ನಾಮಪತ್ರ ಹಿಂಪಡೆಯಲು ಹಣ ಪಡೆದಿಲ್ಲ:ಧರ್ಮಸ್ಥಳದ ದೇವಸ್ಥಾನದ ಮುಂದೆ ನೋವು ತೋಡಿಕೊಂಡ ಮುದ್ದು ಹನುಮೇಗೌಡ!

58

ದಕ್ಷಿಣ ಕನ್ನಡ:-ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಸತ್ಯ ಹೇಳ್ತಿದ್ದೇನೆ. ನಾನು ನಾಮಪತ್ರ ವಾಪಸ್ ಪಡೆಯಲು ಯಾರಿಂದಲೂ ಒಂದೇ ಒಂದು ರೂಪಾಯಿ ಹಣ ಪಡೆದಿಲ್ಲ’ ಎಂದು ಸಂಸದ ಮುದ್ದಹನುಮಗೌಡ ಸ್ಪಷ್ಟಪಡಿಸಿದ್ದಾರೆ.
ಇಂದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಆಗಮಿಸಿ ದೇವಸ್ಥಾನದ ಮುಂಭಾಗದಲ್ಲಿಯೇ ಮಾಧ್ಯಮದೊಂದಿಗೆ ಮಾತನಾಡಿದ್ರು.

ಈ ಹಿಂದೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ಮುದ್ದಹನುಮೇಗೌಡ ತಮ್ಮ ನಾಮಪತ್ರ ವಾಪಸ್ ಪಡೆಯಲು ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಇದಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಆಪ್ತ ದರ್ಶನ್ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಮಾತುಕತೆ ನಡೆಸಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿತ್ತು.

ಈ ವಿಚಾರಕ್ಕೆ ಇಂದು ಧರ್ಮಸ್ಥಳದಲ್ಲಿ ಪ್ರತಿಕ್ರಿಯಿಸಿದ ಮದ್ದಹನುಮಗೌಡ, ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಅನ್ನೋ ಉದ್ದೇಶದಿಂದ ನಾಮಪತ್ರ ಸಲ್ಲಿಸಿದ್ದೆ.

ಆದ್ರೆ, ಮೈತ್ರಿ ಧರ್ಮದ ಪ್ರಕಾರ ನಾನು ದೇವೇಗೌಡರಿಗೆ ಬಿಟ್ಟುಕೊಡಬೇಕಾಯಿತು. ಈ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಡಿಸಿಎಂ ಜಿಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮೈತ್ರಿಧರ್ಮಕ್ಕೆ ಮೋಸ ಮಾಡಬಾರದು. ರಾಜ್ಯ, ದೇಶ ಹಾಗೂ ರಾಷ್ಟ್ರರಾಜಕಾರಣದ ಹಿತದೃಷ್ಟಿಯಿಂದ ಮೈತ್ರಿ ಅನಿವಾರ್ಯತೆ ಅನ್ನೋದನ್ನ ನನಗೆ ಮನವರಿಕೆ ಮಾಡಿಕೊಟ್ಟರು. ಹೀಗಾಗಿ ನಾನು ನಾಮಪತ್ರ ವಾಪಸ್ ಪಡೆದುಕೊಂಡೆ ಎಂದು ಹೇಳಿದರು.

ನಾಮಪತ್ರ ವಾಪಸ್ ಪಡೆದು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಿದೆ. ಆದ್ರೆ ಚುನಾವಣೆ ಮುಗಿದ ಬಳಿಕ, ಯಾವುದೋ ಒಂದು ಆಡಿಯೋ ಸಂಭಾಷಣೆ ನಡೆಯುತ್ತೆ. ನಾನು ನಾಮಪತ್ರ ವಾಪಸ್ ಪಡೆಯಲು ಕೋಟಿ, ಕೋಟಿ ಡೀಲ್ ನಡೆದಿದೆ ಅಂತಾ ಮೂರನೇ ವ್ಯಕ್ತಿಗಳು ಮಾತನಾಡಿಕೊಂಡರು. ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯಿತು.ಇದರಿಂದಾಗಿ ನನ್ನ ಮೇಲೆ ರಾಜ್ಯದ ಜನರಿಗೆ ತಪ್ಪು ಸಂದೇಶ ಹೊರಟು ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ರಾಜಕೀಯ ಬೆಳವಣಿಗೆಯನ್ನ ಸಹಿಸದ ವಿಕೃತ ಮನಸ್ಥಿತಿಯವರು ಹೀಗೆಲ್ಲ ಮಾಡಿದ್ದಾರೆ. ಒಂದು ವೇಳೆ ಡೀಲ್ ಆಗಿದ್ದರೆ ಈ ಬಗ್ಗೆ ಅವರು ಸ್ಪಷ್ಟನೆ ಕೂಡ ಬೇಕಿತ್ತು ಆದ್ರೆ ಅವರು ಯಾವುದೇ ಸ್ಪಷ್ಟತೆ ನೀಡಲು ಮುಂದಾಗಿಲ್ಲ. ಹೀಗಾಗಿ ರಾಜ್ಯದ, ದೇಶದ ಜನರಿಗೆ ನನ್ನ ಬಗ್ಗೆ ತಪ್ಪು ಮಾಹಿತಿ ಹೋಯಿತು ಎಂದರು.

ಯಾರು ಆಡಿಯೋ ಲಾಂಚ್ ಮಾಡಿದ್ರೋ ಅವರಿಗೆ ನಾನು ಉತ್ತರ ಕೊಡಲ್ಲ. ನನ್ನ ಮೇಲೆ ಭರವಸೆ ಇಟ್ಟುಕೊಂಡವರಿಗೆ, ರಾಜ್ಯದ ಜನರಿಗೆ ನಾನು ಉತ್ತರ ನೀಡಬೇಕು. ನನ್ನ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ತೆರೆ ಎಳೆಯಬೇಕಾಗಿದೆ.

ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿಯ ದರ್ಶನವನ್ನ ಈಗಷ್ಟೇ ಪಡೆದುಕೊಂಡು ಬಂದಿದ್ದೇನೆ. ಈಗ ಅದೇ ಸ್ವಾಮಿ ಎದುರು ನಾನು ಹೇಳುತ್ತಿದ್ದೇನೆ, ನಾನು ನಾಮಪತ್ರ ವಾಪಸ್ ಪಡೆಯಲಿಕ್ಕೆ ಯಾರಿಂದಲೂ, ಯಾವುದೇ ವ್ಯಕ್ತಿಯಿಂದಲೂ ಒಂದು ನಯಾ ಪೈಸೆ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು, ಯಾರಿಂದಲೂ ಯಾವುದೇ ಪಕ್ಷದಿಂದಲೂ ಒಂದು ರೂಪಾಯಿಯನ್ನೂ ಪಡೆದಿಲ್ಲ ಎಂದು ರಾಜ್ಯದ ಜನರಿಗೆ, ನನ್ನ ಮೇಲೆ ನಂಬಿಕೆ ಇಟ್ಟವರಿಗೆ ಸ್ಪಷ್ಟಪಡಿಸುತ್ತೇನೆ.

ನನ್ನ ಚಾರಿತ್ರ್ಯ ಹರಣ ಮಾಡುತ್ತಿರೋರಿಗೆ ಮುಂಜುನಾಥ್ ಸ್ವಾಮಿ ಬಳಿ ಕೇಳುತ್ತೇನೆ. ಅವರಿಗೆ ಒಳ್ಳೆ ಮನಸ್ಸು ಕೊಡಲಿ ಎಂದು. ನನ್ನ ಮೇಲೆ ಯಾವುದೋ ಒಂದು ಅನುಮಾನ ಉಳಿದುಕೊಳ್ಳಬಾರದು ಎಂದು ಸ್ವಾಮಿ ಸನ್ನಿಧಿಯ ಮುಂದೆ ನಾನು ಸ್ಪಷ್ಟಪಡಿಸುತ್ತೇನೆ.

ನನ್ನ ರಾಜಕೀಯ ಜೀವನದಲ್ಲಿ ಈ ರೀತಿಯ ಆಪಾದನೆ ಬಂದಿದ್ದಕ್ಕೆ ನೋವಾಗಿದೆ. ನಾನು ಪ್ರಾಮಾಣಿಕವಾಗಿದ್ದೇನೆ ಎಂದರು.
Leave a Reply

Your email address will not be published. Required fields are marked *

error: Content is protected !!