ಶಿವಮೊಗ್ಗ ಜಿಲ್ಲೆಯ ಪ್ರಥಮ ಸಂಸದರಬಗ್ಗೆ ನಿಮಗೆಷ್ಟು ಗೊತ್ತು? ಅವರ ಸಾಧನೆ ಏನು ಗೊತ್ತಾ!

220

ಶಿವಮೊಗ್ಗ :- ಶಿವಮೊಗ್ಗದ ಮೊದಲ ಲೋಕಸಭಾ ಸದಸ್ಯರು, ಸಾಗರದ ಎಲ್ ಬಿ ಕಾಲೇಜು ಮತ್ತು ರಾಷ್ಟ್ರೀಯ ವಿದ್ಯಾವರ್ಧಕ ಪ್ರೌಢಶಾಲೆಯ (ಈಗಿನ ಎಚ್. ಶಿವಲಿಂಗಪ್ಪ ಪ್ರೌಢಶಾಲೆ) ಸಂಸ್ಥಾಪಕ ಅಧ್ಯಕ್ಷರಾಗಿದ್ದ ಶ್ರೀ ಕಾಗೋಡು ಗುರುಬಸಪ್ಪ ಒಡೆಯರ್ ಅವರ .

ಕಲ್ಕತ್ತಾದಲ್ಲಿ ವಿದ್ಯಾರ್ಥಿ ಯಾಗಿದ್ದಾಗ

ಜಿಲ್ಲೆಯ ಬಹುತೇಕ ಜನರು ಇವರನ್ನು ಮರೆತಿದ್ದಾರೆ .
ಇವರ ಸಮಕಾಲೀನರು ಈಗ ನಮ್ಮಮುಂದಿಲ್ಲ . ಹೌದು ಜಿಲ್ಲೆಯ ಮೊದಲ ಸಂಸದರಾಗಿ ಶಿವಮೊಗ್ಗ ಜಿಲ್ಲೆಗೆ ವಿಶೇಷ ಗೌರವ ತಂದುಕೊಟ್ಟ ಇವರ ಬಗ್ಗೆ ತಿಳಿದುಕೊಳ್ಳಲೇ ಬೇಕು.

ಸಾಗರದ ಕಾಗೋಡಿನಲ್ಲಿ 1901ರಲ್ಲಿ ಶ್ರೀಯುತರ ಜನನವಾಯಿತು. ತಂದೆ ಗುರುವಯ್ಯ ಗೌಡರು ತಾಯಿ ಅಕ್ಕನಾಗಮ್ಮ. ಇವರದ್ದು ಜಮೀನ್ದಾರಿ ಮನೆತನ, ಸುಮಾರು 40 ಒಕ್ಕಲು ಮನೆಗಳು ಇವರ ಮನೆಯ ಆಸುಪಾಸಿನಲ್ಲೇ ಇದ್ದವು. ಕಾಗೋಡು ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಇವರಿಗೆ ಬಹಳಷ್ಟು ಎಕರೆ ಭೂಮಿ ಇತ್ತು. ಆದುದರಿಂದಲೇ ಇವರ ಹೆಸರಿನ ಮುಂದೆ ಒಡೆಯರ್ ಎಂಬ ಅಂಕಿತ ನಾಮ ಸೇರಿಕೊಂಡಿದ್ದು.

ಕೆ.ಜಿ ಒಡೆಯರ್ ಅವರು ಮೈಸೂರು ರಾಜ್ಯ ಸರ್ಕಾರದ ರಚನೆ ಟಿಪ್ಪಣಿ ಬರೆದಿರುವುದು

ಕೆ.ಜಿ ಒಡೆಯರ್ ಅವರು ಮೈಸೂರು ರಾಜ್ಯ ಸರ್ಕಾರದ ರಚನೆ ಟಿಪ್ಪಣಿ ಬರೆದಿರುವುದು.

ಒಡೆಯರ್ ಅವರು ಸಾಗರ, ಶಿವಮೊಗ್ಗ, ಬೆಂಗಳೂರು, ಮದ್ರಾಸ್ ಮತ್ತು ಕೋಲ್ಕತ್ತಾದಲ್ಲಿ ವ್ಯಾಸಂಗವನ್ನು ಪಡೆದರು. ಆಗೆಲ್ಲ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಬಿಸಿ, ಗಾಂಧೀಜಿಯವರ ಹೋರಾಟಗಳಿಂದ ಪ್ರೇರಣೆ ಪಡೆದು ಚಳುವಳಿಗೆ ಧುಮುಕಿದರು. ಮಲೆನಾಡಿನ ಜನರಿಗೆ ಹೋರಾಟದ ಅರಿವು ಮೂಡಿಸಲು ಕೊಲ್ಕತ್ತಾದಿಂದ ಸಾಗರಕ್ಕೆ ಮರಳಿದರು. 1937ರ ಧ್ವಜ ಸತ್ಯಾಗ್ರಹದಿಂದ ಹಿಡಿದು ಸ್ವಾತಂತ್ರ್ಯ ಸಂಗ್ರಾಮ, ಕ್ವಿಟ್ ಇಂಡಿಯಾ ಚಳುವಳಿ, 1947ರ ಮೈಸೂರು ಅರಮನೆ ಸತ್ಯಾಗ್ರಹ ಮುಂತಾದ ಚಳುವಳಿಗಳಲ್ಲಿ ತೊಡಗಿಸಿಕೊಂಡರು. ಇವರನ್ನು ಬಂಧಿಸಲು ಪೊಲೀಸರು 14 ಬಾರಿ ಹುಡುಕಾಟ ನಡೆಸಿದ್ದು ಇವರ ಚಾಣಕ್ಯ ಬುದ್ಧಿಗೆ ಒಂದು ಉದಾಹರಣೆ. ಬಂಧನದ ನಂತರ ಜೈಲಿನಲ್ಲಿ ಇವರನ್ನು ಹೋರಾಟದ ಒಡೆಯರ್, ಚಳುವಳಿ ಒಡೆಯರ್ ಎಂದೇ ಸಂಭೋದಿಸಲಾಗುತ್ತಿತ್ತು.

1941 ರಿಂದ 1951ರವರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇವರು 1952ರ ಸ್ವತಂತ್ರ ಭಾರತದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಮೈಸೂರು ರಾಜ್ಯದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಜಯರಾದರು. ಅಂದಿಗೆ ಮೈಸೂರು ರಾಜ್ಯಕ್ಕೆ 12 ಲೋಕಸಭಾ ಕ್ಷೇತ್ರಗಳಿದ್ದವು. 1957ರ ಚುನಾವಣೆಯಲ್ಲೂ ಇವರೇ ಜಯಗಳಿಸಿದ್ದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ಸಾಗರಕ್ಕೆ ಮಹಾತ್ಮಾ ಗಾಂಧೀ, ನೆಹರು, ಲಾಲ್ ಬಹದೂರ್ ಶಾಸ್ತ್ರೀ ಮತ್ತು ಇಂದಿರಾ ಗಾಂಧಿ ಯಂತಹ ಗಣ್ಯ ವ್ಯಕ್ತಿಗಳನ್ನು ಬರುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಮಲೆನಾಡಿನ ಪ್ರಸಿದ್ಧ ಸ್ಥಳಗಳ ಪರಿಚಯ ಮತ್ತು ಜೋಗವನ್ನು ಗಣ್ಯರಿಗೆ ಪರಿಚಯಿಸಿದ್ದಲ್ಲದೆ, ಮಲೆನಾಡಿನ ಪ್ರವಾಸೋದ್ಯಮಕ್ಕೆ ರೂಪುರೇಷೆ ಹಾಕಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನೆಹರು ಜೊತೆಗೆ ಸುಮಾರು 6000ಕಿಲೋಮೀಟರ್ ಚೀನಾ, ಸಿಲೋನ್ ಪ್ರವಾಸ ಕೈಗೊಂಡ ಇವರು ಅವನೆಲ್ಲ ತಮ್ಮ ಡೈರಿಯಲ್ಲಿ ದಾಖಲಿಸಿದ್ದಾರೆ.

ಕೆ ಜಿ ಒಡೆಯರ್ ಅವರು ಸರಳಜೀವಿ. ಎತ್ತರದ ವ್ಯಕ್ತಿ, ಜುಬ್ಬಾ ಮತ್ತು ಪಂಚೆ, ಹೊಳೆಯುವ ಬೂಟು, ತಲೆಗೊಂದು ಗಾಂಧಿ ಟೊಪ್ಪಿ ಮತ್ತು ಸದಾ ಮುಗುಳುನಗೆ. ಸಜ್ಜನ ಮತ್ತು ಸಭ್ಯ ರಾಜಕಾರಣಿಯಾಗಿದ್ದ ಇವರು ಸಾಗರದಲ್ಲಿ 1962 ರಲ್ಲಿ ರಾಷ್ಟ್ರೀಯ ವಿದ್ಯಾವರ್ಧಕ ಪ್ರೌಢಶಾಲೆ (ಈಗಿನ ಎಚ್. ಶಿವಲಿಂಗಪ್ಪ ಪ್ರೌಢಶಾಲೆ) ಮತ್ತು 1964 ರಲ್ಲಿ ಎಲ್ ಬಿ ಕಾಲೇಜನ್ನು ಪ್ರತಿಷ್ಠಾಪಿಸಿ ಮಲೆನಾಡಿನಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ವಿದ್ಯಾರ್ಥಿಗಳಿಗೆ ಅಕ್ಷರ ದಾಹ ತೀರಿಸುವಲ್ಲಿ ಯಶಸ್ವಿಯಾಗಿದ್ದು ಇತಿಹಾಸ.

ನೆಹರು ಇಂದಿರ ಜೊತೆ ಜೋಗದಲ್ಲಿ ಒಡೆಯರ್

1948 ರಲ್ಲಿ ಪ್ರಾರಂಭವಾದ ಕಾಗೋಡು ಚಳುವಳಿಯನ್ನು ತಮ್ಮ ವ್ಯಕ್ತಿತ್ವಕ್ಕೆ ಕುತ್ತುಬಾರದಂತೆ ಯಶಸ್ವಿಯಾಗಿ ನಿಭಾಯಿಸಿ ಗೇಣಿದಾರರ ಅಭಿವೃದ್ಧಿಗೆ ಶ್ರಮಿಸಿದ್ದರು. ನಿಷ್ಠಾವಂತ ರಾಜಕಾರಣಿಯಾಗಿದ್ದ ಇವರು ಉತ್ತಮ ಬರಹಗಾರರೂ ಹೌದು. ಅವರು ಭಾಷಣ ಓದಿದ ಮೇಲೆ ಬರೆದು ಕೊಟ್ಟವರ ಹೆಸರು ಹೇಳುವಷ್ಟು ಹೃದಯವಂತಿಕೆ ಹೊಂದಿದವರಾಗಿದ್ದರು. ಅವರ ಪ್ರಾಮಾಣಿಕತೆಗೆ ಇನ್ನೊಂದು ಉದಾಹರಣೆ ಎಂದರೆ ಅವರ ಮನೆ ಕಟ್ಟಲು ಸಾಲ ಮಾಡಿದ್ದು.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮೊದಲ ಸಂಸದರಾಗಿ ಸಾಗರದ ಹಿರಿಮೆ ಹೆಚ್ಚಿಸಿದ ಒಡೆಯರ್ 8ನೇ ಡಿಸೆಂಬರ್ 1965ರಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದರು. ಶಿವಮೊಗ್ಗ ಜನರು ಮತ್ತು ಇಂದಿನ ರಾಜಕಾರಣಿಗಳು ಇಂತಹ ವ್ಯಕ್ತಿಯ ವ್ಯಕ್ತಿತ್ವವನ್ನು ಮರೆಯದೆ ಮಾದರಿಯಾಗಿಟ್ಟುಕೊಳ್ಳುವುದು ಅವಶ್ಯಕವಾಗಿದೆ.
ಲೇಖನ -ಅಂಜನ್ ಕಾಯ್ಕಿಣಿ .ಸಾಗರ.
Leave a Reply

Your email address will not be published. Required fields are marked *

error: Content is protected !!