BREAKING NEWS
Search

ಶಿವಮೊಗ್ಗ ಜಿಲ್ಲೆಯಲ್ಲಿ 129 ಕರೋನಾ ಪಾಸಿಟಿವ್ -ಸಚಿವರ ಕಚೇರಿಗೂ ಅಂಟಿದ ಕರೋನಾ!

263

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 129 ಕೊರೊನಾ ಪಾಸಿಟಿವ್ ದೃಢಪಡುವ ಮೂಲಕ ಜಿಲ್ಲೆಯಲ್ಲಿ 1952 ಜನರಿಗೆ ಸೊಂಕು ತಗುಲಿದೆ.

21 ಜನ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಯಿಂದ ಇಂದು ಗುಣಮುಖರಾಗಿ ಬಿಡುಗಡೆಯಾಗಿದ್ದು
ಇದುವರೆಗೆ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆಯಾದವರು 1024 ಆಗಿದ್ದು ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಕೇಸ್ 928 ಕ್ಕೆ ಏರಿಕೆ ಕಂಡಿದೆ.

ಇನ್ನು ಜಿಲ್ಲೆಯಲ್ಲಿ ಮೂರು ಜನ ಕೊರೊನಾ ಸೋಂಕಿನಿಂದ ಸಾವು ಕಂಡಿದ್ದು ಕೊರೊನಾ ಸೋಂಕಿಗೆ ಇದುವರೆಗೆ ಮೃತಪಟ್ಟವರು 37 ಕ್ಕೆ ಏರಿಕೆ ಕಂಡಿದೆ.

ಇಂದಿನ ತಾಲೂಕುವಾರು ವಿವರ:-

ಶಿವಮೊಗ್ಗ : 59

ಭದ್ರಾವತಿ : 32

ಶಿಕಾರಿಪುರ : 23

ಸಾಗರ : 02

ಹೊಸನಗರ : 01

ತೀರ್ಥಹಳ್ಳಿ : 07

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕಚೇರಿ ಸೀಲ್ ಡೌನ್ ಮಾಡಲಾಗಿದೆ.ನಗರದ ನೆಹರು ರಸ್ತೆಯಲ್ಲಿರುವ ಸಚಿವರ ಕಚೇರಿಯ ಸಿಬ್ಬಂದಿಗೆ ಇಂದು ಕರೋನಾ ದೃಡಪಟ್ಟ ಹಿನ್ನಲೆಯಲ್ಲಿ ಸಚಿವರ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಮಾನವೀಯತೆ ಮೆರೆದ ಸಾಗರ ಗ್ರಾಮಾಂತರ ಪಿ.ಎಸ್ .ಐ

ಸಾಗರ:- ತಮಿಳುನಾಡು ಮೂಲದ ಮಾನಸಿಕ ಅಸ್ವಸ್ಥ ಮಹಿಳಯೊಬ್ಬರು ಬಟ್ಟೆಯನ್ನೇ ಧರಿಸದೇ ವಿವಸ್ತ್ರವಾಗಿ ಓಡಾಡುತ್ತಿದ್ದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ನಡೆದಿದೆ. ಬಕ್ರೀದ್ ಹಬ್ಬದ ಪ್ರಯುಕ್ತ ತಾಳಗುಪ್ಪಕ್ಕೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು ಆಗಮಿಸಿದ್ದ ಸಾಗರ ಗ್ರಾಮಾಂತರ ಠಾಣೆಯ ಎಎಸ್ ಐ ಮೀರಾಬಾಯಿ ವಿವಸ್ತ್ರದಲ್ಲಿ ಓಡಾಡುತ್ತಿದ್ದ ಮಹಿಳೆಯನ್ನು ಗಮನಿಸಿ ಕೂಡಲೇ ಇತರೆ ಸಿಬ್ಬಂದಿಗಳ ಸಹಾಯದಿಂದ ವಿವಸ್ತ್ರಳಾದ ಮಹಿಳೆಗೆ ಬಟ್ಟೆ ಧರಿಸಿ, ದೈಹಿಕವಾಗಿ ಹಸಿವಿನಿಂದ ಬಳಲುತ್ತಿದ್ದ ಮಹಿಳೆಗೆ ತಿಂಡಿ, ನೀರು ನೀಡಿ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ‌ ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್ ಆಸ್ಪತ್ರೆ ಮೂಲಭೂತ ಸಮಸ್ಯೆ ಕುರಿತು ಸಚಿವ ಈಶ್ವರಪ್ಪ ಚರ್ಚೆ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಮೂಲಭೂತ ಸೌಲಭ್ಯದ ಕೊರತೆ ಮತ್ತು ವೈದ್ಯರಿಂದ ನಿರ್ಲಕ್ಷ್ಯ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ, ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಯಾವ ರೀತಿ ಕ್ರಮಕೈಗೊಳ್ಳಬೇಕೆಂಬ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಸಿಮ್ಸ್ ಸಭಾಂಗಣದಲ್ಲಿ ಮೆಗ್ಗಾನ್ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಆಡಳಿತದ ಸಿಬ್ಬಂದಿ ಜೊತೆ ಚರ್ಚೆ ನಡೆಸಿದರು.
ಪ್ರಸ್ತುತ ದಿನಂಪ್ರತಿ ಕೋವಿಡ್ ರೋಗಿಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಅಗತ್ಯವಿರುವ ಕ್ರಮಗಳ ಬಗ್ಗೆ ವೈದ್ಯರಿಂದ ಸಲಹೆ ಸೂಚನೆಗಳನ್ನು ಕೇಳಲಾಯಿತು. ಈ ಸಂದರ್ಭದಲ್ಲಿ ಡಿ ಗ್ರೂಪ್ ಸಿಬ್ಬಂದಿ ಮತ್ತು ಸ್ಟಾಫ್ ನರ್ಸ್ ಗಳು, ವೆಂಟಿಲೇಟರ್ ಗಳ ಕೊರತೆ, ಆಕ್ಸಿಜನ್ ಬೆಡ್ ಗಳ ಕೊರತೆ, ಮೊದಲಾದವುಗಳ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.
ನಾನ್ ಕೋವಿಡ್ ವಾರ್ಡ್ ನಲ್ಲಿ ಕನಿಷ್ಠ ವಾರಕ್ಕೆ ಎರಡು ಪಾಸಿಟಿವ್ ಕೇಸ್ ಬಂದಾಗ ಆಗುವ ಸಮಸ್ಯೆಗಳು ಮತ್ತು ಕೊರೋನಾ ವಾರಿಯರ್ಸ್ ಗಳಾದ ವೈದ್ಯರು ಮತ್ತು ವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿಗೆ ಪಾಸಿಟಿವ್ ಬಂದಾಗ ಚಿಕಿತ್ಸೆ ಪಡೆಯಲು ಪ್ರತ್ಯೇಕ ವಾರ್ಡ್ ಅವಶ್ಯಕತೆ ಬಗ್ಗೆ ಸಚಿವರ ಗಮನಸೆಳೆಯಲಾಯಿತು.
ಆಸ್ಪತ್ರೆ ಸಲಹಾ ಸಮಿತಿ ಸದಸ್ಯ ಡಾ. ಗೌತಮ್ ಮಾತನಾಡಿ, 24 ಗಂಟೆ ಫಾರ್ಮಸಿ ಸೇವೆ ಸದ್ಯಕ್ಕೆ ಲಭ್ಯವಾಗುತ್ತಿಲ್ಲ. ಕೊರೋನಾ ವಾರಿಯರ್ಸ್ ಗೆ ಪ್ರತ್ಯೇಕ ವಾರ್ಡ್ ಮೀಸಲಿಡಬೇಕು. ನಾನ್ ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಹೆಚ್ಚುವರಿ ಹಾಸಿಗೆ ಸೌಲಭ್ಯ ಬೇಕಿದೆ. ಅಗತ್ಯವಾದ ಸಿಬ್ಬಂದಿಗಳ ನೇಮಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸಿಮ್ಸ್ ಆಡಳಿತ, ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು. ಕೋವಿಡ್ ರೋಗಿಗಳು ಮತ್ತು ಅವರ ಸಂಬಂಧಿಕರಿಂದ ಹಲವಾರು ದೂರು ಬರುತ್ತಿರುವ ಹಿನ್ನಲೆಯಲ್ಲಿ ಪ್ರತಿ ದೂರನ್ನು ಶಾಸಕರೇ ಬಗೆಹರಿಸಲು ಸಾಧ್ಯವಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮತ್ತು ವೈದ್ಯರು ತಮ್ಮ ಆತ್ಮ ಸಾಕ್ಷಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಕೋವಿಡ್ ರೋಗಿಗಳು ಇರುವ ವಾರ್ಡ್ ಗಳಲ್ಲಿ ಸಲಹಾ ಪೆಟ್ಟಿಗೆ ಸ್ಥಾಪಿಸಿ ಅದರಲ್ಲಿ ರೋಗಿಗಳ ಹೆಸರು, ಸಮಸ್ಯೆ, ಮೊಬೈಲ್ ನಂಬರ್ ದಾಖಲಿಸಿ ಆ ಪೆಟ್ಟಿಗೆಗೆ ಹಾಕುವಂತೆ ಸೂಚಿಸಬೇಕು. ಆ ಪೆಟ್ಟಿಗೆಯಲ್ಲಿ ಸಲಹೆಗಳನ್ನು ಪ್ರತಿನಿತ್ಯ ಸಿಮ್ಸ್ ಆಡಳಿತ ಪರಿಶೀಲಿಸಿ ದೂರುಗಳ ಬಗ್ಗೆ ಕೂಡಲೇ ಕ್ರಮಕೈಗೊಂಡು ಸಂಬಂಧಪಟ್ಟ ರೋಗಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕು. ಆಗ ಈ ಅಪಪ್ರಚಾರ ಕಡಿಮೆಯಾಗಬಹುದು. ರೋಗಿಗೂ ಸಮಾಧಾನವಾಗಬಹುದು. ಅದನ್ನು ಮೀರಿ ಏನಾದರೂ ಲೋಪಗಳಿದ್ದಲ್ಲಿ ಸರಿಪಡಿಸುವಲ್ಲಿ ಕೂಡಲೇ ಕ್ರಮವಹಿಸಬೇಕು. ಈಗಾಗಲೇ ಇನ್ನೂ 450 ಬೆಡ್ ಗಳ ವ್ಯವಸ್ಥೆ ಕೋವಿಡ್ ಮತ್ತು ನಾನ್ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದ್ದು, ಅಗತ್ಯವಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಬೆಡ್ ಒದಗಿಸಲು ಕ್ರಮಕೈಗೊಳ್ಳಲಾಗಿದ್ದು, ಸದ್ಯಕ್ಕೆ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 100 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ಸಾವಿನ ಸಂಖ್ಯೆ ಏರುತ್ತಿರುವುದಕ್ಕೆ ಕಾರಣವೇನೆಂದು ವೈದ್ಯರಿಗೆ ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಸ್ಯಾಂಪಲ್ ಟೆಸ್ಟ್ ಆಗುತ್ತಿದ್ದು, ಪಾಸಿಟಿವ್ ಸಂಖ್ಯೆ ಹೋಲಿಸಿದರೆ, ಸಾವಿನ ಪ್ರಮಾಣ ಬೇರೆ ಜಿಲ್ಲೆಗಳಿಗಿಂತ ಕಡಿಮೆ ಇದ್ದು, ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಿರುವ ಏರಿಯಾಗಳಲ್ಲಿ ಎರಡೆರಡು ಆಂಟಿಜೆನ್ಸ್ ಟೆಸ್ಟ್ ಮಾಡುವ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಾಸಿಟಿವ್ ಕೇಸ್ ಸಂಖ್ಯೆ ಹೆಚ್ಚಳವಾದಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಜಿಲ್ಲಾಧಿಕಾರಿ ಸಚಿವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಡಿ.ಎಸ್. ಅರುಣ್, ಸಿಇಒ ಎಂ.ಎಲ್. ವೈಶಾಲಿ, ಎಡಿಸಿ ಅನುರಾಧಾ, ಸಿಮ್ಸ್ ನಿರ್ದೇಶಕ ಡಾ. ಸಿದ್ದಪ್ಪ, ವೈದ್ಯಕೀಯ ಅಧೀಕ್ಷಕ ಡಾ. ಶ್ರೀಧರ್, ಜಿಲ್ಲಾ ಸರ್ಜನ್ ಡಾ. ರಘುನಂದನ್, ಆಸ್ಪತ್ರೆ ಸಲಹಾ ಸಮಿತಿಯ ಡಾ. ಗೌತಮ್, ಡಾ. ವಾಣಿಕೋರಿ, ದಿವಾಕರ್ ಶೆಟ್ಟಿ ಮೊದಲಾದವರಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ