ಶರಾವತಿಯ ಒಡಲಲ್ಲಿ ಮೌನವಾಗಿ ಕುಳಿತ ಹಿರೇಭಾಸ್ಕರ ಆಣೆಕಟ್ಟಿನ ಕಥೆ ಕೇಳಿ

1527

ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಳೆ ತಲೆಮಾರಿನ ಜನರಿಗೆ ಹಿರೇ ಭಾಸ್ಕರ ಆಣೇಕಟ್ಟು ಎಂದರೇ “ಆ ದಿನಗಳು” ನೆನಪಿಗೆ ಬರುತ್ತದೆ.
ಸತತ 16 ವರ್ಷ ಈ ದೇಶಕ್ಕೆ ವಿದ್ಯುತ್ ನೀಡಿದ ಈ ಆಣೆಕಟ್ಟು ಈಗ ಇತಿಹಾಸ ಸೇರಿದೆ. ಬಿರು ಬೇಸಿಗೆಯಲ್ಲಿ ಸಾಗರ ತಾಲೂಕಿನ ಶರಾವತಿ ನದಿ ಸಂತ್ರಸ್ತರ ಕಣ್ಣಿಗೆ ಕಾಣಿಸಿಕೊಂಡು ನೆನಪಿನ ಬುತ್ತಿ ಬಿಚ್ಚುವ ಈ ಆಣೆಕಟ್ಟು ಈಗ ಕೇವಲ ನೆನಪು ಮಾತ್ರ .

ಇದರ ಚಿಕ್ಕ ಪರಿಚಯವನ್ನು ಮತ್ತೊಮ್ಮೆ ನೆನಪಿಸಿ ಓದುಗರೊಂದಿಗೆ ಹಂಚಿಕೊಳ್ಳುತಿದ್ದೇವೆ .

ಸಾಗರ ತಾಲೂಕಿನ ಶರಾವತಿ ನದಿ ಒಡಲಿನ ಹಿರೆಭಾಸ್ಕರ ಡ್ಯಾಮ್

ಹಿರೆಭಾಸ್ಕರ ಡ್ಯಾಮಿನ ಹೊರನೋಟ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಂಬರಿ ಭಾಗದ ಶರಾವತಿ ನದಿ ಭಾಗದಲ್ಲಿ ಈ ಆಣೆಕಟ್ಟು ನಿರ್ಮಾಣವಾಗಿದೆ.
ಬಹುತೇಕ ಅರ್ಧ ಶತಮಾನದಿಂದ ಲಿಂಗನಮಕ್ಕಿಯಲ್ಲಿ ಮುಳುಗಿದ್ದರೂ ಸುಸ್ಥಿರವಾಗಿರುವ ಹಿರೇಭಾಸ್ಕರ ಆಣೆಕಟ್ಟು. ತಜ್ಞ ಸಿವಿಲ್ ಇಂಜಿನಿಯರ್ ಗಣೇಶ ಐಯ್ಯರ್ ರವರ ನಿರ್ಮಾಣವಿದು.

ಅದು 1937-38ರ ಅವಧಿ. ಮಾದರಿ ಮೈಸೂರಿನ ನಿರ್ಮಾತೃ ನಾಲ್ವಡಿಯವರು ಮಹಾಮಾತ್ಯ ಮುತ್ಸದ್ದಿ ಮಿರ್ಜಾ ಇಸ್ಮಾಯಿಲ್ಲರ ದಿವಾನಗಿರಿಯಲ್ಲಿ ನಾಡು ಕಟ್ಟುವ ಕಾಯಕದಲ್ಲಿ ನಿರತರಾಗಿದ್ದ ಕಾಲ. ಶಿವನಸಮುದ್ರದ ವಿದ್ಯುತ್ ಸ್ಥಾವರದ ಎಲ್ಲ ವಿಸ್ತರಣೆ ಮುಗಿದು ಅದರ ಸಾಮರ್ಥ್ಯ 45 ಮೆಗಾವಾಟ್ಟಿಗೆ ಮುಟ್ಟುವ ಹಂತ.

ಶಿಂಷಾದಲ್ಲಿ 17.2 ಮೆಗಾವಾಟ್ ಸಾಮರ್ಥ್ಯದ ಹೊಸ ವಿದ್ಯುದಾಗರ ಕಾರ್ಯಾರಂಭಕ್ಕೆ ಅಣಿಗೊಳ್ಳುತ್ತಿದ್ದ ಸಂದರ್ಭ. ಆದರೂ ಮೈಸೂರು ರಾಜ್ಯಕ್ಕೆ ವಿದ್ಯುತ್ ಕೊರತೆಯ ಭಯ.ಮಹಾರಾಜರು ನಿವೃತ್ತ ಮುಖ್ಯ ಇಂಜಿನಿಯರ್ ಎಸ್ ಕೆ ಶೇಷಾಚಾರ್ ನೇತೃತ್ವದಲ್ಲಿ ಪವರ್ ಕಮಿಟಿಯೊಂದನ್ನು ನೇಮಕ ಮಾಡಿ, ವಿದ್ಯುತ್ ಕೊರತೆ ಉಂಟಾಗದಂತೆ ಕೈಗೊಳ್ಳಬೇಕಿರುವ ಉಪಕ್ರಮಗಳ ಕುರಿತು ಸಲಹೆ ನೀಡಲು ಸೂಚಿಸಿದಾಗ ಆ ಕಮಿಟಿ ನೀಡಿದ ಸಲಹೆ ಶರಾವತಿಯನ್ನು ಪಳಗಿಸಬೇಕೆಂದು. ಸರಿ, ಕೃಷ್ಣರಾವ್ ಎಂಬ ತಜ್ಞ ಸಿವಿಲ್ ಇಂಜಿನಿಯರ ಮೂಲಕ ಸರ್ವೆ ನಡೆಸಿ ಶರಾವತಿಯಿಂದ ವಿದ್ಯುತ್ ಉತ್ಪಾದಿಸುವ ಉದ್ದೇಶಕ್ಕೆ ನಿರ್ಮಿಸಲು ತೊಡಗಿದ ಆಣೆಕಟ್ಟೆಯೇ ಹಿರೇಭಾಸ್ಕರ ಅಥವಾ ಮಡೇನೂರು ಆಣೆಕಟ್ಟೆ.

ಹಿರೆಭಾಸ್ಕರ ಡ್ಯಾಮ್ ಒಳಭಾಗದ ದೃಶ್ಯ

ಹಿರೆಭಾಸ್ಕರ ಡ್ಯಾಮ್ ನ ಒಳ ನೋಟ

ಈ ಯೋಜನೆಗಾಗಿ 1939 ರ ಫೆಬ್ರುವರಿ ಐದರಂದು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಜೋಗದಲ್ಲಿ ಅಡಿಗಲ್ಲನ್ನಿಡುತ್ತಾರೆ. ಶ್ರೀ ಸುಬ್ಬರಾವ್ ಎಂಬ ಅಧೀಕ್ಷಕ ಇಂಜಿನಿಯರ್ ನೇತೃತ್ವದಲ್ಲಿ ಮಡೇನೂರಿನಲ್ಲಿ 114ಅಡಿ ಎತ್ತರದ ಸುಮಾರು ಇಪ್ಪತ್ತೈದು ಟಿ ಎಂ ಸಿ ಸಂಗ್ರಹ ಸಾಮರ್ಥ್ಯದ ಜಲಾಶಯದ ನಿರ್ಮಾಣಕಾರ್ಯ ಆರಂಭವಾಗುತ್ತದೆ.

ಇಡೀ ಆಣೆಕಟ್ಟೆಯ ನಿರ್ಮಾಣ ಸುರ್ಕಿ ಅಂದರೆ ಗಾರೆಯಿಂದ ನಿರ್ಮಾಣವಾಗುತ್ತದೆ. ಜಲಾಶಯದ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ನಿಯಂತ್ರಿತವಾಗಿ ಹೊರಬಿಡಲು ಆರು ಗೇಟುಗಳನ್ನು ಅಳವಡಿಸಲಾದರೆ,ಪ್ರವಾಹದ ನೀರನ್ನು ಹೊರಗೆ ಹಾಕಲು ವಿಶೇಷ ಮಾದರಿಯ ಹನ್ನೊಂದು ಸೈಫನ್ ಗಳನ್ನು ಅಳವಡಿಸಲಾಯಿತು.ಈ ಸೈಫನ್ಗಳು ವೊಲ್ಯೂಟ್ ಮಾದರಿಯ ಸೈಫನ್ಗಳಾಗಿದ್ದು ಇವನ್ನು ತಜ್ಞ ಸಿವಿಲ್ ಇಂಜಿನಿಯರ್ ಗಣೇಶ ಐಯ್ಯರ್ ರವರು ನಿರ್ಮಿಸಿರುತ್ತಾರೆ.ಇವುಗಳು ಸುಮಾರು ಹದಿನೆಂಟು ಅಡಿ ವ್ಯಾಸವನ್ನು ಹೊಂದಿದ್ದು,ತಲಾ ಹನ್ನೊಂದು ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರನ್ನು ಹೊರಹಾಕುವ ಸಾಮರ್ಥ್ಯ ಹೊಂದಿವೆ. ಹಿರೇಭಾಸ್ಕರವನ್ನು ಕುರಿತು ಬರೆದ ಅನೇಕ ಲೇಖನಗಳಲ್ಲಿ,ಈ ಆಣೆಕಟ್ಟು ಸರ್ ಎಂ ವಿಶ್ವೇಶ್ವರಯ್ಯನವರ ನಿರ್ಮಾಣವರಂದು ತಪ್ಪಾಗಿ ಉಲ್ಲೇಖಿಸಿರುವುದು ಕಂಡುಬರುತ್ತದೆ.ಆದರೆ ಈ ಆಣೆಕಟ್ಟೆಗೂ ಸರ್ ಎಂ ವಿ ಯವರಿಗೂ ಯಾವುದೇ ಸಂಬಂಧವಿರುವುದಿಲ್ಲ.

ಈ ಜಲಾಶಯ ತನ್ನ ನಿರ್ಮಾಣ ಮುಕ್ತಾಯವಾದ ಹದಿನಾರೇ ವರ್ಷದಲ್ಲಿ ಮುಳುಗಿಹೋಗುವಂತಾದದ್ದು ನಾಡಿನ ದೌರ್ಭಾಗ್ಯ.

ಈ ಜಲಾಶಯ 1947ರಲ್ಲಿ ಪೂರ್ಣಗೊಂಡು ಅದೇ ವರ್ಷ ಇದರಲ್ಲಿ ಜಲಸಂಗ್ರಹಣೆ ಆರಂಭವಾಗುತ್ತದೆ.

ಇದರ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಮಹಾತ್ಮಾ ಗಾಂಧೀ ಜಲವಿದ್ಯುದಾಗರ 1948ರ ಫೆಬ್ರವರಿ 21ರಂದು ಆರಂಭಗೊಳ್ಳುತ್ತದೆ. ಇದು ಒಟ್ಟು 120 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿತ್ತು. ಆದರೆ ಮುಂದೆ 1954 ರಲ್ಲಿ ಹಳೆಯ ಮೈಸೂರು ರಾಜ್ಯ ವಿಶಾಲ ಕರ್ನಾಟಕವಾಗಿ ವಿಸ್ತರಣೆಗೊಂಡಾಗ ರಾಜ್ಯದಲ್ಲಿ ವಿದ್ಯುತ್ ಕೊರತೆ ತೀವ್ರವಾಯಿತು.

ಸರ್ಕಾರ ಹೆಚ್ ಇ ಸಿ ಪಿ ಯ ಮೂಲಕ ಶರಾವತಿಯ ಪೂರ್ಣ ಸಾಮರ್ಥ್ಯ ಬಳಸಲು ಉದ್ದೇಶಿಸಿದಾಗ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟುವುದು ಅನಿವಾರ್ಯವಾಯಿತು.

1964ರಲ್ಲಿ ಲಿಂಗನಮಕ್ಕಿ ಆಣೆಕಟ್ಟೆ ನಿರ್ಮಾಣವಾದಾಗ ಹಿರೇಭಾಸ್ಕರ ಅದರಲ್ಲಿ ಸಂಫೂರ್ಣ ಮುಳುಗಡೆಯಾದದ್ದಲ್ಲದೇ ಅದರ ಮೇಲೆ ಸುಮಾರು ನಲವತ್ತೊಂದು ಅಡಿ ನೀರು ನಿಲ್ಲತೊಡಗಿತು.

ಲಿಂಗನಮಕ್ಕಿಯ ಪೂರ್ಣಮಟ್ಟ ಸಮುದ್ರಮಟ್ಟದಿಂದ 1819 ಅಡಿ ; ಆದರೆ ಹಿರೇಭಾಸ್ಕರ 1774ಅಡಿ. ಹೀಗೆ ಹಿರೇಭಾಸ್ಕರ 1964 ರಿಂದ ಪ್ರತಿವರ್ಷ ಮುಳುಗಡೆಯಾಗುತ್ತದೆ.

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಇದು ನಮ್ಮ ಕಣ್ಣಿಗೆ ಬೀಳುತ್ತದೆ.

ಪ್ರತಿವರ್ಷ ಮೇ ತಿಂಗಳ ಅಂತ್ಯ ಇದನ್ನು ನೋಡಲು ಸೂಕ್ತಕಾಲ. ಅಂದಿನ ನಿರ್ಮಾತೃಗಳ ಕರ್ತೃತ್ವ ಶಕ್ತಿಗೆ ನಿದರ್ಶನವಾಗಿ ,ಆ ಆಣೆಕಟ್ಟು ನೀರಿನಲ್ಲಿ ಮುಳುಗಿ ಐವತ್ತಕ್ಕೂ ಹೆಚ್ಚು ವರ್ಷವಾದರೂ ಅತ್ಯಂತ ಸುಸ್ಥಿತಿಯಲ್ಲಿ ಇಂದಿಗೂ ಇದೆಯೆಂದರೆ ನಮಗೆ ಆಶ್ಚರ್ಯವಾಗುತ್ತದೆ.

ಅದರ ಎರಡೂ ಬದಿಗೆ ಲಿಂಗನಮಕ್ಕಿ ಹಿನ್ನೀರು ತುಂಬಿದ್ದರೂ ಅದು ಅದ್ಭುತವಾಗಿ ಗೋಚರಿಸುತ್ತದೆ.

ಲೇಖನ ಮತ್ತು ಫೋಟೋ: ಶ್ರೀಯುತ ಡಾ. ಗಜಾನನ ಶರ್ಮಾ,ನಿವೃತ್ತ ಕೆ ಪಿ ಸಿ ಅಧಿಕಾರಿ
Leave a Reply

Your email address will not be published. Required fields are marked *

error: Content is protected !!