ಶಿರಸಿ ಜಿಲ್ಲೆಗಾಗಿ ಬಂದ್! ಅಂಗಡಿ ಮುಂಗಟ್ಟು ಬಂದ್ ಮಾಡಿ ಬೆಂಬಲ.

370

ಕಾರವಾರ :- ಶಿರಸಿ ಜಿಲ್ಲೆ ಮಾಡುವಂತೆ ಆಗ್ರಹಿಸಿ ಇಂದು ಶಿರಸಿ ತಾಲೂಕು ಬಂದ್ ಮಾಡಿ ಶಿರಸಿ ಜಿಲ್ಲಾ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.

ನಗರದ ಶಿವಾಜಿ ಸರ್ಕಲ್ ನಿಂದ ಪ್ರತಿಭಟನೆ ನಡೆಸಿದ ಪ್ರತಿಭಟನಾಗಾರರು, ತಹಶೀಲ್ದಾರ್ ಕಚೇರಿಗೆ ತೆರಳಿ ಶಿರಸಿ,ಸಿದ್ದಾಪುರ,ಮುಂಡಗೋಡು,ಯಲ್ಲಾಪುರ,ಜೋಯಿಡಾ,ಹಳಿಯಾಳ ಸೇರಿಸಿ ಗಟ್ಟದ ಮೇಲಿನ ಭಾಗವನ್ನು ಶಿರಸಿ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಮನವಿ ಸಲ್ಲಿಸಿದರು.

ಬಂದ್ ಹಿನ್ನಲೆಯಲ್ಲಿ ಇಂದು ಶಿರಸಿ ತಾಲೂಕಿನಾಧ್ಯಾಂತ ಅಂಗಡಿ ಮುಂಗಟ್ಟುಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಿದ್ದು ವರ್ತಕರು,ಆಟೋ ಚಾಲಕರು,ಕನ್ನಡ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದವು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ವಿವೇಕಾನಂದ ವೈದ್ಯ, ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆ ರಚನೆ ಅನಿವಾರ್ಯ. ಆದರೆ, ಈ ಬಗ್ಗೆ ಯಾವ ಜನಪ್ರತಿನಿಧಿಗಳೂ ಮಾತನಾಡದೆ ಇರುವುದು ಬೇಸರ ತಂದಿದೆ ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ, ಮೊದಲು ಪ್ರತ್ಯೇಕ ಜಿಲ್ಲೆ ರಚನೆಯಾಗಲಿ. ಜಿಲ್ಲಾಕೇಂದ್ರದ ಬಗ್ಗೆ ನಂತರ ತೀರ್ಮಾನಿಸೋಣ ಎಂದರು.

ಬನವಾಸಿ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ರಾಜಕೀಯ ಇಚ್ಛಾಶಕ್ತಿ ಕೊರತೆ ಎದುರಾಗಿದೆ. ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದರು. ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ ಮುಂದಿನ ದಿನದಲ್ಲಿ ಹೋರಾಟ ಮುಂದುವರೆಯಲಿದೆ,ಯಲ್ಲಾಪುರ ಜಿಲ್ಲೆಯಾಗಬೇಕು ಎಂದು ಯಲ್ಲಾಪುರ ಜನತೆ ಹೊಸ ಹೋರಾಟ ಪ್ರಾರಂಭಿಸುತ್ತಿದೆ, ನಮ್ಮೊಂದಿಗೆ ಯಲ್ಲಾಪುರ ಜನತೆ ಕೈಜೋಡಿಸಬೇಕು ಎಂದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಎಂ.ಎಂ.ಭಟ್ಟ, ಪರಮಾನಂದ ಹೆಗಡೆ, ಮಂಜು ಮೊಗೇರ ಮುಂತಾದವರು ಇದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ