ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ-ಕೊಂಕಣ ರೈಲ್ವೆ ಮಾರ್ಗ ಸಂಪೂರ್ಣ ಬಂದ್-ಹಲವು ಭಾಗದಲ್ಲಿ ಮನೆಗಳಿಗೆ ನೀರು

793

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು ಕರಾವಳಿ ,ಮಲೆನಾಡು ಭಾಗದ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿ ನಷ್ಟ ತಂದೊಡ್ಡಿದೆ.

ಕರಾವಳಿ ಭಾಗದಲ್ಲಿ ಸಮುದ್ರದ ಅಬ್ಬರಕ್ಕೆ ಕಡಲ ಕೊರತ-ನೀರಿನಲ್ಲಿ ಕೊಚ್ಚಿಹೋದ ಯುವಕ ಸಾವು

ಜಿಲ್ಲೆಯ ಕರಾವಳಿ ಭಾಗದ ಅಂಕೋಲದ ಗಂಗಾವಳಿ ನದಿ ತೀರ ಪ್ರದೇಶದಲ್ಲಿ ನೀರು ಪ್ರವಾಹದಿಂದ 15 ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ಕೃಷಿ ಜಮೀನುಗಳಿಗೆ ನೀರು ನುಗ್ಗಿದೆ.ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಸಂಪರ್ಕಿಸುವ ರಸ್ತೆ ಕೊಚ್ಚಿಹೋಗಿ ನಗರ ಸಂಪರ್ಕ ಕಡಿದುಹೋಗಿದೆ.ಕುಮಟಾದ ಗೋಕರ್ಣ ದಲ್ಲಿ ಮಳೆಯ ನೀರಿನಿಂದ ರಸ್ತೆ ಸಂಪೂರ್ಣ ಆವರಿಸಿದ್ದು ಸ್ಥಳೀಯ ದೇವಸ್ಥಾನ ನೀರಿಗಾಹುತಿಯಾಗಿದೆ.ಇನ್ನು ಮಲೆನಾಡಿನ ಸಿದ್ದಾಪುರದಲ್ಲಿ ಸೋಮ ನದಿ ಹಾಗೂ ಸಮಸಾಳೆ ಹಳ್ಳ ತುಂಬಿ ಹರಿದಿದ್ದರಿಂದ ಇಲ್ಲಿನ ಬಿಳಗಿ,ಹೆಮ್ಮನಬೈಲಿನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಕೃಷಿ ಜಮೀನುಗಳಿಗೆ ನೀರು ನುಗ್ಗಿದ್ದು ರಸ್ತೆ ಸಂಚಾರ ಸಹ ಬಂದ್ ಆಗಿದೆ.

ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜೀವಹಾನಿ ಸಹ ಆಗಿದ್ದು ಪ್ರವಾಹದ ನೀರಿಗೆ ಕೊಚ್ಚಿಹೋಗಿದ್ದ ಹೊನ್ನಾವರದ ಸತೀಶ್ ನಾಯ್ಕ ಎಂಬುವವರು ಮೃತಪಟ್ಟಿದ್ದಾರೆ.ಮೃತ ಕುಟುಂಬಕ್ಕೆ ಐದು ಲಕ್ಷ ಪರಿಹಾರವನ್ನು ಜಿಲ್ಲಾಡಳಿತ ಘೋಷಿಸಿದೆ. ಕದ್ರಾ ಜಲಾಶಯದಿಂದ ಆರು ಗೇಟ್ ತೆರೆದಿದ್ದು 58 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ.

ಜಿಲ್ಲೆಯ ಪ್ರವಾಹ ನಿಯಂತ್ರಣಕ್ಕೆ ಸಕಲ ಸಿದ್ದತೆ-ಡಾ. ಹರೀಶ್ ಕುಮಾರ್. ಕೆ.

ಜಿಲ್ಲೆಯಲ್ಲಿ 17 ಗ್ರಾಮಗಳಿಗೆ ಮಳೆಯಿಂದ ಆತಂಕವಿದ್ದು, 1ಮನೆಗೆ ಹಾನಿಯಾಗಿದೆ,54 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಜಾನುವಾರುಗಳಿಗೆ ತೊಂದರೆಯಾಗಿಲ್ಲ,ಪ್ರಸ್ತುತ ಮಳೆ‌ ಕಡಿಮೆಯಾಗಿದ್ದು, ಮುಂದಿನ ವಾರದಲ್ಲಿ ಮತ್ತೆ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.ಜಿಲ್ಲೆಯಲ್ಲಿ ವ್ಯಾಪಕ ಮುಂಜಾಗ್ರತೆ ಕೈಗೊಂಡಿದ್ದು, ರೆವೆನ್ಯೂ ಅಧಿಕಾರಿಗಳು ಫೀಲ್ಡಲ್ಲಿದ್ದಾರೆ,ಎಸಿ, ಇಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಒಂದು ವಾರದಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸಭೆ ನಡೆಸಿದ್ದೇವೆ,ಕೆಪಿಸಿಎಲ್‌ನ ಸಭೆ ಕರೆದು, ಮುಂಜಾಗ್ರತಾ ಕ್ರಮವಾಗಿ ಮೊದಲೇ ನೀರು ಬಿಟ್ಟು ಡ್ಯಾಂನಲ್ಲಿ ಸ್ಟೋರೇಜ್ ಪ್ರಮಾಣ ಕಡಿಮೆ‌‌ ಇರಿಸುತ್ತಿದ್ದೇವೆ,ಇದರಿಂದ ಮಳೆ ಬಂದರೂ ಜಿಲ್ಲೆಯಲ್ಲಿ ಪ್ರವಾಹ ನಿಯಂತ್ರಣವಾಗುತ್ತದೆ,ಶರಾವತಿ ನದಿಯಿಂದಲೂ ಪ್ರವಾಹ ಬಾರದಂತೆ ಯೋಜನೆ ಹಾಕಿದ್ದು, ಶರಾವತಿ, ಕಾಳಿ ನದಿಯ ಡ್ಯಾಂಗಳ ಅವಲೋಕನ ಮಾಡಲಾಗಿದ್ದು ಮುಂಜಾಗ್ರತೆ ಕೈಗೊಳ್ಳಲಾಗಿದೆ,
ಸಿಎಂ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ,ಕಂದಾಯ ಸಚಿವರು ಕೂಡಾ ಎರಡು ಬಾರಿ ಕರೆ ಮಾಡಿ ಸಹಕಾರ, ನೆರವು ಒದಗಿಸುವುದಾಗಿತಿಳಿಸಿದ್ದಾರೆ.ಹೊನ್ನಾವರ, ಕುಮಟಾ, ಅಂಕೋಲಾ, ಸಿದ್ಧಾಪುರದಲ್ಲಿ ಕಾಳಜಿ ಕೇಂದ್ರವನ್ನು ಅಗತ್ಯಕ್ಕೆ ತಕ್ಕಂತೆ ತೆರೆಯುತ್ತಿದ್ದು, ಇಂದು ಮುಚ್ಚಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ .ಕೆ.ರವರು ತಿಳಿಸಿದ್ದಾರೆ.

ಜಲಾಶಯಗಳಿಂದ ಕೃತಕ ಪ್ರವಾಹ ಉಂಟಾದಲ್ಲಿ ಅಧಿಕಾರಿಗಳೇ ಹೊಣೆಗಾರರು : ಡಿ ಸಿ

ಜಲಾಶಯಗಳ ಹೆಚ್ಚುವರಿ ನೀರಿನಿಂದಾಗಿ ಕೃತಕ ಪ್ರವಾಹ ಉಂಟಾದಲ್ಲಿ ಕೆ.ಪಿ.ಸಿ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವದೆಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಎಚ್ಚರಿಕೆ ನೀಡಿದರು
ಜಿಲ್ಲಾಧಿಕಾರಿ ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ, ಲಿಂಗನಮಕ್ಕಿ, ಗೇರುಸೊಪ್ಪ, ಕದ್ರಾ, ಕೊಡಸಳ್ಳಿ ಹಾಗೂ ಸುಫಾ ಜಲಾಶಯಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯನ್ನು ನಡೆಸುವ ಮೂಲಕ ಚರ್ಚಿಸಿ, ಕಳೆದ ಮೂರು-ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯ ಎಲ್ಲಾ ಜಲಾಶಯಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ಜಲಾಶಯಗಳ ಕೆಳ ಭಾಗದಲ್ಲಿ ವಾಸಿಸುವ ಗ್ರಾಮಗಳ ಜನರಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ.
ಈ ಹಿಂದನ ವರ್ಷ ಜಿಲ್ಲೆಯ ವಿವಿಧ ಜಲಾಶಯಗಳಿಂದ ಕೊನೆಯ ಕ್ಷಣದಲ್ಲಿ ಹೆಚ್ಚುವರಿ ನೀರನ್ನು ಬಿಡುಗಡೆಗೊಳಿಸಿದ್ದರಿಂದ ಜಲಾಶಯದ ಕೆಳಭಾಗದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು ಇರುತ್ತದೆ. ಈ ಸಂಬಂಧ ಎರಡು ತಿಂಗಳುಗಳ ಹಿಂದೆ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡವನ್ನು ರಚಿಸಿ ಜಲಾಶಯಗಳಲ್ಲಿ ಸಾಕಷ್ಟು ಕುಶನ್ ನ್ನು ನಿರ್ವಹಣೆ ಮಾಡಲು ತಿಳಿಸಿದ್ದು ಎಡಿಸಿ ನೇತೃತ್ವದ ತಂಡದಲ್ಲಿ ನಿರ್ಣಯಿಸಿದಂತೆ ಜಲಾಶಯಗಳಲ್ಲಿ ಅಗತ್ಯ ನೀರಿನ ಪ್ರಮಾಣ ಕಾಯ್ದುಕೊಂಡು, ಹವಾಮಾನ ಇಲಾಖೆ ಬಿಡುಗಡೆಗೊಳಿಸುವ ಮುಂದಿನ ಮಳೆ ಪ್ರಮಾಣ ವರದಿಯನ್ನು ಆಧರಿಸಿ, ನಿರಂತರವಾಗಿ ನೀರನ್ನು ನದಿಗೆ ಬಿಡುಗಡೆಗೊಳಿಸುವದರಿಂದ ಜಲಾಶಯ ಕೆಳ ಭಾಗದಲ್ಲಿರುವ ಗ್ರಾಮಗಳಲ್ಲಿ ಕೃತಕ ಪ್ರವಾಹ ಮತ್ತು ಜನ –ಜಾನುವಾರುಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸಬಹುದಾಗಿದೆ ಎಂದು ಅವರು ತಿಳಿಸಿದರು. ಜಲಾಶಯ ಪಾತ್ರದಲ್ಲಿ ಹಾಗೂ ನದಿ ಪಾತ್ರದಲ್ಲಾಗುತ್ತಿರುವ ಮಳೆಯ ಪ್ರಮಾಣವನ್ನು ಹಾಗೂ ಜಲಾಶಯ ಕೆಳಭಾಗದಲ್ಲಿ ಇತರೇ ಹಳ್ಳ-ಕೊಳ್ಳಗಳಿಂದ ನದಿಗೆ ಸೇರಬಹುದಾದ ನೀರಿನ ಪ್ರಮಾಣವನ್ನು ಕೂಡಾ ಗಣನೆಗೆ ತೆಗೆದುಕೊಂಡು ಜಲಾಶಯದಿಂದ ನೀರನ್ನು ಬಿಡುಗಡೆಗೊಳಿಸಿ ನದಿಯ ಮಟ್ಟವನ್ನು ಕೂಡಾ ಕಾಯ್ದುಕೊಳ್ಳುವ ಯೋಜನೆ ರೂಪಿಸಿ ಕೂಡಲೇ ಕಾರ್ಯರೂಪಕ್ಕೆ ತರಲು ಕೆಪಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರಲ್ಲದೇ,ಕೊನೆಯ ಕ್ಷಣದಲ್ಲಿ ಅವೈಜ್ಞಾನಿಕವಾಗಿ ಜಲಾಶಯಗಳಿಂದ ನೀರನ್ನು ಹೊರ ಬಿಟ್ಟು ಜಿಲ್ಲೆಯ ಜನರಿಗೆ ತೊಂದರೆಯುಂಟಾದಲ್ಲಿ ಕೆಪಿಸಿ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವದು ಎಂದರು.

ಮಳೆಯಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಸುರಂಗ ಕುಸಿತ-ಕೊಂಕಣ ರೈಲ್ವೆ ಮಾರ್ಗ ಸಂಚಾರ ಬಂದ್

ಮುಂಡ್ರೆ -ಪೆರ್ಣೆ ಮಾರ್ಗದಲ್ಲಿ ರೈಲ್ವೆ ಸುರಂಗ ಗೋಡೆ ಕುಸಿತ ಹಿನ್ನಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗ ಸಂಚಾರ ಬಂದ್ ಮಾಡಲಾಗಿದೆ.

ಇಂದಿನಿಂದ ಮುಂದಿನ ಆದೇಶ ಬರುವ ವರೆಗೂ ಎರ್ನಾಕುಲಮ್ -ಹಜರತ್ ನಿಜಾಮುದ್ದೀನ್ ಸೂಪರ್ ಪಾಸ್ಟ್ ಟ್ರೈನ್ (ಮಡಗಾಂ,ಮೀರಜ್ ,ಪುಣೆ,ಪನ್ನವೇಲ್ ಮಾರ್ಗ)
ತಿರುವಂತಪುರಂ ಲೋಕಮಾನ್ಯ ತಿಲಕ್ ಟ್ರೈನ್ (ಮಡಗಾಂ,ಲೋಂಡ, ನೀರಜ್,ಪುಣೆ,ಪನ್ನವೇಲ್ ಮಾರ್ಗ),ನ್ಯೂ ಡೆಲ್ಲಿ ತಿರುವನಂತಪುರಂ ಸೆಂಟ್ರಲ್ ರಾಜಧಾನಿ ಎಕ್ಸ್ ಪ್ರೆಸ್(ಪನ್ನವೇಲ್ ,ಪುಣೆ,ಮೀರಜ್ ,ಲೋಂಡ,ಮಡಗಾಂ ಮಾರ್ಗ) ,ಲೋಕಮಾನ್ಯ ತಿಲಕ್ ತಿರುವಂತಪುರಂ ಟ್ರೈನ್
(ಪನ್ನವೇಲ್ ,ಪುಣೆ,ಮೀರಜ್ ,ಲೋಂಡ,ಮಡಗಾಂ ಮಾರ್ಗ) ರೈಲುಗಳ ಸಂಚಾರವನ್ನು ಇಂದಿನಿಂದ ಮುಂದಿನ ಆದೇಶ ಬರುವ ವರೆಗೂ ಬಂದ್ ಮಾಡಲಾಗಿದೆ.

ಉತ್ತರ ಕನ್ನಡ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಹೊನ್ನಾವರಕ್ಕೆ ಕಂದಾಯ ಸಚಿವರ ಭೇಟಿ

ನಾಳೆ ಮಧ್ಯಾನ ಮೂರು ಘಂಟೆಗೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪರಿಸ್ಥಿತಿ ವೀಕ್ಷಣೆಗಾಗಿ ಜಿಲ್ಲೆಯ ಹೊನ್ನಾವರಕ್ಕೆ ಕಾರ್ಮಿಕ ಮತ್ತು ಸಕ್ಕರೆ ಸಚಿವರಾದ ಶಿವರಾಮ ಹೆಬ್ಬಾರ್ ಕಂದಾಯ ಸಚಿವರಾದ ಆರ್.ಅಶೋಕ ರವರು ಆಗಮಿಸಲಿದ್ದು ಶರಾವತಿ ನದಿ ಪ್ರದೇಶದ ಸ್ಥಳಗಳು ಹಾಗೂ ಕಡಲತೀರದ ಸಮುದ್ರ ಕೊರೆತದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸುವರು

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ.ಹವಾಮಾನ ಇಲಾಖೆ ಮಾಹಿತಿಯಂತೆ 9ನೇ ತಾರೀಕಿನಿಂದ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಕೋಸ್ಟಲ್ ಗಾರ್ಡ್, ಕೋಸ್ಟಲ್ ಪೊಲೀಸ್ ಕೂಡಾ ಸನ್ನದ್ಧರಾಗಿದ್ದು ಜಿಲ್ಲೆಯಾಧ್ಯಾಂತ ಕಟ್ಟೆಚ್ಚರ ಕೈಗೊಳ್ಳಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ