ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಹಿಳೆಯನ್ನು ಕಲ್ಲಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿದ್ದಾಪುರದ ದೊಡ್ಮನೆ ಪಂಚಾಯಿತಿ ವ್ಯಾಪ್ತಿಯ ರಾಜು ತಿಮ್ಮ ಗೌಡ ಬಂಧಿತ ಆರೋಪಿ.
ಪಂಚಾಯಿತಿ ವ್ಯಾಪ್ತಿಯ ಜಕ್ಕಾರ ಬಳಿಯ ಕಾಡಿನಲ್ಲಿರುವ ಒಂಟಿ ಮನೆಯಲ್ಲಿ ಗೌರಿ ಈಶ್ವರ ನಾಯ್ಕ (೫೨) ಎಂಬ ಮಹಿಳೆ ನಿನ್ನೆ ಕಲ್ಲಿನಿಂದ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಇದನ್ನು ವಿದ್ಯುತ್ ಬಿಲ್ ನೀಡಲು ಬಂದ ವ್ಯಕ್ತಿ ತಿಳಿದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಆರೋಪಿ ರಾಜು ಒಂದು ದಿನ ಮುಂಚೆ ಕೆಲಸದ ನಿಮಿತ್ತ ತೆರಳಿದ ಮಹಿಳೆಯನ್ನು ಮರಳಿ ಬೈಕ್ ಮೇಲೆ ತಂದು ಮನೆಗೆ ಬಿಟ್ಟಿರುವುದನ್ನು ತಿಳಿದಿದ್ದರು.
ಇದರಿಂದ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.