ಶರಾವತಿ ಒಡಲಲ್ಲಿ ಬರಲಿದೆ ಮತ್ತೊಂದು ಯೋಜನೆ! ತಲಕಳಲೆ ಮತ್ತು ಗೇರುಸೊಪ್ಪದಲ್ಲಿ ನಿರ್ಮಾಣಕ್ಕೆ ಸಿದ್ದತೆ?

443

ಶಿವಮೊಗ್ಗ:-ಶರಾವತಿ ಒಡಲಿನಲ್ಲಿ ಮತ್ತೊಂದು ವಿದ್ಯತ್ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ.

Photo courtesy Google

ಈಗಾಗಲೇ ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಹರಿಸುವ ವಿವಾದಿತ ಯೋಜನೆ ಬೆನ್ನಲ್ಲೇ ಇನ್ನೊಂದು ಯೋಜನೆಗೆ ನೀಲಿ ನಕ್ಷೆ ರೂಪಗೊಂಡಿದೆ.

ಶರಾವತಿ ಕಣಿವೆಯಲ್ಲಿ ವಿದ್ಯುತ್ ಸ್ಥಾವರ ಸ್ಥಾಪಿಸುವ ಯೋಜನೆಗೂ ಸರ್ಕಾರ ಮುಂದಾಗಿದೆ. ಪಂಪ್ಡ್ ಸ್ಟೋರೇಜ್ ಮೂಲಕ ಶರಾವತಿ ನೀರು ಬಳಸಿಕೊಂಡು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ಯೋಜನೆಗೆ ಪೂರಕವಾಗಿ ಸಮಗ್ರ ಯೋಜನಾ ವರದಿ ತಯಾರಿಸಲು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ , ತಲಕಳಲೆ ಮತ್ತು ಗೇರುಸೊಪ್ಪದಲ್ಲಿ ತಲಾ 250 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದ ಎಂಟು ಘಟಕಗಳ ಸ್ಥಾವರಗಳನ್ನು ಸ್ಥಾಪಿಸುವ ಈ ಯೋಜನೆಗೆ 378 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 370 ಅರಣ್ಯ ಭೂಮಿ ಸೇರಿದೆ.

Photo courtesy Google

2017ರಲ್ಲಿ ರೂಪಿಸಿದ್ದ ಯೋಜನೆಗೆ ಇದಾಗಿದ್ದು 4,862 ಕೋಟಿ ರೂ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು.

15 ಬೋರ್‌ವೆಲ್‌ಗಳನ್ನು ಕೊರೆಯಲು ಉದ್ದೇಶಿಸಲಾಗಿದ್ದು, ಇದರಲ್ಲಿ 12 ಬೋರ್‌ವೆಲ್‌ಗಳು ಅರಣ್ಯದಲ್ಲಿ ನಿರ್ಮಾಣ ವಾಗಲಿದೆ.

ಇತ್ತೀಚೆಗೆ ಮಲೆನಾಡಿನ ಶರಾವತಿ ನದಿ ಯಿಂದ ಬೆಂಗಳೂರಿಗೆ ನೀರಿನ ದಾಹ ನೀಗಿಸಲು ಲಿಂಗನಮಕ್ಕಿ ಜಲಾಶಯದ ನೀರನ್ನು ಬಳಸಿಕೊಳ್ಳುವ ಯೋಜನೆ ವಿರುದ್ಧ ದೊಡ್ಡ ಹೋರಾಟ ನಡೆದಿತ್ತು .

ನಂತರ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದ್ದು ಈಗ ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಯಡಿಯೂರಪ್ಪ ನವರ ನೇತ್ರತ್ವದ ಸರ್ಕಾರ ಉತ್ಸುಕವಾಗಿದೆ.

ಯೋಜನೆಗೆ ವಿರೋಧ ಬೇಡ ಅಂದ್ರು ಜಿಲ್ಲಾ ಉಸ್ತುವಾರಿ ಸಚಿವ!

ಇಂದು ಶರಾವತಿ ನದಿ ಪ್ರದೇಶದಲ್ಲಿ ಹೊಸ ವಿದ್ಯುತ್ ಯೋಜನೆಗೆ ಯಾರೂ ಕೂಡ ವಿರೋಧಿಸಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ವಿದ್ಯುತ್ ಇಲ್ಲದೇ ಜನರಿಗೆ ತೊಂದರೆಯಾಗುತ್ತಿದೆ ,ದೀಪದ ಬುಡದಲ್ಲಿ ಕತ್ತಲು ಎನ್ನುವಂತೆ ಈ ಭಾಗದಲ್ಲಿ ಹಲವು ಗ್ರಾಮಗಳಿಗೆ ವಿದ್ಯುತ್ ಸಮರ್ಪಕವಾಗಿ ಇಲ್ಲ ಹಾಗಾಗಿ ಯಾರೋ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಬಾರದು.

ಅರಣ್ಯ ನಾಶವಾಗುತ್ತದೆ ಎಂದು ವಿದ್ಯುತ್ ನಿಲ್ಲಿಸಲು ಸಾಧ್ಯವಿಲ್ಲ ಹಾಗೆಯೇ ವಿದ್ಯುತ್ ಉತ್ಪಾದನೆಗೆ ಅರಣ್ಯ ನಾಶ ಮಾಡುವುದು ಸರಿಯಲ್ಲ,ಅರಣ್ಯ ನಾಶವೂ ಆಗಬಾರದು ವಿದ್ಯುತ್ ಉತ್ಪಾದನೆಯೂ ಆಗಬೇಕು ಈ ಬಗ್ಗೆ ತಜ್ಞರ ಜೊತೆ ಚರ್ವಿಸಿ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
Leave a Reply

Your email address will not be published. Required fields are marked *