BREAKING NEWS
Search

ಶಿವಮೊಗ್ಗ ದಲ್ಲಿ ಸಾವಿರ ಗಡಿದಾಟಿದ ಕರೋನಾ ಪಾಸಿಟಿವ್! ಯಾವ ತಾಲೂಕಿನಲ್ಲಿ ಎಷ್ಟು ವಿವರ ಇಲ್ಲಿದೆ

1169

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಕರೋನ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಇಂದು 84 ಮಂದಿಗೆ ಕರೋನ ಪಾಸಿಟಿವ್ ಬಂದಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1017ಕ್ಕೆ ಏರಿಕೆಯಾಗಿದೆ.

84 ಪಾಸಿಟಿವ್‍ ಪೈಕಿ ಶಿವಮೊಗ್ಗ ತಾಲೂಕಿನ 35, ಭದ್ರಾವತಿಯ 5, ಸೊರಬದ 5, ಶಿಕಾರಿಪುರದ 26, ತೀರ್ಥಹಳ್ಳಿಯ 3, ಸಾಗರದ 5 ಸೇರಿವೆ. ಇತರೆ ಜಿಲ್ಲೆಯಿಂದ ಬಂದಿರುವ ಐವರಿಗೂ ಸೋಂಕು ತಗುಲಿದೆ.

ಮತ್ತೊಂದೆಡೆ ಕರೋನ ಸೋಂಕಿತರು ಮೃತರಾಗುತ್ತಿರುವ ಸಂಖ್ಯೆಯು ಜಿಲ್ಲೆಯಲ್ಲಿ ಏರಿಕೆಯಾಗುತ್ತಿದೆ. ಇವತ್ತು ಕೂಡ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಿಂದ ಒಟ್ಟು ಮೃತರಾದ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಶಿವಮೊಗ್ಗದಲ್ಲಿ ಇಂದು 322 ಮಂದಿಯ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. 422 ಮಂದಿಯ ಸ್ಯಾಂಪಲ್‍ಗಳು ಇವತ್ತು ನೆಗೆಟಿವ್ ಬಂದಿದೆ. ಇವೆಲ್ಲದರ ನಡುವೆ ಇವತ್ತು 28 ಮಂದಿ ಕರೋನದಿಂದ ಗುಣವಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಒಟ್ಟು ಗುಣವಾದವರ ಸಂಖ್ಯೆ 550ಕ್ಕೆ ಏರಿಕೆಯಾಗಿದೆ.

ಹಳೆ ಶಿವಮೊಗ್ಗ ಭಾಗವನ್ನು ಜುಲೈ 23ರಿಂದ ಸಂಪೂರ್ಣ ಸೀಲ್ ಡೌನ್ ಮಾಡಲಾಗುತ್ತಿದೆ. ಸೀಲ್ ಡೌನ್ ಸಂಬಂಧ ಮಹಾನಗರ ಪಾಲಿಕೆ ಹೊರಡಿಸಿರುವ ಆದೇಶದಲ್ಲಿ ಅಶೋಕ ವೃತ್ತವನ್ನು ಸೇರಿಸಲಾಗಿದೆ. ಆದರೆ ಬಸ್ ನಿಲ್ದಾಣಗಳು ಈ ವ್ಯಾಪ್ತಿಯಿಂದ ಹೊರಗೆ ಇರಲಿವೆ.

ಅಶೋಕ ಸರ್ಕಲ್ ಕಂಟೈನ್ಮೆಂಟ್ ಜೋನ್ ವ್ಯಾಪ್ತಿಗೆ ಬರಲಿದೆ. ಆದರೆ ಕೆಎಸ್ಆರ್‍ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣಗಳು ಈ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಎಂದಿನಂತೆ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇನ್ನು, ಶಿವಮೊಗ್ಗದ ಬಿ.ಹೆಚ್‍.ರಸ್ತೆಯಲ್ಲಿಯೂ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಎನ್.ಟಿ.ರೋಡ್‍ನಲ್ಲಿಯೂ ವಾಹನ ಸಂಚಾರಕ್ಕೆ ನಿರ್ಬಂಧ ಇಲ್ಲ.

ಕ್ಲಸ್ಟರ್ ಕಂಟೈನ್‍ಮೆಂಟ್ ಪ್ರದೇಶಗಳ ವಿವರ ಹೀಗಿದೆ:-

ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನಸಾಂದ್ರತೆ ಹೆಚ್ಚಾಗಿರುವ ಹಳೇ ಶಿವಮೊಗ್ಗ ಭಾಗದ ವಾರ್ಡ್ ನಂ.: 12,13 ಮತ್ತು 33 ಭಾಗಶಃ ಪ್ರದೇಶ ಹಾಗೂ 22,23,29 ಮತ್ತು 30 ವಾರ್ಡ್‍ಗಳನ್ನು ಸಂಪೂರ್ಣವಾಗಿ ಜುಲೈ 23ರ ಬೆಳಿಗ್ಗೆ 5ರಿಂದ ಜುಲೈ 29ರ ರಾತ್ರಿ 9ಗಂಟೆಯವರೆಗೆ ಕ್ಲಸ್ಟರ್ ಕಂಟೋನ್ಮೇಂಟ್ ಏರಿಯಾ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಆದೇಶಿಸಿರುತ್ತಾರೆ.

ಕ್ಲಸ್ಟರ್ ಕಂಟೈನ್ಮೆಂಟ್ ಏರಿಯಾ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಸೀಲ್‍ಡೌನ್ ಆಗಲಿರುವ ಪ್ರದೇಶಗಳ ವಿವರ ಇಂತಿದೆ: ಪೆನ್ಷನ್ ಮೊಹಲ್ಲಾ, ಓಲ್ಡ್‍ಬಾರ್‍ಲೈನ್ ರಸ್ತೆ, ಪೊಲೀಸ್ ವಸತಿಗೃಹ, ಕೋಟೆರಸ್ತೆ, ಅಶೋಕ ರಸ್ತೆ, ಅವಲಕ್ಕಿ ಕೇರಿ, ಯಾಲಕಪ್ಪನ ಕೇರಿ, ಅರೆದುರ್ಗಮ್ಮನ ಕೇರಿ, ಲಷ್ಕರ್ ಮೊಹಲ್ಲಾ, ಅಲೆಮಾನ್ ಕೇರಿ, ಸೋಮೇಶ್ವರ ಬಡಾವಣೆ, ಗಾಂಧಿ ಬಜಾರ್, ಸಾವರ್ಕರ್‍ನಗರ, ಧರ್ಮರಾಯನ ಕೇರಿ, ಆನವೇರಪ್ಪನ ಕೇರಿ, ಕೊಲ್ಲುರಯ್ಯನ ಬೀದಿ, ಸುಣ್ಣಗಾರ ಬೀದಿ, ತಿರುಪಾಳ್ಳಯ್ಯನ ಬೀದಿ, ಬ್ಯಾಡರಕೇರಿ, ಅಗಸರಕೇರಿ, ಎಸ್.ಪಿ.ಎಂ.ರಸ್ತೆ, ಎಂ.ಕೆ.ಕೆ.ರಸ್ತೆ, ಸಿನಿಮಾ ರಸ್ತೆ, ನಾಗಪ್ಪನಕೇರಿ, ತಿರುಪಳಯ್ಯನ ರಸ್ತೆ, ಗಾಲೀಬ್ ಸಾಬ್ ರಸ್ತೆ, ತುಳಜಾ ಭವಾನಿ ರಸ್ತೆ, ಕೊಲ್ಲೂರಯ್ಯನ ಕೇರಿ, ಗಂಗಾಪರಮೇಶ್ವರಿ ದೇವಸ್ಥಾನ ರಸ್ತೆ, ವಿನಾಯಕ ರಸ್ತೆ, ತಿಗಳರ ಕೇರಿ, ಶಿವಾಜಿ ರಸ್ತೆ, ಕೆ.ಆರ್.ಪುರಂ ಮುಖ್ಯರಸ್ತೆ, ಓ.ಟಿ.ರಸ್ತೆ, ಬಿ.ಹೆಚ್.ರಸ್ತೆ, ಪಂಚವಟಿ ಕಾಲೋನಿ, ಗೌಡ ಸಾರಸ್ವತ ಕಲ್ಯಾಣ ಮಂಟಪ ಏರಿಯಾ, ಆಜಾದ್‍ನಗರ, ರವಿವರ್ಮ ಬೀದಿ, ರಾಮಮಂದಿರ ಸುತ್ತಮುತ್ತಲಿನ ಏರಿಯಾ, ಎನ್.ಟಿ.ರಸ್ತೆ 7ನೇ ತಿರುವು, ಪಿ.ಡಬ್ಲ್ಯೂ.ಡಿ. ಕ್ವಾಟ್ರಸ್, ಗುರುದೇವ ರಸ್ತೆಯ 5,6 &7ನೇ ಕ್ರಾಸ್‍ಗಳು, ಕ್ಲಾರ್ಕ್ ಪೇಟೆ, ಎಸ್.ವಿ.ತಿಮ್ಮಯ್ಯ ರಸ್ತೆ, ಭಾರತಿ ಕಾಲೋನಿ, ರವಿವರ್ಮ ಬೀದಿ ಬಲಭಾಗ, ಸಿದ್ದಯ್ಯ ರಸ್ತೆ ಬಲಭಾಗ, ತಿಮ್ಮಪ್ಪನ ಕೊಪ್ಪಲು, ಟಿ.ಎಸ್.ಆರ್.ರಸ್ತೆ, ಕೆರೆದುರ್ಗಮ್ಮನ ಕೇರಿ, ಕೆಂಚರಾಯನ ಬೀದಿ, ಕುಂಬಾರಬೀದಿ, ಬ್ರಾಹ್ಮಣರ ಬೀದಿ, ಸತ್ಯ ಪ್ರಮೋದದಿಂದ  ಅಂತರ್‍ಘಟ್ಟಮ್ಮ ದೇವಸ್ಥಾನದವರೆಗೆ, ಮಂಡಕ್ಕಿ ಭಟ್ಟಿ, ರವಿವರ್ಮ ಬೀದಿಯಿಂದ ಸಿದ್ದಪ್ಪ ಡಾಬಾದವರೆಗೆ, ಭಾರತಿ ಕಾಲೋನಿ, ಇಮಾಂಬಾಡ, ಮುರಾದ್‍ನಗರ ಮತ್ತು ಅಹಮ್ಮದ್ ನಗರ ಈ ಎಲ್ಲಾ ಏರಿಯಾಗಳು ಕಂಟೋನ್ಮೆಂಟ್ ಏರಿಯಾಗಳೆಂದು ಘೋಷಿಸಲಾಗಿದೆ. 

ಭದ್ರಾ ನದಿ ದಂಡೆಯ ಜನರಿಗೆ ಸೂಚನೆ:-

ಶಿವಮೊಗ್ಗ  : ಭದ್ರಾ ಜಲಾನಯನ ಅಚ್ಚುಕಟ್ಟಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಜುಲೈ 22ರ ಮಧ್ಯರಾತ್ರಿಯಿಂದ ಭದ್ರಾ ಬಲದಂಡೆ ನಾಲೆ, ಎಡದಂಡೆ ನಾಲೆಗಳಲ್ಲಿ ನೀರನ್ನು ಹರಿಯ ಬಿಡಲಾಗುವುದು.
ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು, ತೋಟಗಾರಿಕೆ ಮಾಡುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುದು ಇತ್ಯಾದಿಗಳನ್ನು ನಿರ್ಬಂಧಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.Leave a Reply

Your email address will not be published. Required fields are marked *