೋಸ್ಟ್ ತೆರೆಯಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮತ್ತಿತರರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *