ಕರೋನಾ ಆತಂಕ! ಮೀನುಗಾರಿಕೆ ಪ್ರಾರಂಭದ ದಿನವೇ ಬಿಕೋ ಎಂದ ಕರಾವಳಿಯ ಬಂದರು

593

ಕಾರವಾರ:- ರಾಜ್ಯದ ಕರಾವಳಿಯಲ್ಲಿ ಅಗಸ್ಟ್ ತಿಂಗಳ ಮೊದಲ ದಿನ ಮೀನುಗಾರಿಕೆ ಪ್ರಾರಂಭಕ್ಕೆ ವಿದ್ಯುಕ್ತ ಚಾಲನೆ ಸಿಗುತ್ತದೆ. ಮಳೆಗಾಲದ ಎರಡು ತಿಂಗಳು ಬಂದ್ ಆಗುವ ಮೀನುಗಾರಿಕೆ ಸರ್ಕಾರದ ಆದೇಶದಂತೆ ಇಂದಿನಿಂದ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಪ್ರತಿವರ್ಷ ಅಗಸ್ಟ್‌ನಲ್ಲಿ ಮೀನುಗಾರಿಕೆಯನ್ನ ಹಬ್ಬದಂತೆ ಆಚರಿಸುತ್ತಿದ್ದ ಉತ್ತರಕನ್ನಡ ಮೀನುಗಾರರ ಸಂಭ್ರಮ ಈ ಬಾರಿ ಕಳೆಗುಂದಿದೆ.

ಸರ್ಕಾರದ ಆದೇಶದಂತೆ ಜೂನ್, ಜುಲೈ ತಿಂಗಳ ಮಳೆಗಾಲದ ಅವಧಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಿದ ಬಳಿಕ ಅಗಸ್ಟ್ 1 ರಿಂದ ಪುನಃ ಪ್ರಾರಂಭ ಮಾಡಲಾಗುತ್ತದೆ. 61 ದಿನಗಳ ಬಳಿಕ ಮೀನುಗಾರಿಕೆ ಪ್ರಾರಂಭವನ್ನ ಮೀನುಗಾರರು ಹಬ್ಬದಂತೆ ಆಚರಣೆ ಮಾಡೋದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆ. ಅದರಂತೆ ಇವತ್ತು ಕರಾವಳಿಯಲ್ಲಿ ಮೀನುಗಾರಿಕೆ ಮತ್ತೆ ಪ್ರಾರಂಭಗೊಂಡಿದ್ದು ಈ ಬಾರಿ ಉತ್ತರಕನ್ನಡ ಜಿಲ್ಲೆಯ ಮೀನುಗಾರರಲ್ಲಿ ಯಾವುದೇ ಸಂಭ್ರಮಾಚರಣೆ ಕಂಡುಬಂದಿಲ್ಲ. ಬೋಟುಗಳನ್ನ ಮಾವಿನ ತೋರಣ, ಹೂವಿನ ಹಾರ ಹಾಕಿ ಸಿಂಗರಿಸಿ ಪೂಜೆ ಮಾಡಿ ಖುಷಿಯಿಂದ ಸಮುದ್ರಕ್ಕಿಳಿಯುತ್ತಿದ್ದ ಮೀನುಗಾರರ ಸಂಭ್ರಮವನ್ನ ಕೊರೊನಾ ಕಸಿದುಕೊಂಡಿದೆ.
ಹೌದು ಪ್ರತಿವರ್ಷದಂತೆ ಮೀನುಗಾರಿಕೆ ಮೇಲಿನ ನಿಷೇಧ ಅವಧಿ ಜುಲೈ 31ಕ್ಕೆ ಮುಕ್ತಾಯಗೊಂಡ ಬಳಿಕ ಮೀನುಗಾರರು ಮೀನುಗಾರಿಕೆಯನ್ನ ಪ್ರಾರಂಭಿಸುತ್ತಿದ್ದರು. ಅದರಂತೆ ಕಾರವಾರ ತಾಲ್ಲೂಕಿನ ಬೈತಖೋಲ ಬಂದರಿನಲ್ಲಿ ಮೀನುಗಾರಿಕೆ ಪ್ರಾರಂಭದ ದಿನ ಕಾಣುತ್ತಿದ್ದ ಹಬ್ಬದ ಸಂಭ್ರಮ ಈ ಬಾರಿ ಕಾಣೆಯಾಗಿದೆ. ಕೆಲವೇ ಕೆಲವು ಬೋಟುಗಳು ಮಾತ್ರ ಮೀನುಗಾರಿಕೆಗೆ ತೆರಳುತ್ತಿದ್ದು ಸಾಕಷ್ಟು ಬೋಟುಗಳು ಬಂದರಿನಲ್ಲೇ ಲಂಗರು ಹಾಕಿ ನಿಂತಿವೆ. ಕೊರೊನಾ ಅಟ್ಟಹಾಸ ಹಿನ್ನಲೆ ಮೀನುಗಾರಿಕಾ ಬೋಟುಗಳಲ್ಲಿ ಕೆಲಸ ಮಾಡುತ್ತಿದ್ದ ಹೊರರಾಜ್ಯದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದು ಮತ್ತೆ ವಾಪಸ್ಸಾಗಿಲ್ಲ. ಹೀಗಾಗಿ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟುಗಳಲ್ಲಿ ಕಾರ್ಮಿಕರೇ ಇಲ್ಲದಂತಾಗಿದ್ದು ಸ್ಥಳೀಯರನ್ನ ತೆಗೆದುಕೊಂಡು ಕೆಲವೇ ಕೆಲವು ಬೋಟುಗಳು ಮಾತ್ರ ಮೀನುಗಾರಿಕೆಗೆ ತೆರಳಿ ಹಲವು ಬೋಟುಗಳು ಕಾಲಿಯಾಗಿಯೇ ಹಿಂತಿರುಗಿದೆ.

ಸಮುದ್ರಕ್ಕಿಳಿದ ಬೋಟುಗಳು ಮರಳಿ ದಡಕ್ಕೆ

ಕಾರವಾರ ನಗರದ ಬೈತಖೋಲ್ ಮೀನುಗಾರಿಕಾ ಬಂದರಿನಿಂದ ಇಂದು ಬೆಳಿಗ್ಗೆಯೇ ಸುಮಾರು 50 ದೋಣಿಗಳು ಮೀನುಗಾರಿಕೆಗೆ ತೆರಳಿದ್ದವು. ಆದರೆ, ಇಡೀ ದಿನ ಸಮುದ್ರದಲ್ಲಿ ಶ್ರಮಿಸಿದರೂ ಕೆಲವು ದೋಣಿಗಳಿಗೆ ಮಾತ್ರ ಒಂದೆರಡು ಬುಟ್ಟಿಗಳಷ್ಟೇ ಸೆಟ್ಲೆ (ಸೀಗಡಿ) ಮೀನುಗಳು ಸಿಕ್ಕಿವೆ.ಮುದಗಾ ಬಂದರಿನಿಂದಲೂ ಸುಮಾರು 60 ದೋಣಿಗಳು ಸಮುದ್ರಕ್ಕೆ ತೆರಳಿದ್ದವು. ಆದರೆ, ಅವುಗಳೂ ಖಾಲಿಯಾಗಿಯೇ ಬಂದರಿಗೆ ಮರಳಿವೆ.

ಇಂದು ಅಂದಾಜು ಒಂದು ಕ್ವಿಂಟಲ್‌ನಷ್ಟೇ ಮೀನು ಸಿಕ್ಕಿದೆ. ದೋಣಿಗಳಿಗೆ ದಿನವೊಂದಕ್ಕೆ 70ರಿಂದ 80 ಲೀಟರ್‌ಗಳಷ್ಟು ಡೀಸೆಲ್ ಬೇಕು. ಮೀನು ವ್ಯಾಪಾರಿಗಳು ಸೆಟ್ಲೆಯನ್ನು ಕೆ.ಜಿ.ಗೆ ರೂ.105ರಂತೆ ಖರೀದಿಸುವುದಾಗಿ ಹೇಳಿದ್ದಾರೆ. ಕಾರ್ಮಿಕರ ವೇತನ, ನಿತ್ಯದ ಆದಾಯವನ್ನೆಲ್ಲ ಒಟ್ಟುಗೂಡಿಸಿದರೆ ಮೊದಲ ದಿನ ನಷ್ಟವೇ ಆಗಿದೆ. ಈ ಅಂದಾಜಿನ ಪ್ರಕಾರ ದೋಣಿಗಳ ಡೀಸೆಲ್‌ ಖರ್ಚೂ ಸಿಕ್ಕುವುದಿಲ್ಲ’ ಎಂದು ಮೀನುಗಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕರೋನಾ ಭಯ ಬಂದರು ಕಾಲಿ ಕಾಲಿ
ಕರಾವಳಿ ಭಾಗದ ಮಂಗಳೂರಿನ ಬಂದರು, ಮಹರಾಷ್ಟ್ರದ ಬಂದರುಗಳಲ್ಲಿ ಮೀನುಗಾರರಿಗೆ ಕರೋನಾ ವಕ್ಕರಿಸಿದೆ. ಇನ್ನು ಜಿಲ್ಲೆಯ ಭಟ್ಕಳ,ಹೊನ್ನಾವರ,ಕುಮಟಾ ಭಾಗದಲ್ಲಿ ಸಹ ಹಲವು ಮೀನುಗಾರರು ಕರೋನಾ ವಕ್ಕರಿಸಿದೆ.

ಹೀಗಾಗಿ ಹಲವು ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯಲು ಹೆದರುತಿದ್ದಾರೆ. ಇದರಿಂದಾಗಿ ಬೋಟ್ ಮಾಲೀಕರು ಕೆಲಸಗಾರರಿಲ್ಲದೇ ಬೋಟುಗಳನ್ನು ಲಂಗುರು ಹಾಕುವಂತಾಗಿದೆ.ಇನ್ನು ಹೊರರಾಜ್ಯದ ಮೀನುಗಾರ ಕಾರ್ಮಿಕರು ಸಹ ಮರಳಿ ಜಿಲ್ಲೆಗೆ ಬಾರದಿರುವುದು ದೊಡ್ಡ ಹೊಡೆತ ಬಿದ್ದಂತಾಗಿದೆ.

ಇನ್ನು ಕಳೆದ ಬಾರಿ ಅಗಸ್ಟ್ ಮೊದಲವಾರದಲ್ಲಿ ನೆರೆ ಪರಿಸ್ಥಿತಿ ಉಂಟಾದ ಬಳಿಕ ಸಮುದ್ರದಲ್ಲೂ ಚಂಡಮಾರುತದಿಂದಾಗಿ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಅದಾದ ಬಳಿಕ ಎರಡು ತಿಂಗಳು ನಡೆದ ಮೀನುಗಾರಿಕೆ ಬಳಿಕ ಈ ವರ್ಷದ ಪ್ರಾರಂಭದಲ್ಲಿ ಮತ್ಸ್ಯಕ್ಷಾಮ ಹಿನ್ನಲೆ ಹಂತ ಹಂತವಾಗಿ ಸ್ಥಗಿತಗೊಳ್ಳುವಂತಾಗಿದ್ದು ಅಷ್ಟರಲ್ಲೇ ಕೊರೊನಾ ವಕ್ಕರಿಸಿದ ಪರಿಣಾಮ ಮೀನುಗಾರಿಕೆ ಸಂಪೂರ್ಣ ನಿಂತುಹೋಗಿತ್ತು. ಇದೀಗ ಸುಮಾರು ನಾಲ್ಕು ತಿಂಗಳ ಬಳಿಕ ಸ್ಥಗಿತಗೊಂಡಿದ್ದ ಮೀನುಗಾರಿಕೆ ಇಂದಿನಿಂದ ಪ್ರಾರಂಭವಾಗಬೇಕಾಗಿತ್ತಾದರೂ ಕೊರೊನಾ ಅವಾಂತರದಿಂದಾಗಿ ಅದಕ್ಕೂ ಅಡ್ಡಿಯಾಗಿದೆ.

ಅಲ್ಲದೇ ಪದೇ ಪದೇ ಮೀನುಗಾರಿಕೆ ಸ್ಥಗಿತಗೊಂಡ ಹಿನ್ನಲೆ ಮೀನುಗಾರರು ಸಾಲ ತೀರಿಸಲಾಗದೇ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು ಸರ್ಕಾರ ಕೇವಲ ಪ್ರಚಾರ ಪಡೆದುಕೊಂಡಿದ್ದನ್ನ ಹೊರತುಪಡಿಸಿದರೆ ಮೀನುಗಾರರ ನೆರವಿಗೇ ಬಂದಿಲ್ಲ ಅನ್ನೋದು ಮೀನುಗಾರರಾದ ಮೋಹನ್ ಬೋಳಶೆಟ್ಟಿಕರ್ ರವರ ನೋವು.

ಇನ್ನು ಸದ್ಯ ಹೊರರಾಜ್ಯದ ಮೀನುಗಾರರು ಬರುವುದು ಸಾಧ್ಯವಿಲ್ಲದ ಹಿನ್ನಲೆ ಸ್ಥಳೀಯ ಕಾರ್ಮಿಕರನ್ನೇ ಬಳಸಿಕೊಂಡು ಬಳಿಕ ಮೀನುಗಾರಿಕೆ ಪ್ರಾರಂಭಿಸಲು ಪರ್ಸಿನ್ ಬೋಟು ಮೀನುಗಾರರು ನಿರ್ಧರಿಸಿದ್ದಾರೆ. ಸದ್ಯ ಮೀನುಗಾರಿಕೆ ಪ್ರಾರಂಭಿಸಿರುವವರಿಗೆ ಮೀನಿನ ಲಭ್ಯತೆಯನ್ನ ಪರಿಶೀಲಿಸಿದ ಬಳಿಕವೇ ಮೀನುಗಾರಿಕೆಗೆ ಇಳಿಯಲು ಪರ್ಸಿನ್ ಬೋಟು ಮೀನುಗಾರರು ನಿರ್ಧರಿಸಿದ್ದು ಇದೇ ತಿಂಗಳ ಐದನೇ ತಾರೀಕಿನಿಂದ ಪ್ರಾರಂಭಿಸುವ ಸಾಧ್ಯತೆಗಳಿವೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ