ರಾಣಿ ಚೆನ್ನಮ್ಮ ಕಾಲದ ಅಪರೂಪದ ಪಚ್ಚೆ ಲಿಂಗ ದರ್ಶನ! ಹೇಗಿದೆ ಗೊತ್ತಾ?

591

ಶಿವಮೊಗ್ಗ: 22 ವರ್ಷಗಳ ಕಾಲ ಅಜ್ಞಾತ ವಾಸ ಅನುಭವಿಸಿದ್ದ ಅಪರೂಪದ ಪಚ್ಚೆ ಶಿವಲಿಂಗವೊಂದು ಸರ್ಕಾರದ ಮಧ್ಯ ಪ್ರವೇಶದಿಂದಾಗಿ ಇಂದಿ ಸಾರ್ವಜನಿಕರಿಗೆ ದರ್ಶನ ಭಾಗ್ಯ ದೊರೆತಿದೆ.

600 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ 1 ಕೆಜಿ ತೂಕದ ಪಚ್ಚೆ ಲೋಹದ, ಮೋಹಕ ಶಕ್ತಿ ಹೊಂದಿರೋ ಲಿಂಗದ ಇತಿಹಾಸ ಕೇಳಿದರೆ ಎಂತವರೂ ಇದನ್ನು ನೋಡಲು ಇಚ್ಚಿಸದಿರರು.

ಪಚ್ಚೆ ಲಿಂಗದ ಇತಿಹಾಸ ಹೀಗಿದೆ..

ವೀರಶೈವ ಸಾಮ್ರಾಜ್ಯದ ಮೊದಲ ರಾಜ ಚೌಡಪ್ಪ ನಾಯಕರಿಂದ ಪ್ರಾರಂಭವಾಗಿ ಮುಮ್ಮಡಿ ಸೋಮಶೇಖರ ನಾಯಕರ ವರೆಗೆ 263 ವರ್ಷಗಳ ಕಾಲ ವೈಭವದಿಂದ ಆಳ್ವಿಕೆ ನೆಡೆಸಿದ ರಾಜಮನೆತನದಿಂದ ಉಡುಗರೆಯಾಗಿ ಬಂದಿರುವಂತದ್ದೇ ಕೆಳದಿ ಮಠದ ಪಚ್ಚೆಲಿಂಗ.

ಪ್ರಪಂಚದಲ್ಲೇ ಅತೀ ವಿರಳವಾದ ಸರ್ವ ಶ್ರೇಷ್ಠ ಪಚ್ಚೆಲಿಂಗವು ಕೆಳದಿ ಅರಸ ರಾಮರಾಜ ನಾಯಕರು (1571-1583 ಆಳ್ವಿಕೆ ಅವಧಿ) ತಾವೇ ಕಟ್ಟಿಸಿದ್ದ ಬಂದಗದ್ದೆ ಯ ಹಿರೇಮಠದ ರೇವಣ್ಣ ಸಿದ್ದೇಶ್ವರರಿಗೆ ಹರಕೆ ರೂಪದಲ್ಲಿ ಉಡುಗರೆಯಾಗಿ ನೀಡಿದ್ದರು.

ಇದರ ನಂತರ ಬಂದಗದ್ದೆ ಮಠದಲ್ಲಿ ಪ್ರತಿ ವಿಜಯ ದಶಮಿಯ ವಿಶೇಷ ದಿನದಂದು ಇದರ ಪೂಜೆ ಗೈಯುತ್ತಾ ಸಾರ್ವಜನಿಕರಿಗೆ ದರ್ಶನಕ್ಕೆ ಇಡಲಾಗುತಿತ್ತು.

ಅಪರೂಪದ ಪಚ್ಚೆ ಲಿಂಗ ಬ್ಯಾಂಕ್ ನಲ್ಲಿ ಅಡವಿಟ್ಟರು.!

ಕೆಳದಿ ರಾಣಿ ಚೆನ್ನಮ್ಮಾಜಿ ಸೇರಿ ಕೆಳದಿ ಅರಸರ ಪಾಲಿಗೆ ರಾಜಗುರುವಿನ ಸ್ಥಾನ ಮಾನದೊಂದಿಗೆ ಮೆರೆದ ಈ ಮಠಕ್ಕೆ ಸರಿ ಸುಮಾರು 600 ವರ್ಷದ ಹಿಂದೆ ಅಂದಿನ ಅರಸರು ಅಪರೂಪದ ಮತ್ತು ಅಮೂಲ್ಯವಾದ ಪಚ್ಚೆ ಶಿವಲಿಂಗವನ್ನು ನೀಡಿದ್ದರು. ಅಂದಿನಿಂದ ಪ್ರತಿ ವರ್ಷದ ನವರಾತ್ರಿಯೂ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಅದಕ್ಕೆ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು.

ಆದರೆ ಮಠದ ಹಿಂದಿನ ಸ್ವಾಮೀಜಿಯವರು ಶಿವಮೊಗ್ಗದ ಅಂದಿನ ಸ್ಟೇಟ್​ ಬ್ಯಾಂಕ್​ ಆಫ್​ ಮೈಸೂರು ಬಿ.ಎಚ್​.ರಸ್ತೆ ಶಾಖೆಯಲ್ಲಿ ಪಚ್ಚೆ ಲಿಂಗವನ್ನಿಟ್ಟು ಸಾಲ ಪಡೆದಿದ್ದರು.

ನಂತರದಲ್ಲಿ ಆ ಸಾಲ ಬೆಳೆದು ಸುಮಾರು ₹2.80 ಲಕ್ಷದಷ್ಟಾಗಿತ್ತು. ಜೊತೆಗೆ ಮಠದ ಆಡಳಿತದ ಕುರಿತು ಸಾಕಷ್ಟು ಅಡ್ಡಿ ಆತಂಕಗಳು ಎದುರಾದವು. ಹಾಗಾಗಿ 1996-97 ರಿಂದ ನವರಾತ್ರಿ ಸಂದರ್ಭದಲ್ಲಿ ಅಪರೂಪದ ಪಚ್ಚೆಲಿಂಗ ದರ್ಶನ ನಿಂತು ಹೋಯಿತು.

ಆದರೆ, ಅಪರೂಪದ ಪಚ್ಚೆ ಲಿಂಗದ ದರ್ಶನ ಭಾಗ್ಯ ಸಿಗಲಿಲ್ಲವಲ್ಲ ಎಂಬ ಕೊರಗು ಮಠದ ಈಗಿನ ಸ್ವಾಮೀಜಿ, ಭಕ್ತರು ಹಾಗೂ ಗ್ರಾಮದ ಜನರನ್ನು ಕಾಡುತ್ತಲೇ ಇತ್ತು. ಇದರ ಪರಿಣಾಮ ಈ ಬಾರಿಯ ನವರಾತ್ರಿ ಸಂದರ್ಭದಲ್ಲಿ ಏನಾದರೂ ಮಾಡಿ ಪಚ್ಚೆ ಶಿವಲಿಂಗದ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಕೂಗು ಕೇಳಿ ಬಂತು. ಇದಕ್ಕೆ ಸ್ಥಳೀಯ ಶಾಸಕ ಹರತಾಳು ಹಾಲಪ್ಪ ಸಹ ದನಿಗೂಡಿಸಿದರು. ನಂತರ ಮಠದ ಸ್ವಾಮೀಜಿ ಹಾಗೂ ಭಕ್ತರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಇದಕ್ಕೆ ಸ್ಪಂದಿಸಿದ ಸಿಎಂ ಈ ಬಾರಿಯ ನವರಾತ್ರಿ ಸಂದರ್ಭದಲ್ಲಿ ಪಚ್ಚೆ ಶಿವಲಿಂಗದ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಡಿಸಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಾಗರದ ತಹಸೀಲ್ದಾರ್​ಗೆ ಪತ್ರ ಬರೆದ ಡಿಸಿ ಅಗತ್ಯ ಸಿಬ್ಬಂದಿ ಮತ್ತು ಪೊಲೀಸ್​ ಭದ್ರತೆಯೊಂದಿಗೆ ಶಿವಮೊಗ್ಗದ ಬಿ.ಎಚ್​.ರಸ್ತೆಯ ಎಸ್​ಬಿಐ ಶಾಖೆಯಿಂದ ಪಡೆದುಕೊಂಡು ಸಾಗರದ ಉಪ ಖಜಾನೆಯಲ್ಲಿಟ್ಟು ಇಂದು ಬಂದಗದ್ದೆ ಕೆಳದಿ ರಾಜಗುರು ಮಠದಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8ರ ತನಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಇಂದು ಸಾರ್ವಜನಿಕ ದರ್ಶನದ ನಂತರ ಯಥಾ ಪ್ರಕಾರ ಶಿವಮೊಗ್ಗದ ಎಸ್​ಬಿಐ ಶಾಖೆಯ ಸೇಫ್​ ಲಾಕರ್​ನಲ್ಲಿಡಲಾಗುವುದು.
Leave a Reply

Your email address will not be published. Required fields are marked *