BREAKING NEWS
Search

ಶಿವಮೊಗ್ಗ-ಮನೆಗೆ ಬೀಗ ಜಡಿದು ಊರಬಿಟ್ಟ ಮನೆಮನೆ ಗ್ರಾಮಸ್ಥರು!ಅವರು ಹೋಗಿದ್ದೆಲ್ಲಿಗೆ ಗೊತ್ತಾ?

1574

ಸೊರಬ: ಮಲೆನಾಡಿನ ಪಾಲಿಗೆ ಹಲವು ಆಚರಣೆಗಳು, ವಿಭಿನ್ನ ಸಂಪ್ರದಾಯಗಳು. ವಿವಿಧ ಜನಪದ ಆಚರಣೆಗಳು. ಈ ಸಾಲಿಗೆ ತಾಲ್ಲೂಕಿನ ಮನೆಮನೆ ಗ್ರಾಮದಲ್ಲಿ ನಡೆದ ಹಬ್ಬವೊಂದು ವಿಶೇಷತೆಗೆ ಸಾಕ್ಷಿಯಾಗಿದೆ.

ಹೌದು, ಗ್ರಾಮದಲ್ಲಿ ಹಮ್ಮಿಕೊಂಡ ಚೌಡಮ್ಮನ ಹಬ್ಬದ ಅಂಗವಾಗಿ ಗ್ರಾಮಸ್ಥರೆಲ್ಲ ಒಗ್ಗೂಡಿ ಒಂದೇ ಕಡೆ ಊಟ ಮಾಡುವ ಮೂಲಕ ವಿಶಿಷ್ಟ ಆಚರಣೆಗೆ ಸಾಕ್ಷಿಯಾದರು.

ಒಕ್ಕಲು ಮುಗಿದ ತರುವಾಯ ನೂತನ ವರ್ಷದ ಆರಂಭದ ಜನವರಿ ತಿಂಗಳಿನಲ್ಲಿಯೇ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ಆರಂಭಕ್ಕೂ ಮೊದಲು ಮಂಗಳವಾರದಂದು ಶ್ರೀ ಮಾರಿಕಾಂಬೆ ಸೇರಿ ಊರ ದೇವರುಗಳಿಗೆ ಖಾರದ ನೈವೇದ್ಯ ಅರ್ಪಿಸಿದರೆ, ನಂತರದ ಶುಕ್ರವಾರ ಬನದ ಚೌಡಮ್ಮನಿಗೆ ಸಿಹಿ ನೈವೇದ್ಯ ಅರ್ಪಿಸುವ ಜೊತೆಗೆ ಕುಟುಂಸ್ಥರೆಲ್ಲ ಒಗ್ಗೂಡಿ ಸಹ ಭೋಜನ ಮಾಡುವುದು ವಾಡಿಕೆ.

ಒಲೆ ಹಚ್ಚಬಾರದಂತೆ!

ತಲತಲಾಂತರದಿಂದ ಗ್ರಾಮದಲ್ಲಿ ನಡೆದುಕೊಂಡು ಬಂದ ಸಂಪ್ರದಾಯ ವರುಷದಲ್ಲಿ ಒಮ್ಮೆ ಮನೆಯಲ್ಲಿ ಒಲೆ ಹಚ್ಚಬಾರದು ಎಂಬುದು ವಾಡಿಕೆ. ಈ ನಿಟ್ಟಿನಲ್ಲಿ ಗ್ರಾಮದ ಎಲ್ಲ ಮನೆಯವರು ಮನೆಗಳಿಗೆ ಬೀಗ ಹಾಕಿ ಅಡುಗೆಗೆ ಬೇಕಾದ ಪದಾರ್ಥಗಳೊಂದಿಗೆ ಬನದ ಚೌಡಮ್ಮನ ಸನ್ನಿಧಿಗೆ ತೆರಳಿ ಅಡುಗೆ ತಯಾರಿಸಿ, ಶ್ರೀ ದೇವಿಗೆ ಹಾಗೂ ಸಹ ದೇವರುಗಳಿಗೆ ನೈವೇದ್ಯ ಅರ್ಪಿಸಿಯೇ ಪ್ರಸಾದದ ರೂಪದಲ್ಲಿ ಊಟ ಸವಿಯುತ್ತಾರೆ.

ಗ್ರಾಮದ ಒಗ್ಗಟ್ಟಿಗೆ ಸಾಕ್ಷಿ

ದೀವರು ( ಈಡಿಗ) ಸಮುದಾಯದವರೇ ಹೆಚ್ಚಿರುವ ಗ್ರಾಮದಲ್ಲಿ ಎಲ್ಲ ಸಮುದಾಯವರು ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗುತ್ತಾರೆ. ಇತ್ತಿಚಿನ ಕೆಲ ವರ್ಷಗಳಿಂದ ಆಧುನಿಕತೆಗೆ ಸಿಲುಕಿದ ಜನತೆ ಸಂಪ್ರದಾಯಗಲ್ಲೂ ಕೆಲ ಬದಲಾವಣೆ ಮಾಡಿಕೊಂಡು ಪೂಜಾ ಸಮಯಕ್ಕೆ ಸಿದ್ಧ ಪಡಿಸಿದ ಅಡುಗೆಯೊಂದಿಗೆ ಬನಕ್ಕೆ ಆಗಮಿಸುತ್ತಾರೆ ಎನ್ನುತ್ತಾರೆ ಗ್ರಾಮ ಸಮಿತಿ ಅಧ್ಯಕ್ಷ ಅಣ್ಣಪ್ಪ.

ಗ್ರಾಮದಲ್ಲಿನ‌ ಚಿತ್ರಣ

ಹಬ್ಬದ ಅಂಗವಾಗಿ ಗ್ರಾಮಸ್ಥರೆಲ್ಲಾ ಬನ ಸೇರಿದ ಹಿನ್ನೆಲೆಯಲ್ಲಿ ಬಹುತೇಕ ಮನೆಗಳಿಗೆ ಬೀಗ ಜಡಿಯಲಾಗಿತ್ತು. ಇಲ್ಲಿ ಹಿರಿಯ ಪ್ರಾಥಮಿಕ ಶಾಲೆಗೂ ಸ್ಥಳಿಯ ರಜೆ ಘೋಷಣೆ ಮಾಡಲಾಗಿತ್ತು. ಇದರಿಂದ ಕೆಲ ಗಂಟೆಗಳ ಸಮಯ ಗ್ರಾಮವೇ ಬಿಕೋ ಎನ್ನುತ್ತಿತ್ತು. ಆದರೆ, ಬನದ ಚೌಡಮ್ಮನ ಸನ್ನಿಧಿಯಲ್ಲಿ ಸಂಭ್ರಮ ಎಡೆಮಾಡಿತ್ತು.

ಆಧುನಿಕತೆ ಮತ್ತಿತರ ಪಾಶ್ಚತ್ಯ ಸಂಸ್ಕೃತಿಗಳ ಅನುಕರಣೆಯ ನಡುವೆ ಗ್ರಾಮೀಣ ಭಾಗದಲ್ಲಿ ಮಾತ್ರ ಇಂತಹ ಆಚರಣೆಗಳು ಉಳಿದುಕೊಂಡು ಬಂದಿರುವುದು ಸಂತಸದ ವಿಷಯವೇ ಸರಿ.

ವರದಿ: ದವಿಕ ಸೊರಬ




Leave a Reply

Your email address will not be published. Required fields are marked *