BREAKING NEWS
Search

ಸೋತು ಗೆದ್ದ ಸ್ಪೀಕರ್ ,ಅನರ್ಹ ಶಾಸಕರು! ಯಾರಿಗೆ ಯಾವ ಫಲ!

813

ನವದೆಹಲಿ: 17 ಮಂದಿ ಅನರ್ಹ ಶಾಸಕರಿಗೆ ದೊಡ್ಡ ರಿಲೀಫ್ ಸಿಕ್ಕಿದ್ದು, ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಇಂದು ಪ್ರಕಟಿಸಿದೆ.

ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ನೇತೃತ್ವದ ಪೀಠ ಇಂದು ಮಹತ್ವದ ಆದೇಶ ಪ್ರಕಟಿಸಿತು.

17 ಮಂದಿ ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿ. ಆದರೆ ವಿಧಾನಸಭೆ ಮುಗಿಯುವರೆಗೆ ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿಯಲ್ಲ. ಹೀಗಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದೆ.

ಈ ವೇಳೆ ಚುನಾವಣೆಗೆ ಆಯ್ಕೆಯಾಗದ ಹೊರತು ಸರ್ಕಾರದಲ್ಲಿ ಯಾವುದೇ ಅಧಿಕಾರ ಹೊಂದುವಂತಿಲ್ಲ. ಸ್ಪೀಕರ್ ಅವರಿಗೆ ಅನರ್ಹತೆ ಮಾಡಲು ಮಾತ್ರ ಅಧಿಕಾರ ಇರುತ್ತದೆ ಹೊರತು ನಿರ್ಧಿಷ್ಟ ಸಮಯದವರೆಗೆ ಅನರ್ಹ ಮಾಡಲು ಅವಕಾಶ ಇಲ್ಲ ಎಂದು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಅನರ್ಹತೆಯಾದರೂ ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ನಾಯಕರು ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕ್ಷೇತ್ರಗಳಿಗೆ 6 ತಿಂಗಳ ಒಳಗಡೆ ಚುನಾವಣೆ ನಡೆಸಬೇಕಾಗುತ್ತದೆ.

ಅನರ್ಹ ಶಾಸಕರು ಬಿಜೆಪಿಗೆ

ದೋಸ್ತಿ ಸರ್ಕಾರದ ಪತನಕ್ಕೆ ಕಾರಣವಾದ ಅನರ್ಹ ಶಾಸಕರು ಗುರುವಾರ ಅಥವಾ ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.

ಅನರ್ಹ ಶಾಸಕರ ಪೈಕಿ ಹಲವು ಮಂದಿ ಉಪಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು ದೆಹಲಿಯಲ್ಲಿ ಸೇರ್ಪಡೆಯಾಗುತ್ತಾರೋ ಅಥವಾ ಬೆಂಗಳೂರಿನಲ್ಲಿ ಸೇರ್ಪಡೆಯಾಗುತ್ತಾರೋ ಎನ್ನುವುದು ನಿರ್ಧಾರವಾಗಬೇಕಿದೆ.

ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಇಂದು ಸಿಎಂ ಸಂಜೆ 3 ಗಂಟೆಯವರೆಗೆ ಧವಳಗಿರಿಯಲ್ಲೇ ಇರಲಿದ್ದಾರೆ. ಇಂದು ಸಂಜೆ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದ್ದು ಇಲ್ಲಿ ನಿರ್ಧಾರವಾಗಲಿದೆ.
ಪಕ್ಷದ ಹೈಕಮಾಂಡ್ ದೆಹಲಿಯಲ್ಲಿ ಸೇರ್ಪಡೆಗೆ ಅನುಮತಿ ನೀಡಿದರೆ ರಾಷ್ಟ್ರ ರಾಜಧಾನಿಯಲ್ಲೇ ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

17 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಿರ್ಧಾರ ಸರಿ. ಆದರೆ ವಿಧಾನಸಭೆಯ ಅವಧಿ ಮುಗಿಯುವವರೆಗೆ ಅನರ್ಹತೆ ಮಾಡಿದ್ದು ಸರಿಯಲ್ಲ. ಈ ಅನರ್ಹಗೊಂಡ ಶಾಸಕರು ಈಗ ಯಾವುದೇ ಹುದ್ದೆ, ಅಧಿಕಾರವನ್ನು ಹೊಂದುವಂತಿಲ್ಲ. ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಯಲ್ಲಾಪುರದಲ್ಲಿ ಸಂಭ್ರಮ !

ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ ಅವಕಾಶ ನೀಡಿದ್ದಕ್ಕೆ ಯಲ್ಲಾಪುರದಲ್ಲಿ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಮನೆ ಮುಂದೆ ಪಟಾಕಿ ಸಿಡಿಸಿ ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮ ಪಟ್ಟರು.


ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಬ್ಬಾರ್ ರವರ ಮನೆಗೆ ತೆರಳಿ ಪತ್ನಿ ವನಜಾಕ್ಷಿ ರವರಿಗೆ ಸಿಹಿ ತಿನ್ನಿಸಿ ಜಯಕಾರ ಕೂಗಿ ಸಂತಸ ಪಟ್ಟರು.

ತೀರ್ಪು ಖುಷಿ ತಂದಿದೆ- ವನಜಾಕ್ಷಿ ಹೆಬ್ಬಾರ್

ಯಾವುದೇ ಹುದ್ದೆ ಅಥವಾ ಅವಕಾಶ ಅವರಿಗೇ ಸಿಗಬೇಕು ಎನ್ನುವ ಆಸೆ ನಮ್ಮದಾಗಿತ್ತು ನಾನು ದೇವರಲ್ಲಿ ಕೇಳಿಕೊಳ್ಳುತಿದ್ದೆ ಚುನಾವಣೆಗೆ ಅವಕಾಶ ಕೊಟ್ಟಿದ್ದಕ್ಕೆ ತುಂಬಾ ಖುಷಿ ಆಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಯಲ್ಲಾಪುರ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಪತ್ನಿ ವನಜಾಕ್ಷಿ ಮಾಧ್ಯಮಕ್ಕೆ ತಿಳಿಸಿದ್ರು.
ಅವರು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ ಅವರು ಮಾಡಿದ ಕೆಲಸಕ್ಕೆ ಇಂದು ಜಯ ಸಿಕ್ಕಿದೆ ,ನಾನು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ ಅವರು ಗೆದ್ದು ಮುಂದೆ ಮಂತ್ರಿಯಾಗಬೇಕು ಎಂದರು.




Leave a Reply

Your email address will not be published. Required fields are marked *