ಉತ್ತರ ಕನ್ನಡದಲ್ಲಿ ಗರ್ಭಿಣಿ ಮಹಿಳೆಗೆ ಕೊರೋನಾ – ಜಿಲ್ಲೆಯಲ್ಲಿ ಒಂಬತ್ತಕ್ಕೇರಿದ ಕೊರೋನಾ ಸೊಂಕಿತರ ಸಂಖ್ಯೆ

1517

ಕಾರವಾರ :-ದೇಶದಲ್ಲಿ ತಲ್ಲಣ ಮೂಡಿಸಿರುವ ಕೊರೋನಾ ಸೋಂಕು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಿವಾಣಕ್ಕೆ ಬರುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಭಟ್ಕಳದಲ್ಲಿ ಗರ್ಭಿಣಿ ಮಹಿಳೆಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಸೊಂಕಿತರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.

26 ವರ್ಷದ ಐದು ತಿಂಗಳ ಗರ್ಭಿಣಿ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದೆ. ಈಕೆಗೆ

ಇಬ್ಬರು ಮಕ್ಕಳು ಇದ್ದು, ಈಕೆಯ ಪತಿ ದುಬೈನಿಂದ ವಾಪಸ್ಸಾದವನಾಗಿದ್ದಾನೆ. ಆದರೆ, ಪತಿಯ ವರದಿ ನೆಗೆಟಿವ್ ಬಂದಿದೆ.

ದುಬೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಈಕೆಯ ಪತಿ, ಮಾರ್ಚ್ 17ರಂದು ಮುಂಬೈಗೆ ವಿಮಾನದ ಮೂಲಕ ಬಂದಿಳಿದಿದ್ದ. ಮುಂಬೈನಲ್ಲಿ ಸುಮಾರು ನಾಲ್ಕು ದಿನ ಉಳಿದಿದ್ದ ಈತ, ಆನಂತರ ರೈಲಿನಲ್ಲಿ ಭಟ್ಕಳಕ್ಕೆ ಬಂದಿದ್ದ. ಭಟ್ಕಳ ರೈಲು ನಿಲ್ದಾಣದಿಂದ ಸ್ನೇಹಿತನ ಬೈಕ್ ನಲ್ಲಿ ಮನೆಗೆ ತೆರಳಿದ್ದ.

ರಾಜ್ಯವಾರು ಹೊಸದಾಗಿ ಸೊಂಕಿತರ ಅಂಕಿ ಅಂಶ

ದುಬೈನಿಂದ ಬಂದವನಾಗಿದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಈತನ ಕೈಗೆ ಹೋಂ ಕ್ವಾರಂಟೈನ್ ಮುದ್ರೆ ಹಾಕಿದ್ದರು. ಮಾ.31ರಂದು ಗರ್ಭಿಣಿ ಪತ್ನಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಆಕೆಯನ್ನು ಈತ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಆದರೆ, ಆಸ್ಪತ್ರೆಯ ಸಿಬ್ಬಂದಿ ಪತಿಯ ಕೈ ಮೇಲೆ ಕ್ವಾರಂಟೈನ್ ಮುದ್ರೆ ಇರುವುದನ್ನು ಗಮನಿಸಿ ವೈದ್ಯರ ಗಮನಕ್ಕೆ ತಂದಿದ್ದಾರೆ. ನಂತರ ಇಬ್ಬರನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಈ ವೇಳೆ ಪತ್ನಿಗೆ ಕೊರೋನಾ ಸೋಂಕು ತಗುಲಿರುವುದು ದೃಢ ಪಟ್ಟಿದ್ದು, ಪತಿಯ ವರದಿ ನೆಗೆಟಿವ್ ಬಂದಿದೆ. ಇದೀಗ ಪತಿಯ ಗಂಟಲಿನ ದ್ರವವನ್ನು ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ.
ಸೋಂಕಿತ ಗರ್ಭಿಣಿ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೊಮ್ಮೆ ಕಳುಹಿಸಲಾದ ಪತಿಯ ಗಂಟಲಿನ ದ್ರವದ ಮಾದರಿಯ ವರದಿ ಬರಬೇಕಿದ್ದು, ಅಲ್ಲಿಯವರೆಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿಡಲಾಗಿದೆ.

ಗರ್ಭಿಣಿಯ ಪತಿಗೆ ಕೊರೋನಾ ಇದ್ದು, ರೋಗ ನಿರೋಧಕ ಶಕ್ತಿ ಅಧಿಕವಾಗಿರುವುದರಿಂದ ಅದು ಆತನಲ್ಲಿ ಕಾಣಿಸಿಕೊಳ್ಳದೇ ಇರಬಹುದು ಅಥವಾ

ಆತನಲ್ಲಿದ್ದ ವೈರಾಣು ನಾಶವಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆತ 14 ದಿನಗಳ ಕ್ವಾರಂಟೈನ್ ಪೂರೈಸಿದ ಬಳಿಕ ಪತ್ನಿಯೊಂದಿಗೆ ಸಂಪರ್ಕ ಹೊಂದಿದ್ದು, ಈ ವೇಳೆ ವೈರಾಣು ಆಕೆಗೆ ತಗುಲಿರುವ ಸಾಧ್ಯತೆಯೂ ಇದೆ ಎಂದು ಶಂಕಿಸಲಾಗಿದೆ.

ಇನ್ನು ಜಿಲ್ಲೆಯಲ್ಲಿ 50 ಜನರ ರಕ್ತ ಹಾಗೂ ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಇದರ ಫಲಿತಾಂಶ ಸಹ ಬರಬೇಕಿದೆ‌. ಫಲಿತಾಂಶ ಬಂದಲ್ಲಿ ಇನ್ನೂ ಸಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.




Leave a Reply

Your email address will not be published. Required fields are marked *