ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳುವವರೇ ಇತ್ತ ಗಮನಿಸಿ!

1174

ಉತ್ತರ ಕನ್ನಡ ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷದ ನಂತರ ಆರೋಗ್ಯ ಸಮಸ್ಯೆ ಇರುವವರಿಗೆ ಕೋವಿಡ್ ವ್ಯಾಕ್ಸೀನ್ ನೀಡಲಾಗುತ್ತಿದೆ.

ಆದ್ರೆ ಹಲವರಲ್ಲಿ ಅನುಮಾನಗಳು ,ಭಯ,ಆತಂಕ ಜೊತೆಗೆ ಹಲವು ಪ್ರಶ್ನೆಗಳು ಜನರಲ್ಲಿ ಕಾಡುತ್ತಿದೆ.

ಹೀಗಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರು ಇಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು ಅದರ ವಿವರ ಇಲ್ಲಿದೆ.

ಜಿಲ್ಲಾಧಿಕಾರಿ ಹೇಳಿದ್ದೇನು?

ಉತ್ತರ ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಮೀರಿದ ಅನಾರೋಗ್ಯ ಪೀಡಿತ ಜನರಿಗೆ ಮೂರನೇ ಹಂತದಲ್ಲಿ ಕೋವಿಡ್-19 ಲಸಿಕೆ ವಿತರಣೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು, ಸಾರ್ವಜನಿಕರು ನಿರ್ಭಿತಿಯಿಂದ ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ 3 ನೇ ಹಂತದ ಲಸಿಕೆ ವಿತರಣೆ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ, ಪ್ರಥಮ ಹಾಗೂ ದ್ವಿತಿಯ ಹಂತದ ಲಸಿಕಾ ವಿತರಣೆಯನ್ನು ಜಿಲ್ಲೆಯಲ್ಲಿ ಉತ್ತಮವಾದ ರೀತಿಯಲ್ಲಿ ಯಶಸ್ವಿಗೊಳಿಸಲಾಗಿದೆ.

ಮೊದಲ ಹಂತದಲ್ಲಿ 14332 ಜನರು ಹೆಸರು ನೋಂದಣಿ ಮಾಡಿಸಿದ್ದರು. ಈ ಪೈಕಿ ಮೋದಲ ಡೋಸ್‌ನ್ನು 12180 ಜನರಿಗೆ ಲಸಿಕೆ ವಿತರಿಸಲಾಗಿದ್ದು, ಶೇ. 84 ರಷ್ಟು ಫಲಿತಾಂಶ ಹಾಗೂ ಎರಡನೇ ಡೋಸ್‌ನ್ನು 8964 ಜನರು ಪಡೆದುಕೊಂಡಿದ್ದಾರೆ.

ಶೇ. 73.60 ರಷ್ಟು ಪಲಿತಾಂಶ ಕಂಡುಬಂದಿದ್ದು ಎರಡನೇ ಹಂತದಲ್ಲಿ 5845 ಜನರು ಹೆಸರು ನೋಂದಣಿ ಮಾಡಿಸಿದ್ದಾರೆ.

ಈ ಪೈಕಿ 4484 ಜನರು ಮೊದಲ ಡೋಸ್‌ನ್ನು ಪಡೆದಿದ್ದು, ಶೇ. 86.7 ರಷ್ಟು ಫಲಿತಾಂಶ ಕಂಡುಬಂದಿದೆ.

ಹೀಗಾಗಿ ಈ ಎರಡು ಹಂತದ ಲಸಿಕಾ ವಿತರಣೆ ಜಿಲ್ಲೆಯಲ್ಲಿ ಯಶ್ವಿಯಾಗಿದ್ದು, ರಾಜ್ಯದಲ್ಲಿ ಮೋದಲ ಐದು ಸ್ಥಾನ ಗಳಿಸಿದ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯೂ ಒಂದಾಗಿದೆ ಎಂದರು.

ಈ ಸಂದರ್ಬದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ್ ನಾಯಕ, ಆರ್‌.ಸಿ.ಹೆಚ್ ಡಾ. ರಮೇಶ್ ರಾವ್ ಹಾಜರಿದ್ದರು.

ಕೋವಿಡ್ ಲಸಿಕೆ ಬಗ್ಗೆ ಗೊಂದಲ ಇರುವವರಿಗೆ ಇಲ್ಲಿದೆ ಮಾಹಿತಿ:-

ಮಾರ್ಚ 1 ರಿಂದ 60 ವರ್ಷದ ಮೇಲ್ಪಟ್ಟ ಎಲ್ಲಾ ನಾಗರೀಕರು, 45ರಿಂದ 59 ವರ್ಷದ ವಯೋಮಾನದ Co-morbidity ಇರುವ ನಾಗರೀಕರಿಗೆ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

ಮಾ. 8 ರಿಂದ ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಹಾಗೂ ತಾಲೂಕ ಆಸ್ಪತ್ರೆಗಳಲ್ಲಿ ಹಾಗೂ ಆಯುಷ್ಮಾನ್ ಭಾರತ/ಆರೋಗ್ಯ ಕರ್ನಾಟಕದಡಿಯಲ್ಲಿ ನೋಂದಣಿ ಪಡೆದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು .

ಜಿಲ್ಲೆಯಲ್ಲಿ ಈ ಭಾಗದಲ್ಲಿ ಲಸಿಕೆ ಪಡೆಯಬಹುದು:-

ಜಿಲ್ಲೆಯಲ್ಲಿ ಲಸಿಕೆ ವಿತರಿಸಲು ಕೆಲವು ಖಾಸಗಿ ಆಸ್ಪತ್ರೆಗಳನ್ನು ಕೊವಿಡ್ ವ್ಯಾಕ್ಸಿನೆಷನ್ ಸೆಂಟರ್ ಮಾಡಲಾಗುತ್ತಿದೆ.

ಇದಕ್ಕಾಗಿ ಶಿರಸಿಯ ಟಿಎಸ್‌ಎಸ್ ಆಸ್ಪತ್ರೆ, ಹೊನ್ನಾವರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆ, ಕುಮಟಾದ ಕೆನರಾ ಹೆಲ್ತ್ ಕೇರ್ ಸೆಂಟರ್ ಹಾಗೂ ಹೈಟೇಕ್ ಲೈಫ್ ಲೈನ್ ಆಸ್ಪತ್ರೆ, ಕಾರವಾರದ ಅರ್ಥ್ ಮೆಡಿಕಲ್ ಸೆಂಟರ್‌ನವರು ಲಸಿಕೆ ನೀಡಲಿದ್ದಾರೆ.

ಎಲ್ಲಿ ಉಚಿತವಾಗಿ ಸಿಗುತ್ತೆ? ಖಾಸಗಿ ಆಸ್ಪತ್ರೆಯಲ್ಲಿ ದರ ಎಷ್ಟು?

ಸಾರ್ವಜನಿಕರು ಎಲ್ಲ ನಗರ ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಉಚಿತವಾಗಿ ಪಡೆಯಬಹುದು.

ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು ಮೇಲೆ ಹೇಳಿರುವಂತೆ ಐದು ಖಾಸಗಿ ಆಸ್ಪತ್ರೆಯಲ್ಲಿ 250₹ ನೀಡಿ ಲಸಿಕೆ ಪಡೆದುಕೊಳ್ಳಬಹುದಾಗಿದೆ.

ಯಾವಾಗ ಲಸಿಕೆ ಲಭ್ಯ.

ಎಲ್ಲ ನಗರ ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಾರದ ನಾಲ್ಕು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರದಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಲಸಿಕೆ ವಿತರಣೆ ಕಾರ್ಯ ನಡೆಯಲಿದೆ.

ಜಿಲ್ಲಾ ಮತ್ತು ತಾಲೂಕು ಸರಕಾರಿ ಆಸ್ಪತ್ರೆಗಳು ಹಾಗೂ ಗುರುತಿಸಲಾಗಿರುವ ಈ ಮೇಲಿನ ಐದು ಖಾಸಗಿ ಆಸ್ಪತ್ರೆಯಲ್ಲಿ ವಾರದ ಏಳು ದಿನ ಬೆಳಿಗ್ಗೆ 10 ರಿಂದ ಸಂಜೆ 4 ರವೆಗೆ ಲಸಿಕೆ ವಿತರಣೆ ಮಾಡಲಾಗುತ್ತದೆ.

ಒಂದು ಕೋವಿಶಿಲ್ಡ್ ಡೋಸ್‌ನಲ್ಲಿ 10 ಜನರಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಲಸಿಕೆ ಹಾಳಾಗುವುದನ್ನು ತಡೆಯುವ ದೃಷ್ಟಿಯಿಂದ 10 ಜನರನ್ನು ಒಗ್ಗೂಡಿಸಿಕೊಂಡು ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ನಾಗರೀಕರು ತಾವಾಗಿಯೇ ಕೋವಿನ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಕೊಂಡು ತಮಗೆ ಅನುಕೂಲವಿರುವ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಬಹುದು.

ಅಲ್ಲದೇ ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ ಹೆಸರು ನೋಂದಾಯಿಸಿಕೊಂಡು ಕೂಡಾ ಲಸಿಕೆ ಪಡೆಯಲು ಅವಕಾಶವಿದೆ.

ಲಸಿಕೆ ಪಡೆಯಲು ದಾಖಲೆ ಏನು ತರಬೇಕು?

ಸಾರ್ವಜನಕರು ಲಸಿಕಾ ಕೇಂದ್ರಕ್ಕೆ ಭೇಟಿ ನೀಡುವಾಗ ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್ ಅಥವಾ ಯಾವುದಾದರೊಂದು ಫೋಟೋ ಇರುವ ಐ.ಡಿ ಕಾರ್ಡ್‌ನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು .

ಅಡ್ಡ ಪರಿಣಾಮ ಇದೆಯೇ?

ಜಿಲ್ಲೆಯಲ್ಲಿ ಈವತೆಗೆ ಯಾವುದೇ ಅಡ್ಡ ಪರಿಣಾಮ ಘಟನೆ ವರದಿಯಾಗಿಲ್ಲ. ಒಂದುವೇಳೆ ವ್ಯಾಕ್ಸಿನ್ ತೆಗೆದುಕೊಂಡಾಗ ಜ್ವರ,ಮೈ ಕೈ ನೋವು ,ವಾಕರಿಕೆ ಬರಬಹುದು ಆದರೇ ಇದು ಅಲ್ಪ ಅವಧಿ ಮಾತ್ರವಾಗಿದೆ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ.

ಸುದ್ದಿ ಮಾಹಿತಿ ನೀಡುವವರು ಕೆಳಗಿನ ನಂಬರ್ ಗೆ ವಾಟ್ಸ್ ಆಪ್ ಮಾಡಿ:- 9741058799




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!