ಶಿವಮೊಗ್ಗ: ಕಾಡಂಚಿನ ಜಮೀನುಗಳು ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಮಂಗಗಳ ಕಾಟದಿಂದ ರೈತರು ಬೇಸತ್ತು ಹೋಗಿದ್ದಾರೆ. ಆದರೇ, ತಾಲೂಕಿನ ಕಕ್ಕರಸಿ ಗ್ರಾಮದ ಉಳುಮೆ ಮಾಡಿದ ರೈತರೊಬ್ಬರು ಬೆಳೆ ರಕ್ಷಣೆಗಾಗಿ ಫ್ಲೆಕ್ಸ್ ಮತ್ತು ಸ್ಪೀಕರ್ ಮೊರೆ ಹೊಗಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಮಂಗಗಳ ಹಾವಳಿಯಿಂದ ಕೊಂಚವೂ ಬೆಳೆ ಲಭಿಸದೇ ಅಪಾರ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಿದ್ದರು.
ಇದಕ್ಕೆ ಹೊಸ ಮಾರ್ಗವನ್ನು ಕಂಡುಕೊಂಡ ಮೂಲತಃ ಜೇಡಗೇರಿ ಗ್ರಾಮದ ಜೆ.ಎಸ್. ಚಿದಾನಂದ ಗೌಡ, ಸ್ಪೀಕರ್ಗಳ ಮೊರೆ ಹೋಗಿದ್ದಾರೆ.
ಸುಮಾರು ೪ಎಕರೆ ಭೂ ಪ್ರದೇಶದಲ್ಲಿ ಬೆಳೆದ ಬೆಳೆಗಳನ್ನು ರಕ್ಷಣೆ ಮಾಡಿಕೊಂಡಿರುವ ಜೊತೆಗೆ ನೆರೆಯ ಜಮೀನುಗಳು ಮಂಗಗಳ ಹಾವಳಿಯಿಂದ ವಿಮುಕ್ತಿ ಹೊಂದಿವೆ.
ಪ್ಲಕ್ಸ ಮತ್ತು ಸ್ಪೀಕರ್ ಅಳವಡಿಸಿದ ವೀಡಿಯೋ ನೋಡಿ:-
ಬೆಳೆ ರಕ್ಷಣೆಗೆ ಸ್ಪೀಕರ್ ಮೊರೆ

ನೀರಾವರಿ ಸೌಲಭ್ಯವಿಲ್ಲದೇ ಮಳೆಯನ್ನೇ ನಂಬಿ ಕಷ್ಟಪಟ್ಟು ಬೆಳೆದ ಜೋಳದ ಬೆಳೆ ಮಂಗಗಳ ಪಾಲಾಗುತ್ತಿತ್ತು.
ಮಂಗಗಳು ಜಮೀನಿಗೆ ಲಗ್ಗೆ ಇಡುವುದನ್ನು ತಪ್ಪಿಸಲು ಸ್ಪೀಕರ್ ಜೋಡಿಸಿದರೇ ಹೇಗೆ ಎಂಬ ಉಪಾಯ ಹೊಳೆದಿದ್ದೇ ಸರಿ, ತಾವೇ ಸ್ಪತಃ ಕೂಗುವ ಮತ್ತು ನಾಯಿಗಳು ಬೊಗಳುವ ಶಬ್ಧವನ್ನು ಮೊಬೈಲ್ನಲ್ಲಿ ಧ್ವನಿ ಮುದ್ರಿಸಿಕೊಂಡು, ಮೈಕ್ರೋ ಚಿಪ್ ಮೂಲಕ ಸ್ಪೀಕರ್ಗಳಿಗೆ ಅಳವಡಿಸಿ, ಜೋಳದ ಸಾಲಿನಲ್ಲಿ ಮರೆಮಾಚಿದಂತೆ ಅಳವಡಿಸಲಾಗಿದೆ.
ಜೊತೆಗೆ ಜಮೀನಿನ ಸುತ್ತ ನಾಯಿ, ಹುಲಿ, ಉಲ್ಟಾ ತೂಗು ಹಾಕಿದ ಮಂಗಗಳ ಫ್ಲೆಕ್ಸ್ಗಳನ್ನು ಹಾಕಿದ್ದಾರೆ.
ಇತ್ತ ನಾಯಿ ಕೂಗುವ ಶಬ್ದ ಕೇಳಿದ್ದೇ ತಡ ಮಂಗಗಳು ಕಾಲ್ಕಿತ್ತು, ಪುನಃ ಕಾಡು ಸೇರುತ್ತಿದ್ದು, ಇದರಿಂದ ಬೆಳೆ ರಕ್ಷಣೆ ಸಾಧ್ಯವಾಗಿದೆ ಎನ್ನುತ್ತಾರೆ ರೈತ ಚಿದಾನಂದ ಗೌಡ.
ಅರಣ್ಯ ಇಲಾಖೆಯಿಂದ ಪರಿಹಾರ:
೨೦೧೮ನೇ ಸಾಲಿನಲ್ಲಿ ಕಾಡುಕೋಣಗಳ ಹಾವಳಿಯಿಂದ ೪ ಎಕರೆ ಜಮೀನಿನಲ್ಲಿ ಬೆಳೆದ ಜೋಳದ ಬೆಳೆ ಸಂಪೂರ್ಣವಾಗಿ ನಾಶವಾಗಿತ್ತು.
ಈ ಸಂಬಂಧ ಅರಣ್ಯ ಇಲಾಖೆಗೆ ದೂರನ್ನು ಸಹ ಸಲ್ಲಿಸಲಾಗಿತ್ತು.
ಸ್ಪಂದಿಸಿದ ಇಲಾಖಾ ಅಧಿಕಾರಿಗಳು ಸುಮಾರು ೧೯ ಸಾವಿರ ರೂ., ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು ಎಂಬುದು ಗಮನಾರ್ಹ ಸಂಗತಿ.
ಕಡಿಮೆ ಖರ್ಚಿನಲ್ಲಿ ಯಶಸ್ಸು!

ಬೆಳೆ ರಕ್ಷಣೆಗಾಗಿ ಅಳವಡಿಸಿದ ಸ್ಪೀಕರ್, ಮೈಕ್ರೋಚಿಪ್, ವಯರ್ ಸೇರಿ ಇತರೆ ಎಲೆಕ್ಟ್ರಾನಿಕ್ ವಸ್ತುಗಳಿಗೆ ತಗುಲಿದ ವೆಚ್ಚ ಕೇವಲ ೨ ಸಾವಿರ ರೂ.
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಟದಿಂದ ಕೆಲವೊಮ್ಮೆ ಸ್ಪೀಕರ್ ಕಾರ್ಯನಿರ್ವಹಿಸುವುದಿಲ್ಲ.
ಆದ್ದರಿಂದ ಬ್ಯಾಟರಿಯನ್ನು ಸಹ ಅಳವಡಿಸಿದ್ದರಿಂದ ವಿದ್ಯುತ್ ಇಲ್ಲದ ಸಮಯದಲ್ಲೂ ಸ್ಪೀಕರ್ಗಳು ಕಾರ್ಯನಿರ್ವಹಿಸುತ್ತಿವೆ.
ಒಟ್ಟಾರೆಯಾಗಿ ಜಮೀನಿನಲ್ಲಿ ಸ್ಪೀಕರ್ ಅಳವಡಿಕೆಯಿಂದ ಮಂಗಗಳು ಸೇರಿ ಇತರೆ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಯಾಗಿದೆ.
“ಸರ್ಕಾರದಿಂದ ಮಂಗಗಳ ಹಾವಳಿ ತಪ್ಪಿಸಲು ಮಂಕಿ ಪಾರ್ಕ್ ನಿರ್ಮಿಸಿ, ಕೋಟ್ಯಂತರ ರೂ ವ್ಯಯಿಸುವ ಬದಲು, ರೈತರಿಗೆ ಸೋಲಾರ್ ಮತ್ತಿತರರ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಕಾಡಿನಲ್ಲಿ ವಾಸಿಸುವ ಮಂಗಗಳನ್ನು ಒಂದಡೆ ಬಂಧಿಸುವುದು ಪ್ರಕೃತಿಯ ಮೇಲೆಯೇ ಪರಿಣಾಮ ಬೀರಲಿದೆ.
ಮಂಗಗಳನ್ನು ಕೊಲ್ಲುವುದು ಮಹಾಪಾಪ ಎಂದೇ ಭಾವಿಸಲಾಗುತ್ತದೆ. ಚಿದಾನಂದ ಗೌಡರು ಕಂಡು ಕೊಂಡ ಉಪಾಯ ರೈತ ಸಮುದಾಯಕ್ಕೆ ಮಾದರಿಯಾಗಿದೆ ಎನ್ನುತ್ತಾರೆ ಜಿಲ್ಲಾ ಪತ್ರಬರಹಗಾರ ಹಾಗೂ ಯಶಸ್ಸಿ ರೈತ ದಿವಾಕರ್ ಆನವಟ್ಟಿ”.
ತಾಲೂಕಿನ ಕಕ್ಕರಸಿ ಗ್ರಾಮದ ನಾಲ್ಕು ಎಕರೆ ಜಮೀನಿನಲ್ಲಿ ಈ ಹಿಂದೆ ಸುಮಾರು ಮೂರು ವರ್ಷಗಳಿಂದ ಒಂದಲ್ಲಾ ಒಂದು ರೀತಿ ಕಾಡು ಪ್ರಾಣಿಗಳ ಹಾವಳಿಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದೇನೆ. ಮಂಗಗಳು ಹಾಗೂ ಇತರೆ ಕಾಡು ಪ್ರಾಣಿಗಳು ಜಮೀನಿಗೆ ಲಗ್ಗೆ ಇಡುವುದನ್ನು ತಪ್ಪಿಸಲು ಫ್ಲೆಕ್ಸ್ಗಳು ಹಾಗೂ ಸ್ಪೀಕರ್ಗಳನ್ನು ಅಳವಡಿಸಿದ್ದು, ಯಶಸ್ಸು ಸಿಕ್ಕಿದೆ. ಉತ್ತಮೆ ಬೆಳೆ ಕೈಗೆಟುಕುವ ನಿರೀಕ್ಷೆಯಲ್ಲಿದ್ದೇನೆ.
- ಜೆ.ಎಸ್. ಚಿದಾನಂದಗೌಡ ಜೇಡಗೇರಿ, ರೈತ.
